33 ದಿನಗಳ ನಂತರ ಇರಾನ್‌ಗೆ ಮತ್ತೆ ಟ್ರಂಪ್‍ “ಎಚ್ಚರಿಕೆ”- ಹಾರ್ಮುಜ್‍ ಜಲಸಂಧಿ ಮುಚ್ಚಿಯೇ ಇರುತ್ತದೆ ಎಂದು ಇರಾನ್‍ ಪ್ರತಿ-ಎಚ್ಚರಿಕೆ

ಎಪ್ರಿಲ್ 1 ರ ಟ್ರಂಪ್ ಅಧ್ಯಕ್ಷೀಯ ಹೇಳಿಕೆ ಕೊನೆಗೂ ಪ್ರಕಟಗೊಳಿಸಿದ್ದು ಒಂದು ಸ್ಪಷ್ಟ ರಣನೀತಿಯುಳ್ಳ ಸೇನಾಧಿಪತಿಯನ್ನಲ್ಲ, ಬದಲಿಗೆ ಮತ್ತೆ- ಮತ್ತೆ ಗೆಲುವಿನ ದಾವೆ ಮತ್ತು ಅದರೊಂದಿಗೆ ಸಹಕರಿಸಲು ನಿರಾಕರಿಸುತ್ತಿರುವ ವಾಸ್ತವತೆಯನ್ನು ನಿಭಾಯಿಸುವ ಪೇಚಾಟದಲ್ಲಿರುವ ಒಬ್ಬ ರಾಷ್ಟ್ರಾಧ್ಯಕ್ಷನ ನಿಜರೂಪವನ್ನು ಎಂದೊಬ್ಬ ರಾಜಕೀಯ ವೀಕ್ಷಕರು ಟಿಪ್ಪಣಿ ಮಾಡಿದ್ದಾರೆ. ಟ್ರಂಪ್ ಭಾಷೆಯಲ್ಲಿ ಗೆಲುವು ಅಂದರೇನು ಎಂದು ಮತ್ತು ಅದರತ್ತ ಒಂದು ವಿಶ್ವಾಸಾರ್ಹ , ಪಾರದರ್ಶಕ ದಾರಿಯನ್ನು ನಿರೂಪಿಸುವ ವರೆಗೆ, ಅವರ ಇಂತಹ ರಾಷ್ಟ್ರವನ್ನುದ್ದೇಶಿಸಿ ಮಾಡುವ ಭಾಷಣಗಳು ಉತ್ತರಗಳಿಗಿಂತ ಹೆಚ್ಚಾಗಿ ಪ್ರಶ್ನೆಗಳನ್ನೇ ಎತ್ತುತ್ತವೆ. ಈ ನಡುವೆ ಈ ಸಂಘರ್ಷಕ್ಕೆ ಅತ್ಯಂತ ಭಾರೀ ಬೆಲೆಯನ್ನು ತೆರುತ್ತಿರುವ ಪಶ್ಚಿಮ ಏಷ್ಯಾದ ಜನತೆಗೆ ಈ ಸಂದಿಗ್ಧತೆ ಒಂದು ರಾಜಕೀಯ ಅನಾನುಕೂಲತೆಯಷ್ಟೇ ಅಲ್ಲ, ಒಂದು ಜೀವನ್ಮರಣ ಪ್ರಶ್ನೆಯೇ ಆಗಿರುತ್ತದೆ ಎಂದು ಈ ವಿಶ್ಲೇಷಕರು ಟಿಪ್ಪಣಿ ಮಾಡಿದ್ದಾರೆ. ಇರಾನ್‌

ಫೆಬ್ರವರಿ 28 ರಂದು ಯುಎಸ್‍ ಮತ್ತು ಇಸ್ರೇಲ್ ಇರಾನ್ ವಿರುದ್ಧ ಆರಂಭಿಸಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಸಾಮರಿಕ ಉದ್ದೇಶಗಳು “ಪೂರ್ಣಗೊಳ್ಳುವ ಹಂತದಲ್ಲಿವೆ” ಎಂದು ಮಾರ್ಚ್ 1 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಆದರೆ ಈಗ 33 ದಿನಗಳ ಕಾರ್ಯಾಚರಣೆಗಳ ನಂತರ , ಎಪ್ರಿಲ್‍ 1ರಂದು  ತಮ್ಮ ಶ್ವೇತಭವನ ಕಚೇರಿಯಿಂದ ನೀಡಿದ  18 ನಿಮಿಷಗಳ ಸಂದೇಶದಲ್ಲಿ, ಟ್ರಂಪ್, “ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ” ಯಾವುದೇ ಒಪ್ಪಂದಕ್ಕೆ ಬರದಿದ್ದರೆ “ತೀವ್ರ ಕಠೋರತೆಯಿಂದ” ಆಯಕಟ್ಟಿನ ಗುರಿಗಳ ಮೇಲೆ ದಾಳಿ ಮಾಡುವುದಾಗಿ ಇರಾನಿಗೆ ಎಚ್ಚರಿಕೆ ನೀಡುವುದಾಗಿ ಹೇಳಿದ್ದಾರೆ ಮತ್ತು ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಪುನರ್ನಿರ್ಮಿಸುತ್ತಿದೆ ಎಂಬ ಸುಳ್ಳು ಆರೋಪವನ್ನು ಪುನರುಚ್ಚರಿಸಿದ್ದಾರೆ ಎಂದು ಲ್ಯಾಟಿನ್ ಅಮೆರಿಕಾದ ಸುದ್ಧಿ ಸಂಸ್ಥೆ ಟೆಲಿಸುರ್ ವರದಿ ಮಾಡಿದೆ.

ತಮ್ಮ ಭಾಷಣದ ಸಮಯದಲ್ಲಿ, ಅಧ್ಯಕ್ಷ ಟ್ರಂಪ್ ಇರಾನ್ ಇನ್ನು ಮುಂದೆ ಅಮೆರಿಕಕ್ಕೆ ಬೆದರಿಕೆಯನ್ನು ಒಡ್ಡುತ್ತಿಲ್ಲ ಎನ್ನುತ್ತ ಯುಎಸ್ ಪಡೆಗಳು “ಶೀಘ್ರದಲ್ಲೇ ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಪೂರ್ಣಗೊಳಿಸುತ್ತವೆ” ಎಂದು ಮತ್ತೆ ಪ್ರತಿಪಾದಿಸಿದರು.

ಇದನ್ನೂ ಓದಿ: ಚೆನ್ನೈ| ಲೈಂಗಿಕ ಕಿರುಕುಳ; ಕೊಲೆ ಬೆದರಿಕೆ ಆರೋಪ: ಬಿಜೆಪಿ ನಾಯಕ ವಿರುದ್ಧ ದೂರು ದಾಖಲು

“ಮುಂದಿನ ಎರಡು ಅಥವಾ ಮೂರು ವಾರಗಳ ಕಾಲ ನಾವು ಅವರ ಮೇಲೆ ತೀವ್ರ ದಾಳಿ ನಡೆಸಲಿದ್ದೇವೆ. ನಾವು ಅವರನ್ನು ಅವರು ಇರಬೇಕಾಗಿರುವ ಶಿಲಾಯುಗಕ್ಕೆ ಮರಳಿಸುತ್ತೇವೆ, ಈ ಮಧ್ಯೆ, ಮಾತುಕತೆ ಮುಂದುವರಿಯುತ್ತದೆ” ಎಂದೂ ಅವರು ಘೋಷಿಸಿದರು!

ಇರಾನ್ ನೌಕಾಪಡೆಯನ್ನು ನಿರ್ಮೂಲನೆ ಮಾಡುವುದು ತಮ್ಮ ಗುರಿಯಾಗಿತ್ತು, ಅದು ಈಗ ಸಂಪೂರ್ಣವಾಗಿ ನಾಶವಾಗಿದೆ, ಅದರ ವಾಯುಪಡೆ ಮತ್ತು ಕ್ಷಿಪಣಿ ಕಾರ್ಯಕ್ರಮವನ್ನು ಅಭೂತಪೂರ್ವ ಮಟ್ಟಕ್ಕೆ ದುರ್ಬಲಗೊಳಿಸುವ ಮತ್ತು ಅದರ ಕೈಗಾರಿಕಾ ರಕ್ಷಣಾ ನೆಲೆಯನ್ನು ನಾಶಮಾಡುವ ಮೂಲಭೂತ ಕಾರ್ಯತಂತ್ರದ ಗುರಿಗಳೂ “ಪೂರ್ಣಗೊಳ್ಳುವ ಹಂತದಲ್ಲಿವೆ” ಎಂದು ಟ್ರಂಪ್ ತೃಪ್ತಿ ವ್ಯಕ್ತಪಡಿಸಿದರು. ಇರಾನ್‌

