ಕೊಡಗು: ಬೆಳಗಾವಿಯಿಂದ ಶಬರಿಮಲೆಗೆ ತೆರಳುತ್ತಿದ್ದ ಐವರು ಅಯ್ಯಪ್ಪ ಮಾಲಾಧಾರಿಗಳಿಗೆ ಮಸೀದಿಯಲ್ಲಿ ಆಶ್ರಯ ಕಲ್ಪಿಸಿಕೊಡುವ ಮೂಲಕ ಧರ್ಮಗುರುಗಳೊಬ್ಬರು ಭಾವೈಕ್ಯತೆ ಮೆರೆದಿದ್ದಾರೆ. ಹಾಗೂ ಮಸೀದಿಯ ಪಕ್ಕದಲ್ಲೇ ಪೂಜೆಗೂ ಅವಕಾಶ ಮಾಡಿಕೊಟ್ಟಿದ್ದಾರೆ.
ಬೆಳಗಾವಿಯಿಂದ ಶಬರಿಮಲೆಗೆ ಹೊರಟಿದ್ದ ಅಯ್ಯಪ್ಪ ಮಾರ್ಲಾಧಾರಿಗಳು ಮಳೆ ಮತ್ತು ಕತ್ತಲಾದ ಕಾರಣ, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಎಡತ್ತರ ಗ್ರಾಮದಲ್ಲಿರುವ ಮಸೀದಿಯ ಧರ್ಮ ಗುರುಗಳಿಗೆ ತಂಗಲು ಅವಕಾಶ ನೀಡುವಂತೆ ಕೇಳಿದ್ದರು. ಮಾಲಾಧಾರಿಗಳ ಕೋರಿಕೆಗೆ ಸ್ಪಂದಿಸಿದ ಮಸೀದಿ ಆಡಳಿತ ಮಂಡಳಿ, ಮಸೀದಿ ಬಳಿಯಲ್ಲೇ ಪೂಜೆ ಮಾಡಲು ಅವಕಾಶ ನೀಡಿ ಹಾಗೂ ಮಲಗಲು ವ್ಯವಸ್ಥೆ ಮಾಡಿಕೊಡಲಾಗಿದೆ. ಐವರು ಭಕ್ತರು ರಾತ್ರಿ ಮಸೀದಿಯಲ್ಲೇ ತಂಗಿ ಬೆಳಗ್ಗೆ ಪ್ರಯಾಣ ಮುಂದುವರಿಸಿದ್ದಾರೆ.
ಎಡತ್ತರ ಮಸೀದಿಯಲ್ಲಿ ಯಾವುದೇ ಭಕ್ತರಿಗೆ ಜಾತಿ ಧರ್ಮದ ಭೇದವಿಲ್ಲದೆ ಇಲ್ಲಿ ಬೇಕಾದ ವ್ಯವಸ್ಥೆ ಕಲ್ಪಿಸಲು ನಾವು ಸಿದ್ಧರಿದ್ದೇವೆ. ರಾತ್ರಿ ವೇಳೆ ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಇದೆ. ಯಾತ್ರೆಗೆ ತೆರಳುವವರು ರಾತ್ರಿ ವೇಳೆ ಇಲ್ಲಿಯೇ ಉಳಿದುಕೊಂಡು ಬೆಳಿಗ್ಗೆ ಯಾತ್ರೆ ಕೈಗೊಳ್ಳಬಹುದು. ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ನಾವು ಇಲ್ಲಿ ಕಲ್ಪಿಸಿಕೊಡುತ್ತೇವೆ. ಎಲ್ಲಾ ದೇವರು ಒಂದೇ, ನಮಗೂ ಕೂಡ ನೀವು ಪ್ರಾರ್ಥಿಸಿ ಎಂದು ಎಡತ್ತರ ಜುಮಾ ಮಸೀದಿ ಅಧ್ಯಕ್ಷ ಉಸ್ಮಾನ್ ಹೇಳಿದರು.
ಧರ್ಮದ ವಿಚಾರದಲ್ಲಿ ಪರಸ್ಪರ ಕಿತ್ತಾಡುತ್ತಾ ಹಗೆ ಸಾಧಿಸುತ್ತಾ ಕೋಮು ಸೌಹಾರ್ದತೆ ಮರೆಯಾಗುತ್ತಿರುವ ಈ ಕಾಲ ಘಟ್ಟದಲ್ಲಿ ಮಸೀದಿ ಆಡಳಿತ ಮಂಡಳಿಯೊಂದು ಅಯ್ಯಪ್ಪ ವ್ರತಧಾರಿಗಳಿಗೆ ಆಸರೆ ನೀಡುವ ಮೂಲಕ ಸಾಮರಸ್ಯ ಮೆರೆದಿರುವುದಕ್ಕೆ
ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.