ಶೈಲಜಾ. ಹೆಚ್. ಎಮ್ .ಗಂಗಾವತಿ
ವಿಧವೆಯರು ಈ ವೃತ್ತಿಗೆ ಬರಲು ಅಂದಿನ ಸಾಂಪ್ರದಾಯಿಕ ಕಟ್ಟುಪಾಡುಗಳು ಯಾವ ರೀತಿ ಬಲವಂತವಾಗಿ ಆಕೆಯನ್ನು ವೇಷಾವೃತ್ತಿಯ ಹಾದಿಯಲ್ಲಿ ಸಾಗುವಂತೆ ಮಾಡುತ್ತದೆ ಎಂದು ಓದಿದಾಗ ದಿಗ್ಬೃಮೆಯಾಗುತ್ತದೆ . ವಿಧವೆಯರ ಈ ಕರಾಳ ಬದುಕಿಗೆ ಕಾಲಿಡಲು ಈ ದೇಶದ ಮೌಡ್ಯಸಂಪ್ರದಾಯಗಳ ಜೊತೆ ಮುಕ್ತವಾಗಿ ಸಮಾಜವು ಮರುಮದುವೆಗೆ ಅವಕಾಶ ಕಲ್ಪಿಸಿಕೊಡಲಾರದ್ದು, ಆತ್ಮಕಥೆ
ವಿದ್ಯಾವಂತ ವೇಶ್ಯೆಯ ಆತ್ಮಕಥೆ ಕುಮಾರಿ/ ಶ್ರೀಮತಿ ಮಾನದಾದೇವಿ ಪ್ರಣಿತ ಅವರೇ ಬರೆದ ತಮ್ಮದೇ ಆತ್ಮಕಥೆ 1929ರಲ್ಲಿ ಮೊದಲ ಮುದ್ರಣಗೊಂಡಿತು. ಕನ್ನಡಕ್ಕೆ ಅನುವಾದವಾಗಿದ್ದು 2023 ಕ್ಕೆ .ಅಂದರೆ ಬಂಗಾಳಿ ಮೂಲದ ಕಾದಂಬರಿ ಪ್ರಕಟವಾಗಿ 94 ವರ್ಷಗಳೇ ಸಂಧಿವೆ. ಈ ಕಾದಂಬರಿಯ ಒಂದೊಂದು ಪುಟವು ಸ್ವಾತಂತ್ರ್ಯ ಪೂರ್ವದ ಭಾರತ ಮತ್ತು ಸ್ವಾತಂತ್ರ್ಯದ ನಂತರ ಭಾರತದ ಮಹಿಳೆಯರ ಸ್ಥಿತಿಗತಿಗಳನ್ನು ತಾಳೆಹಾಕುತ್ತಾ ಹೋಗುತ್ತದೆ.
19ನೇ ಇಸ್ವಿಯಲ್ಲಿ ಕಲ್ಕತ್ತಾದ ಗೌರವಾನ್ವಿತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಮಾನದಾದೇವಿ, ಈಗಾಗಲೇ ಮದುವೆಯಾದ ರಮೇಶನ ಕುತಂತ್ರಕ್ಕೆ ಬಲಿಯಾಗಿ ಪ್ರೀತಿ ಪ್ರೇಮದ ಮಾಯಾಜಾಲಕ್ಕೆ ಸಿಲುಕಿ ಮನೆ ತೊರೆದ ಘಟನೆಯಿಂದ ಪ್ರಾರಂಭವಾದ ಆಕೆಯ ನರಕಯಾತನೆ, ಅನೇಕ ರಾಜ್ಯಗಳನ್ನು ಪ್ರವೇಶ ಮಾಡಿ, ರಮೇಶನ ಜೊತೆ ಗೌರವಯುತ ಜೀವನಕ್ಕಾಗಿ ಹೋರಾಟ ಮಾಡಿದರೂ, ಆತನ ವಂಚನೆಯ ಪ್ರತಿಫಲದ ನಂತರ ಅಂದಿನ ಕಾಲಘಟ್ಟದ ಯಾವುದೇ ಆಶ್ರಮಗಳಲ್ಲಿ ಆಶ್ರಯ ದೊರಕದೆ ಹೋದದ್ದು, ಮರಳಿ ಮನೆಗೆ ಹೋಗಲಾಗದೆ, ಗೌರವಯುತ ಬದುಕನ್ನು ಬಾಳಲಾಗದೇ, ತನ್ನ ದೇಹವನ್ನೇ ಮಾರಿಕೊಳ್ಳುವ ಸಂದರ್ಭದಲ್ಲಿ ಆಕೆಯೇ ವಿವರಿಸುವ ಹಾಗೆ,
