ಶ್ರವಣಬೆಳಗೊಳ: ಕೊರೊನಾ ಕಾರಣದಿಂದಾಗಿ ಎರಡು ತಿಂಗಳಿನಿಂದ ಬಂದ್ ಆಗಿದ್ದ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ವಿಶ್ವ ವಿಖ್ಯಾತ ಶ್ರವಣಬೆಳಗೊಳದ ವಿಂದ್ಯಗಿರಿಗೆ ಸಾರ್ವಜನಿಕರ ಭೇಟಿಗೆ ಇಂದಿನಿಂದ ಅವಕಾಶ ನೀಡಲಾಗಿದೆ. ದೇಶದ ವಿವಿದೆಡೆ ಲಕ್ಷಾಂತರ ಭಕ್ತರನ್ನು ಹೊಂದಿರುವ ಬಾಹುಬಲಿ ಮೂರ್ತಿ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಜಿಲ್ಲೆಯಲ್ಲಿ ಕೊರೊನ ಸೋಂಕಿನ ಪ್ರಮಾಣ ತಗ್ಗಿದ್ದರಿಂದ ಇಂದಿನಿಂದ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ನಿತ್ಯವೂ ನೂರಾರು ಭಕ್ತರು ಸೇರಿ ಸಾವಿರಾರು ಪ್ರವಾಸಿಗರು ಶ್ರವಣಬೆಳಗೊಳದ ವಿಂದ್ಯಗಿರಿಯ ಮೇಲೆ ನೆಲೆಸಿರುವ ವೈರಾಗ್ಯ ಮೂರ್ತಿಯ ದರ್ಶನಕ್ಕೆ ಆಗಮಿಸುತ್ತಾರೆ. ಮುಗಿಲೆತ್ತರದ ಬೆಟ್ಟದ ಮೇಲೆ ನೆಲೆನಿಂತಿರೊ ಶಾಂತ ಮೂರ್ತಿಯ ದರ್ಶನ ಪಡೆದು ಪುನೀತರಾಗುವ ಭಕ್ತರು ಏಕಶಿಲಾ ಮೂರ್ತಿಯನ್ನು ಕಂಡು ಪುಳಕಗೊಳ್ಳುತ್ತಾರೆ.
ಆದರೆ ಕೋವಿಡ್ ಕಾರಣದಿಂದ ಸರ್ಕಾರ ಕೇಂದ್ರ ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪಾರಂಪರಿಕ ತಾಣಗಳಿಗೆ ನಿರ್ಬಂಧ ವಿಧಿಸಿತ್ತು. ಈಗ ಈ ನಿರ್ಬಂಧ ತೆರವಾಗಿದ್ದು ಇಂದಿನಿಂದಲೇ ಸಾವಿರಾರು ಭಕ್ತರು ಆಗಮಿಸಿ ಬಾಹುಬಲಿಯ ದರ್ಶನ ಪಡೆಯುತ್ತಿದ್ದಾರೆ.