ಕೇರಳ: ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿಭಾಗೀಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಸ್ಎಫ್ಐ ಗೆಲುವು ಸಾಧಿಸಿದ ಬೆನ್ನಲ್ಲೇ ಮಲಪ್ಪುರಂನಲ್ಲಿ ವಿದ್ಯಾರ್ಥಿ ಸಂಘಟನೆಗಳ ನಡುವಿನ ಸಂಘರ್ಷ ತೀವ್ರಗೊಂಡಿದೆ. ಮಲಪ್ಪುರಂನ ಡಿಎಂಎಸ್ ಆಸ್ಪತ್ರೆಯೊಳಗೆ ನುಗ್ಗಿದ ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್ (ಎಂಎಸ್ಎಫ್) ಕಾರ್ಯಕರ್ತರು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ನಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಲೆಫ್ಟ್ವ್ಯೂಸ್ ವರದಿ ಮಾಡಿದೆ. ಘಟನೆಯಲ್ಲಿ ಸುಮಾರು 10 ಎಸ್ಎಫ್ಐ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಕ್ಯಾಲಿಕಟ್
ಗುರುವಾರ ಮಧ್ಯರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಹಿಂದೆ ನಡೆದ ಹಲ್ಲೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ಎಫ್ಐ ಕಾರ್ಯಕರ್ತರನ್ನು ಭೇಟಿಯಾಗಲು ಜಿಲ್ಲಾ ಕಾರ್ಯದರ್ಶಿ ಎ.ಎನ್. ಆದಿಲ್ ಮತ್ತು ಜಿಲ್ಲಾ ಅಧ್ಯಕ್ಷ ಎಂ. ಸುಜಿನ್ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಬಂದ ಎಂಎಸ್ಎಫ್ ಕಾರ್ಯಕರ್ತರು ಆಸ್ಪತ್ರೆಯ ತೀವ್ರ ನಿಗಾ ಘಟಕದ (ಐಸಿಯು) ಒಳಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಲ್ಲಿ ಆದಿಲ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಸುಜಿನ್ ಅವರ ಮೂಗಿನ ಮೇಲ್ಭಾಗಕ್ಕೆ ಗಾಯವಾಗಿದೆ. ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಪೆರಿಂತಲ್ಮಣ್ಣದ ಇ.ಎಂ.ಎಸ್. ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸುಜಿನ್ ಅವರ ಮೂಗಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವರದಿ ತಿಳಿಸಿದೆ. ಕ್ಯಾಲಿಕಟ್
ಕಬ್ಬಿಣದ ರಾಡ್, ಇಟ್ಟಿಗೆ ಮತ್ತು ಅಗ್ನಿಶಾಮಕ ಉಪಕರಣ ಬಳಸಿ ಹಲ್ಲೆ ಆರೋಪ
ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಆದಿಲ್ ನೀಡಿರುವ ಹೇಳಿಕೆಯ ಪ್ರಕಾರ, ಎಂಎಸ್ಎಫ್ ಕಾರ್ಯಕರ್ತರು ಯಾವುದೇ ಪ್ರಚೋದನೆಯಿಲ್ಲದೆ ಏಕಾಏಕಿ ಆಸ್ಪತ್ರೆಗೆ ನುಗ್ಗಿ ದಾಳಿ ನಡೆಸಿದ್ದಾರೆ. ಹಲ್ಲೆ ವೇಳೆ ಇಂಟರ್ಲಾಕ್ ಇಟ್ಟಿಗೆಯಿಂದ ತಲೆಗೆ ಹೊಡೆದ ಪರಿಣಾಮ ತಾನು ಕುಸಿದು ಬಿದ್ದಿದ್ದು, ಎರಡು ಹಲ್ಲುಗಳು ಮುರಿದಿವೆ. ಬಳಿಕ ಅಗ್ನಿಶಾಮಕ ಉಪಕರಣ ಬಳಸಿ ಹಲ್ಲೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ಸುಜಿನ್ ಮೇಲೆ ಕಬ್ಬಿಣದ ಪೈಪ್ನಿಂದ ಹಲ್ಲೆ ನಡೆಸಲಾಗಿದ್ದು, ಮೂಗು ಮತ್ತು ಕಾಲಿಗೆ ಗಾಯಗಳಾಗಿವೆ. ಮೊಳೆಗಳನ್ನು ಜೋಡಿಸಿದ್ದ ಮರದ ಹಲಗೆಗಳು ಹಾಗೂ ಕಬ್ಬಿಣದ ಸರಳುಗಳನ್ನು ಹಿಡಿದು ದಾಳಿಕೋರರು ಆಸ್ಪತ್ರೆಗೆ ನುಗ್ಗಿದ್ದರು ಎಂದು ಆದಿಲ್ ಆರೋಪಿಸಿದ್ದಾರೆ.
ಈ ಹಿಂದೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಸ್ಎಫ್ಐ ಗೆಲುವು ಸಾಧಿಸಿದ ಬಳಿಕವೂ ಸಂಘರ್ಷ ನಡೆದಿತ್ತು. ಮತ ಎಣಿಕೆಯ ದಿನದಂದು ಯುನೈಟೆಡ್ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫ್ರಂಟ್ (ಯುಡಿಎಸ್ಎಫ್) ಬೆಂಬಲಿಗರು ಎಸ್ಎಫ್ಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪವೂ ಕೇಳಿಬಂದಿದೆ.
ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಎಸ್ಎಫ್ಐ ಧ್ವಜಸ್ತಂಭವನ್ನು ಕೆಡವಲಾಗಿದ್ದು, ಚುನಾವಣಾ ಸಮಿತಿಯ ಕಚೇರಿಗೂ ಬೆಂಕಿ ಹಚ್ಚಲಾಗಿದೆ ಎಂದು ಎಸ್ಎಫ್ಐ ಆರೋಪಿಸಿದೆ.
ಇದನ್ನೂ ಓದಿ : ಸೌಜನ್ಯ ಪ್ರಕರಣ | ಪ್ರಮುಖ ವ್ಯಕ್ತಿಗೆ ಎಸ್ಐಟಿ ನೋಟಿಸ್ ಸಾಧ್ಯತೆ?
400ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳ ಮತಗಳನ್ನು ತೆಗೆದುಹಾಕಿದ ಆರೋಪ
ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಮತಗಳ ಅಕ್ರಮ ನಡೆದಿದೆ ಎಂಬ ಆರೋಪವನ್ನೂ ಎಸ್ಎಫ್ಐ ಮಾಡಿದೆ. ಯುಡಿಎಫ್ ಬೆಂಬಲಿತ ಸಿಂಡಿಕೇಟ್, ಯುಡಿಎಸ್ಎಫ್ಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಿಶ್ವವಿದ್ಯಾಲಯದ 400ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದೆ ಎಂದು ಆರೋಪಿಸಿದೆ.
ಹಿಂದಿನ ವರ್ಷಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳು ವಿಭಾಗೀಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಮತ ಚಲಾಯಿಸುತ್ತಿದ್ದರು. ಆದರೆ ಈ ಬಾರಿಯ ಚುನಾವಣೆಗೆ ಮುನ್ನ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಎಸ್ಎಫ್ಐ ದೂರಿದೆ.
ಎಂಎಸ್ಎಫ್ ದಾಳಿಯನ್ನು ಖಂಡಿಸಿದ ಸಿಪಿಐ(ಎಂ)
ಘಟನೆಯನ್ನು ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ತೀವ್ರವಾಗಿ ಖಂಡಿಸಿದ್ದಾರೆ. ಎಸ್ಎಫ್ಐ ನಾಯಕರನ್ನು ಕೊಲ್ಲುವ ಉದ್ದೇಶದಿಂದಲೇ ದಾಳಿ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಆಸ್ಪತ್ರೆಯೊಳಗೆ ರೋಗಿಗಳ ಎದುರೇ ನಡೆದಿರುವ ಈ ದಾಳಿಯ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ಹಲ್ಲೆಯ ತೀವ್ರತೆ ಅರ್ಥವಾಗುತ್ತದೆ. ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದವರ ಮೇಲೂ ದಾಳಿ ಮುಂದುವರಿಸಲಾಗಿದೆ. ವೈದ್ಯರೊಬ್ಬರು ಮಧ್ಯಪ್ರವೇಶಿಸಿದ್ದರಿಂದ ಸುಜಿನ್ ಅವರ ಜೀವ ಉಳಿದಿದೆ ಎಂದು ಗೋವಿಂದನ್ ಹೇಳಿದ್ದಾರೆ.
