ಮೈಸೂರು: ವಿದ್ಯಾರ್ಥಿಗಳ ಮೇಲೆ ಏಕಾಏಕಿ ಸಾವಿರಾರು ರೂಪಾಯಿ ಪ್ರವೇಶ ಶುಲ್ಕವನ್ನು ಕಟ್ಟಿ ಎಂದು ಒತ್ತಡ ಹೇರಲಾಗುತ್ತಿದ್ದು, ಪ್ರವೇಶ ಶುಲ್ಕ ಹಾಗೂ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿಯಲ್ಲಿನ ಗೊಂದಲಗಳನ್ನು ಕೂಡಲೇ ಪರಿಹರಿಸಬೇಕೆಂದು ಒತ್ತಾಯಿಸಿ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಇಲಾಖೆ ಎದುರುಗಡೆ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಅರ್ಗನೈಜೇಶನ್(ಎಐಡಿಎಸ್‌ಒ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಸರ್ಕಾರ ಹಾಗೂ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಈ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.
ಕಾಲೇಜುಗಳ ಪ್ರವೇಶಾತಿ ಪ್ರಾರಂಭವಾಗಿದೆ. ಇದೀಗ ಏಕಾಏಕಿ, ಎಲ್ಲಾ ವಿದ್ಯಾರ್ಥಿಗಳಿಗೂ ಮೊದಲನೇ ವರ್ಷದ, ಎರಡನೇ ವರ್ಷದ ಹಾಗೂ ಮೂರನೇ ವರ್ಷದ ಪ್ರವೇಶ ಶುಲ್ಕವನ್ನು ಒಟ್ಟಿಗೆ ಕಟ್ಟಬೇಕೆಂದು ಆದೇಶ ಹೊರಡಿಸಲಾಗಿದೆ.
ಮಹಾರಾಜ ಕಾಲೇಜಿನಲ್ಲಿ ಒಬ್ಬ ವಿದ್ಯಾರ್ಥಿಗೆ ರೂ.30,000 ಹಾಗೂ ಯುವರಾಜ ಕಾಲೇಜಿನಲ್ಲಿ 30 ರಿಂದ 60 ಸಾವಿರ ಶುಲ್ಕವನ್ನು ಕಟ್ಟಬೇಕೆಂದು ಆದೇಶಿಸಲಾಗಿದೆ. ಮೊದಲನೇ ವರ್ಷದ ವಿದ್ಯಾರ್ಥಿಗಳ ಪ್ರವೇಶ ಶುಲ್ಕವು ಕಾಲೇಜಿಗೆ ಬಂದಿರುತ್ತದೆ, ಹಾಗಾಗಿ ವಿದ್ಯಾರ್ಥಿಗಳು ಪ್ರವೇಶ ಶುಲ್ಕವನ್ನು ಕಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ. ಮೂರನೇ ವರ್ಷದ ಪ್ರವೇಶ ಶುಲ್ಕವನ್ನು ವಿದ್ಯಾರ್ಥಿ ವೇತನ ಬಂದ ನಂತರ ಕಟ್ಟಲಾಗುವುದು ಅದಕ್ಕಾಗಿ ಸಮಯಾವಕಾಶ ಕೊಡಿ ಎಂದು ಕೇಳಿದರೂ ಆಡಳಿತ ಮಂಡಳಿ ಒಪ್ಪುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ.
ಸರ್ಕಾರಿ ಶಾಲಾ ಕಾಲೇಜಿನಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಇಷ್ಟು ದೊಡ್ಡ ಮೊತ್ತದ ಶುಲ್ಕವನ್ನು ಒಟ್ಟಿಗೆ ಕಟ್ಟಬೇಕೆಂದು ಆಗ್ರಹಿಸುವುದು ಖಂಡನೀಯ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಎಷ್ಟೋ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾರ್ಥಿ ವೇತನ ದೊರೆತಿಲ್ಲ. ಬಹುತೇಕ ವಿದ್ಯಾರ್ಥಿಗಳು ಬಡ ರೈತ ಕೂಲಿ ಕಾರ್ಮಿಕರ ಮಕ್ಕಳು, ಇವರಿಗೆ ಏಕಾಏಕಿ ಸಾವಿರಾರು ರೂಪಾಯಿ ಶುಲ್ಕ ಕಟ್ಟಿ ಎಂದು ಹೇಳಿದರೆ, ಕಟ್ಟಲು ಹೇಗೆ ಸಾಧ್ಯ!? ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಸಂಘಟನೆಯ ಪದಾಧಿಕಾರಿಗಳಾದ ಸುಭಾಷ್, ಚಂದ್ರಕಲಾ, ಆಸಿಯಾ ನಿತಿನ್, ಸ್ವಾತಿ, ಚಂದ್ರಿಕಾ, ಚಂದನ, ಹೇಮಾ ವಿದ್ಯಾರ್ಥಿಗಳಾದ ಸಂಗೀತ, ಕಾವ್ಯ, ಅಂಜಲಿ ಐಶ್ವರ್ಯ, ನಿರ್ಮಲ, ರಮ್ಯ, ಕೋಮಲ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು. ಪ್ರತಿಭಟನೆ ಬಳಿಕ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಪತ್ರವನ್ನು ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಿದರು.