ಬಿಲ್ಕಿಸ್‌ ಬಾನೊ ಪ್ರಕರಣದ ಅತ್ಯಾಚಾರಿ ಆರೋಪಿಗಳ ಬಿಡುಗಡೆ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

ಮಂಗಳೂರು: ಗುಜರಾತ್‌ ರಾಜ್ಯದಲ್ಲಿ 2002ರ ಇಸವಿಯಲ್ಲಿ ಸಂಭವಿಸಿದ ಭೀಕರ ಕೋಮು ಗಲಭೆ ಸಂದರ್ಭದಲ್ಲಿ ಮೇಲ್ಜಾತಿಗೆ ಸೇರಿದವರು ಬಿಲ್ಕಿಸ್‌ ಬಾನೊ ಹಾಗೂ ಅವರ ಕುಟುಂಬದವರ ಮೇಲೆ ಭೀಕರವಾಗಿ ಅತ್ಯಾಚಾರ ವೆಸಗಿ ಹಲ್ಲೆ ನಡೆಸಿದರು. ಹಲ್ಲೆಯಿಂದಾಗಿ ಕೆಲವರು ಆಸು ನೀಗಿದರು. ನಿರಂತರ ಕಾನೂನು ಹೋರಾಟದ ಬಳಿಕ ಅತ್ಯಾಚಾರ ವೆಸಗಿದ 11 ಆರೋಪಿಗಳನ್ನು ಗುಜರಾತ್‌ ರಾಜ್ಯದ ಬಿಜೆಪಿ ಸರ್ಕಾರ ಸ್ವಾತಂತ್ರ್ಯ ದಿನಾಚರಣೆ ದಿನದಂದು ಬಿಡುಗಡೆ ಮಾಡಿತ್ತು. ಇದನ್ನು ಖಂಡಿಸಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರತಿಭಟನೆ-ಧರಣಿಗಳು ನಡೆಸಲಾಗುತ್ತಿದೆ.

ಬಿಡುಗಡೆಗೊಂಡಿರುವ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳನ್ನು ಕೂಡಲೇ ಜೈಲಿಗೆ ಕಳುಹಿಸಬೇಕು ಹಾಗೂ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿಯವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರಿನಲ್ಲಿ ಡಿವೈಎಫ್‌ಐ, ಎಐಡಿಡಬ್ಲ್ಯೂಎ, ಎಸ್ಎಫ್ಐ, ಮತ್ತಿತರ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಡಿವೈಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ ಇಮ್ತಿಯಾಜ್ ಮಾತನಾಡಿ ‘ ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ದೇಶದ ಕಾನೂನು ಸ್ಥಿತಿಯು ಸಂಪೂರ್ಣ ಹದಗೆಟ್ಟಿದೆ. ಆರ್‌ಎಸ್‌ಎಸ್‌ ಪ್ರಣೀತ ನೀತಿಗಳು ನ್ಯಾಯಾಂಗ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿವೆ’ ಎಂದು ಆಗ್ರಹಿಸಿದರು.

‘ಗುಜರಾತ್‌ ರಾಜ್ಯದಲ್ಲಿ 2002ರ ಅವಧಿಯಲ್ಲಿ ಹತ್ಯಾಕಾಂಡದ ಸಂದರ್ಭದಲ್ಲಿ ಗರ್ಭಿಣಿ ಮಹಿಳೆ ಮೇಲೆ ಸರಣಿ ಅತ್ಯಾಚಾರವೆಸಗಿದವರನ್ನು ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕೃಪಾಕಟಾಕ್ಷದಿಂದ ಬಿಡುಗಡೆಗೊಂಡಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಈ ಅಪರಾಧಿಗಳಿಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮುಖಂಡರು ಅದ್ಧೂರಿ ಸ್ವಾಗತ ನೀಡಿದ್ದಾರೆ. ಅಪರಾಧಿಗಳನ್ನು, ಅತ್ಯಾಚಾರಿಗಳನ್ನು ಬೆಂಬಲಿಸುವ ಬಿಜೆಪಿ, ಆರ್‌ಎಸ್‌ಎಸ್‌ಗೂ ಹಾಗೂ ಐಎಸ್‌ಐನಂತಹ ಭಯೋತ್ಪಾದಕ ಸಂಘಟನೆಗಳಿಗೂ ವ್ಯತ್ಯಾಸವಿದೆಯೇ’ ಎಂದು ಪ್ರಶ್ನಿಸಿದರು.

ಡಾ.ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ‘ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವು ತಲೆತಗ್ಗಿಸುವಂತೆ ಘಟನೆಯಾಗಿದೆ. ಮುರುಘಾಮಠದ ಶಿವಮೂರ್ತಿ ಸ್ವಾಮೀಜಿ ವಿರುದ್ಧ ಲೈಂಗಿಕ ಕ್ರೌರ್ಯದ ಆರೋಪವಿದೆ. ಆರೋಪ ಮಾಡಿರುವ ವಿದ್ಯಾರ್ಥಿನಿಯರಲ್ಲಿ ಒಬ್ಬ ದಲಿತ ವಿದ್ಯಾರ್ಥಿನಿಯೂ ಇದ್ದಾರೆ. ಆರೋಪಿ  ಸ್ವಾಮೀಜಿಯನ್ನು ದಲಿತ ದೌರ್ಜನ್ಯ ತಡೆ ಕಾನೂನಿನ ತಕ್ಷಣ ಬಂಧಿಸಬಹುದಿತ್ತು. ಆದರೆ ಸರ್ಕಾರ ತಡವಾಗಿ ಎಫ್ಐಆರ್‌ ದಾಖಲಿಸುವ ಮೂಲಕ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿತು. ಅನಾರೋಗ್ಯದ ನಾಟಕವಾಡಿ ಆರೋಪಿಯು ಆಸ್ಪತ್ರೆಯಲ್ಲಿರುವುದಕ್ಕೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವೇ ನೆರವಾಗಿರುವುದು ಖಂಡನೀಯ ಎಂದು ತಿಳಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್‌ಐ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ್ ಬಜಾಲ್, ‘ಸಾಮರಸ್ಯ ಮಂಗಳೂರು’ ಸಂಘಟನೆಯ ಸಂಚಾಲಕರಾದ ಮಂಜುಳಾ ನಾಯಕ್ ಮಾತನಾಡಿದರು.

ಈ ಸಂದರ್ಭದಲ್ಲಿ ಡಿವೈಎಫ್ಐ ಮುಖಂಡರಾದ ಮನೋಜ್ ವಾಮಂಜೂರು, ನವೀನ್ ಕೊಂಚಾಡಿ, ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ವಿನಿತ್ ದೇವಾಡಿಗ, ಕಾರ್ಯದರ್ಶಿ, ರೇವಂತ್ ಕದ್ರಿ, ಜೆಎಂಎಸ್‌ ಸಂಘಟನೆಯ ಜಯಲಕ್ಷ್ಮಿ ಜಪ್ಪಿನಮೊಗರು, ದಲಿತ ಹಕ್ಕುಗಳ ಸಮಿತಿಯ ಕೃಷ್ಣ ತಣ್ಣೀರು ಬಾವಿ, ತಿಮ್ಮಯ್ಯ ಕೊಂಚಾಡಿ, ಕಾರ್ಮಿಕ ಮುಖಂಡ ಸುನೀಲ್ ಕುಮಾರ್ ಬಜಾಲ್, ಸುಕುಮಾರ್ ತೊಕ್ಕೊಟ್ಟು, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ, ಎಐಎಲ್‌ಯು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಿತಿನ್ ಕುತ್ತಾರ್, ಬೀದಿ ಬದಿ ಸಂಘಟನೆಯ ಮುಸ್ತಫಾ, ಹಮಾಲಿ ಕಾರ್ಮಿಕ ಸಂಘಟನೆಯ ವಿಲ್ಲಿ ವಿಲ್ಸನ್, ಫಲ್ಗುಣಿ ಮೀನುಗಾರರ ಸಂಘಟನೆಯ ತಯ್ಯೂಬ್ ಬೆಂಗ್ರೆ, ಮಹಿಳಾ ಸಂಘಟನೆ ಮುಖಂಡರಾದ ಅಸುಂತ ಡಿಸೋಜಾ, ಪ್ರಮಿಳಾ ದೇವಾಡಿಗ, ಅನುರಾಧ ಬಾಳಿಗಾ, ಸಮರ್ಥ್ ಭಟ್ ಭಾಗವಹಿಸಿದರು.

Donate Janashakthi Media

Leave a Reply

Your email address will not be published. Required fields are marked *