ಬೆಂಗಳೂರು: 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಾರಿ ಮಂಡನೆ ಮಾಡಲಾದ ಬಜೆಟ್ನ ಒಟ್ಟು ವೆಚ್ಚ 45,03,097 ಕೋಟಿ ರೂಪಾಯಿಯದ್ದಾಗಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರದ 2023-24ನೇ ಸಾಲಿನ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ನೋಟಿಫಿಕೇಷನ್ ಇಲ್ಲದ ಯೋಜನೆಗೆ ಹಣ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದರು.
ಬೆಂಗಳೂರು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಿಲ್ಲ. ಅತ್ಯಂತ ನಿರಾಶದಾಯವಾದ ಬಜೆಟ್ ಇದಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಈ ಯೋಜನೆಗೆ ಇನ್ನೂ ನೋಟಿಫಿಕೇಷನ್ ಸಹ ಆಗಿಲ್ಲ. ನೋಟಿಫಿಕೇಷನ್ ಆಗಿಲ್ಲವೆಂದರೆ 1 ರೂ. ಖರ್ಚು ಮಾಡಲಾಗಲ್ಲ.
ರಾಷ್ಟ್ರೀಯ ಯೋಜನೆ ಮಾಡ್ತೇವೆಯೆಂದು ಬಿಜೆಪಿ ನಾಯಕರು ಕೊಚ್ಚಿಕೊಂಡಿದ್ದರು. ಆದರೆ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಸುಮಾರು 3.5 ಲಕ್ಷ ಕೋಟಿ ಆದಾಯ ಕರ್ನಾಟಕದಿಂದ ಹೋಗುತ್ತೆ. ದೇಶದಲ್ಲಿ ತೆರಿಗೆ ಪಾವತಿಯಲ್ಲಿ ಕರ್ನಾಟಕ ರಾಜ್ಯ 3ನೇ ಸ್ಥಾನದಲ್ಲಿದೆ. ಕರ್ನಾಟಕಕ್ಕೆ ಸೆಸ್, ಸರ್ ಚಾರ್ಜ್‌ನಲ್ಲಿ ನೀಡಲಾಗುವ ಪಾಲು ಇಲ್ಲ. ಈ ಬಗ್ಗೆ ರಾಜ್ಯ ಪ್ರತಿನಿಧಿಸುವ ಬಿಜೆಪಿ ಸಂಸದರು ಪ್ರಶ್ನಿಸದೇ ಇರುವುದು ದುರಾದೃಷ್ಟಿಕರವಾಗಿದೆ. ರಾಜ್ಯ ಬಿಜೆಪಿ ಸಂಸದರನ್ನು ಹೇಡಿಗಳು ಎಂದು ಟೀಕಿಸಿದರು.
ಕೇಂದ್ರವು 45 ಲಕ್ಷದ 3 ಸಾವಿರ 97 ಕೋಟಿ ಬಜೆಟ್ ಮಂಡಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 6 ಲಕ್ಷ ಕೋಟಿ ಹೆಚ್ಚಳ. 2023-24ನೇ ಸಾಲಿನಲ್ಲಿ 18 ಲಕ್ಷ ಕೋಟಿ ರೂಪಾಯಿ ಸಾಲ ಮಾಡಲಾಗಿದೆ. 2022-23 ಸಾಲಿನಲ್ಲಿ 16.61 ಲಕ್ಷ ಕೋಟಿ ಸಾಲ ಮಾಡ್ತೇವೆ ಎಂದಿದ್ದರು. ಆದ್ರೆ 17 ಲಕ್ಷ ಕೋಟಿಗಿಂತ ಹೆಚ್ಚು ಸಾಲ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಬರುವ ಆದಾಯ ಬಡ್ಡಿ ಕಟ್ಟಲೇ ಹೋಗುತ್ತೆ. ಇದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಕೊನೆಯ ಬಜೆಟ್. ಮುಂದಿನ ವರ್ಷ ಮಂಡಿಸುವ ಬಜೆಟ್ ಚುನಾವಣಾ ಬಜೆಟ್. ಕಳೆದ 10 ವರ್ಷದಲ್ಲಿ 118 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಆರೋಪಿಸಿದರು.
ಡಾ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇವಲ 54 ಲಕ್ಷ 90 ಸಾವಿರ ಕೋಟಿ ರೂ. ಸಾಲ ಮಾತ್ರ ಇತ್ತು. ಆದರೆ ಕಳೆದ 10 ವರ್ಷದಲ್ಲಿ 118 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಬರುವ ಆದಾಯ ಬಡ್ಡಿ ಪಾವತಿಸಲೇ ಹೋಗುತ್ತೆ ಎಂದು ಸಿದ್ದರಾಮಯ್ಯ ಕಟು ಟೀಕೆ ಮಾಡಿದರು.
ಕೇಂದ್ರ ಸರ್ಕಾರ ರಸಗೊಬ್ಬರ ಸಬ್ಸಿಡಿ ಕಡಿತ ಮಾಡಲಾಗಿದೆ. ರೈತರ ಆದಾಯ ಡಬಲ್ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇದು ರೈತರು, ಕೃಷಿ ಕಾರ್ಮಿಕರಿಗೆ ಮಾಡುವ ದ್ರೋಹ ಎಂದು ಸಿದ್ದರಾಮಯ್ಯ ಕಿಡಿಕಾರಿದರು.