ಟ್ರಂಪ್ ಭಾಷಣ vs ವಾಸ್ತವ

ಅದರೆ ವಾಸ್ತವಾಂಶಗಳು ತೀವ್ರವಾಗಿ ಭಿನ್ನವಾಗಿವೆ. ಟ್ರಂಪ್ ಅವರ ಭಾಷಣದ ಕೆಲವು ಗಂಟೆಗಳ ನಂತರ, ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ, ಟೆಹ್ರಾನ್ ಕದನ ವಿರಾಮವನ್ನು ಕೋರಿದೆ ಎಂಬ ಟ್ರಂಪ್ ಅವರ ಹಿಂದಿನ ಹೇಳಿಕೆಗಳನ್ನು ತೀವ್ರವಾಗಿ ನಿರಾಕರಿಸಿದರು. ಇವು “ಸುಳ್ಳು” ಮತ್ತು “ಯಾವುದೇ ಅಡಿಪಾಯವಿಲ್ಲದ” ಹೇಳಿಕೆಗಳು ಎಂದು ಅವರು ತಳ್ಳಿಹಾಕಿದರು.

ಇದಲ್ಲದೆ,  ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಾರ್ಮುಜ್ ಜಲಸಂಧಿಯು ತನ್ನ ನಿಯಂತ್ರಣದಲ್ಲಿದೆ ಮತ್ತು “ಯುಎಸ್ ಅಧ್ಯಕ್ಷರ ಅಸಂಬದ್ಧ ಪ್ರದರ್ಶನಗಳಿಂದಾಗಿ” ಶತ್ರುಗಳಿಗೆ ಮುಚ್ಚಿರುತ್ತದೆ ಎಂದು ಪುನರುಚ್ಚರಿಸಿದೆ..

ಇದಲ್ಲದೆ ಅದು  ಪಶ್ಚಿಮ ಏಷ್ಯಾದಾದ್ಯಂತ ಯುಎಸ್ ಮತ್ತು ಇಸ್ರೇಲಿ ಮಿಲಿಟರಿ ಮತ್ತು ಆಯಕಟ್ಟಿನ ಹಿತಾಸಕ್ತಿಗಳ ವಿರುದ್ಧ ತನ್ನ ಬಲವಾದ ಪ್ರತೀಕಾರದ ದಾಳಿಯನ್ನು ಮುಂದುವರೆಸಿದೆ. ಎಪ್ರಿಲ್‍ 2ರಂದು , ಇರಾನಿನ ಪಡೆಗಳು “ಆಪರೇಷನ್ ಟ್ರೂ ಪ್ರಾಮಿಸ್ 4” ನ 89 ನೇ ಅಲೆಯನ್ನು ಪ್ರಾರಂಭಿಸಿದವು, 100 ಕ್ಕೂ ಹೆಚ್ಚು ಭಾರೀ ಕ್ಷಿಪಣಿಗಳು, ಹಲವಾರು ಡ್ರೋನ್‌ಗಳು ಮತ್ತು 200 ರಾಕೆಟ್‌ಗಳನ್ನು ನಿಯೋಜಿಸಿದವು. ಕೊಲ್ಲಿ ಪ್ರದೇಶದಲ್ಲಿ ಗೂಗಲ್, ಅಮೆಜಾನ್‍ ಮುಂತಾದ ದೈತ್ಯ ಅಮೆರಿಕನ್‍ ಕಂಪನಿಗಳ ಕಚೇರಿಗಳ ಮೇಲ ದಾಳಿ ನಡೆಸುವುದಾಗಿಯೂ ಹೇಳಿರುವುದಾಗಿ ವರದಿಯಾಗಿದೆ. ಈ ನಿರಂತರ ಆಕ್ರಮಣವು ಇರಾನ್‌ನ “ನೌಕಾಪಡೆ ಕಣ್ಮರೆಯಾಯಿತು”, ಅದರ “ವಾಯುಪಡೆ ಕಣ್ಮರೆಯಾಯಿತು” ಮತ್ತು ಅದರ “ಕ್ಷಿಪಣಿಗಳು ಪ್ರಾಯೋಗಿಕವಾಗಿ ಖಾಲಿಯಾಗಿವೆ ಅಥವಾ ಅವನ್ನು ಬಳಸಲು ಸಾಧ್ಯವಿಲ್ಲದಾಗಿದೆ” ಎಂಬಿತ್ಯಾದಿ ಟ್ರಂಪ್ ಅವರ ಹೇಳಿಕೆಗಳ ಪೊಳ್ಳನ್ನು ಸಾಬೀತು ಪಡಿಸಿವೆ.

