ಬೆಂಗಳೂರು: ನೈಸ್ ಕಂಪನಿಯ ಪಾಲುದಾರಿಕೆ ಕುರಿತು ರಾಜ್ಯ ಸರ್ಕಾರ ಸಲಹಾ ಸಮಿತಿ ನೇಮಿಸಿರುವ ಹಿನ್ನಲೆಯಲ್ಲಿ, ಕಳಂಕಿತ ನೈಸ್ ಕಂಪನಿಗೆ ಯಾವುದೇ ರೀತಿಯ ಕಾಮಗಾರಿ ನಡೆಸದಂತೆ ನಿರ್ಬಂಧ ವಿಧಿಸಲು, ಬಿಎಂಐಸಿ ಯೋಜನೆ ಹಾಗೂ ನೈಸ್ ಕಂಪನಿ ಪಾಲುದಾರಿಕೆಯನ್ನು ರದ್ದುಗೊಳಿಸಲು, ನೈಸ್ ಕಂಪನಿಯ ಭೂ ಸ್ವಾಧೀನ ಹಾಗೂ ರಸ್ತೆ ನಿರ್ಮಾಣದ ಹಗರಣಗಳನ್ನು ತನಿಖೆಗೆ ಒಳಪಡಿಸಿ ಶಿಕ್ಷಿಸಲು, ರೈತರ ಒಪ್ಪಿಗೆ ಇಲ್ಲದ, ರೈತರ ಗಮನಕ್ಕೆ ಬಾರದಂತೆ ಭೂ ಸ್ವಾಧೀನ ಮಾಡಿರುವ ಎಲ್ಲ ಪ್ರಕರಣಗಳನ್ನು ರದ್ದುಪಡಿಸಲು, ನೈಸ್ ಆಕ್ರಮ ಕುರಿತ ಸದನ ಸಮಿತಿ ಮತ್ತು ಸಂಪುಟ ಉಪಸಮಿತಿಗಳ ಶಿಪಾರಸ್ಸುಗಳನ್ನು ಜಾರಿಗೊಳಿಸಲು, ಕೆಐಎಡಿಬಿ ಹಾಗೂ ನೈಸ್ ಕಂಪನಿಯ ಅಕ್ರಮ ಮೈತ್ರಿಯಿಂದ ಹಗಲು ದರೋಡೆ ಮಾಡಿರುವ ಎಲ್ಲಾ ಹೆಚ್ಚುವರಿ ಭೂಮಿಯನ್ನು ವಾಪಸು ಪಡೆದುಕೊಳ್ಳಲು, ಭೂ ಸ್ವಾಧೀನ ಪ್ರಕಟಣೆ ಮತ್ತು ಕೋರ್ಟ್ ತೀರ್ಪುಗಳ ಹೆಸರಿನಲ್ಲಿ ರೈತರ ಮೇಲಿನ ನೈಸ್ ಕಂಪನಿಯ ದಬ್ಬಾಳಿಕೆ-ದೌರ್ಜನ್ಯ ನಿಲ್ಲಿಸಲು, ಟೋಲ್ ಸಂಗ್ರಹಿಸುತ್ತಿರುವ ರಸ್ತೆಗೆ ಭೂಮಿ ಕಳೆದುಕೊಂಡ ರೈತರಿಗೆ ಒಪ್ಪಂದದಂತೆ ಹೆಚ್ಚಿನ ಪರಿಹಾರ ಹಾಗೂ ನಿವೇಶನ ಒದಗಿಸಲು, ಬಿಎಂಐಸಿ ಯೋಜನೆ ನೆಪದಲ್ಲಿ ನೈಸ್ ಸಂಸ್ಥೆ ನಡೆಸುತ್ತಿರುವ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಿರ್ಭಂದಿಸಲು, ನೈಸ್ ಕಂಪನಿಗೆ ಗುತ್ತಿಗೆಗೆ ನೀಡಿರುವ ಎಲ್ಲಾ ಸರ್ಕಾರಿ ಭೂಮಿಗಳನ್ನು ವಾಪಸ್ಸು ಪಡೆದು ಮನೆ-ನಿವೇಶನಕ್ಕಾಗಿ ಅರ್ಜಿ ಹಾಕಿಕೊಂಡಿರುವ ಎಲ್ಲಾ ವಸತಿ ರಹಿತರಿಗೆ ನಿವೇಶನ ನೀಡಿ, ಮನೆ ಒದಗಿಸಲು ಆಗ್ರಹಿಸಿ 20 ಆಗಸ್ಟ್ – 2025 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಯನ್ನು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಅರ್ ಎಸ್) ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಅಳಿಸಲಾದ 65 ಲಕ್ಷ ಮತದಾರರ ಪಟ್ಟಿ ಪ್ರದರ್ಶಿಸಲು ಚುನಾವಣಾ ಸಂಸ್ಥೆ ಒಪ್ಪಿಗೆ
ದಿನಾAಕ 3-4- 1997 ರಂದು ಕರ್ನಾಟಕ ಸರ್ಕಾರ ನೈಸ್ ಕಂಪನಿ ಜೊತೆ ಮಾಡಿಕೊಂಡ ಕ್ರೀಯಾ ಒಪ್ಪಂದದAತೆ ೧೧೧ ಕಿ.ಮೀ ಬೆಂಗಳೂರಿನಿAದ ಮೈಸೂರಿನವರೆಗೆ ವೇಗದ ಹೆದ್ದಾರಿ ರಸ್ತೆ, ಬೆಂಗಳೂರಿನಲ್ಲಿ 41 ಕಿ.ಮೀ. ಪೆರಿಪೆರಲ್ ರಸ್ತೆ, 9.8 ಕಿ.ಮೀ. ಲಿಂಕ್ ರಸ್ತೆ ಹಾಗೂ ನಿಯೋಜಿತ ಸ್ಥಳಗಳಲ್ಲಿ ಐದು ಟೌನ್ ಶಿಪ್ ಗಳನ್ನು ನಿರ್ಮಾಣ ಮಾಡಬೇಕಾಗಿತ್ತು. ಆದರೆ ಈ ಒಪ್ಪಂದ ಆಗಿ 28 ವರ್ಷಗಳೇ ಕಳೆದಿದ್ದರೂ ಈ ಯೋಜನೆ ಕಾರ್ಯಗತವಾಗಿಲ್ಲ. ಆದರೂ ಈ ಯೋಜನೆಗೆ ಗುರುತಿಸಲಾಗಿದ್ದ ರೈತರ ಭೂ ಸ್ವಾಧೀನವನ್ನು ರದ್ದುಪಡಿಸದೇ ಹಾಗೇಯೆ ಮುಂದುವರೆಸಿಕೊಂಡು ಬರುತ್ತಿರುವುದು ಅತ್ಯಂತ ಯಾತನೆಯನ್ನು ಮತ್ತು ಅನ್ಯಾಯವನ್ನು ಈ ಯೋಜನಾ ವ್ಯಾಪ್ತಿಯ ರೈತರು ಅನುಭವಿಸುವಂತೆ ಮಾಡಿದೆ.
ಅದರಲ್ಲೂ ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ಉತ್ತರ ತಾಲ್ಲೂಕಿನ ರೈತರು, ತಮ್ಮ ಜಮೀನುಗಳನ್ನು ಇಂತಹ ದೈತ್ಯ ಭೂ ಕಬಳಿಕೆಯಿಂದ ರಕ್ಷಿಸಿಕೊಳ್ಳಲು ಪಟ್ಟಿರುವ ಪಾಡು ಅಷ್ಟಿಷ್ಟಲ್ಲ. ನೂರಾರು ಜನರು ಕೋರ್ಟ್ಗಳಿಗೆ ಅಲೆದಾಡಿ ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಬಲಿಷ್ಠ ರಾಜಕೀಯ-ಉನ್ನತ ಅಧಿಕಾರಿಗಳ ಭ್ರಷ್ಟ ಬೆಂಬಲ, ಕೆಐಎಡಿಬಿ-ಪಿಡಬ್ಲುಡಿ ಮುಂತಾದ ಇಲಾಖೆಗಳನ್ನು ತನ್ನ ದಾಳವಾಗಿ ಬಳಸಿ ಮಾಡಿಕೊಂಡ ಅಕ್ರಮ-ಕಾನೂನು ಬಾಹಿರ ಕ್ರಮಗಳು ಮತ್ತು ಅರೆ ಸತ್ಯ ಹಾಗೂ ತಿರುಚಿದ ವಾಸ್ತವಗಳನ್ನು ಬಿಡಿ ಬಿಡಿಯಾಗಿ ಒದಗಿಸಿ ಅಪಮಾರ್ಗಗಳ ಮೂಲಕ ಪಡೆದುಕೊಂಡ ನ್ಯಾಯಲಯದ ತೀರ್ಪುಗಳು ಹೀಗೆ ಇವುಗಳ ಜಂಟಿ ಅಡಕತ್ತರಿಯಲ್ಲಿ ಸಿಕ್ಕಿ ಈ ಭಾಗದ ರೈತರು ನರಕ ರೂಪದ ನೋವನ್ನು ಅನುಭವಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು ಮೈಸೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ ಅಭಿವೃದ್ಧಿ ಪಡಿಸಿದ ಮೇಲೆ ಬಿಎಂಐಸಿ ಹೆದ್ದಾರಿ ಅಪ್ರಸ್ತುತವಾಗಿದೆ ಎಂದು ಈ 28 ವರ್ಷದ ಹಿಂದಿನ ಭೂ ಸ್ವಾಧೀನ ಮರೆತು ಈ ಯೋಜನಾ ವ್ಯಾಪ್ತಿಯ ರೈತರು ನಿರಾಳವಾಗಿದ್ದರು. ಆದರೆ ಬೆಂಗಳೂರು ದಕ್ಷಿಣ ತಾಲ್ಲೂಕಿಗೆ ಹೊಂದಿಕೊಂಡ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ರೈತರಿಗೆ 28 ವರ್ಷದ ಹಿಂದಿನ ಭೂ ಸ್ವಾಧೀನವನ್ನು ನೆನಪಿಸಿ ಸಿವಿಲ್ ಕೋರ್ಟ್ಗಳ ಆಜ್ಞೆ ತಂದು ಭೂಮಿ ತೆರವುಗೊಳಿಸುವಂತೆ ಬಲವಂತಪಡಿಸಲಾಗುತ್ತಿದೆ. ಇತ್ತೀಚೆಗೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಅಗರ ಅರಣ್ಯ ಇಲಾಖೆ ಪ್ರದೇಶದಲ್ಲಿ ಆಕ್ರಮ ಹಾಗೂ ಕಾನೂನು ಬಾಹಿರವಾಗಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲಾಗಿದೆ. ಇದೇ ತಾಲ್ಲೂಕಿನ ಬಂಜಾರಪಾಳ್ಯದ ಸರ್ಕಾರಿ ಗೋಮಾಳದಲ್ಲಿ ಅಕ್ರಮ ನಿರ್ಮಾಣ ಚಟುವಟಿಕೆಗಳನ್ನು ನಡೆಸಲಾಗಿದೆ.
ಸುಮಾರು 28 ವರ್ಷಗಳ ಹಿಂದಿನ ಒಪ್ಪಂದವನ್ನು ಪರಿಶೀಲಿಸಿ, ಒಪ್ಪಂದ ಉಲ್ಲಂಘನೆ, ರಿಯಲ್ ಎಸ್ಟೇಟ್ ಭೂ ಕಬಳಿಕೆ, ಭೂ ಸ್ವಾಧೀನ ಹಗರಣಗಳ ದೂರು, ನೈಸ್ ಯೋಜನೆಯನ್ನು ಸಂಪೂರ್ಣ ರದ್ದುಪಡಿಸುವ ಸನ್ಮಾನ್ಯ ಶ್ರೀ.ಟಿ.ಬಿ.ಜಯಚಂದ್ರ ರವರ ಅಧ್ಯಕ್ಷತೆಯ ಸದನ ಸಮಿತಿ ಶಿಪಾರಸ್ಸು, ಭೂ ಸ್ವಾಧೀನ ಹೊರಡಿಸಿ ೨೮ ವರ್ಷಗಳಾದರೂ ಯೋಜನೆ ಕಾರ್ಯಗತ ಆಗದ ಹಿನ್ನೆಲೆಯಲ್ಲಿ ಈ ಸಂಬಂಧದ ಕೆಐಎಡಿಬಿ ಭೂ ಸ್ವಾಧೀನ ರದ್ದುಪಡಿಸಿ ಹೊರ ಬರುತ್ತಿರುವ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳು, ನೈಸ್ ಯೋಜನೆಯ ಆಕ್ರಮಗಳಿಗೆ ಕಡಿವಾಣ ವಿಧಿಸಿರುವ ಸುಪ್ರೀಂ ಕೋರ್ಟ್ ತೀರ್ಪು, ನೈಸ್ ಕಂಪನಿ ಆಕ್ರಮವಾಗಿ ಪಡೆದಿರುವ ಹೆಚ್ಚುವರಿ ಜಮೀನು ವಾಪಸು ಪಡೆಯಲು ರಾಜ್ಯ ಸರ್ಕಾರಕ್ಕೆ ಆದೇಶಿಸಿರುವ ಸುಪ್ರೀಂ ಕೋರ್ಟ್ ತೀರ್ಪು ಅಲ್ಲದೇ ಸಹಸ್ರಾರು ರೈತರು ತಮ್ಮ ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ ಪ್ರಶ್ನಿಸಿ ಸಲ್ಲಿಸಿರುವ ವಿಚಾರಣಾ ಹಂತದಲ್ಲಿರುವ ಸಹಸ್ರಾರು ಕೋರ್ಟ್ ದಾವೆಗಳು ಮತ್ತು ರೈತ ಹೋರಾಟಗಳ ಹಿನ್ನೆಲೆಯಲ್ಲಿ ನೈಸ್ ಯೋಜನೆ ಬಗ್ಗೆ ಕ್ರಮ ವಹಿಸಲು ಸಲಹೆ ನೀಡುವಂತೆ ಗೃಹ ಮಂತ್ರಿ ಮಾನ್ಯ ಶ್ರೀ.ಜಿ.ಪರಮೇಶ್ವರ ರವರ ನೇತೃತ್ವದಲ್ಲಿ ಹಲವಾರು ಸಚಿವರನ್ನೊಳಗೊಂಡ ಸಲಹಾ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ. ಆದರೂ ನೈಸ್ ಕಂಪನಿ ತನ್ನ ಹಳೇಯ ಚಾಳಿಯನ್ನು ಬಿಡದೇ ಮುಂದುವರೆಸುತ್ತಾ ಕಾನೂನಿನ ಆಳ್ವಿಕೆಗೆ ಸವಾಲು ಹಾಕುತ್ತಿದೆ.
ಇಂತಹ ಎಲ್ಲಾ ಭೂ ಸ್ವಾಧೀನ ಪ್ರಕರಣಗಳು ಕೆಐಎಡಿಬಿ ಭೂ ಸ್ವಾಧೀನ ಕಾಯ್ದೆ 1966 ರ ಅಡಿಯಲ್ಲಿ ನಡೆದಿದ್ದು ಪರಿಹಾರವಾಗಿ ಇವತ್ತಿನ ಮಾರುಕಟ್ಟೆ ಮೌಲ್ಯದ ಶೇ.1 (ಒಂದು) ರಷ್ಟಕ್ಕೆ ತೃಪ್ತಿಪಟ್ಟುಕೊಳ್ಳುವಂತೆ ಬೆದರಿಸಲಾಗುತ್ತಿದೆ. ಇದೇ ರೀತಿಯ ಬೆದರಿಕೆಗಳನ್ನು ಮೈಸೂರಿನ ತನಕ ಹಂತ ಹಂತವಾಗಿ ವಿಸ್ತರಿಸುವ ಉದ್ದೇಶವು ಬಿಡದಿ ಹೋಬಳಿ ರೈತರಿಗೆ ಅವಾರ್ಡ್ ನೋಟೀಸ್ ನೀಡುವ ಮೂಲಕ ಹಾಗೂ ಪೆರಿಪೆರಲ್ ರಿಂಗ್ ರಸ್ತೆಯನ್ನು ಬಿಡದಿ ವರೆಗೆ ವಿಸ್ತರಿಸುವ ಉದ್ದೇಶದ ಕಾಮಗಾರಿ ಯತ್ನದ ಮೂಲಕ ಬಯಲುಗೊಂಡಿದೆ.
ಮೂಲ ಒಪ್ಪಂದ ಚೌಕಟ್ಟಿನಲ್ಲಿ ಗುರುತಿಸಿಕೊಂಡಿದ್ದ 18313 ಎಕರೆ ಭೂಮಿಯನ್ನು ಮೋಸ ಮತ್ತು ವಂಚನೆಗಳ ಮೂಲಕ 2೦193 ಎಕರೆಗೆ ಹೆಚ್ಚಳ ಮಾಡಿಕೊಂಡಿದ್ದಲ್ಲದೇ ಕೆಐಎಡಿಬಿ ಮೂಲಕ ಮತ್ತೆ ಹೆಚ್ಚುವರಿ 11 ಸಾವಿರ ಎಕರೆ ಭೂಮಿಯನ್ನು ಕಬಳಿಕೆ ಮಾಡಿಕೊಂಡಿದ್ದರೂ, ಅಷ್ಟಕ್ಕೂ ತೃಪ್ತರಾಗದೇ ಓಡಿಪಿ (ಔಟ್ ಲೈನ್ ಡೆವಲಪ್ಮೆಂಟ್ ಪ್ಲಾನ್-ಅಭಿವೃದ್ಧಿ ಯೋಜನೆ ರೂಪುರೇಖೆ) ಮೂಲಕ ಸುಮಾರು1 ಲಕ್ಷ ಎಪ್ಪತೈದು ಸಾವಿರ ಎಕರೆ ಭೂಮಿ ಮೇಲೆ ಕಣ್ಣು ಹಾಕಿದೆ. ಭೂ ಸ್ವಾಧೀನಕ್ಕೆ ಒಳಪಟ್ಟ ಜಮೀನುಗಳು ರೈತರ ವಶದಲ್ಲಿ ಇದ್ದಾಗಲೇ ವಿದೇಶಿ ಬ್ಯಾಂಕ್ ಗಳಿಗೆ ಅಡ ಇಟ್ಟು ಪಡೆದಿದ್ದ ಹಣ ಹಾಗೂ ಈಗ ಸಾವಿರಾರು ಕೋಟಿ ರೂ.ಗಳ ಟೋಲ್ ಸಂಗ್ರಹದ ಜಮೆ ಬಲದಿಂದ ಇಂತಹ ಒಂದು ಭೂ ಕಬಳಿಕೆಯ ಮದ ನೈಸ್ ಕಂಪನಿಗೆ ಬಂದಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಭೂ ಕಬಳಿಕೆಯಿಂದ ಭೂಮಿ ರಕ್ಷಿಸಿಕೊಳ್ಳಲು, ಸರ್ಕಾರಗಳನ್ನು ನಮ್ಮ ನ್ಯಾಯಯುತ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಡ ಹಾಕಿ ನಮ್ಮ ಭೂಮಿ-ಬದುಕನ್ನು ರಕ್ಷಿಸಿಕೊಳ್ಳಲು, ನೈಸ್ ಭೂ ಕಬಳಿಕೆ ವಿರುದ್ಧ ಆಗಸ್ಟ್21 , 2025 ರಂದು ನಡೆಯುವ ಈ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅದ್ದರಿಂದ ಈ ಪ್ರತಿಭಟನೆಯಲ್ಲಿ ಎಲ್ಲಾ ನೈಸ್ ಸಂತ್ರಸ್ಥ ರೈತರು ಪಕ್ಷಾತೀತವಾಗಿ ಭಾಗವಹಿಸಬೇಕು ಎಂದು ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಅರ್ ಎಸ್) ಬೆಂಗಳೂರು ಜಿಲ್ಲಾ ಸಮಿತಿಗಳು ಈ ಮೂಲಕ ಮನವಿ ಮಾಡಿಕೊಳ್ಳುತ್ತದೆ. ಎಂದು ಪತ್ರಿಕಾ ಹೆಳಿಕೆಯಲ್ಲಿ ಟಿ. ಯಶವಂತ ಕೆಪಿಅರ್ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ತಿಳಿಸಿದರು.
ಇದನ್ನೂ ನೋಡಿ: ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯೋದು ಹೇಗೆ ? ಗ್ರಾಚ್ಯುಟಿ ಲೆಕ್ಕ ಹಾಕುವುದು ಹೇಗೆ? ವಿಶ್ಲೇಷಣೆ ಎಸ್.ವರಲಕ್ಷ್ಮಿ
