ಲಖ್ನೋ: ಸಮಾಜವಾದಿ ಪಕ್ಷ(ಎಸ್ಪಿ)ದ ಹಿರಿಯ ನಾಯಕ, ಶಾಸಕ ಅಜಂ ಖಾನ್ ವಿರುದ್ಧ ದಾಖಲಾಗಿರುವ ದ್ವೇಷ ಭಾಷಣ ಪ್ರಕರಣದ ಬಗ್ಗೆ ರಾಂಪುರ ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟ ಮಾಡಿದ್ದು, ಅವರಿಗೆ 3 ವರ್ಷಗಳ ಜೈಲು ಶಿಕ್ಷೆ ಮತ್ತು ರೂ. 25 ಸಾವಿರ ದಂಡವನ್ನು ವಿಧಿಸಿದೆ.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ ಈಚೆಗಷ್ಟೇ ವಾದ-ಪ್ರತಿವಾದಗಳ ಪ್ರಕ್ರಿಯೆಯನ್ನು ಮುಗಿಸಿತ್ತು. ಪ್ರಕರಣದಲ್ಲಿ ಸಾಕ್ಷ್ಯಧಾರಗಳು ಬಲವಾಗಿದ್ದ ಕಾರಣ ಅಜಂ ಖಾನ್ರನ್ನು ದೋಷಿ ಎಂದು ನ್ಯಾಯಾಲಯ ಪರಿಗಣಿಸಿತ್ತು. ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ನಿಶಾಂತ್ ಮಾನ್ ಇಂದು ಮಧ್ಯಾಹ್ನ ತೀರ್ಪು ಪ್ರಕಟಿಸಿದ್ದಾರೆ.
2019ರ ಲೋಕಸಭೆ ಚುನಾವಣೆಯ ಸಾರ್ವಜನಿಕ ಸಭೆಯೊಂದರಲ್ಲಿ ಅಜಂ ಖಾನ್ ಮಾಡಿದ ಭಾಷಣದ ಸಂದರ್ಭದಲ್ಲಿ ದ್ವೇಷದಿಂದ ದೇಶದ ಪ್ರಧಾನಿ, ಉತ್ತರಪ್ರದೇಶ ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿಯಾಗಿ ಟೀಕಿಸಿದ್ದರು. ಅಲ್ಲದೇ, ಕೋಮ ಸೌಹಾರ್ದತೆ ಕೆರಳಿಸುವ ಮಾತನಾಡಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಬಿಜೆಪಿ ದೂರು ದಾಖಲಿಸಿತ್ತು.
ಅಜಂ ಖಾನ್ ವಿರುದ್ಧ ದಾಖಲಾಗಿದ್ದ ಪ್ರಕರಣದ ಮೊಕದ್ದಮೆಗಳಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಬಲವಾದ ಕಲಂಗಳಾಗಿದ್ದವು. ಅಜಂ ಖಾನ್ ಈಗ ರಾಜ್ಯ ವಿಧಾನಸಭೆಯ ಸದಸ್ಯತ್ವ ಕಳೆದುಕೊಳ್ಳವ ಸಾಧ್ಯತೆ ಇದೆ. ಅಜಂ ಖಾನ್ ವಿರುದ್ಧ ಭ್ರಷ್ಟಾಚಾರ ಮತ್ತು ಕಳ್ಳತನ ಸೇರಿದಂತೆ ಸುಮಾರು 90 ಪ್ರಕರಣಗಳಿವೆ. ಈ ವರ್ಷದ ಆರಂಭದಲ್ಲಿ, ವಂಚನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಭೂಕಬಳಿಕೆ ಪ್ರಕರಣದಲ್ಲಿ ಸುಮಾರು ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದರು.
ಸಮಾಜವಾದಿ ಪಕ್ಷದ ಪ್ರಭಾವಿ ನಾಯಕರಾಗಿರುವ ಅಜಂ ಖಾನ್ 10 ಬಾರಿ ಶಾಸಕರಾಗಿ ಮತ್ತು ಒಮ್ಮೆ ಲೋಕಸಭಾ ಸಂಸದರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ, ರಾಂಪುರ ವಿಧಾನಸಭೆ ಕ್ಷೇತ್ರ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಜಂ ಖಾನ್ ವಿರುದ್ಧ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ತೀರ್ಪಿನ ಬಳಿಕ ಅಜಂ ಖಾನ್ ಅವರು ಮೇಲಿನ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ತೀರ್ಪನ್ನು ತಡೆ ನೀಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.