ಯುಎಸ್ ಅಧ್ಯಕ್ಷರು ಇಸ್ರೇಲ್‌ನೊಂದಿಗೆ ಪ್ರಾರಂಭಿಸಿದ ಜಂಟಿ ಮಿಲಿಟರಿ ಆಕ್ರಮಣವು ಒಮಾನ್‌ನ ಮಧ್ಯಸ್ಥಿಕೆಯಲ್ಲಿ ನಡೆಸುತ್ತಿದ್ದ  ಮಾತುಕತೆಗಳನ್ನು ಹಾಳುಗೆಡವಿತು ಎಂಬುದು ಈಗ ಜಗಜ್ಜಾಹೀರಾಗಿದ್ದರೂ, “ನಾನು ಯಾವಾಗಲೂ ರಾಜತಾಂತ್ರಿಕ ಮಾರ್ಗವನ್ನು ಬಯಸುತ್ತಿದ್ದೆ, ಆದರೆ ಇರಾನ್‍ ಆಳ್ವಿಕೆ ಪರಮಾಣು ಶಸ್ತ್ರಾಸ್ತ್ರಗಳ ತನ್ನ ನಿರಂತರ ಅನ್ವೇಷಣೆಯನ್ನು ಮುಂದುವರೆಸಿದೆ” ಎಂದು ಟ್ರಂಪ್ಎಪ್ರಿಲ್‍ 1 ತಮ್ಮ ಭಾಷಣದಲ್ಲಿ ಹೇಳಿದ್ದಾರೆ!

ವಿಪರ್ಯಾಸವೆಂದರೆ, ಇರಾನಿನ ಬಲವಾದ ಪ್ರತಿಕ್ರಿಯೆ ಮತ್ತು ಹಾರ್ಮುಜ್ ಜಲಸಂಧಿ ಇನ್ನೂ ಮುಚ್ಚಿಯೇ ಇರುವಾಗ, ಡೊನಾಲ್ಡ್ ಟ್ರಂಪ್ “ನಾವು ಅಲ್ಲಿ ಇರಬೇಕಾಗಿಲ್ಲ. ನಮಗೆ ಅವರ ತೈಲದ ಅಗತ್ಯವಿಲ್ಲ. ಅವರ ಬಳಿಯಿರುವ ಯಾವುದೂ ನಮಗೆ ಅಗತ್ಯವಿಲ್ಲ, ಆದರೆ ನಮ್ಮ ಮಿತ್ರರಾಷ್ಟ್ರಗಳಿಗೆ ಸಹಾಯ ಮಾಡಲು ನಾವು ಅಲ್ಲಿದ್ದೇವೆ” ಎಂದು ಒತ್ತಿ ಒತ್ತಿ ಹೇಳುತ್ತಿರುವುದು ಇದು ಒಡ್ಡಿರುವ ಭೌಗೋಳಿಕ-ರಾಜಕೀಯ ಮತ್ತು ಆರ್ಥಿಕ ಸವಾಲುಗಳನ್ನು ಮರೆಮಾಚಲಿಕ್ಕಾಗಿಯೇ ಇರಬಹುದು ಎಂದು ಹೇಳಲಾಗುತ್ತಿದೆ.

ಇದಕ್ಕೂ ಮೊದಲು, ತಮ್ಮ  ಮಿತ್ರರಾಷ್ಟ್ರಗಳು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವಲ್ಲಿ ಸಹಕರಿಸದಿದ್ದರೆ, ನ್ಯಾಟೋದಿಂದ ಅಮೆರಿಕ ಹಿಂತೆಗೆದುಕೊಳ್ಳುವ ಬಗ್ಗೆ ತಮ್ಮ ಸಲಹೆಗಾರರೊಂದಿಗೆ ಮಾತನಾಡಿದ್ದೇನೆ ಎಂದು  ಕೆಲವು ದಿನಗಳ ಹಿಂದೆ ಅಮೆರಿಕ ಅಧ್ಯಕ್ಷರು ಘೋಷಿಸಿದ್ದರೂ,, ಈ 18 ನಿಮಿಷಗಳ ‘ಸಂದೇಶ’ದಲ್ಲಿ  ಭಾಷಣದಲ್ಲಿ ಆ ಬೆದರಿಕೆಯ ಬಗ್ಗೆ ಮೌನವಾಗಿದ್ದರು.

ಎಪ್ರಿಲ್ 1 ರ ಟ್ರಂಪ್ ಅಧ್ಯಕ್ಷೀಯ ಹೇಳಿಕೆ ಕೊನೆಗೂ ಪ್ರಕಟಗೊಳಿಸಿದ್ದು ಒಂದು ಸ್ಪಷ್ಟ ರಣನೀತಿಯುಳ್ಳ ಸೇನಾಧಿಪತಿಯನ್ನಲ್ಲ, ಬದಲಿಗೆ ಮತ್ತೆ- ಮತ್ತೆ ಗೆಲುವಿನ ದಾವೆ ಮತ್ತು ಅದರೊಂದಿಗೆ ಸಹಕರಿಸಲು ನಿರಾಕರಿಸುತ್ತಿರುವ ವಾಸ್ತವತೆಯನ್ನು ನಿಭಾಯಿಸುವ ಪೇಚಾಟದಲ್ಲಿರುವ ಒಬ್ಬ ರಾಷ್ಟ್ರಾಧ್ಯಕ್ಷನ ನಿಜರೂಪವನ್ನು ಎಂದೊಬ್ಬ ರಾಜಕೀಯ ವೀಕ್ಷಕರು ಟಿಪ್ಪಣಿ ಮಾಡಿದ್ದಾರೆ. ಟ್ರಂಪ್ ಭಾಷೆಯಲ್ಲಿ ಗೆಲುವು ಅಂದರೇನು ಎಂದು ಮತ್ತು ಅದರತ್ತ ಒಂದು ವಿಶ್ವಾಸಾರ್ಹ , ಪಾರದರ್ಶಕ ದಾರಿಯನ್ನು ನಿರೂಪಿಸುವ ವರೆಗೆ, ಅವರ ಇಂತಹ ರಾಷ್ಟ್ರವನ್ನುದ್ದೇಶಿಸಿ ಮಾಡುವ ಭಾಷಣಗಳು ಉತ್ತರಗಳಿಗಿಂತ ಹೆಚ್ಚಾಗಿ ಪ್ರಶ್ನೆಗಳನ್ನೇ ಎತ್ತುತ್ತವೆ. ಈ ನಡುವೆ ಈ ಸಂಘರ್ಷಕ್ಕೆ ಅತ್ಯಂತ ಭಾರೀ ಬೆಲೆಯನ್ನು ತೆರುತ್ತಿರುವ ಪಶ್ಚಿಮ ಏಷ್ಯಾದ ಜನತೆಗೆ ಈ ಸಂದಿಗ್ಧತೆ ಒಂದು ರಾಜಕೀಯ ಅನಾನುಕೂಲತೆಯಷ್ಟೇ ಅಲ್ಲ, ಒಂದು ಜೀವನ್ಮರಣ ಪ್ರಶ್ನೆಯೇ ಆಗಿರುತ್ತದೆಎಂದು ಈ ವಿಶ್ಲೇಷಕರು ಟಿಪ್ಪಣಿ ಮಾಡಿದ್ದಾರೆ.

ಇದನ್ನೂ ನೋಡಿ: “ಬಸವಣ್ಣರಿಂದ ಕುವೆಂಪುವರೆಗೂ: ಮಾನವೀಯತೆ ಬೆಳೆಸುವ ಕನ್ನಡ ಚಿಂತನೆ” – ಎಲ್ ಎನ್ ಮುಕುಂದರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *