ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಸಲು ಎಸ್ಎಫ್ಐ ಆಗ್ರಹ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಅನುಷ್ಠಾನಕ್ಕೆ ಆರಂಭದಲ್ಲೇ ಗೊಂದಲ ಎದುರಾಗಿದ್ದು, ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿದ್ದಾರೆ. ಇದರಿಂದಾಗಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಪಾಠವಿಲ್ಲದಂತಾಗಿದೆ. ಇಂತಹ ಸಮಸ್ಯೆಗಳನ್ನು ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್‌.ಎಫ್‌.ಐ.) ಖಂಡಿಸಿದೆ.

ಎಸ್‌ಎಫ್‌ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ  430 ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,500 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಸೇವಾ ಭದ್ರತೆ, ಕನಿಷ್ಠ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತರಗತಿಗಳನ್ನು ಅನಿರ್ದಿಷ್ಟ ಅವಧಿವರೆಗೆ ಬಹಿಷ್ಕರಿಸಿದ್ದಾರೆ. 6 ಸಾವಿರ ಕಾಯಂ ಉಪನ್ಯಾಸಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ರಾಜ್ಯಾದ್ಯಂತ 3 ಲಕ್ಷಕ್ಕೂ ಹೆಚ್ಚು ಮಂದಿ ಪದವಿ ವಿದ್ಯಾರ್ಥಿಗಳಿದ್ದರು. ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದರಿಂದ ಪದವಿ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 5.5 ಲಕ್ಷಕ್ಕೇರಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ 10 ಸಾವಿರ ಹೆಚ್ಚುವರಿ ಉಪನ್ಯಾಸಕರ ಅಗತ್ಯವಿದೆ. ಇದರ ನಡುವೆಯೇ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿರುವುದರಿಂದ ಇಡೀ ಪದವಿ ಶಿಕ್ಷಣಕ್ಕೆ ಬಲವಾದ ಹೊಡೆತಬಿದ್ದಂತಾಗಿದೆ ಎಂದು ತಿಳಿಸಿದೆ.

ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ.ಕೆ ʻʻಇದಕ್ಕೆ ಕಾರಣ ರಾಜ್ಯ ಸರ್ಕಾರ ಅಪ್ರಜಾಸತ್ತಾತ್ಮಕವಾಗಿ ಎನ್‌ಇಪಿಯನ್ನು ಯಾವುದೇ ತಯಾರಿ ನಡೆಸದೇ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಿರುವುದು ಹೊಸ ವಿಷಯಗಳು ಕೂಡ ವಿವಿಗಳ ಬಹುತೇಕ ಕಡೆಗಳಲ್ಲಿನ ಪಠ್ಯದಲ್ಲಿ ಸೇರ್ಪಡೆಗೊಂಡಿವೆ. ಬಹುತೇಕ ಕಡೆಗಳಲ್ಲಿ ಹೊಸ ವಿಷಯಗಳ ಉಪನ್ಯಾಸಕರು ಸಿಗುತ್ತಿಲ್ಲ. ಇನ್ನು ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಎನ್ಇಪಿ ಆಧಾರಿತ ಪಠ್ಯ ಪುಸ್ತಕಗಳೇ ಇನ್ನೂ ಲಭ್ಯವಿಲ್ಲ. ಈ ನಡುವೆ ಹಾಲಿ ಅತಿಥಿ ಉಪನ್ಯಾಸಕರು ಪಾಠ ಮಾಡದ ನಿರ್ಧಾರ ತೆಗೆದುಕೊಂಡಿರುವುದರಿಂದ ಈ ಎಲ್ಲ ಗೊಂದಲಗಳ ನಡುವೆ ಎನ್ಇಪಿಯನ್ನು ಜಾರಿಗೊಳಿಸುವುದು ಬೇಡ. ಈ ಕೂಡಲೇ ರಾಜ್ಯ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಾಪಸ್ ಪಡೆದುಕೊಳ್ಳಬೇಕು ಮತ್ತು ಅತಿಥಿ ಉಪನ್ಯಾಸಕರ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೇ.60% ಅತಿಥಿ ಉಪನ್ಯಾಸಕರಿಂದ ಬೋಧನೆ ಮಾಡುತ್ತಿರುವುದು ಗಮನಾರ್ಹವಾಗಿದೆ. ಈಗ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿರುವುದರಿಂದ ಪಾಠಕ್ಕೆ ಬಹಳ ತೊಂದರೆಯಾಗಿದೆ. ಈಗ ಪಠ್ಯ ಮುಗಿಸಿಕೊಡುವ ಸಂದರ್ಭ. ಹೀಗಾಗಿ ಪಾಠವಿಲ್ಲದಿದ್ದರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ತೊಂದರೆಯಾಗುತ್ತದೆ. ಇದು ವಿದ್ಯಾರ್ಥಿಗಳ ಒಟ್ಟಾರೆ ಶೈಕ್ಷಣಿಕ ಪ್ರಗತಿಗೆ ಮಾರಕವಾಗುತ್ತದೆ ಇವುಗಳನ್ನು ಸರಿಪಡಿಸಬೇಕೆಂದು ಎಸ್‌ಎಫ್‌ಐ ತಿಳಿಸಿದೆ.

ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14447 ಹೆಚ್ಚು ಅತಿಥಿ ಉಪನ್ಯಾಸಕರು ಕಳೆದ 15-20 ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಹಲವರು ಪಿಎಚ್ .ಡಿ., ಸೆಟ್‌ ಹಾಗೂ ನೆಟ್ ಪರೀಕ್ಷೆಗಳನ್ನು ಪಾಸಾಗಿದ್ದು, ಯುಜಿಸಿ ನಿಯಮಾವಳಿ ಪ್ರಕಾರ ವಿದ್ಯಾರ್ಹತೆ ಹೊಂದಿರುವವರು. ಇವರುಗಳನ್ನು ಕಾಯಂಗೊಳಿಸಲು ಸೂಕ್ತ ನಿಯಮಾವಳಿ ರೂಪಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *