ಬೆಂಗಳೂರು: ಕಳೆದ 34 ದಿನಗಳಿಂದ ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ಶಾಂತಿಯುತವಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಈಗಾಗಲೇ ಇರುವ 14,500 ಅತಿಥಿ ಉಪನ್ಯಾಸಕರಲ್ಲಿ 7,200 ಜನರನ್ನು ಕೆಲಸದಿಂದ ತೆಗೆಯಲಾಗುವುದು. ಜನವರಿ 17 ರಿಂದ 1500 ಉಪನ್ಯಾಸಕರ ಹುದ್ದೆಗಳನ್ನು ತುಂಬಲು ನೋಟಿಫಿಕೇಷನ್ ಮಾಡಲಾಗಿದೆ. ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುವ ಜನರಿಗೆ ಅವರ ಸೇವಾವಧಿಯ ಆಧಾರದಲ್ಲಿ ವಿಶೇಷ ಅವಕಾಶಗಳನ್ನು ನೀಡಿ ಖಾಯಂಗೊಳಿಸಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಆಗ್ರಹಿಸಿದೆ.
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮಿ ಅವರು ಇತ್ತೀಚಿಗೆ ಬೆಳಗಾವಿ ವಿಧಾನಮಂಡಲದ ಅಧಿವೇಶನ ಅವಧಿಯಲ್ಲಿ ಅತಿಥಿ ಉಪನ್ಯಾಸಕರು ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ, ರಾಜ್ಯ ಸರ್ಕಾರ ಕೆಲವು ಅಧಿಕಾರಿಗಳನ್ನು ಮಾತ್ರ ಒಳಗೊಂಡ ಸಮಿತಿಯನ್ನು ರಚಿಸಿದೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕರ ನೇತೃತ್ವದಲ್ಲಿನ ಈ ಸಮಿತಿಯಲ್ಲಿ ಅತಿಥಿ ಉಪನ್ಯಾಸಕರ ಪ್ರತಿನಿಧಿಗಳು ಯಾರು ಇರಲಿಲ್ಲ. ಈ ಸಮಿತಿಯ ಶಿಫಾರಸ್ಸುಗಳು ಶಿಕ್ಷಣದ ಗುಣಮಟ್ಟ, ಶಿಕ್ಷಕರ ಸಾಮರ್ಥ್ಯದ ಸದ್ವಳಿಕೆ, ಶಿಕ್ಷರಿಗೆ ಖಾತರಿಪಡಿಸಬೇಕಾದ ಸೇವಾ ನಿಯಮಗಳು-ಕೆಲಸದ ಭದ್ರತೆ-ತರಬೇತಿ, ನಿಯಮಕಾಲದಲ್ಲಿ ವೇತನ ಪಾವತಿ ಈ ಶಿಕ್ಷಕರಿಗೆ ನೀಡಬೇಕಾದ ಸಾಮಾಜಿಕ ರಕ್ಷಣಾ ಕಲ್ಯಾಣ ಯೋಜನೆಗಳು ಮುಂತಾದದವುಗಳ ಬಗ್ಗೆ ಯಾವುದೇ ಅಧ್ಯಾಯನವನ್ನು ಮಾಡಿರುವುದಿಲ್ಲ.
ಬದಲಾಗಿ ಅತಿಥಿ ಉಪನ್ಯಾಸಕರ ಮೇಲೆ ಅವೈಜ್ಙಾನಿಕ ಕೆಲಸದ ಹೊರೆಯನ್ನು ಹೇರುವ ಬೇಜವಾಬ್ದಾರಿ ಶಿಫಾರಸ್ಸನ್ನು ನೀಡಿರುತ್ತದೆ. ಯುಜಿಸಿ ನಿಯಮಗಳ ಪ್ರಕಾರ ಖಾಯಂ ಉಪನ್ಯಾಸಕರಿಗೆ ನೀಡಲಾಗುತ್ತಿರುವ ಕೆಲಸದ ಗುರಿಗೆ ಸಮಾನವಾದ ಕೆಲಸವನ್ನು ಅತಿಥಿ ಉಪನ್ಯಾಸಕರಿಗೂ ನೀಡುವುದಾದರೆ, ಖಾಯಂ ಉಪನ್ಯಾಸಕರಿಗೆ ಸಮನಾದ ವೇತನ ಹಾಗು ಇತರ ಸವಲತ್ತುಗಳನ್ನು ಈ ಶಿಕ್ಷಕರಿಗೂ ನೀಡಬೇಕಾದದ್ದು ಸರ್ಕಾರದ ಕರ್ತವ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಶ್ರೀ ಕುಮಾರ ನಾಯಕ್ ರವರ ನೇತೃತ್ವದ ಸಮಿತಿ ಕೆಲಸದ ಹೊರೆಯನ್ನು ಹೆಚ್ಚಿಸಿ, ಈಗಾಗಲೇ ಅತಿಥಿ ಉಪನ್ಯಾಕರಾಗಿ ಕೆಲಸ ನಿರ್ವಹಿಸುತ್ತಿರುವವರ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸುವ ಉದ್ದೇಶವನ್ನು ಹೊಂದಿದೆ. ಕೆಲಸದ ಹೊರೆ ಹೆಚ್ಚು ಮಾಡಿ ವೇತನ ಹೆಚ್ಚಳದ ಭರವಸೆ ನೀಡುವುದು ನಿಜವಾಗಿಯು ಕೆಲಸದ ಅಭದ್ರತೆಗೆ ಕಾರಣವಾಗುವುದು, ಮಾತ್ರವಲ್ಲದೆ, ಸಕಾರಕ್ಕೆ ಆಗುವ ವೆಚ್ಚವನ್ನು ಗಣನೀಯವಾಗಿ ಕಡಿತಗೊಳಿಸುವ ನೌಕರ ವಿರೋಧಿ ನೀತಿಯ ಆಧಾರದ ಏಕಮುಖ ಶಿಫಾರಸ್ಸು ಆಗಿರುತ್ತದೆ ಎಂದು ಎಸ್ ವರಲಕ್ಷ್ಮಿ ಅವರು ಹೇಳಿದ್ದಾರೆ.
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಅವರು ʻʻಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ಬದಲು ಅವರ ಉದ್ಯೋಗವಂಚಿತರನ್ನಾಗಿ ಮಾಡುವ ಸರ್ಕಾರದ ಕ್ರಮಗಳು “ಸಂಕ್ರಾಂತಿ ಹಬ್ಬದ ಸಹಿ ಉಡುಗೊರೆಯಲ್ಲ.. ನವಉದಾರೀಕರಣದ ಶಾಪ” ಇದಾಗಿದೆ. ರಾಜ್ಯ ಸರ್ಕಾರದ ಶಿಕ್ಷಕ ವಿರೋಧಿ-ಶಿಕ್ಷಣ ವಿರೋಧಿ ನೀತಿಯನ್ನು ಸಿಐಟಿಯು ರಾಜ್ಯ ಸಮಿತಿಯು ಉಗ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ, ತ್ರಿಪುರ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿರುವ ಮಾದರಿಯಂತೆ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಿಗೆ ಪ್ರತ್ಯೇಕವಾದಂತಹ `ಸೇವಾ ಭದ್ರತೆಯ ನಿಯಮಾವಳಿ’ಗಳನ್ನು ರಚಿಸಿ ಸೇವಾ ಭದ್ರತೆ, ರಜೆಗಳು, ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಸೇವಾ ಜೇಷ್ಠತೆಯ ಆಧಾರದಲ್ಲಿ ಖಾಯಂ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕೆಂದು ಸಿಐಟಿಯು ಆಗ್ರಹಿಸಿದೆ.
ಸರ್ಕಾರದ ಈ ನಿರ್ಧಾರವನ್ನು ಒಪ್ಪದೇ ತಮ್ಮ ಉದ್ಯೋಗದ ಹಕ್ಕಿಗಾಗಿ ಹೋರಾಟವನ್ನು ಮುಂದುವರೆಸುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟವನ್ನು ಅಭಿನಂದಿಸುತ್ತದೆ ಮತ್ತು ಬೆಂಬಲಿಸುತ್ತದೆ. ರಾಜ್ಯ ಸರ್ಕಾರ ಕೂಡಲೇ ಉದ್ಯೋಗದಿಂದ ಅತಿಥಿ ಉಪನ್ಯಾಸಕರನ್ನು ತೆಗೆಯುವುದನ್ನು ಹಾಗೂ 1700 ಖಾಯಂ ಹುದ್ದೆಗಳಿಗೆ ಕರೆದಿರುವ ನೋಟಿಫಿಕೇಷನನ್ನು ತಿದ್ದುಪಡಿಗೊಳಿಸಿ ಈ ಅತಿಥಿ ಉಪನ್ಯಾಸಕರ ಸೇವಾ ಖಾಯಮಾತಿಗೆ ಮೊದಲ ಆದ್ಯತೆ ಕೊಡಬೇಕೆಂದು ಸಿಐಟಿಯು ಒತ್ತಾಯಿಸಿದೆ.
ಅದ್ಬುತ ವಾದ ವಿಚಾರ ಪ್ರಸ್ತುತ ಪಡಿಸಿದ್ದೀರಿ. ಧನ್ಯವಾದಗಳು. ಕ್ರಾಂತಿ ಚಿರಾಯುವಾಗಿರಲಿ.