ಕಾಶ್ಮೀರದಲ್ಲಿ ಮುಂದುವರೆದ ನಾಗರಿಕರ ಹತ್ಯೆ : ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಕೊಂದ ಉಗ್ರರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಮುಂದುವರೆದಿದ್ದು, ಕುಲ್ಗಾಂ ಜಿಲ್ಲೆಯಲ್ಲಿ ಭಾನುವಾರ ಉಗ್ರರು ಮತ್ತೆ ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಮತ್ತೊಬ್ಬರನ್ನು ಗಾಯಗೊಳಿಸಿದ್ದಾರೆ.

ಕಣಿವೆನಾಡಲ್ಲಿ ಉಗ್ರರ ಕ್ರೌರ್ಯ ಮುಂದುವರೆದಿದ್ದು, ಬಿಹಾರದ ಇಬ್ಬರು ಕಾರ್ಮಿಕರನ್ನ ಉಗ್ರರು ಬಲಿಪಡೆದಿದ್ದಾರೆ. ಖುಲ್ಗಾಂನ ವಾನ್​ಪೋಹ್​ನಲ್ಲಿ ಬಿಹಾರದಿಂದ ಆಗಮಿಸಿದ್ದ ಕಾರ್ಮಿಕರು ವಾಸವಿದ್ದರು. ಕಾರ್ಮಿಕರ ಮನೆಗೆ ನುಗ್ಗಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಬಿಹಾರದ ರಾಜ ದೇವ್ ಹಾಗೂ ಜೋಗಿಂದರ್ ದೇವ್ ಉಗ್ರರ ಗುಂಡಿಗೆ ಬಲಿಯಾದ ಕಾರ್ಮಿಕರು. ಗುಂಡಿನ ದಾಳಿಯಲ್ಲಿ ಓರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ. ಉಗ್ರರಿಗಾಗಿ ಪೊಲೀಸರು ಮತ್ತು ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದಿವೆ ಎಂದು ಅವರು ಹೇಳಿದ್ದಾರೆ.

ಅಧಿಕಾರಿಗಳ ಪ್ರಕಾರ, ಬಾಡಿಗೆ ಮನೆಯಲ್ಲಿದ್ದ ಕಾರ್ಮಿಕರ ಮೇಲೆ ಉಗ್ರರು ಮನಬಂದಂತೆ ಗುಂಡು ಹಾರಿಸಿದರು. ಕಳೆದ 24 ಗಂಟೆಗಳಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆದ ಮೂರನೇ ದಾಳಿ ಇದಾಗಿದೆ.

ಉಗ್ರರ ದಾಳಿಯನ್ನು ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಖಂಡಿಸಿದ್ದಾರೆ. ಜಮ್ಮು-ಕಾಶ್ಮೀರದ ಜನರನ್ನು ತಲುಪಿ ಅವರ ಜೊತೆ ಮಾತನಾಡೋ ಅಗತ್ಯವಿದೆ ಅಂತಾ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಇದನ್ನೂ ಓದಿ : 7 ಮಂದಿ ಹತ್ಯೆ ಹಿನ್ನೆಲೆ: ಕಾಶ್ಮೀರದಲ್ಲಿ ಕ್ಷಿಪ್ರ ಕಾರ್ಯಾಚರಣೆಯಿಂದ 900 ಮಂದಿ ವಶಕ್ಕೆ

ಹೊಣೆ ಹೊತ್ತ ಲಷ್ಕರ್-ಎ-ತೊಯಿಬಾ : ಲಷ್ಕರ್-ಎ-ತೊಯ್ಬಾದ ( Lashkar-e-Taiba)ಸಹ ಸಂಘಟನೆ, ಭಯೋತ್ಪಾದಕ ಗುಂಪು ಯುನೈಟೆಡ್ ಲಿಬರೇಷನ್ ಫ್ರಂಟ್ (United Liberation Front), ಕಾಶ್ಮೀರದಲ್ಲಿ ಇಬ್ಬರು ಬಿಹಾರಿ ಕಾರ್ಮಿಕರ ಭೀಕರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ. ವಲಸಿಗರ ಮೇಲೆ ಇತ್ತೀಚಿನ ದಾಳಿಗಳ ನಡುವೆ, ಭಯೋತ್ಪಾದಕ ಸಂಘಟನೆ ವಲಸೆ ಕಾರ್ಮಿಕರಿಗೆ  ಕಾಶ್ಮೀರ ಕಣಿವೆಯನ್ನು ತೊರೆಯುವಂತೆ ಎಚ್ಚರಿಕೆ ನೀಡಿದೆ ಎಂಬ ಮಾಹಿತಿ ಲಬ್ಯವಾಗಿದೆ.

ಭಾರತದ ಕಿರೀಟ ಕಾಶ್ಮೀರದಲ್ಲಿ ಉಗ್ರರ ಗುಂಡಿನ ಸದ್ದು ಜೋರಾಗುತ್ತಲೇ ಹೋಗ್ತಿದೆ. ಅಮಾಯಕ ಜನರ ಹತ್ಯೆಯ ಸರಣಿ ಮುಂದುವರಿದಿದ್ದು, ಭಾನುವಾರ ಮತ್ತಿಬ್ಬರು ಕಾರ್ಮಿಕರು ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದಾರೆ. ದೂರದ ಬಿಹಾರದಿಂದ ಕಾಶ್ಮೀರಕ್ಕೆ ಬಂದು ಬದುಕು ಕಟ್ಟಿಕೊಳ್ಳುತ್ತಿದ್ದ ಎರಡು ಅಮಾಯಕ ಜೀವಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕಣಿವೆನಾಡಿನಲ್ಲಿ ಕಳೆದ 15 ದಿನಗಳಲ್ಲಿ ಒಟ್ಟು 11 ನಾಗರಿಕರ ಪ್ರಾಣವನ್ನು ಉಗ್ರರು ಬಲಿ ಪಡೆದುಕೊಂಡಿದ್ದಾರೆ. ಈ ಭಾಗದಲ್ಲಿ ಭಯೋತ್ಪಾದನೆ ತಡೆಗಟ್ಟುವುದಾಗಿ ಹೇಳಿದ್ದ ಒಕ್ಕೂಟ ಸರಕಾರ ಏನು ಮಾಡುತ್ತಿದೆ. ಇದನ್ನು ಅಚ್ಚೆದಿನ್‌ ಎಂದು ಕರೆಯಬೇಕಾ? ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.

Donate Janashakthi Media

Leave a Reply

Your email address will not be published. Required fields are marked *