ಬೆಂಗಳೂರು: ಕೊರೊನಾ ಸೋಂಕಿನ ಪ್ರಕರಣಗಳ ಏರಿಕೆಯ ನೆಪದಲ್ಲಿ ವಾರಾಂತ್ಯ ಕರ್ಫ್ಯೂ ಸಹಿತ ಸಾರ್ವಜನಿಕ ಜನ ಜೀವನದ ಮೇಲೆ ರಾಜ್ಯ ಸರಕಾರ ನಿರ್ಬಂಧಗಳನ್ನು ಹೇರಿರುವುದು ನಾಗರಿಕರ ಸಂಕಷ್ಟಗಳನ್ನು ಹೆಚ್ಚಿಸುವ ಅವಾಸ್ತವಿಕ ನಿರ್ಧಾರ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ), ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ.
ಸರಕಾರ ತಕ್ಷಣ ನಿರ್ಬಂಧಗಳನ್ನು ವಾಪಾಸು ಪಡೆಯಬೇಕು ಎಂದಿರುವ ಡಿವೈಎಫ್ ಸಂಘಟನೆಯ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮತ್ತು ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್ ಸರಕಾರ ವಿಧಿಸಿರುವ ಹೊಸ ನಿರ್ಬಂಧಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ತನ್ನ ಘಟಕಗಳಿಗೆ ಕರೆ ನೀಡಿದ್ದಾರೆ.
ಕೊರೊನಾ ಎರಡು ಅಲೆಗಳ ಸಂದರ್ಭ ಸರಕಾರಗಳು ವಿಧಿಸಿದ ನಿರ್ಬಂಧ, ಲಾಕ್‌ಡೌನ್ ಗಳಿಂದ ಜನರ ಆರ್ಥಿಕ ಸ್ಥಿತಿ ಪೂರ್ತಿ ಹದಗೆಟ್ಟಿದೆ. ಬಹುತೇಕ ಜನರು ಉದ್ಯೋಗ, ವ್ಯಾಪಾರ ಕಳೆದು ಕೊಂಡು ಬೀದಿಗೆ ಬಂದಿದ್ದಾರೆ. ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಇಂತಹ ದಯನೀಯ ಸ್ಥಿತಿಯಿಂದ ಚೇತರಿಸಿಕೊಳ್ಳಲು ನಾಗರಿಕರು ಕಷ್ಟ ಪಡುತ್ತಿರುವ ಸಂದರ್ಭದಲ್ಲಿ ಅನಗತ್ಯ ಭೀತಿ ಸೃಷ್ಟಿಸಿ ಕರ್ಫ್ಯೂ ಮತ್ತಿತರ ನಿರ್ಬಂಧಗಳನ್ನು ಹೇರುತ್ತಿರುವುದು ಜನವಿರೋಧಿ ನಡೆ ಮಾತ್ರವಲ್ಲ, ಸರಕಾರ ಸಂವೇದನಾಶೀಲತೆಯನ್ನು ಪೂರ್ತಿ ಕಳೆದುಕೊಂಡಿರುವುದರ ಲಕ್ಷಣ ಎಂದು ಡಿವೈಎಫ್ಐ ಆಪಾದಿಸಿದೆ.
ಕೊರೊನಾ ಎರಡು ಅಲೆಗಳ ಸಂದರ್ಭ ಲಾಕ್ ಡೌನ್ ಗಳಿಂದ ಉಂಟಾದ ಸಂಕಷ್ಟಗಳಿಂದ ಜನತೆಯನ್ನು ಹೊರತರಲು ಬಿಜೆಪಿ ಸರಕಾರ ಯಾವುದೇ ಗಂಭೀರ ಯತ್ನ ನಡೆಸಿಲ್ಲ. ಹಾಗೂ ಗುತ್ತಿಗೆಗಳಲ್ಲಿ ನಲವತ್ತು ಶೇಕಡಾ ಕಮೀಷನ್, ಬಿಟ್ ಕಾಯಿನ್ ದಂಧೆ ಸಹಿತ ಭ್ರಷ್ಟಾಚಾರದ ಗಂಭೀರ ಆರೋಪಗಳು, ಹೆಚ್ಚುತ್ತಿರುವ ನಿರುದ್ಯೋಗ, ಬಡತನಗಳಿಂದ ಸರಕಾರದ ವಿರುದ್ದ ಜನಸಾಮಾನ್ಯರು ರೊಚ್ವಿಗೆದ್ದಿದ್ದಾರೆ. ಖಜಾನೆಯಲ್ಲಿ ದುಡ್ಡಿಲ್ಲದೆ ಅಭಿವೃದ್ದಿ ಕಾರ್ಯಗಳೂ ನೆನೆಗುದಿಗೆ ಬಿದ್ದಿವೆ. ಸರಕಾರದ ವಿರುದ್ದ ಹೋರಾಟಗಳು ಕಸುವು ಪಡೆಯತೊಡಗಿದೆ. ಇದೆಲ್ಲದರಿಂದ ಹೆಚ್ಚುತ್ತಿರುವ ಜನಾಕ್ರೋಶದಿಂದ ತಪ್ಪಿಸಿಕೊಳ್ಳಲು ರಾಜ್ಯದ ಬಿಜೆಪಿ ಸರಕಾರ ಕೊರೋನ ಪ್ರಕರಣಗಳ ಅಲ್ಪ ಹೆಚ್ಚಳವನ್ನು ಮುಂದಿಟ್ಟು ನಿರ್ಬಂಧಗಳ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದೆ.
ಕೊರೊನಾ ಎರಡು ಅಲೆಗಳು ರಾಜ್ಯದಲ್ಲಿ ಪ್ರಬಲವಾಗಿ ಬೀಸಿರುವುದರಿಂದ ಕೊರೋನ ವಿರುದ್ದ ರೋಗ ನಿರೋಧಕ ಶಕ್ತಿ ಜನಸಮೂಹದಲ್ಲಿ ಸಹಜವಾಗಿಯೇ ಹೆಚ್ಚಳಗೊಂಡಿದೆ. ಎರಡು ಡೋಸ್ ವ್ಯಾಕ್ಸಿನ್ ರಾಜ್ಯದ ಬಹುತೇಕ ಜನತೆ ಪಡೆದಿರುವುದಾಗಿ ಸರಕಾರದ ವರದಿಗಳೇ ಹೇಳುತ್ತಿವೆ. ಹಾಗಿರುತ್ತಾ ಕೊರೋನ ಮೂರನೇ ಅಲೆ ಜನರ ಮೇಲೆ ಹೆಚ್ಚಿನ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿಲ್ಲ. ಓಮೈಕ್ರಾನ್ ರೂಪಾಂತರಿ ತಳಿ ಸೌಮ್ಯ ಸ್ವರೂಪದ ಲಕ್ಷಣಗಳನ್ನು ಹೊಂದಿದೆ ಎಂದು ಬಹುತೇಕ ತಜ್ಞರು ಅಭಿಪ್ರಾಯ ಪಟ್ಟಿರುತ್ತಾರೆ. ಹಾಗಿರುತ್ತಾ ಹೊಸ ನಿರ್ಬಂಧಗಳ ಮೂಲಕ ಮತ್ತೊಮ್ಮೆ ಲಾಕ್ ಡೌನ್ ನತ್ತ ಚಲಿಸುವ ಅಗತ್ಯ ಏನು ? ಎಂದು ಡಿವೈಎಫ್ಐ ಪ್ರಶ್ನಿಸಿದೆ. ತನ್ನ ವೈಫಲ್ಯಗಳನ್ನು ಮರೆ ಮಾಚಲು ಸರಕಾರ ಆಡುತ್ತಿರುವ ಇಂತಹ ಅಪಾಯಕಾರಿ ಆಟಗಳನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಸರಕಾರ ತಕ್ಷಣ ವಾರಾಂತ್ಯ ಕರ್ಫ್ಯೂ ಸಹಿತ ನಿರ್ಬಂಧಗಳನ್ನು ವಾಪಾಸು ಪಡೆಯಬೇಕು ಎಂದು ಡಿವೈಎಫ್ಐ ಕರ್ನಾಟಕ ರಾಜ್ಯ ಸರಕಾರವನ್ನು ಆಗ್ರಹಿಸಿದೆ. ಹಾಗೂ ಸರಕಾರದ ನಿರ್ಬಂಧದ ಆದೇಶದ ವಿರುದ್ದ ರಾಜ್ಯದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.