ಬಹುತೇಕ ಯುವತಿಯರು ತಮ್ಮ ಸ್ವಂತ ಇಚ್ಛೆಯಿಂದ ತಮ್ಮ ಪ್ರಿಯಕರನ ಜೊತೆಗೆ ಮದುವೆ ಮಾಡಿಕೊಂಡು, ಗೌರವದ ಬದುಕು ಕಟ್ಟಿಕೊಳ್ಳಲು ಹೊರ ಬರುತ್ತಾರೆ. ತಾನು ನಂಬಿದ ವ್ಯಕ್ತಿ ನಡುರಾತ್ರಿಯಲ್ಲಿ ಬಿಟ್ಟು ಹೋದಾಗ ಜೀವನೋಪಾಯಕ್ಕಾಗಿ ನೌಕರಿಯನ್ನೇ ಮಾಡಿ ಸಂಪಾದಿಸಬಹುದು. ಆದರೆ ಬದುಕಿನ ಅಗತ್ಯತೆಗಳಿಗಿಂತ ಆಡಂಬರದ ಜೀವನಶೈಲಿಯ ಕನಸು ಕಾಣುವ ಯುವತಿಯರು, ಆ ಎಲ್ಲಾ ವೈಭೋಗದ ಅನುಭವಕ್ಕಾಗಿ ಐಷಾರಾಮಿ ಜೀವನದ ಕನಸುಕಂಡು, ತಮ್ಮ ಉಧ್ಯೋಗದ ನಡುವೆಯೂ “ಅರೆಕಾಲಿಕ” ವೇಶ್ಯಾವೃತ್ತಿ ಮಾಡುತ್ತಾರೆ. ಇದನ್ನು ಸಮಾಜದ ದೃಷ್ಟಿಯಲ್ಲಿ ಅಡ್ಡದಾರಿ ಹಿಡಿದವಳು ಎನ್ನುತ್ತಾರೆ. ಮಾನದಾದೇವಿಯ ಈ ಮಾತು ಪ್ರಸ್ತುತ ಕಾಲಘಟ್ಟಕ್ಕೂ ತಾಳೆ ಹಾಕಿ ನೋಡುವಂತೆ ಮಾಡುತ್ತದೆ.
ಅಷ್ಟೇ ಅಲ್ಲದೆ ಅಂದಿನ ಸ್ವಾತಂತ್ರ್ಯ ಅಸಹಕಾರ ಚಳುವಳಿಯಲ್ಲಿ ಧುಮಿಕಿದ ಈ ಮಹಿಳೆಯರನ್ನು, ಅಂದಿನ ಸ್ವಾತಂತ್ರ್ಯ ಯುವ ಹೋರಾಟಗಾರು ನೆಡೆಸಿಕೊಂಡ ಘಟನೆಗಳನ್ನು ಓದುವಾಗ ಪುನಃ ಇಂದಿನ ನಮ್ಮ ರಾಜಕೀಯ ವ್ಯವಸ್ಥೆಯ ಕೆಲವು ಪರದೆ ಇಂದಿನ ಕಥೆಗಳು ಸಾಕ್ಷಿಯಾಗಿ ನಿಲ್ಲುತ್ತವೆ…
ಈ ಕಥೆಯಲ್ಲಿ ವಿಧವೆಯರು ಈ ವೃತ್ತಿಗೆ ಬರಲು ಅಂದಿನ ಸಾಂಪ್ರದಾಯಿಕ ಕಟ್ಟುಪಾಡುಗಳು ಯಾವ ರೀತಿ ಬಲವಂತವಾಗಿ ಆಕೆಯನ್ನು ವೇಷಾವೃತ್ತಿಯ ಹಾದಿಯಲ್ಲಿ ಸಾಗುವಂತೆ ಮಾಡುತ್ತದೆ ಎಂದು ಓದಿದಾಗ ದಿಗ್ಬೃಮೆಯಾಗುತ್ತದೆ . ವಿಧವೆಯರ ಈ ಕರಾಳ ಬದುಕಿಗೆ ಕಾಲಿಡಲು ಈ ದೇಶದ ಮೌಡ್ಯಸಂಪ್ರದಾಯಗಳ ಜೊತೆ ಮುಕ್ತವಾಗಿ ಸಮಾಜವು ಮರುಮದುವೆಗೆ ಅವಕಾಶ ಕಲ್ಪಿಸಿಕೊಡಲಾರದ್ದು, ಅಲ್ಲದೇ ಇವರ ಶೋಚನೀಯ ಸ್ಥಿತಿಗೆ ಒಂದೆಡೆ ಕುಟುಂಬ ಕಾರಣವಾದರೆ, ಇನ್ನೊಂದೆಡೆ ಸಮಾಜವು ಕೂಡ ಈಕೆಯ ಬಲಹೀನತೆಯನ್ನು ದುರುಪಯೋಗಪಡಿಸಿಕೊಂಡು ಬಲವಂತವಾಗಿ ಪಾಪದ ಕೋಪಕ್ಕೆ ತಳ್ಳುವಂತಾಗುತ್ತದೆ. ಹೀಗೆ ಲೇಖಕಿ ತಾನು ಹೇಗೆ ಜಾರಿದೆ ಎನ್ನುವ ವಿಷಯ ಪ್ರಸ್ತುತಪಡಿಸುವಾಗ, ಆಕೆಯ ಈ ಮಾತು ಇಂದಿಗೂ ಪ್ರಸ್ತುತ ಎನಿಸುತ್ತಿದೆ.
ಇದನ್ನೂ ಓದಿ: ಅಪರೂಪದ ಪುಸ್ತಕ: ‘ಬರಿಯ ನೆನಪಲ್ಲ’
ಮುಂದುವೆರೆದು ಲೇಖಕಿ,
ನಾನು ಮನೆಯನ್ನು ತೊರೆದದ್ದು ಏಕೆ ? ಈ ಪ್ರಶ್ನೆಗೆ ಅತ್ಯಂತ ಸ್ಪಷ್ಟವಾದ ಉತ್ತರವನ್ನು ನೀಡುತ್ತೇನೆ. ವಯೋ ಸಹಜವಾದ ಕಾಮನೆಗಳು ಮತ್ತು ಹಿತ- ಅಹಿತಗಳ ಬಗ್ಗೆ ಯೋಚಿಸುವ ಶಕ್ತಿ ಕಡಿಮೆ ಇದ್ದ ಕಾರಣದಿಂದಾಗಿ, ನಾನು ಮನೆಯನ್ನು ಬಿಟ್ಟು ಹೊರಬಂದಿದ್ದೆ. ಶರೀರಧರ್ಮದ ಸ್ವಾಭಾವಿಕ ನಿಯಮಗಳಿಗೆ ಅನುಗುಣವಾಗಿ ನನ್ನ ದೇಹದಲ್ಲಿಯೂ ಅನೇಕ ರೀತಿಯ ಬದಲಾವಣೆಗಳು ಉಂಟಾಗಿದ್ದವು. ಭಾವನೆಗಳು ಮೂಡ ತೊಡಗಿದ್ದವು ಇಂತಹ ವಯಸ್ಸಿನಲ್ಲಿ ಮನಸ್ಸಿನ ಬಯಕೆಗಳನ್ನು ವಿವಾಹ ಎನ್ನುವ ಸಂಸ್ಕಾರದ ಮೂಲಕ ಶಮನಗೊಳ್ಳುವ ವ್ಯವಸ್ಥೆ ಸಮಾಜದಲ್ಲಿದೆ. ಈ ವಯಸ್ಸಿನ ಹುಡುಗ -ಹುಡುಗಿಯರಿಗೆ ಸೂಕ್ತ ಶಿಕ್ಷಣವನ್ನು ನೀಡುವುದರಿಂದ ಮತ್ತು ಅವರು ಯಾವತ್ತೂ ಒಳ್ಳೆಯ ಜನರ ಜೊತೆಯಲ್ಲಿ ಇರುವ ಹಾಗೆ ನೋಡಿಕೊಳ್ಳುವುದರ ಮೂಲಕ ಚಿತ್ತ ಚಂಚಲವನ್ನು ನಿಯಂತ್ರಿಸಬಹುದು. ಆದರೆ ನಮ್ಮ ಸಮಾಜದಲ್ಲಿ ಈಗ ಶಿಕ್ಷಣ ಮತ್ತು ಸತ್ಸಂಗದ ಅಭಾವ ಎಲ್ಲಾ ಕಡೆ ಕಂಡು ಬರುತ್ತದೆ. ಈ ಕಾರಣದಿಂದಾಗಿ ತಾರುಣ್ಯದಲ್ಲಿ ಹದಿಹರಿಯದವರ ಮನಸ್ಸಲ್ಲಿ ಕಾಮ- ಪ್ರೇಮದ ಬಯಕೆ ಆ ಕಾಲದಲ್ಲಿ ಮೂಡುತ್ತದೆ, ನಿಯಂತ್ರಿಸಿಕೊಳ್ಳಲಾಗದ ಹಂತವನ್ನು ತಲುಪಿ ಬಿಡುತ್ತದೆ.
ನನ್ನ ಈ ಅಭಿಪ್ರಾಯಕ್ಕೆ ಸ್ವತಃ ನಾನೇ ಉದಾಹರಣೆ .ನನಗೆ ಬಾಲ್ಯದಲ್ಲಿ ಸುಶಿಕ್ಷಣ ಹಾಗೂ ಸಜ್ಜನರ ಸಂಗ ಸಿಗಲೇ ಇಲ್ಲ ಎಂದರೆ ಅತಿಶೋಯಕ್ತಿಯೇನು ಅಲ್ಲ. ಶಾಲೆಗೆ ಹೋಗಿ ಒಂದಿಷ್ಟು ಓದು ಬರಹ ಕಲಿತಿದ್ದಕ್ಕಾಗಿ, ಕಾವ್ಯ, ಸಣ್ಣ ಕಥೆ ಕಾದಂಬರಿ ಮುಂತಾದವುಗಳನ್ನು ಓದುವ ಅವಕಾಶ ನನಗೆ ದೊರಕಿತು. ಅದರ ಪರಿಣಾಮ ನನ್ನ ಹೃದಯದಲ್ಲಿ ಕಲ್ಪನೆ ಹಾಗೂ ನವಿರಾದ ಭಾವನೆಗಳು ಹೆಚ್ಚಿನ ಸ್ಥಾನವನ್ನು ಆಕ್ರಮಿಸಿಕೊಂಡವು. ವಿಶೇಷವೆಂದರೆ ನಾನು ಬಾಲ್ಯದಲ್ಲಿ ಯಾವುದೇ ಧರ್ಮ ಗ್ರಂಥಗಳನ್ನು, ಪೌರಾಣಿಕ ಕಥೆಗಳನ್ನು ,ನೀತಿ ಬೋಧಕ ಸಾಹಿತ್ಯವನ್ನು ಓದಲಿಲ್ಲ. ಭಾವ ಪ್ರಧಾನ, ಕಲ್ಪನಾ ಪ್ರಧಾನಗಳನ್ನು ಮಾತ್ರ ಓದಿದೆ. ಸಂಯಮದಿಂದ ಕಲಿಸುವ ನೀತಿ ಮಾರ್ಗವನ್ನು ಬೋಧಿಸುವ ಯಾವ ಪುಸ್ತಕಗಳನ್ನು ಯಾರೊಬ್ಬರೂ ನನ್ನ ಕೈಗೆ ನೀಡಲಿಲ್ಲ. ಅವುಗಳು ಓದು ಎಂದು ಯಾರೂ ಹೇಳಲು ಇಲ್ಲ. ಸ್ವತಃ ನನ್ನ ತಂದೆ ಕೂಡ .
