ಮರಳು ಮಾಫಿಯಾದಿಂದ ಜೀವ ಬೆದರಿಕೆ: ಸೂಕ್ತ ಭದ್ರತೆಗೆ ಜೆಡಿಎಸ್ ಶಾಸಕಿ ಮನವಿ

ನನ್ನ ಮೇಲೆ‌ ಲಾರಿ ಹರಿಸುವ ಬೆದರಿಕೆ ಹಾಕಿದ್ರು; ವಿಧಾನಸಭೆಯಲ್ಲಿ ಅಳಲು ತೋಡಿಕೊಂಡ ದೇವದುರ್ಗ ಶಾಸಕಿ

ಬೆಂಗಳೂರು:  ‘ನನ್ನ ಕ್ಷೇತ್ರದಲ್ಲಿ ಮರಳು, ಮಟ್ಕಾ, ಜೂಜು ದಂಧೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದನ್ನು ತಡೆಯಲು ಹೋದರೆ ಕೆಲವರು ನನ್ನ ಮೇಲೆ ಲಾರಿ ಹತ್ತಿಸುತ್ತೇವೆ ಅಂತ ಬೆದರಿಕೆ ಹಾಕಿದ್ದಾರೆ. ಪೊಲೀಸ್‌ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ. ಶಿಷ್ಟಾಚಾರಕ್ಕೂ ನನಗೆ ಗೌರವ ಕೊಡುತ್ತಿಲ್ಲ. ಮಾಜಿ ಶಾಸಕರ ಕುಮ್ಮಕ್ಕಿನಿಂದ ಇದೆಲ್ಲಾ ನಡೆಯುತ್ತಿದೆ. ನನಗೆ ರಕ್ಷಣೆ ಕೊಡಿ.’ ಹೀಗಂತ ಜೆಡಿಎಸ್‌ ಶಾಸಕರಾದ ದೇವದುರ್ಗದ ಕರೆಮ್ಮ ಜಿ. ನಾಯಕ್‌ ಅವರು ಸದನದಲ್ಲಿ ತಮ್ಮ ನೋವು ತೋಡಿಕೊಂಡರಲ್ಲದೆ, ತಮಗೆ ರಕ್ಷಣೆ ಒದಗಿಸಬೇಕು ಎಂದು ನೇರವಾಗಿ ಸ್ಪೀಕರ್‌ ಯು.ಟಿ.ಖಾದರ್‌ ಅವರನ್ನೇ ಆಗ್ರಹಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದ ಅವರು, ‘ಸ್ಥಳೀಯ ಶಾಸಕಿಯಾದ ನನಗೆ ಶಿಷ್ಟಾಚಾರಕ್ಕೂ ಗೌರವ ನೀಡುತ್ತಿಲ್ಲ. ಮಾಜಿ ಶಾಸಕರ ಬೆಂಬಲಿಗರು ನನಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ. ಇನ್ನು ಆರು ತಿಂಗಳಲ್ಲಿ ಕ್ಷೇತ್ರದಲ್ಲಿ ಮರುಚುನಾವಣೆ ನಡೆಸುವುದಾಗಿ ಹೇಳಿ ಅಧಿಕಾರಿಗಳ ದಾರಿ ತಪ್ಪಿಸುತ್ತಿದ್ದಾರೆ. ವಿಧಾನಸಭೆಯ ನನ್ನ ಸ್ಥಾನದಲ್ಲಿ ಅನಾಮಿಕ ವ್ಯಕ್ತಿ ಬಂದು ಕೂತಿದ್ದು, ನನಗೆ ಸಾಕಷ್ಟುಅನುಮಾನ ಮೂಡಿಸಿದೆ. ನನಗೆ ಸರ್ಕಾರ ಸೂಕ್ತ ಭದ್ರತೆ ಕೊಡಬೇಕು’ ಎಂದು ಮನವಿ ಮಾಡಿದರು.

ಇದನ್ನೂ ಓದಿ:ಜೆಡಿಎಸ್ ಶಾಸಕಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: 8 ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌

ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ಕೊಡುತ್ತೇನೆಂದು ಜನ ನನ್ನನ್ನು ಆಯ್ಕೆ ಮಾಡಿಲ್ಲ. ನೆಮ್ಮದಿಯ ವಾತಾವರಣಕ್ಕಾಗಿ ಗೆಲ್ಲಿಸಿದ್ದಾರೆ. ಬಡವಿಯಾದ ನನಗೆ ಉಡಿ ತುಂಬಿ ಚುನಾವಣೆಯ ಖರ್ಚಿಗೆ ಹಣ ಕೊಟ್ಟು ಆರಿಸಿದ್ದಾರೆ. ಅವರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ದೇವದುರ್ಗದಲ್ಲಿ ಮಟ್ಕಾ,ಇಸ್ಪೀಟ್‌,ಮರಳು ದಂಧೆ, ಅಕ್ರಮ ಮಧ್ಯ ಮಾರಾಟ ಸೇರಿದಂತೆ ಹಲವಾರು ದಂಧೆಗಳು ನಿರಂತರವಾಗಿ ನಡೆಯುತ್ತಿವೆ. ಮಟ್ಕಾ ಬರೆಯುವವರನ್ನು ಜನರೇ ಹಿಡಿದು ತಂದು ಪೊಲೀಸರಿಗೆ ಒಪ್ಪಿಸಿದರೆ 300 ರೂ.ದಂಡ ವಿಧಿಸಿ ಕಳುಹಿಸಿಕೊಡುತ್ತಿದ್ದಾರೆ. ಮರಳು ದಂಧೆ ಮಾಡುವವರು ನಿನ್ನೆ ನಡುರಸ್ತೆಯಲ್ಲೇ ನನ್ನ ಸಹೋದರನನ್ನು ಹೊಡೆದಿದ್ದಾರೆ. ಶಾಸಕರಾಗಿ ಜನರಿಗೆ ನ್ಯಾಯ ಕೊಡಿಸಬೇಕಾದ ನನಗೇ ಆತಂಕ ಕಾಡುತ್ತಿದೆ ಎಂದರು.

ಹಿಂದಿನ ಶಾಸಕರ ಬೆಂಲಿಗರು ಏನು ಮಾಡ್ತಾರೋ ಅನ್ನೊ ಭಯದಲ್ಲಿದ್ದೇವೆ. ನನಗೂ ರಕ್ಷಣೆಬೇಕಿದೆ. ನಿನ್ನೆ ವಿಧಾನಸಭೆಯಲ್ಲೇ ನನ್ನ ಸ್ಥಾನದಲ್ಲಿ ಅನಾಮಿಕನೊಬ್ಬ ಬಂದು ಕುಳಿತಿದ್ದು ನೋಡಿದರೆ ಮತ್ತಷ್ಟು ಅನುಮಾನಗಳನ್ನು ಮೂಡಿಸಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು. ಅದಕ್ಕೆ ಸ್ಪಷ್ಟನೆ ನೀಡಿದ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು, ಆ ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದು ಬೇಡ. ನೀವು ತಡವಾಗಿ ಬಂದ ಕಾರಣಕ್ಕಾಗಿ ಅಲ್ಲಿ ನಿಮ್ಮ ಕುರ್ಚಿ ಕಾಲಿ ಇತ್ತು ಆ ಕಾರಣಕ್ಕೆ ಅನಾಮಿಕನೊಬ್ಬ ಬಂದು ನಿಮ್ಮ ಕುರ್ಚಿಯಲ್ಲಿ ಕುಳಿತಿದ್ದಾರೆ ಎಂದು ಹೇಳಿದರು.

 

Donate Janashakthi Media

Leave a Reply

Your email address will not be published. Required fields are marked *