ಶಿವಮೊಗ್ಗ : ಏಳು ವರ್ಷಗಳ ಹಿಂದೆ ಕೋಮು ದ್ವೇಷಕ್ಕೆ ಹತ್ಯೆಯಾಗಿದ್ದ ಬಜರಂಗದಳದ ಕಾರ್ಯಕರ್ತ ಆಲ್ಕೊಳದ ವಿಶ್ವನಾಥ ಶೆಟ್ಟಿಯವರ ಕುಟುಂಬ ಈಗ ಬೀದಿಪಾಲಾಗಿದೆ.
ವಿಶ್ವನಾಥ ಶೆಟ್ಟಿ ತಾಯಿ ಮೀನಾಕ್ಷಿ ಅವರು ಚಿಂದಿ ಆಯ್ದು ಬಂದ ಹಣದಲ್ಲಿ ಮೊಮ್ಮಗನನ್ನು ಓದಿಸಲು ಹೆಣಗಾಡುತ್ತಿದ್ದಾರೆ. “ನಿಮಗೆ ಮಕ್ಕಳಾಗಿ ಇರುತ್ತೇವೆ. ನಿಮ್ಮನ್ನು ಕಡೆವರೆಗೂ ನೋಡಿಕೊಳ್ಳುತ್ತೇವೆ ಎಂದು ಘಟನೆ ನಡೆದ ಸಮಯದಲ್ಲಿ ವೀರಾವೇಶದಿಂದ ಹೇಳಿದ್ದ ಬಿಜೆಪಿಯ ಮುಖಂಡರು, ಹಿಂದೂಪರ ಸಂಘಟನೆಯವರು, ಯಾರೂ ಕೂಡ ವಿಶ್ವನಾಥನ ತಾಯಿ ಮೀನಾಕ್ಷಮ್ಮ ಅವರ ಸಹಾಯಕ್ಕೆ ಬಂದಿಲ್ಲ. ಒಂದು ಹೊತ್ತಿನ ತುತ್ತಿಗೂ ಪರದಾಡುವಂತಾಗಿದೆ.
ಪ್ರತಿ ದಿನ ಚಿಂದಿ ಆಯ್ದು 10 ರಿಂದ 20 ರೂ ದುಡಿಯುತ್ತಾರೆ. ನ್ಯಾಯಬೆಲೆ ಅಂಗಡಿಯಿಂದ 10 ಕೆ.ಜಿ ಅಕ್ಕಿ ಸಿಗುತ್ತಿದೆ. ಚಿಂದ ಆಯ್ದ ದುಡ್ಡಲ್ಲಿ ಇತರೆ ದಿನಸಿ, ತರಕಾರಿ ಔಷಧಗಾಗಿ ಬಳಸುತ್ತಾರೆ. ಮುರುಕಲು ಮನೆ, ಹಣ ಪಾವತಿ ಮಾಡಿದ ಕಾರಣ ವಿದ್ಯುತ್, ನೀರಿನ ಸಂಪರ್ಕ ಕಡಿತ ಮಾಡಲಾಗಿದೆ.ಸರಕಾರ ಕೊಡುತ್ತಿರುವ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಹಾಕಿದರು ಪಿಂಚಣಿ ಸಿಗುತ್ತಿಲ್ಲ. ಇಷ್ಟೆಲ್ಲ ಸಂಕಷ್ಟಗಳಿಂದಾಗಿ ವಿಶ್ನಾಥ ಕುಟುಂಬ ಬೀದಿಯಲ್ಲಿ ಬದುಕು ಸಾಗಿಸುವಂತಾಗಿದೆ.
”ಮಗ ಇದ್ದಿದ್ದರೆ ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಪಿಂಚಣಿಗೆ ಅಂತ ಎರಡು ವರ್ಷದಿಂದ ಹಲವು ಕಚೇರಿ ಬಾಗಿಲು ಅಲೆದಿದ್ದೇನೆ. ಇದೂವರೆಗೆ ಕೊಟ್ಟಿಲ್ಲ. ಓಡಾಡಲು ತುಂಬ ಸುಸ್ತಾಗುತ್ತೆ. ಕರೆಂಟ್ ಬಿಲ್ ಕಟ್ಟಲಿಲ್ಲ ಅಂತ 3ವರ್ಷದ ಹಿಂದೆ ಸಂಪರ್ಕ ಕಡಿತಗೊಳಿಸಿದರು. ನೀರಿನ ಬಿಲ್ ಕಟ್ಟಲಿಲ್ಲ ಅಂತ ನಲ್ಲಿ ಸಂಪರ್ಕ ಹೋಯಿತು. ಗ್ಯಾಸ್- ಸಿಲಿಂಡರ್ ಇಲ್ಲ. ಅಲ್ಲಿ ಇಲ್ಲಿ ಪುಳ್ಳೆ ಕಿತ್ತು ತಂದು ಒಲೆ ಉರಿಸಿ ಅನ್ನ ಸಾರು ಮಾಡಿಕೊಳ್ಳುತ್ತೇನೆ” ಎಂದು ಮೀನಾಕ್ಷಮ್ಮ ಭಾವುಕರಾಗಿ ಹೇಳುತ್ತಾರೆ.
ವಿಶ್ವನಾಥ ಶೆಟ್ಟಿಯ ಪತ್ನಿ ಬಡತನದ ಬೇಗೆ ನಡುವೆ ಎರಡು ವರ್ಷದ ಹಿಂದೆ ಜಾಂಡೀಸ್‌ನಿಂದ ತೀರಿಕೊಂಡರೆ, ಮಗ ಆದಿತ್ಯ ತಾಯಿಯ ತವರು ಮನೆ ಇರುವ ಕೊಪ್ಪದಲ್ಲಿದ್ದುಕೊಂಡು 7ನೇ ತರಗತಿ ಓದುತ್ತಿದ್ದಾನೆ. ಮಗಳು ಸಹ ಅನಾರೋಗ್ಯದಿಂದ ತೀರಿಕೊಂಡ ಬಳಿಕ ಮೀನಾಕ್ಷಮ್ಮ ಅಕ್ಷರಶಃ ಅನಾಥೆಯಾಗಿದ್ದಾರೆ. ಅಬ್ಬರದ ಮಾತುಗಳನ್ನಾಡಿದ ಯಾರೋಬ್ಬರು ಇತ್ತ ಕಡೆ ತಲೆ ಹಾಕಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
2015ರಲ್ಲಿ ಶಿವಮೊಗ್ಗ ಗಾಜನೂರು ಬಳಿ ದುಷ್ಕರ್ಮಿಗಳು ಆಲ್ಕೊಳದ ವಿಶ್ವನಾಥ ಶೆಟ್ಟಿಯನ್ನು ಹತ್ಯೆ ಮಾಡಿದ್ದರು. ಅದಾದ ಬಳಿಕ ಸಂಘಪರಿವಾರದ ಸಂಘಟನೆಗಳು ಶಿವಮೊಗ್ಗ ನಗರ ಬಂದ್ ಮಾಡಿದ್ದಲ್ಲದೆ, ದೊಡ್ಡಮಟ್ಟದ ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆಯು ರಾಜ್ಯದೆಲ್ಲೆಡೆಗೂ ವಿಸ್ತರಿಸಿತ್ತು. ವಿಶ್ವನಾಥ ಶೆಟ್ಟಿ ಕುಟುಂಬವನ್ನು ನಾವು ಸಲಹುತ್ತೇವೆ. ಅವರ ಕುಟುಂಬವನ್ನು ಅನಾಥವಾಗಲು ಬಿಡುವುದಿಲ್ಲ ಎಂದು ಹೇಳಿದವರು ಈಗ ಬೀದಿಪಾಲು ಮಾಡಿದ್ದಾರೆ.
ಇತ್ತೀಚೆಗೆ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ರಾಜ್ಯದ ವಿವಿಧೆಡೆಯಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಬೀದಿಪಾಲಾಗಿರುವ ವಿಶ್ವನಾಥ ಕುಟುಂಬಕ್ಕೆ ಸ್ಥಳೀಯರು ಸಹಾಯ ಮಾಡುತ್ತಿದ್ದಾರೆ. ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್ ಅವರು ಶನಿವಾರ ಇವರ ಮನೆಗೆ ಭೇಟಿ ನೀಡಿ ನೆರವಿನ ಹಸ್ತ ಚಾಚಿದರು. ವಿದ್ಯುತ್ ಶುಲ್ಕ, ನಲ್ಲಿ ಕಂದಾಯವನ್ನು ಭರಿಸಿದರು. ಮನೆಗೆ ಸುಣ್ಣ- ಬಣ್ಣ ಬಳಿಸಲು ಹಣಕಾಸಿನ ನೆರವು ನೀಡಿದರು. ಅಲ್ಲಿನ ಜನಪ್ರತಿನಿಧಿಗಳು ಇವರ ಮನೆ ನಿರ್ವಹಣೆಗೆ ಹಾಗೂ ಪಿಂಚಣಿ ವ್ಯವಸ್ಥೆಗೆ ಮುಂದಾಗಬೇಕಿದೆ.