ಕೋಮುದ್ವೇಷಕ್ಕೆ ಜೀವ ಕಳೆದುಕೊಂಡ ವಿಶ್ವನಾಥ್ ಮನೆ ಸ್ವಚ್ಛ ಗೊಳಿಸಿದ ಮುಸ್ಲಿಂ ಯುವಕರು

ಶಿವಮೊಗ್ಗ : ಕೋಮುದ್ವೇಷಕ್ಕೆ ಜೀವ ಕಳೆದುಕೊಂಡ ಬಜರಂಗದಳದ ಕಾರ್ಯಕರ್ತ ವಿಶ್ವನಾಥ್‌ ಶೆಟ್ಟಿ ಅವರ ಆಲ್ಕೊಳದ ಪಾಳುಬಿದ್ದ ಮನೆಯನ್ನು ಸೋಮವಾರ ಮುಸ್ಲಿಂ ಯುವಕರು ಸ್ವಚ್ಛಗೊಳಿಸಿದರು.

ಏಳು ವರ್ಷಗಳ ಹಿಂದೆ ಗುಂಪೊಂದು ತೀರ್ಥಹಳ್ಳಿ ರಸ್ತೆಯ ಗಾಜನೂರು ಬಳಿ ವಿಶ್ವನಾಥ್‌ ಶೆಟ್ಟಿ ಅವರನ್ನು ಹತ್ಯೆ ಮಾಡಿತ್ತು. ಎರಡು ವರ್ಷಗಳ ಹಿಂದೆ ಅವರ ತಂದೆ ವಸಂತಶೆಟ್ಟಿ ಮೂಳೆ ಕ್ಯಾನ್ಸರ್‌ನಿಂದ ಮೃತಪಟ್ಟ ಬಳಿಕ ತಾಯಿ ಮೀನಾಕ್ಷಿ ಜೀವನೋಪಾಯಕ್ಕಾಗಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದಾರೆ. ಬೀದಿಗೆ ಬಿದ್ದ ಇವರ ಬದುಕಿನ ಚಿತ್ರಣವನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದವು. ಪರಿಣಾಮ ಅನೇಕರು ಸಹಾಯ ಹಸ್ತ ಚಾಚಲು ಸಾಧ್ಯವಾಯಿತು.

ಇದನ್ನೂ ಓದಿ : ಕೊಲೆಯಾದ ಬಜರಂಗದಳ ಕಾರ್ಯಕರ್ತನ‌ ಕುಟುಂಬ ಬೀದಿಪಾಲು

ಮೃತ ವಿಶ್ವನಾಥ ಶೆಟ್ಟಿಯವರ ಮನೆ, ನಗರದ ಸಾಗರ ರಸ್ತೆಯ ಆಲ್ಕೊಳ, ನಂದಿನಿ ಬಡಾವಣೆಯ 5ನೇ ತಿರುವಿನಲ್ಲಿದೆ. ಅ ಮನೆ ಪಾಳು ಬಿದ್ದಿದೆ. ಕಾಂಪೌಂಡ್‌ ಹೊರಗೆ ಕಸದ ರಾಶಿ ಇದೆ. ಪುಟ್ಟ ಮನೆಯ ಸಿಮೆಂಟ್‌ ಶೀಟ್‌ಗಳ ಮೇಲೆ ಅರ್ಧ ಅಡಿಯಷ್ಟು ಮಣ್ಣು ಕೂತಿದೆ. ಮನೆಯ ಬಾಗಿಲುಗಳನ್ನು ಗೆದ್ದಲು ತಿಂದಿದ್ದು, ಮೀನಾಕ್ಷಮ್ಮ ಚಿಂದಿ ಆಯ್ದು ಸಂಕಷ್ಟದ ಜೀವನವನ್ನು ನೋಡಿದ ವಿದ್ಯಾನಗರದ ಯುವಕ ಜಬೀಉಲ್ಲಾ ಮತ್ತವರ ತಂಡ ಜೆಡಿಎಸ್‌ ಮುಖಂಡ ಎಂ. ಶ್ರೀಕಾಂತ್‌ ಅವರನ್ನು ಸಂಪರ್ಕಿಸಿ, ಮನೆಯ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ.

‘ನಗರದ ಶ್ಯಾಮ್‌ ಅವರ ಬಳಿ ಕೆಲಸ ಮಾಡುತ್ತಿರುವೆ. ಮನೆಗಳಿಗೆ ಬಣ್ಣ ಬಳಿಯುವ ಕಾಯಕದಿಂದಲೇ ಜೀವನ ಸಾಗಿಸುತ್ತಿರುವೆ. ಇಲ್ಲಿಗೆ ಬಂದು ಮನೆಯನ್ನು ನೋಡಿದೆ. ಮನೆಯ ಮೇಲೆ, ಒಳಗೆ ಸಾಕಷ್ಟು ಮಣ್ಣು ಕೂತಿದೆ. ಸ್ವಚ್ಛಗೊಳಿಸದೆ ಎರಡು ವರ್ಷಗಳಾಗಿವೆ. ಮನೆಯ ಚಾವಣಿ ಮೇಲೆ ಸಂಗ್ರಹವಾಗಿರುವ ದೂಳನ್ನು ಸಚ್ಛಗೊಳಿಸುತ್ತಿದ್ದೇವೆ. ಮೀನಾಕ್ಷಮ್ಮ ಅವರ ಸ್ಥಿತಿ ನೋಡಿ ಮರುಕ ಬರುತ್ತದೆ. ಜಾತಿ, ಧರ್ಮ ಯಾವುದೇ ಇರಲಿ; ಮನುಷ್ಯತ್ವ ಮುಖ್ಯ’ ಎಂದು ಜಬೀಉಲ್ಲಾ ಪ್ರತಿಕ್ರಿಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *