ಆಸ್ಟ್ರೇಲಿಯಾಗೆ ಸೋಲುಣಿಸಿದ ಭಾರತ ; ಸರಣಿಯಲ್ಲಿ 1-1 ರ ಸಮಬಲ

ಬ್ಯಾಟಿಂಗ್ – ಬೌಲಿಂಗ್ ಎರಡು ವಿಭಾಗದಲ್ಲಿ ಗಮನ ಸೆಳೆದ ಭಾರತ, ರಹಾನೆ ನಾಯಕತ್ವಕ್ಕೆ ಶ್ಲಾಘನೆ

ಮೆಲ್ಬೋರ್ನ್​ : ಇಲ್ಲಿನ ಮೆಲ್ಬೋರ್ನ್​ ಕ್ರಿಕೆಟ್ ಕ್ರೀಡಾಂಗಣದಲ್ಲಿ  ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಅಜಿಂಕ್ಯಾ ರಹಾನೆ ನಾಯಕತ್ವದಲ್ಲಿ ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ  8 ವಿಕೆಟ್​ಗಳ ಜಯ ಸಾಧಿಸಿ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಈ ಮೂಲಕ ಮೊದಲ ಟೆಸ್ಟ್​ನಲ್ಲಿ ಹೀನಾಯ ಸೋಲುಕಂಡಿದ್ದ ಭಾರತ ಎರಡನೇ ಟೆಸ್ಟ್​ನಲ್ಲಿ ಕಾಂಗರೂ ಪಡೆಗೆ ಸೋಲಿನ ರುಚಿ ತೋರಿಸಿದೆ.

ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ 2 ರನ್​ಗಳ ಮುನ್ನಡೆ ಸಾಧಿಸಿದ್ದ ಆಸೀಸ್  ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಉಮೇಶ್ ಯಾದವ್ ಅನುಪಸ್ಥಿತಿಯಲ್ಲೂ ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್  ಎಸೆದ ಬೆಂಕಿಯ ಚೆಂಡುಗಳಿಗೆ ಆಸೀಸ್ ಆಟಗಾರರು ತಬ್ಬಿಬ್ಬಾದರು.   ಆಸ್ಟ್ರೇಲಿಯಾ ಪರ ಇಂದು ಬ್ಯಾಟಿಂಗ್ ಮುಂದುವರೆಸಿದ ಕ್ಯಾಮೆರನ್ ಗ್ರೀನ್ ಹಾಗೂ ಪ್ಯಾಟ್ ಕಮಿನ್ಸ್ ಹೆಚ್ಚುಹೊತ್ತು ಕ್ರೀಸ್​​ನಲ್ಲಿ ನಿಲ್ಲಲಿಲ್ಲ. ಬುಮ್ರಾ ಬೌಲಿಂಗ್​ನಲ್ಲಿ ಕಮಿನ್ಸ್(22) ಮೊದಲಿಗರಾಗಿ ಪೆವಿಲಿಯನ್ ಸೇರಿಕೊಂಡರೆ, ಇವರ ಬೆನ್ನಲ್ಲೆ 45 ರನ್ ಗಳಿಸಿದ್ದ ಗ್ರೀನ್ ಕೂಡ ಔಟ್ ಆದರು.

ನೇಥನ್ ಲ್ಯಾನ್ 3 ಹಾಗೂ ಜೋಷ್ ಹ್ಯಾಜ್ಲೆವುಡ್ 10 ರನ್​ಗೆ ನಿರ್ಗಮಿಸಿದರು. ಮಿಚೆಲ್ ಸ್ಟಾರ್ಕ್​ ಅಜೇಯ 14 ರನ್ ಗಳಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 103.1 ಓವರ್​ನಲ್ಲಿ 200 ರನ್​ಗೆ ಸರ್ವಪತನ ಕಂಡಿತು. ಭಾರತ ಪರ ಮೊಹಮ್ಮದ್ ಸಿರಾಜ್ 3 ವಿಕೆಟ್ ಕಿತ್ತರೆ, ಬುಮ್ರಾ, ಅಶ್ವಿನ್, ಜಡೇಜಾ 2 ಹಾಗೂ ಉಮೇಶ್ ಯಾದವ್ 1 ವಿಕೆಟ್ ಪಡೆದರು.  70 ರನ್​ಗಳ ಸುಲಭ ಗುರಿಯೊಂದಿಗೆ ಎರಡನೇ ಇನ್ನಿಂಗ್ಸ್​ ಶುರುಮಾಡಿದ ಭಾರತ ಆರಂಭಿಕ ಆಘಾತ ಅನುಭವಿಸಿತು. ಮಯಾಂಕ್ ಅಗರ್ವಾಲ್ 5 ರನ್​ಗೆ ಔಟ್ ಆದರೆ, ಚೇತೇಶ್ವರ್ ಪೂಜಾರ ಮತ್ತೊಮ್ಮೆ ವೈಫಲ್ಯ ಅನುಭವಿಸಿ 3 ರನ್​ಗೆ ನಿರ್ಗಮಿಸಿದರು. ಬಳಿಕ ಶುಭ್ಮನ್ ಗಿಲ್ ಜೊತೆಯಾದ ನಾಯಕ ಅಜಿಂಕ್ಯಾ ರಹಾನೆ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

ಅಂತಿಮವಾಗಿ ಭಾರತ 15.5 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 70 ರನ್ ಬಾರಿಸಿ 8 ವಿಕೆಟ್​ಗಳ ಗೆಲುವು ಸಾಧಿಸಿತು. ಗಿಲ್ 36 ಎಸೆತಗಳಲ್ಲಿ 35 ಹಾಗೂ ರಹಾನೆ 40 ಎಸೆತಗಳಲ್ಲಿ 27 ರನ್ ಗಳಿಸಿ ಅಜೇಯರಾಗಿ ಉಳಿದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾ 195 ರನ್​ಗಳ ಮೊದಲ ಇನ್ನಿಂಗ್ಸ್​ಗೆ ಪ್ರತಿಯಾಗಿ ಭಾರತ ತಂಡ 115.1 ಓವರ್​ನಲ್ಲಿ 326 ರನ್​ ಗಳಿಸಿತ್ತು. ರಹಾನೆ 223 ಎಸೆತಗಳಲ್ಲಿ 12 ಬೌಂಡರಿಯೊಂದಿಗೆ 112 ರನ್ ಬಾರಿಸಿದರೆ, ಜಡೇಜಾ 159 ಎಸೆತಗಳಲ್ಲಿ 57 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ನೇಥನ್ ಲ್ಯಾನ್ ಹಾಗೂ ಮಿಚೆಲ್ ಸ್ಟಾರ್ಕ್​ ತಲಾ 3 ವಿಕೆಟ್ ಕಿತ್ತರೆ, ಪ್ಯಾಟ್ ಕಮಿನ್ಸ್ 2 ವಿಕೆಟ್ ಪಡೆದರು. ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಅಜಿಂಕ್ಯಾ ರಹಾನೆ  ಪಂದ್ರಶ್ರೆಷ್ಟ  ಪುರಸ್ಕಾರಕ್ಕೆ ಪಾತ್ರರಾದರು. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಉತ್ತಮ ಚಾಣಕ್ಷತೆ ತೋರಿದ ಭಾರತ ತಂಡಕ್ಕೆ, ಹಾಗೂ ನಾಯಕತ್ವವನ್ನು  ಜವಬ್ದಾರಿಯುತವಾಗಿ ನಿರ್ವಹಿಸಿದ ರಹಾನೆಗೆ ಅಬಿನಂದನೆಗಳು ಸುರಿಮಳೆ ಹರಿದಿದೆ.

Donate Janashakthi Media

Leave a Reply

Your email address will not be published. Required fields are marked *