ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ ಹಳ್ಳಿಯ ಶಾಲೆ ಮುಚ್ಚುವ ಪ್ರಯತ್ನ: ಪಾಫ್ರೆ ಆರೋಪ

ಬೆಂಗಳೂರು: ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಮತ್ತು ಶಿಕ್ಷಣ ಸಚಿವರು ಮಾಗ್ನೆಟ್ ಶಾಲೆಗೆ ಬಗ್ಗೆಯಾಗಲಿ ಅಥವಾ ಹಳ್ಳಿಯ ಶಾಲೆಗಳನ್ನು ಮುಚ್ಚುವ ಬಗ್ಗೆಯಾಗಲಿ ಯಾವುದೇ ಪ್ರಶ್ನೆಗೆ ನಿಖರವಾದ ಮತ್ತು ಸ್ಪಷ್ಟವಾದ ಉತ್ತರ ನೀಡುತ್ತಿಲ್ಲ. ಹಳ್ಳಿ

ಕೆಪಿಎಸ್ ಮತ್ತು ಮ್ಯಾಗ್ನೆಟ್ ಶಾಲೆಯ ನಿಜವಾದ ಪರಿಕಲ್ಪನೆ ಏನು? ಅದರ ಪರಿಕಲ್ಪನಾ ಟಿಪ್ಪಣಿ ಅಥವಾ ನೀತಿ ಏನು ಎಂದು ಯಾರಿಗೂ ಗೊತ್ತಿಲ್ಲ . ಅದರ ಬಗ್ಗೆ ವಿವರವಾಗಿ ವ್ಯಾಖ್ಯಾನಿಸಿದ ನೀತಿ ಅಥವಾ ಕಾರ್ಯಕ್ರಮದ ವಿವರಗಳನ್ನೊಳಗೊಂಡ ಯಾವುದೇ ದಸ್ತಾವೇಜು ಸಾರ್ವಜನಿಕ ವಲಯದಲ್ಲಿ ಸಾರ್ವಜನಿಕರಿಗೆ ಲಭ್ಯವಿಲ್ಲ.

ಒಂದೆಡೆ, ಸಚಿವರು ಸದನದಲ್ಲಿ ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ , ಹಳ್ಳಿಯಲ್ಲಿನ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಯಲ್ಲಿ ವಿಲೀನಗೊಳಿಸುವ ಮೂಲಕ ಸದ್ದಿಲ್ಲದೆ ಮುಚ್ಚುವ ಕೆಲಸ ಅಧಿಕಾರಿಗಳಿಂದ ನಡೆಯುತ್ತಿದೆ.

ಇದನ್ನೂ ಓದಿ: ಗುಂಡಿಯಲ್ಲಿ ಬೈಕ್‌ ಸವಾರ ಬಿದ್ದು ಮೃತ: ಜಲ್‌ ಬೋರ್ಡ್‌ನ ಗುತ್ತಿಗೆದಾರನ ಬಂಧನ

ವಿಲೀನಗೊಳ್ಳುವ ಶಾಲೆ ಮತ್ತು ಮ್ಯಾಗ್ನೆಟ್ ಶಾಲೆಯ ದೂರವೆಷ್ಟು,ಅದು ಶಿಕ್ಷಣದ ಹಕ್ಕಿನಲ್ಲಿ ವ್ಯಾಖ್ಯಾನಿಸಿರುವ ನೆರೆಹೊರೆಯ ಶಾಲೆಯ ಕಲ್ಪನೆ ಉಲ್ಲಂಘನೆಯಾಗುತ್ತಿದ್ದೇಯೇ ಎಂಬ ಯಾವ ಅಂಶವನ್ನು ಸರ್ಕಾರ ಪರಿಗಣಿಸುತ್ತಿಲ್ಲ.

ವಿಲೀನಗೊಳ್ಳುವ ಶಾಲೆಗಳ ಕಟ್ಟಡಗಳು, ಶಾಲೆಯ ಆಸ್ತಿ, ಜಮೀನು ಮತ್ತು ಶಿಕ್ಷಕರನ್ನ ಏನು ಮಾಡುತ್ತೀರಿ? ಎಂಬ ಪ್ರಶ್ನೆಗಾಗಲಿ ಅಥವಾ ಹಳ್ಳಿಯ ಶಾಲೆಯನ್ನು ಮುಚ್ಚುವುದು ಸಾಂಸ್ಕೃತಿಕ ದಿವಾಳಿತನ ಮತ್ತು ಕನ್ನಡದ ಅಸ್ಮಿತೆಗೆ ಧಕ್ಕೆಯಾಗುವುದಿಲ್ಲವೇ ಮತ್ತು ಸಣ್ಣ ವಯಸ್ಸಿನ ಮಕ್ಕಳು ಅದರಲ್ಲೂ ವಿಷೇಶವಾಗಿ ಹೆಣ್ಣುಮಕ್ಕಳು 6 ರಿಂದ 10 ಕಿ ಮೀ ದೂರ ನಡೆದು ಹೋಗಲು ಸಾಧ್ಯವೇ ಎಂಬ ಯಾವುದೇ ಪ್ರಶ್ನೆಗೆ ಯಾವುದೇ ಉತ್ತರವಿಲ್ಲ .

ಇದನ್ನು ಕೇಳಿದರೆ ಸಚಿವರು ಅಂಥವರನ್ನು ತಲಹರಟೆಗಳು ಎಂದು ಕರೆದು ಪ್ರಶ್ನೆಗಳನ್ನು ಕೇಳಿದವರ ಮೇಲೆಲ್ಲ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾರೆ .

ಮತ್ತೊಂದೆಡೆ, ಸರ್ಕಾರದ ನಿರ್ದೇಶನದಂತೆ ಹಳ್ಳಿಯ ಶಾಲೆಗಳನ್ನು ಮುಚ್ಚುವುದನ್ನು ಪ್ರಜಾಸಾತ್ತಾತ್ಮಕವಾಗಿ ಮತ್ತು ವಸ್ತುನಿಷ್ಟವಾಗಿ ವಿರೋಧಿಸುತ್ತಿರುವ ಪಾಲಕರಿಗೆ ಮತ್ತು ಶಾಲಾ ಶಿಕ್ಷಕರಿಗೆ ಕಾರಣ ಕೇಳಿ ನೋಟೀಸ್ ನೀಡಿರುವ ಸರ್ಕಾರದ ನಡೆ ಅತ್ಯಂತ ಖಂಡನೀಯ.

ಶಿಕ್ಷಣ ಸಚಿವರು ಮತ್ತು ಅವರು ಸಾರಥ್ಯ ವಹಿಸಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳು , ಪಾಲಕರು ಹಾಗೂ ಶಿಕ್ಷಕರ ಮೇಲೆ ಇಂತಹ ಏಕಪಕ್ಷೀಯಾ ಮತ್ತು ಅಪ್ರಜಾಸಾತ್ತಾತ್ಮಕ ಅಮಾನವೀಯ ಕ್ರಮ ಅತ್ಯಂತ ಖಂಡನಾರ್ಹ.

ಇಲಾಖೆಯ ಈ ನಡೆ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆಯೋ ಅಥವಾ ಪಾಳೇಗಾರಿಕೆ ವ್ಯವಸ್ಥೆಯಲ್ಲಿದ್ದೇವೆಯೋ ಎಂದು ತಿಳಿಯುತ್ತಿಲ್ಲ.

ಶಿಕ್ಷಣ ಹಕ್ಕು ಕಾಯಿದೆ 2009 ಪ್ರಕರಣ 3 ರ ಅನ್ವಯ ತನ್ನ ನೆರೆಹೊರೆಯಲ್ಲಿ ಶಿಕ್ಷಣ ಪಡೆಯುವುದು ಮಗುವಿನ ಮೂಲಭೂತ ಹಕ್ಕು. ಮುಂದುವರಿದು ,ಪ್ರಕರಣ 6 ಅನ್ವಯ ಕಿರಿಯಪ್ರಾಥಮಿಕ ಶಾಲೆಯನ್ನು ಒಂದು ಕಿ ಮೀ ವ್ಯಾಪ್ತಿಯೊಳಗೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯನ್ನು 3 ಕಿ ಮೀ ವ್ಯಾಪ್ತಿಯೊಳಗೆ ಒದಗಿಸುವುದು ಸಮುಚಿತ ಹಾಗೂ ಸ್ಥಳೀಯ ಸರ್ಕಾರದ ಜವಾಬ್ದಾರಿ.

ಆದರೆ , ಸಚಿವರು ಮತ್ತು ಶಿಕ್ಷಣ ಇಲಾಖೆ ಸರ್ಕಾರ ಜನರಿಗೆ ಮತ್ತು ಶಿಕ್ಷಕರಿಗೆ ಮನವೊಲಿಸುವ ನೆಪದಲ್ಲಿ ಬೆದರಿಕೆ ಒಡ್ಡಿ ನೆರೆಹೊರೆಯ ಶಾಲೆಯನ್ನು ಮುಚ್ಚಿಸಲು ಮುಂದಾಗಿರುವುದು ಅತ್ಯಂತ ಅಮಾನವೀಯ ಹಿಟ್ಲರ್ ಸಂಸ್ಕೃತಿಯಾಗಿದೆ ಎಂದು ಪಾಫ್ರೆ ಅಭಿಪ್ರಾಯಪಡುತ್ತದೆ .

ಸರ್ಕಾರ ಸಂವಿಧಾನಾತ್ಮಕ ಶಿಕ್ಷಣ ಹಕ್ಕನ್ನು ಮತ್ತು ಅದನ್ನು ಕೊಡಮಾಡುವ ಶಿಕ್ಷಣ ಹಕ್ಕುಗಳು ಕಾಯಿದೆಯನ್ನು ಗೌರವಿಸಿ, ಶಾಲೆಗಳನ್ನು ಬಲಾತ್ಕಾರವಾಗಿ ಮುಚ್ಚುವ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು ಮತ್ತು ಮಕ್ಕಳ ಮೂಲಭೂತ ಹಕ್ಕನ್ನು ಗೌರವಿಸಬೇಕು ಎಂದು ಒತ್ತಾಯಿಸುತ್ತದೆ .

ಕೊನೆಯದಾಗಿ ,ಸರ್ಕಾರವು ಕೆ.ಪಿ.ಎಸ್ ಶಾಲೆ ಉತ್ತಮ ಎನ್ನುವುದಾದರೆ ಅದರ ಬಗ್ಗೆ ಯಾವುದಾದರೂ ಸಂಶೋಧನಾ ವರದಿಗಳಿವಿಯೇ? ಈಗಾಗಲೇ ನಡೆಯುತ್ತಿರುವ 309 ಕೆ.ಪಿ.ಎಸ್. ಶಾಲೆಗಳು ಯಶಸ್ವಿಯಾಗಿರುವ ಬಗ್ಗೆ ಅಧ್ಯಯನ ನಡೆದಿದೆಯೇ ? ಎಂಬ ಬಗ್ಗೆಯೂ ತಿಳಿಸಬೇಕು .

ಆದರೆ ಇತ್ತೀಚಿನ ಇಲಾಖೆಯ ಸುತ್ತೋಲೆ ಮತ್ತು ಅದೇಶಗಳನ್ನು ನೋಡಿದರೆ ಸರ್ಕಾರ ಯಾವುದೇ ರೀತಿಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳದೇ ಕೇವಲ ಒಂದೇ ಗುರಿ ಮಾಗ್ನೇಟ್ ಶಾಲೆಗಳನ್ನು ತೆರೆಯುವುದು ಎಂಬಂತಾಗಿದೆ .ಸರ್ಕಾರಕ್ಕೆ ಶಿಶುಅಭಿವೃದ್ದಿಯ ಮೂಲ ಕಲ್ಪನೆಯಾಗಲಿ ಅಥವಾ ಶಿಕ್ಷಣ ಹಕ್ಕು ಕಾಯ್ದೆಯ ಆಶಯವಾಗಲಿ ಅರ್ಥವಾದಂತಿಲ್ಲ . ಇದಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಹಾಳುಮಾಡಿ ಖಾಸಗೀಕರಣಕ್ಕೆ ಒತ್ತು ನೀಡುವುದಾಗಿದೆ.

ಅದಕ್ಕೆ ಪೂರಕವೆಂಬಂತೆ ಖಾಸಗೀ ಶಾಲೆಯನ್ನು ತೆರೆಯಲು ಮತ್ತು ಈಗಿರುವ ನವೀಕರಣ ನಿಯಮಗಳನ್ನು ಸಡಿಲಿಸುವುದಾಗಿಯೂ ಹೇಳಿರುವುದು ಖಾಸಗೀ ಕರಣಕ್ಕೆ ಶಿಕ್ಷಣವನ್ನು ಒಪ್ಪಿಸುವ ಯೋಚನೆ ಇರುವುದು ಸ್ಪಷ್ಟವಾಗಿದೆ .

ಆದ್ದರಿಂದ ಸರ್ಕಾರ ಕೂಡಲೇ ಶಾಲಾ ಶಿಕ್ಷಣ ವ್ಯವಸ್ಥೇ ಈ ಅಮೂಲಾಗ್ರ ಬದಲಾವಣೆಯ ಬಗ್ಗೆ ಮೂಲ ವಾರಸುದಾರರು, ಶಿಕ್ಷಣ ತಜ್ಞರನ್ನು ಒಳಗೊಂಡ ಒಂದು ಸಮಿತಿಯನ್ನು ರಚನೆ ಮಾಡಬೇಕು ಹಾಗೂ ತಾನೇ ರಚಿಸಿದ್ದ ಕರ್ನಾಟಕ ಶಿಕ್ಷಣ ನೀತಿಯ ಸಮಿತಿಯು ಸಲ್ಲಿಸುರುವ ಕರ್ನಾಟಕ ಶಿಕ್ಷಣ ನೀತಿಯನ್ನು ಸಾರ್ವಜನಿಕರಿಗೆ ನೀಡಿ ಅವರ ಅಭಿಪ್ರಾಯವನ್ನು ಪಡೆದು ಈ ಹೊಸ ಯೋಜನೆಯ ಬಗ್ಗೆ ತೀರ್ಮಾನ ಮಾಡಬೇಕೆಂದು ಪಾಫ್ರೆ ಒತ್ತಾಯಿಸುತ್ತದೆ .

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಒಕ್ಕೂಟದ ಎಂ.ಜಯಮ್ಮ, ಎಸ್‌ಡಿಎಮ್‌ಸಿಸಿಎಫ್ ಅಧ್ಯಕ್ಷ ಉಮೇಶ್ ದೊಡ್ಡಗಂಗವಾಡಿ, ಬಿಜಿವಿಎಸ್‌ನ ಎಫ್ . ಸಿ .ಚೇಗಾ ರೆಡ್ಡಿ ಹಾಗೂ ಶುಭಂಕರ್‌ ಚಕ್ರವರ್ತಿ, ಎಸ್‌ಎಫ್‌ಐನ ಶಿವಪ್ಪ ಎನ್‌ ಅಂಬ್ಲಿಕರ್‌, AIDSOನ ಅಜಯ್‌ ವಿ ಕಾಮತ್‌, AISFನ ವೀಣಾ ಎಲ್‌ ವೈ, AISA ಲೇಖಾ ಅಡವಿ, SDMCCFನ  ಶ್ರೀನಿವಾಸಲು ಮತ್ತು ಜ್ಯೋತಿ ಶೆಟ್ಟಿ , ಸಿಸಿಎಲ್- ಎನ್‌ಎಲ್‌ಎಸ್‌ಐಯು ಸಂಶೋಧಕ ಕುಮಾರ್‌ ಶೃಂಗೇರಿ, ಕ್ರಿಟಿಕಲ್ ಎಡ್‌ಟೆಕ್ ಇಂಡಿಯಾದ ಗುರುಮೂರ್ತಿ ಕಾಶಿನಾಥನ್, ಫೋರ್ತ್ ವೇವ್ ಪ್ರತಿಷ್ಠಾನದ ಜಿ. ರವಿ ಹಾಗೂ ಪಾಫ್ರೆ ಸಂಚಾಲಕ ನಿರಂಜನಾರಾಧ್ಯ ವಿ.ಪಿ ಭಾಗವಹಿಸಿದ್ದರು.

ಇದನ್ನೂ ನೋಡಿ: ಪಿಚ್ಚರ್‌ ಪಯಣ -169 | ಸಿನೆಮಾ : ಕೈರೋ ಸ್ಟೇಷನ್ : ವಿಶ್ಲೇಷಣೆ : ಬಿ. ಶ್ರೀಪಾದ ಭಟ್ Janashakthi Media

Donate Janashakthi Media

Leave a Reply

Your email address will not be published. Required fields are marked *