ಕಾಡಾನೆ ಹಾವಳಿ ವಿರುದ್ಧ ಪ್ರತಿಭಟನೆ ವೇಳೆ ಬಂಧನವಾಗಿದ್ದ 11 ಮಂದಿಗೆ ಜಾಮೀನು ಮಂಜೂರು

ಹಾಸನ: ಸಕಲೇಶಪುರ ತಾಲೂಕು ವಡೂರಿನಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ಮಹಿಳೆ ಪರ ಪ್ರತಿಭಟನೆ ನಡೆಸಲು ಹೋಗಿ ಬಂಧನ ಆಗಿದ್ದ 11 ಮಂದಿಗೆ ಕಡೆಗೂ ಜಾಮೀನು ದೊರೆತಿದೆ.

ಇದನ್ನೂ ಓದಿ:ಕಾಡಾನೆ ದಾಳಿ ಪ್ರಕರಣ: ನ್ಯಾಯ ಕೇಳಿದ್ದಕ್ಕೆ ಪ್ರಕರಣ ದಾಖಲಿಸಿದ ಪೊಲೀಸರು!

ಕಾಡಾನೆ ಹಾವಳಿ ಸಂತ್ರಸ್ತರ ಹೋರಾಟ ಸಮಿತಿಯ ಯಡೇಹಳ್ಳಿ ಆರ್.ಮಂಜುನಾಥ್, ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ ಸೇರಿ ವಿವಿಧ ಸಂಘಟನೆಗಳವರು ಆಗಸ್ಟ್-18 ರಂದು ಮೃತದೇಹ ಇದ್ದ ಹಿಮ್ಸ್ ಬಳಿ ಪ್ರತಿಭಟನೆಗೆ ಮುಂದಾಗಿದ್ದರು. ಅಲ್ಲದೆ ಶವವನ್ನು ಸಕಲೇಶಪುರಕ್ಕೆ ಕೊಂಡೊಯ್ದು ಅಲ್ಲೂ ಪ್ರತಿಭಟನೆಗೆ ನಿರ್ಧರಿಸಿದ್ದರು. ಈ ವಿಷಯ ತಿಳಿದು, ಹೋರಾಟಗಾರರು ಕರ್ತವ್ಯಕ್ಕೆ ಅಡ್ಡಿ ಪಡಿಸಿದರು ಎಂಬ ಆರೋಪ ಹೊರಿಸಿ 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ, 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಲಾಗಿತ್ತು. ಇದರ ವಿರುದ್ಧ ಮಲೆನಾಡಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಘಟನೆ ನಡೆದ ಮೂರು ದಿನಗಳ ನಂತರ ಈ ಬಗ್ಗೆ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಎಲ್ಲ 11 ಮಂದಿಗೂ ಜಾಮೀನು ಮಂಜೂರು ಮಾಡಿದೆ.ಹೋರಾಟಗಾರರ ಪರವಾಗಿ ವಕೀಲರಾದ ಪರಮೇಶ್ ಮತ್ತು ಅವರ ತಂಡ ವಾದ ಮಂಡಿಸಿ ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದೆ. ಬೇಲೂರು ತಾಲೂಕು ನಾರ್ವೆ ಗ್ರಾಮದಿಂದ ತಾಯಿಯನ್ನು ನೋಡಲು ವಡೂರಿಗೆ ಬಂದಿದ್ದ ಕವಿತಾ, ಆಗಸ್ಟ್‌-18 ರ ಬೆಳಗ್ಗೆ ಬಹಿರ್ದೆಸೆಗೆ ಹೋಗಿದ್ದ ವೇಳೆ ದಿಢೀರ್ ದಾಳಿ ಮಾಡಿದ್ದ ಕಾಡಾನೆ ಸೊಂಡಿಲಿನಿಂದ ತಿವಿದು, ಎಸೆದಾಡಿ ಜೀವ ತೆಗೆದಿತ್ತು.

ಕಾರಾಗೃಹ ಸುತ್ತ ಬಿಗಿ ಬಂದೋಬಸ್ತ್:

ಇನ್ನು 11 ಮಂದಿ ಹೋರಾಟಗಾರರಿಗೆ ಜಾಮೀನು ಮಂಜೂರಾದ ಹಿನ್ನೆಲೆ ಅವರನ್ನು ಕರೆದೊಯ್ಯಲು ಸಂಬಂಧಿಕರು ಹಾಗೂ ವಿವಿಧ ಸಂಘಟನೆ ಮುಖಂಡರು ಆಗಮಿಸಿದ್ದರು. ಈ ಹಿನ್ನೆಲೆ ಯಾವುದೇ ಅಹಿತಕ ಘಟನೆ ನಡೆಯದಂತೆ ಕಾರಾಗೃಹ ಆವರಣದಲ್ಲಿ ನಗರಠಾಣೆ ಇನ್ಸ್ಪೆಕ್ಟರ್ ರೇವಣ್ಣ ನೇತೃತ್ವದಲ್ಲಿ ಬಿಗಿಬಂದೋಬಸ್ತ್ ಮಾಡಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *