ಮಕ್ಕಳ ಭವಿಷ್ಯ ಕಸಿದ ಶಿಕ್ಷಣ ಸಚಿವರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಕೆ : ಇಲ್ಲಿವೆ 6 ಕಾರಣಗಳು

ಬೆಂಗಳೂರು : ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು, ಕರ್ನಾಟಕದ ಮಕ್ಕಳ ಭವಿಷ್ಯವನ್ನು ಕಸಿದುಕೊಂಡಿದ್ದಾರೆ ಎಂದು ‘ಬಹುತ್ವ ಕರ್ನಾಟಕ’ ವೇದಿಕೆ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ. ಅವರು ಕೂಡಲೇ ರಾಜೀನಾಮೆ ನೀಡಬೇಕು ಮತ್ತು ಅವರನ್ನು ಶಾಸಕ ಸ್ಥಾನದಿಂದ ಅಮಾನ್ಯಗೊಳಿಸಬೇಕು ಎಂದು ವೇದಿಕೆ ಆಗ್ರಹಿಸಿದೆ

ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ‘ಬಹುತ್ವ ಕರ್ನಾಟಕ’ ವೇದಿಕೆಯು ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕೆಂಬ ಒತ್ತಾಯಕ್ಕೆ 6 ಕಾರಣಗಳನ್ನು ನೀಡಿದೆ. ಸಚಿವರು ತಮ್ಮ ಪಾತ್ರವನ್ನು ಸಕ್ರಿಯವಾಗಿ ಪಾಲಿಸಲು ವಿಫಲರಾಗಿದ್ದು, ಅವರು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಅದು ಒತ್ತಾಯಿಸಿದೆ.

ಬಹುತ್ವ ಕರ್ನಾಟಕ ನೀಡಿರುವ 6 ಕಾರಣಗಳು

ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ । ಬಿ.ಸಿ. ನಾಗೇಶ್ ರವರು ತಮ್ಮ ಪಾತ್ರವನ್ನು ಸಕ್ರಿಯವಾಗಿ ಪಾಲಿಸಲು ವಿಫಲರಾಗಿರುವ ಕಾರಣ, ಅವರು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ನ್ಯಾಯ, ಸೌಹಾರ್ದ ಮತ್ತು ಐಕ್ಯತೆಗಾಗಿ ರೂಪಿಸಿರುವ ವೇದಿಕೆಯಾದ ಬಹುತ್ವ ಕರ್ನಾಟಕವು ಒತ್ತಾಯಿಸುತ್ತದೆ . ಕೋವಿಡ್ – 19 ಬಿಕ್ಕಟ್ಟಿನ ಪರಿಸ್ಥಿತಿಯಿಂದಲೂ ಸತತವಾಗಿ ಮಕ್ಕಳ ಶಿಕ್ಷಣವನ್ನು ಪಣ ಒಡ್ಡಿದ ಸಚಿವರು ರಾಜ್ಯದ ಶಿಕ್ಷಣವನ್ನು ಬಿಕ್ಕಟಿನಲ್ಲಿ ಸಿಲುಕಿಸಿದ್ದಾರೆ. ಹಾಗೆಯೇ ಅಪೌಷ್ಠಿಕಾಂಶ ಮಟ್ಟ ಹೆಚ್ಚುತ್ತಿದ್ದರೂ ಅದನ್ನುನಿಯಂತ್ರಿಸಲು ಉತ್ತಮ  ಕ್ರಮವನ್ನು ತೆಗೆದುಕೊಂಡಿರುವುದಿಲ್ಲ. ಶಿಕ್ಷಣದ ಬ್ರಾಹ್ಮಣೀಕರಣಕ್ಕೆ ಒತ್ತು ನೀಡಿ ಕರ್ನಾಟಕದ ಬಹುತ್ವದ ಪರಂಪರೆಗೆ ಹಾಗು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ

ಕೋವಿಡ್ – 19 ಶಿಕ್ಷಣದ ಮೇಲೆ ಬೀರಿದೆ ಪರಿಣಾಮವನ್ನು ತಡೆಗಟ್ಟಲು ವಿಫಲರಾಗಿದ್ದಾರೆ 

ಕೋವಿಡ್ – 19 ತಡೆಗಟ್ಟಲು ಜಾರಿಗೊಳಿಸಿದ್ದ ಲಾಕ್ ಡೌನ್ ಸಮಯದಲ್ಲಿ ಲಕ್ಷಾಂತರ ಮಕ್ಕಳು ಎರಡು ವರ್ಷದ ಶಿಕ್ಷಣವನ್ನು ಕಳೆದುಕೊಂಡಿದ್ದಾರೆ. ಸರ್ಕಾರದ ಸ್ವಂತ ಅಂಕಿಅಂಶಗಳ ಪ್ರಕಾರ, ಶಾಲೆ ಬಿಟ್ಟ 46,000 ಮಕ್ಕಳಲ್ಲಿ ಕೇವಲ 35% ಮಾತ್ರ ಮತ್ತೆ ಶಾಲೆಗೆ ಸೇರಿದ್ದಾರೆ. ಇಷ್ಟೆಲ್ಲಾ ಇದ್ದರೂ ಎಲ್ಲ ಮಕ್ಕಳನ್ನು ಶಾಲೆಗೆ ಕರೆತರಲು ಸರ್ಕಾರ ಯಾವುದೇ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. NHFS 5 ಡೇಟಾ ಪ್ರಕಾರ, ಶಾಲೆಯಿಂದ ಹೊರಗುಳಿದ 35.7% ಮಕ್ಕಳು ಅಧ್ಯಯನವನ್ನು ಮುಂದುವರಿಸಲು ಆಸಕ್ತಿ ಹೊಂದಿಲ್ಲ ಎಂದು ಹೇಳಿದರು. ಮಕ್ಕಳಿಗೆ ಅಧ್ಯಯನ ಮುಂದುವರಿಸಲು ಆತ್ಮವಿಶ್ವಾಸ ತುಂಬಲು ಸರ್ಕಾರ ಯಾವುದೇ ವಿಶೇಷ ಪ್ರಯತ್ನ ಕೈಗೊಂಡಿಲ್ಲ

ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಶಿಕ್ಷಕಿಯರನ್ನು ನೇಮಿಸಬೇಕೆಂದು ಇದ್ದರೂ, ಶಿಕ್ಷಕಿಯರ, ಆಡಳಿತ ಸಿಬ್ಬಂದಿಗಳ ನೇಮಕಾತಿ ಮಾಡದೆ, ಮಕ್ಕಳಿಗೆ ದೊರಕುವ ಕಲಿಸುಗೆಗೆ ಧಕ್ಕೆ ಉಂಟು ಮಾಡಲಾಗಿದೆ. ಸರ್ಕಾರವು ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.

ಅಪೌಷ್ಠಿಕತೆಯನ್ನು ತಡೆಗಟ್ಟಲು ವಿಫಲರಾಗಿದ್ದಾರೆ 

5ನೇ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಶೇಖಡಾ 35.4 ಮಕ್ಕಳು ಕುಂಠಿತವಾಗಿದ್ದಾರೆ ಮತ್ತು ಶೇಖಡಾ 32.9 ಮಕ್ಕಳು ಕಡಿಮೆ ತೂಕ ಹೊಂದಿರುತ್ತಾರೆ ಎಂದು ವರದಿ ಮಾಡಿದ್ದಾರೆ. ಇದನ್ನು ತಡೆಗಟ್ಟಲು ಮಕ್ಕಳಿಗೆ ಪ್ರತಿ ದಿನ ಮೊಟ್ಟೆ ನೀಡಬೇಕೆಂದು ರಾಷ್ಟ್ರೀಯ ಪೌಷ್ಠಿಕಾಂಶ ಸಂಸ್ಥೆ ಮತ್ತು ಹಲವಾರು ಪೌಷ್ಠಿಕತಜ್ಞರು ಅಭಿಪ್ರಾಯಿಸಿದ್ದಾರೆ. ಹೀಗಿದ್ದರೂ ಸಹ ಶ್ರೀ । ನಾಗೇಶ್ ರವರ ಸಚಿವಾಲಯವು ಅಪೌಷ್ಟಿಕ ಮಕ್ಕಳಿಗೆ ವಾರಕ್ಕೆ 5 ಬಾರಿ ಮೊಟ್ಟೆ ನೀಡುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆ ಕಾರಣ ಧಾರ್ಮಿಕ ಗುಂಪುಗಳ ಜಾತೀಯ ಮನೋಭಾವನೆ ಒಂದೇ ಆಗಿದೆ. 4ನೇ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆಯ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡಿದರೆ ಶೇಖಡಾ 83 ಜನರಿಗೆ ಯಾವುದೇ ರೀತಿಯ ಸಾಂಸ್ಕೃತಿಕ ಅಥವಾ ಧಾರ್ಮಿಕ ತಕರಾರು ಇರುವುದಿಲ್ಲ ಎಂದು ವರದಿ ಮಾಡಲಾಗಿದೆ. ಹೀಗಿದ್ದರೂ ಸಹ ಇಡೀ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಬಿಸಿ ಊಟದೊಂದಿಗೆ ಮೊಟ್ಟೆ ನೀಡದಿರುವ ರಾಜ್ಯವಾಗಿದೆ.

ನಮ್ಮ ವಾಟ್ಸಪ್ ಗ್ರುಪ್ ಗೆ ಸೇರಲು ಲಿಂಕ್ ಬಳಸಿ

ಶಿಕ್ಷಣದ ಹಕ್ಕು ಮತ್ತು ಘನತೆಯ ಹಕ್ಕು ನಿರಾಕರಣೆ

ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ಉದ್ದೇಶಪೂರ್ವಕವಾಗಿ ಸರಿಯಾಗಿ ಜಾರಿಗೊಳಿಸದೆ ತಮ್ಮದೇ ಇಲಾಖೆಯ ಆದೇಶದ ತದ್ವಿರುದ್ಧವಾಗಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಅವರ ಪರೀಕ್ಷೆ ಬರೆಯದ ಹಾಗೆ ಮಾಡಿ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ. ಬಹುಸಂಖ್ಯಾತ ಸಮುದಾಯದ ಯುವಕರು ಕಾನೂನನ್ನು

ತಮ್ಮ ಕೈಗೆತ್ತಿಕೊಂಡು ಮುಸಲ್ಮಾನ ವಿದ್ಯಾರ್ಥಿನಿಯರನ್ನು ಶಿಕ್ಷಣ ಸಂಸ್ಥೆಗಳಲ್ಲಿ ಹೀಯಾಳಿಸಿ ಕಿರುಕುಳ ನೀಡಿದ ವಿರುದ್ಧ ಯಾವುದೇ ರೀತಿಯ ಕ್ರಮ ಜರುಗಿಸುವುದರಲ್ಲಿ ವಿಫಲರಾಗಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಂಸೆ ಮತ್ತು ತಾರತಮ್ಯವನ್ನು ರೂಢಿಗತಗೊಳಿಸಲಾಗಿದೆ. ಒಂದೇ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಎಲ್ಲಾ ಧರ್ಮದ ವಿದ್ಯಾರ್ಥಿಗಳ ಮಧ್ಯೆ ಸೌಹಾರ್ದತೆಯನ್ನು ಮುರಿಯಲು ಇವರೇ ಕಾರಣರಾಗಿರುತ್ತಾರೆ. ಮುಸಲ್ಮಾನ ವಿದ್ಯಾರ್ಥಿನಿಯರನ್ನು ಸಮರ್ಥಿಸಿಕೊಂಡ ಶಿಕ್ಷಕಿಯರ ವಿರುದ್ಧ ಅಪರಾಧಿಕ ಕ್ರಮ ಜರುಗಿಸುವ ಬೆದರಿಕೆಯನ್ನು ಒಡ್ಡಲಾಗಿದೆ. ಹೊಸ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ವಿರುದ್ಧ ಅಮಾನತುಗೊಳಿಸುವಿಕೆ, ಹಿಂಸೆ ಮತ್ತು ಸೌಹಾರ್ದತೆ ಮುರಿಯುವ ಕಾರ್ಯಚಟುವಟಿಕೆಗಳು ಕಂಡುಬರುತ್ತಿವೆ ಮತ್ತು ಅಹಿತಕಾರಿ ವಾತಾವರಣವನ್ನು ಸೃಷ್ಟಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಶಿಕ್ಷಣವನ್ನು ನಿರಾಕರಿಸಿದ್ದ ಏಕೈಕ ಸಚಿವರು ಇವರಾಗಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ

ಪಠ್ಯಪುಸ್ತಕಗಳು ,  ಪ್ರಜಾಪ್ರಭುತ್ವದಲ್ಲಿ ಸಕ್ರಿಯ ನಾಗರಿಕರಾಗಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು.  ಅವೈಜ್ಞಾನಿಕ ಮತ್ತು ಜಾತಿವಾದಿ ಪಠ್ಯಪುಸ್ತಕ ಪರಿಷ್ಕರಣೆ ಪ್ರಕ್ರಿಯೆಯು ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 29 ರ ಉಲ್ಲಂಘನೆಯಾಗಿದೆ. 2005 ರ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು (National Curriculum Framework) ಭಾರತವು ಹಲವಾರು ಪ್ರಾದೇಶಿಕ ಮತ್ತು ಸ್ಥಳೀಯ ಸಂಸ್ಕೃತಿಗಳಿಂದ ಮಾಡಲ್ಪಟ್ಟ ಬಹುಸಂಸ್ಕೃತಿಯ ಸಮಾಜವಾಗಿದೆ, ಎಲ್ಲಾ ಗುಂಪುಗಳು ಸಹಬಾಳ್ವೆಯಿಂದ ಬಾಳಲು ಹಾಗು ಬೆಳೆಯಲು ಸಮಾನ ಹಕ್ಕುಗಳನ್ನು ಹೊಂದಿವೆ .  ಶಿಕ್ಷಣ ವ್ಯವಸ್ಥೆಯು ಸಾಂಸ್ಕೃತಿಕ ಬಹುತ್ವಕ್ಕೆ ಪ್ರತಿಕ್ರಿಯಿಸುವ ಅಗತ್ಯವಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ.  ದಲಿತ ಲೇಖಕರು, ಪಿ.ಲಂಕೇಶ್, ಸಾರಾ ಅಬೂಬಕರ್ ಅವರ ಕೃತಿಗಳನ್ನು ತೆಗೆದುಹಾಕುವ ಮೂಲಕ ಮತ್ತು ಡಾ.ಅಂಬೇಡ್ಕರ್ ಮತ್ತು ಬಸವಣ್ಣ ಅವರಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳನ್ನು ತಿರುಚಿ ಪಠ್ಯಪುಸ್ತಕ ಪರಿಷ್ಕರಣೆ ಪ್ರಕ್ರಿಯೆಯು ಎನ್‌ಸಿಎಫ್ ಮತ್ತು ಆರ್‌ಟಿಇ ಕಾಯ್ದೆಯನ್ನು ಉಲ್ಲಂಘಿಸುತ್ತದೆ.

ಪಠ್ಯಪುಸ್ತಕ ವಿತರಣೆಯಲ್ಲಿ ವಿಳಂಬ

ನಾಗೇಶ್ ಅವರು ಶೈಕ್ಷಣಿಕ ವರ್ಷದಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಪಠ್ಯಪುಸ್ತಕಗಳ ವಿತರಣೆಯನ್ನು ವಿಳಂಬಗೊಳಿಸಿದ್ದಾರೆ.  ಇದು 2023 ರಲ್ಲಿ ತಮ್ಮ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಮೇಲೆ ಬೀರುವ ದುಷ್ಪರಿಣಾಮಗಳನ್ನು ಕಾಳಜಿ

ಸಾಂವಿಧಾನಿಕ ಪ್ರತಿಜ್ಞೆಯನ್ನು ಅನುಸರಿಸಲು ವಿಫಲತೆ 

ಭಾರತದ  ಸಂವಿಧಾನದ ಮೌಲ್ಯಗಳಿಗೆ ನಂಬಿಕೆಯಿರಿಸಿ ಅದರಂತೆ ನಡೆದುಕೊಳ್ಳುವರೆಂದು ಪ್ರಮಾಣ ವಚನ ಸ್ವೀಕರಿಸಿದರು . ಆದರೆ  ಆರ್‌ಟಿಇ ಕಾಯಿದೆಗೆ ಬದ್ಧವಾಗದೆ, ಯುವ ವಿದ್ಯಾರ್ಥಿಗಳಿಗೆ ನಿರ್ಣಾಯಕ ಪೋಷಕಾಂಶಗಳನ್ನು ನಿರಾಕರಿಸುವ ಮೂಲಕ ಮತ್ತು ಶೈಕ್ಷಣಿಕ ಜಾಗದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಹೊರಗಿಡುವ ಮೂಲಕ, ನ್ಯಾಯಾಲಯದ ತೀರ್ಪನ್ನು ತಪ್ಪಾಗಿ ಅರ್ಥೈಸುವ ಮೂಲಕ  ಶ್ರೀ.ಬಿ.ಸಿ.ನಾಗೇಶ್ ಅವರು ಸಂವಿಧಾನದ ಆಶಯಗಳಿಗೆ , ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇದು ಅವರ ಪ್ರಮಾಣ ವಚನದ ಉಲ್ಲಂಘನೆಯಾಗಿದೆ .

ಬಹುತ್ವ ಕರ್ನಾಟಕದ ಹಕ್ಕೊತ್ತಾಯಗಳು

  •  ಶ್ರೀ ಬಿ ಸಿ ನಾಗೇಶ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಮತ್ತು ಅವರನ್ನು ಶಾಸಕ ಸ್ಥಾನದಿಂದ ಅಮಾನ್ಯಗೊಳಿಸಬೇಕು
  • ಸರ್ಕಾರವು ಎಲ್ಲಾ ಜಿಲ್ಲೆಗಳ ಸರ್ಕಾರಿ  ಶಾಲೆಗಳಿಗೆ  ವಾರದಲ್ಲಿ 5 ದಿನ ಮೊಟ್ಟೆಗಳನ್ನು ನೀಡಬೇಕು
  • ಎಲ್ಲಾ ಮಕ್ಕಳು ಶಾಲೆಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ವಿಶೇಷ ಕ್ರಮಗಳನ್ನು ಜಾರಿಗೊಳಿಸಬೇಕು ಮತ್ತು ಕಲಿಕೆಯ ಅಂತರವನ್ನು ಖಚಿತಪಡಿಸಿಕೊಳ್ಳಲು ತಮಿಳುನಾಡಿನಂತೆ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು
  • ಮುಸ್ಲಿಂ ವಿದ್ಯಾರ್ಥಿನಿಯರು ಕಿರುಕುಳಕ್ಕೆ ಒಳಗಾಗದಂತೆ ಮತ್ತು ಅವರ ಶಿಕ್ಷಣದ ಹಕ್ಕು ಮತ್ತು ಇತರ ಹಕ್ಕುಗಳನ್ನು ಉಲ್ಲಂಘನೆಯಾಗದಂತೆ ಖಚಿತಪಡಿಸಿಕೊಳ್ಳಬೇಕು
  • ಪರಿಷ್ಕೃತ ಪಠ್ಯಪುಸ್ತಕಗಳನ್ನು ಹಿಂಪಡೆಯಬೇಕು ಮತ್ತು ಹಳೆಯ ಪಠ್ಯಪುಸ್ತಕಗಳನ್ನು ತಕ್ಷಣವೇ ನೀಡಬೇಕು 
Donate Janashakthi Media

Leave a Reply

Your email address will not be published. Required fields are marked *