ಈ ದಾಳಿಯ ಹಿಂದೆ ಮುಸ್ಲಿಂ ಲೀಗ್ ನಾಯಕರಿಗೆ ಮಾಹಿತಿ ಅಥವಾ ಒಪ್ಪಿಗೆ ಇತ್ತೇ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದು, ಮುಸ್ಲಿಂ ಲೀಗ್ ನಾಯಕರು, ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಈ ಘಟನೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕೇರಳ ಪೊಲೀಸರು ಶ್ರೀಮಂತರು ಮತ್ತು ಅಪರಾಧಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದೂ ಅವರು ಟೀಕಿಸಿದ್ದಾರೆ.
ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಪಿ.ಎಸ್. ಸಂಜೀವ್ ಕೂಡ ದಾಳಿಯನ್ನು ಖಂಡಿಸಿದ್ದು, ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ ಎಂಎಸ್ಎಫ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಘಟನೆ ವಿರುದ್ಧ ಕೇರಳದಾದ್ಯಂತ ಪ್ರತಿಭಟನೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಏಳು ಎಂಎಸ್ಎಫ್ ಕಾರ್ಯಕರ್ತರ ವಿರುದ್ಧ ಪ್ರಕರಣ
ಎಸ್ಎಫ್ಐ ನೀಡಿದ ದೂರಿನ ಆಧಾರದಲ್ಲಿ ಏಳು ಎಂಎಸ್ಎಫ್ ಕಾರ್ಯಕರ್ತರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಾಳಿಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿರುವವರಲ್ಲಿ ಎಂಎಸ್ಎಫ್ ನಾಯಕ ಹಾಗೂ ಮನ್ನಾರ್ಕಾಡ್ ಬ್ಲಾಕ್ ಪಂಚಾಯತ್ ಸದಸ್ಯ ಅಮೀನ್ ರಶೀದ್, ಎಂಎಸ್ಎಫ್ ರಾಜ್ಯ ಕಾರ್ಯದರ್ಶಿ ಸಫಾನ್ ಪಥಿಲ್ ಮತ್ತು ರಾಜ್ಯ ಉಪಾಧ್ಯಕ್ಷ ಸುಫಿಯಾನ್ ವಿಲ್ಲನ್ ಅವರ ಹೆಸರುಗಳನ್ನೂ ಎಸ್ಎಫ್ಐ ಉಲ್ಲೇಖಿಸಿದೆ.
ಸ್ಥಳೀಯ ಯೂತ್ ಲೀಗ್ ಮತ್ತು ಯೂತ್ ಕಾಂಗ್ರೆಸ್ ನಾಯಕರೂ ದಾಳಿಯಲ್ಲಿ ಭಾಗಿಯಾಗಿದ್ದರು ಎಂಬ ಆರೋಪವನ್ನು ಎಸ್ಎಫ್ಐ ಮಾಡಿದೆ. ಮತ್ತೊಂದೆಡೆ, ಎಂಎಸ್ಎಫ್ ನೀಡಿದ ದೂರಿನ ಆಧಾರದಲ್ಲಿ ಎಸ್ಎಫ್ಐ ಕಾರ್ಯಕರ್ತರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.
ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ನಡೆದಿರುವ ಸಂಘರ್ಷ ಇದೀಗ ಆಸ್ಪತ್ರೆಯೊಳಗಿನ ಹಲ್ಲೆಯವರೆಗೆ ತಲುಪಿರುವುದು ಕೇರಳದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಚಿಕಿತ್ಸೆಗೆ ದಾಖಲಾಗಿದ್ದ ವಿದ್ಯಾರ್ಥಿಗಳನ್ನು ಭೇಟಿಯಾಗಲು ತೆರಳಿದವರ ಮೇಲೆಯೇ ಆಸ್ಪತ್ರೆಯೊಳಗೆ ಹಲ್ಲೆ ನಡೆದಿರುವ ಆರೋಪ ಗಂಭೀರ ಆತಂಕ ಮೂಡಿಸಿದೆ.
ಇದನ್ನೂ ನೋಡಿ : ಸೌಜನ್ಯ ಪ್ರಕರಣ | ಹೊಸ ಎಸ್ಐಟಿ ಮೇಲೆ ನಂಬಿಕೆಯಿಲ್ಲ! ನವೀನ್ ಸೂರಿಂಜೆ ಹೀಗೆ ಹೇಳಿದ್ದು ಯಾಕೆ? Janashakthi Media