ನಾನು ಬಾಲ್ಯವನ್ನು ಅನುಭವಿಸಿದ ರೀತಿ ಉತ್ತಮ ಮಟ್ಟದ್ದೇನು ಆಗಿರಲಿಲ್ಲ. ವಿಹಾರಕ್ಕೆ ವಿನೋದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ನಾನು, ಉತ್ತಮ ಮಾರ್ಗದಲ್ಲಿ ಸಾಗಬೇಕು ಎಂದು ಬಯಸುವುದಾದರೂ ಯಾರು ? ನಾಟಕ- ಅಭಿನಯ- ಗಾಯನ ಸಿನಿಮಾ ದೃಶ್ಯಗಳು ನನ್ನ ಮನಸ್ಸಿನಲ್ಲಿ ಸದ್ಭಾವನೆಗಳನ್ನು ಜಾಗೃತಿಗೊಳಿಸಲಿಲ್ಲ. ನಿಜ ಹೇಳುವುದಾದರೆ ಚಿಕ್ಕ ವಯಸ್ಸಿನ ಮಕ್ಕಳ ಮೇಲೆ ಇವುಗಳೆಲ್ಲ ದುಷ್ಪರಿಣಾಮ ಬೀರುವ ಸಾಧ್ಯತೆಗಳೆ ಅಧಿಕ. ಒಂದೋ ಎರಡೋ ಹಲ್ಲುಗಳು ಹುಟ್ಟುತ್ತಿದ್ದಂತೆಯೇ, ಶಿಶುವಿಗೆ ಮೀನನ್ನು ತಿನ್ನುವುದಕ್ಕೆ ಕೊಟ್ಟರೆ ಏನಾಗುತ್ತದೆ? ಅದು ಸಾವಿನ ಕಡೆಗೆ ಪ್ರಯಾಣಿಸುತ್ತದೆ ಅಷ್ಟೇ. ದ್ವಂದ್ವಾರ್ಥದ ಹಾಗೂ ಅಶ್ಲೀಲ ಸಂಭಾಷಣೆಗಳಿರುವ ನಾಟಕಗಳನ್ನು ನೋಡುವುದರಿಂದ, ಇಂತಹದೇ ವಸ್ತುಗಳನ್ನು ಒಳಗೊಂಡಿರುವ ಕಥೆ ಕಾದಂಬರಿಗಳನ್ನು ಓದುವುದರಿಂದ ತರುಣತರಣೀಯರು ತಪ್ಪು ಹಾದಿ ಇಡುವುದು ಅತ್ಯಂತ ಸಹಜ. ನನ್ನದೇ ಜೀವನದ ಅನುಭವದಿಂದ ನಾನು ಈ ಮಾತು ಆಡುತ್ತಿದ್ದೇನೆ ಎಂದು ಲೇಖಕಿಯ ಮಾತು ಆಕೆಯ ಪ್ರಮಾಣಿಕತೆಯನ್ನು ಸಾರುತ್ತದೆ.
ಪ್ರಸ್ತುತ ಕಾಲದಲ್ಲಿ, ಸಿನಿಮಾಗಳಿಗೆ ಸೆನ್ಸಾರ್ ಇರುವ ಹಾಗೆ , ಸಾಮಾಜಿಕ ಜಾಲತಾಣಗಳಿಗೂ ಹಾಗೂ ಮನೋರಂಜನೆಯ ಟಿವಿ ಶೋಗಳಿಗೂ ಸೆನ್ಸರ್ ಮಾಡುವ ಕುರಿತು ಸರ್ಕಾರಗಳು ಯೋಚಿಸಬೇಕು. ಇಂದು ಚಿಕ್ಕಮಕ್ಕಳ ಕೈಯಲ್ಲೂ ಮೊಬೈಲ್ ಕೊಡುತ್ತೇವೆ. ಅಲ್ಲಿ ಎಗ್ಗಿಲ್ಲದೆ ನುಗ್ಗಿ ಬರುವ ಕೆಲವು ಅಶ್ಲೀಲ ವಿಡಿಯೋಗಳು ಮುಜುಗರ ತರುತ್ತವೆ. ಅಲ್ಲದೇ ಅವು ಮಕ್ಕಳ ಹಾಗೂ ಹರೆಯದ ಯುವಜನತೆಗೆ ಬೇರೆಂದೂ ಲೋಕಕ್ಕೆ ಸೆಳೆಯುವ ಸಾಧ್ಯತೆಗಳು ಇರುವಾಗ ,ನನ್ನ ವಯ್ಯಕ್ತಿಕ ಅಭಿಪ್ರಾಯದಲ್ಲಿ ಸೆನ್ಸಾರ್ ಬಗ್ಗೆ ಸರ್ಕಾರಗಳು ಯೋಚನೆ ಮಾಡುವುದು ಸೂಕ್ತ…..
ಅಬ್ಬಾ ! ಈ ಆತ್ಮಕಥೆ ಬರೆಯುವ ಲೇಖಕಿ ತನ್ನ ಬದುಕಿನ ಕರಾಳ ಕಥೆಯನ್ನು ಹೇಳುವಾಗ ಎಲ್ಲಿಯೂ ಅಶ್ಲೀಲ ಪದಗಳನ್ನೂ ಬಳಸದೇ, ಅಂತಹ ಯಾವುದೇ ಸನ್ನಿವೇಶಗಳನ್ನೂ ವೈಭವೀಕರಿಸದೇ, ವಸ್ತುವಿಷಯಗಳನ್ನು ಅತ್ಯಂತ ಗಾಂಭೀರ್ಯಯುತವಾಗಿ ಕಟ್ಟಿಕೊಟ್ಟದ್ದು ಓದುಗರ ಮನಸೆಳೆಯುತ್ತದೆ. ಈ ಲೇಖಕಿ ಯಾವುದೇ ಅಕಾಡೆಮಿಕ್ ಸ್ಕಾಲರಗಳಿಗೂ ಕಡಿಮೆಯಿಲ್ಲ ಅನ್ನಿಸಿಬಿಡುತ್ತದೆ. ಕನ್ನಡಕ್ಕೆ ಅನುವಾದ ಮಾಡಿದ ಲೇಖಕರಾದ ಡಾ.ನಾಗ .ಎಚ್ .ಹುಬ್ಳಿ ಅವರು ಕೂಡ ಆ ಗಾಂಭೀರ್ಯದ ಚೌಕಟ್ಟುನ್ನು ದಾಟದೇ, ಕನ್ನಡಭಾಷಾ ಪ್ರತಿಭೆಯನ್ನು ಶ್ರೀಮಂತವಾಗಿ ಮೆರೆಸಿದ್ದಾರೆ.
ಈ ಪುಸ್ತಕದ ಯಾವ ಘಟನೆಗಳು ಸಮಾಜದ ಅಭ್ಯುದಯಕ್ಕೆ ಮಾರಕವಾಗದೆ, ಪ್ರತಿ ಸನ್ನಿವೇಶಗಳು ಪ್ರಬುದ್ಧ ಮಾರ್ಗದರ್ಶನ ಮಾಡುವಂತಿವೆ. ಮಾನದಾದೇವಿಯಿಂದ -ಫಿರೋಜ್ ಬೀಬಿಯಾಗಿ ಕೊನೆಯಲ್ಲಿ ಮಿಸ್ ಮುಖರ್ಜಿ ಆಗುವವರೆಗಿನ ಪಯಣದಲ್ಲಿ, ಅಲ್ಲಲ್ಲಿ ಲೇಖಕಿ ಬಳಸಿದ ವೇಶ್ಯೆ-ಕುಲಟೆ -ಬೀದಿ ಸೂಳೆ -ಜಾರಣಿ -ಪತಿತೆ ಎನ್ನುವ ಪದಗಳು ಆಧುನಿಕ ಸಮಾಜದ ಕೆನ್ನೆಗೆ ರಪ್ ಎಂದು ಬಾರಿಸುವಂತಿವೆ. ಇಂತಹ ಶಬ್ದಗಳನ್ನು ಓದಲಿಕ್ಕೂ ಆಗದ ನಮ್ಮಂತವರಿಗೆ, ಆ ಮಹಿಳೆಯರು ಆ ನರಕದಲ್ಲಿ ಅನುಭವಿಸಿದ ಯಾತನೆಯನ್ನು ನೆನೆದರೆ ಎದೆ ಝೆಲ್ ಎನ್ನುತ್ತದೆ. ಅಲ್ಲದೇ, ಅಂದಿನ ಕಾಲಘಟ್ಟದಲ್ಲಿ ಇಂತಹ ಒಂದು ಆತ್ಮಕಥೆ ಬರೆದು ಮಡಿವಂತಿಕೆ ಸಮಾಜವನ್ನು ಮತ್ತು ಕಾನೂನಿನ ಬೆದರಿಕೆಗಳನ್ನು ಎದುರಿಸಿ, ತನ್ನಂತೆ ಯಾರು ಇಂತಹ ಕತ್ತಲಲೋಕಕ್ಕೆ ಕಾಲಿಡಬಾರದು ಎಂಬ ಆಕೆಯ ಕಾಳಜಿ ಅಭಿನಂದನಾರ್ಹವಾದದ್ದು.
ಇದನ್ನೂ ಓದಿ: ಅಮೃತವ ಕಡೆವಲ್ಲಿ, ವಿಷವಟ್ಟಿ ಸುಡುವಲ್ಲಿ
” ನನ್ನ ಸ್ಪರ್ಶ ಬಯಸಿ ಬಂದವರು ನೆಡೆದುಕೊಳ್ಳುವ ರೀತಿಯನ್ನು ನೆನಸಿಕೊಂಡರೆ, ನಾನು ನರಕಯಾತನೆ ನೋಡುವುದಕ್ಕೆ ಪರಲೋಕಕ್ಕೆ ಹೋಗಬೇಕಾದ ಅವಶ್ಯಕತೆಯೇ ಇಲ್ಲ ಅನ್ನಿಸುತ್ತದೆ.” ಎಂಬ ಲೇಖಕಿ ಹೇಳಿದ ಮಾತು ನನಗೆ ಮಾನಸಿಕವಾಗಿ ವೇದನೆಕೊಟ್ಟಿತು. ಇಂತಹ ಭಯಭೀತ ವಾತಾವರಣಕ್ಕೆ ತಳ್ಳಿದವರಿಗೆ ಏನೆಂದು ಕರಿಯಬೇಕು ಎನ್ನುವ ಪ್ರಶ್ನೆ ಬಾರದೇ ಇರಲಾರದು..?
ನಿಸರ್ಗದ ಕರೆಗೆ ಋತುಮತಿಯಾದ ಬಾಲೆಯ ಹದಿಹರೆಯದ ವಯೋಜಹಜ ಕಾಮನೆಗಳು,
ಹತೋಟಿಮೀರಿ ಕಾಲು ಜಾರುವ ತರುಣಿಯರಿಗೆ,
ಜಾರಣಿ ಎಂದು ಕರೆಯುವುದಾದರೆ,
ಹತೋಟಿ ಮೀರಿದ ಪರಿಸರವನು
ಬಾಲೆಗೆ ಬಳುವಳಿಯಾಗಿ ಕೊಟ್ಟು,
ಸರಿಯಾದ ಸಮಯದಲ್ಲಿ ತಿದ್ದಿ ತೀಡದ ಪೋಷಕ ಹಾಗೂ ಸಭ್ಯವರ್ಗವನ್ನು ಏನೆಂದು ಕರೆಯಬೇಕು ?.
ಪ್ರೀತಿ -ಪ್ರೇಮದ ಸಂಚಿಕೆ ಬಲಿಯಾಗಿ, ವಯೋಮಾನದ ಅಭಿಲಾಷೆಯೇ ಮಹತ್ವವಾಗಿ ,
ಪ್ರೀತಿಯೇ ತನ್ನ ಬದುಕಿನ ಪರಕಾಷ್ಠೆಯೆಂದು
ಪ್ರೀತಿಸಿದವನನು ವರಿಸಿ,
ಬದುಕನ್ನು ಕಟ್ಟಿಕೊಳ್ಳಲು ಕನಸು ಕಂಡವಳು,
ಆತನ ಕಾಮೋದ್ರೇಕದ ಹಸಿವು ನೀಗಿದ ಮೇಲೆ,
ನಡು ರಾತ್ರಿಯಲ್ಲಿ ತೊರೆದುಹೋಗುವ ಯುವಕನ ಪಿತೂರಿಗೆ ಬಲಿಯಾದ ಆಕೆಯನ್ನು,
ಪತಿತೆ ಎಂದು ಕರೆಯುವುದಾದರೆ,
ಆಕೆಯನ್ನು ಆ ಸ್ಥಿತಿಗೆ ತಂದ ಪುರುಷ ಮೃಗಕ್ಕೆ ಏನೆಂದು ಕರೆಯಬೇಕು ?
ಸಮಾಜದ ಗಣ್ಯ ವ್ಯಕ್ತಿಗಳ ತೆವಲಿಗೆ ಬಲಿಯಾಗಿ,
ಮುಗ್ದೆಯೊಬ್ಬಳು ಆತನ ಮಗುವಿಗೆ ಜನ್ಮವಿತ್ತು,
ಮುಂದೊಂದು ದಿನ ನಾಗರಿಕ ಸಮಾಜದ ತುಳಿತಕ್ಕೆ ಒಳಗಾದ ಹೆಣ್ಣು ಗರ್ಭ ಸಂಚಯ,
ಸುಶಿಕ್ಷಿತರಿಗೆ ಕುಲುಟೆಯಂತೆ ಕಾಣುವುದಾದರೆ,
ಆ ಕುಲಟೆಯ ಜನನಕ್ಕೆ ಕಾರಣವಾದ
ಗರ್ಭಸಂಜಾತನಿಗೆ ಏನೆಂದು ಕರೆಯಬೇಕು?
ಯೌವ್ವನದ ಪಡಸಾಲೆಯಲ್ಲಿರುವ ಗೃಹಿಣಿಯ
ಪತಿ ವಿಯೋಗವಾದರೆ,
ಆ ವೈಧ್ಯವ್ಯಕೆ ಶಾಸ್ತ್ರ ಪುರಾಣಗಳ ಬಂಧನಗಳ ಬಿಗಿದು ,
ತನ್ನ ವಿರಹ ವೇದನೆಯನು ದಿನಕ್ಕೊಮ್ಮೆ ಕೊಲ್ಲುವ ಸಂಪ್ರದಾಯಗಳಿಂದ ಬೇಸತ್ತವಳಿಗೆ,
ಬದುಕು ನೀಡುವ ಹುಸಿಗನಸ ನೆಚ್ಚಿ,
ಪರಪುರುಷನ ಬುಜದ ಆಶ್ರಯಪಡೆದ ವಿಧವೆಯನು ವೇಶ್ಯೆಯೆಂದು
ಕರೆಯುವುದಾದರೆ,
ವೈಧವ್ಯ ಆಕಸ್ಮಿಕ, ಶಾಪವಲ್ಲವೆಂದು ಅರಿಯದೆ ಆಕೆಯ ಮರುವಿವಾಹವನ್ನು ನಿಷೇಧಿಸಿದ ಈ ಸಮಾಜದ ಸಂಪ್ರದಾಯಗಳಿಗೆ
ಏನೆಂದು ಕರೆಯಬೇಕು…?
ಜನನಿಯ ಸ್ತನದಿಂದ ಶಿಶು ಹಾಲನ್ನು ಮಾತ್ರ ಹೀರಿಕೊಳ್ಳುವುದು,
ದುಷ್ಟಕಾಮುಕನ ಜೊತೆಗೆ ಸಮಾಜವೂ ಆಕೆಯ ಸ್ತನದಿಂದ ರಕ್ತವನ್ನು ಮಾತ್ರ ಹೀರುವುದನು ಏನೆಂದು ಕರೆಯಬೇಕು ?…..
ಒಟ್ಟಾರೆ ಈ ಪುಸ್ತಕದ ಪ್ರತಿ ಅಧ್ಯಾಯವೂ ಇಂದಿನ ಯುವಜನತೆಗೆ ನೀತಿಪಾಠದಂತಿವೆ ಎಂದರೆ ತಪ್ಪಾಗಲಾರದು. ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ ಡಾ. ನಾಗ ಎಚ್ ಹುಬ್ಳಿಯವರಿಗೂ , ಛಂದ ಪುಸ್ತಕದವರಿಗೂ ಹಾಗೂ ವಿತರಕರಿಗೂ ನನ್ನ ಧನ್ಯವಾದಗಳು.
ವಿಡಿಯೋ ನೋಡಿ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ?) ಬಹಿರಂಗ ಚರ್ಚೆಗೆ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರ ವಿರೋಧ ಯಾಕೆ?