ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಂತೆ ಎಸ್‌ಎಫ್‌ಐ ಪ್ರತಿಭಟನೆ

ಮೈಸೂರು: ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ ಎಫ್ ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ 430 ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,500 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಸೇವಾ ಭದ್ರತೆ, ಕನಿಷ್ಠ ವೇತನ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತರಗತಿಗಳನ್ನು ಅನಿರ್ದಿಷ್ಟ ಅವಧಿವರೆಗೆ ಬಹಿಷ್ಕರಿಸಿದ್ದಾರೆ. ಅಲ್ಲದೆ, 6 ಸಾವಿರ ಖಾಯಂ ಉಪನ್ಯಾಸಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ರಾಜ್ಯಾದ್ಯಂತ 3 ಲಕ್ಷಕ್ಕೂ ಹೆಚ್ಚು ಮಂದಿ ಪದವಿ ವಿದ್ಯಾರ್ಥಿಗಳು ಇದ್ದರು. ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣಗಾರಿರುವುದರಿಂದ ಪದವಿ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 5.5 ಲಕ್ಷಕ್ಕೇರಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ 10 ಸಾವಿರ ಹೆಚ್ಚುವರಿ ಉಪನ್ಯಾಸಕರ ಆಗತ್ಯವಿದೆ. ಇದರ ನಡುವೆಯೇ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿರುವುದು ಇಡೀ ಪದವಿ ಶಿಕ್ಷಣದ ವಿದ್ಯಾರ್ಥಿಗಳಿಗೆ ತೊಂದರೆ ಎದುರಾಗಿದೆ ಎಂದು ಎಸ್‌ಎಫ್‌ಐ ಸಂಘಟನೆಯು ತಿಳಿಸಿದೆ.

ರಾಜ್ಯ ಸರ್ಕಾರ ಅಪ್ರಜಾಸತ್ತಾತ್ಮಕವಾಗಿ ಯಾವುದೇ ಪೂರ್ವ ತಯಾರಿಗಳನ್ನು ನಡೆಸದೇ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಅನುಷ್ಠಾನದಿಂದಾಗಿ ಹೊಸ ವಿಷಯಗಳು ವಿವಿಗಳ ವ್ಯಾಪ್ತಿಯಲ್ಲಿ ಸೇರ್ಪಡೆಗೊಂಡಿವೆ. ಹೊಸ ವಿಷಯಗಳಿಗೆ ಉಪನ್ಯಾಸಕರೇ ಸಿಗುತ್ತಿಲ್ಲ. ಇನ್ನು ಕೆಲವು ವಿವಿಗಳಲ್ಲಿ ಎನ್‌ಇಪಿ ಆಧಾರಿತ ಪಠ್ಯ ಪುಸ್ತಕಗಳೇ ಲಭ್ಯವಿಲ್ಲ. ಶೈಕ್ಷಣಿಕ ವಲಯದಲ್ಲಿ ಇಂತಹ ದೊಡ್ಡ ಸಮಸ್ಯೆ ಎದುರಾಗಿದೆ. ಇವುಗಳೊಂದಿಗೆ, ಅತಿಥಿ ಉಪನ್ಯಾಸಕರ ಬೇಡಿಕೆಗಳ ಬಗ್ಗೆ ಸರ್ಕಾರ ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದು ಸಂಘಟನೆ ಆರೋಪಿಸಿದೆ.

ರಾಜ್ಯದಲ್ಲಿ ಸುಮಾರು 14,447 ಮಂದಿ ಅತಿಥಿ ಉಪನ್ಯಾಸಕರು ಕಳೆದ 15-20 ವರ್ಷಗಳಿಂದ ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವರು. ಇವರಲ್ಲಿ ಹಲವರು ಪಿಎಚ್‌ಡಿ, ಸೆಟ್‌ ಹಾಗೂ ನೆಟ್‌ ಪರೀಕ್ಷೆಗಳನ್ನು ಪಾಸಾಗಿರುವವರು ಇದ್ದಾರೆ. ಇವರು ಯುಜಿಸಿ ನಿಯಮಾವಳಿ ಪ್ರಕಾರ ವಿದ್ಯಾರ್ಹತೆ ಹೊಂದಿದವವರೇ ಆಗಿದ್ದಾರೆ. ಇವರುಗಳನ್ನು ಸೂಕ್ತ ನಿಯಮಾವಳಿಗಳ ಪ್ರಕಾರ ಖಾಯಂಗೊಳಿಸಬೇಕೆಂದು ಎಸ್‌ಎಫ್‌ಐ ಸಂಘಟನೆಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೇ. 60ರಷ್ಟು ಅತಿಥಿ ಉಪನ್ಯಾಸಕರಿಂದ ಬೋಧನೆ ಮಾಡಲಾಗುತ್ತಿದೆ. ಈಗ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿರುವುದರಿಂದ ಪಾಠಕ್ಕೆ ಬಹಳ ತೊಂದರೆಯಾಗಿದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಪಠ್ಯ ತರಗತಿಗಳು ಪೂರ್ಣಗೊಂಡಿಲ್ಲ, ಇನ್ನು ಕೆಲವೇ ತಿಂಗಳುಗಳಲ್ಲಿ ಪರೀಕ್ಷೆಗಳು ಎದುರಾಗಲಿದ್ದು, ಪಾಠವಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುವುದಾದರೂ ಹೇಗೆ ಎಂದು ಎಸ್‌ಎಫ್‌ಐ ಸಂಘಟನೆ ಪ್ರಶ್ನೆ ಮಾಡಿದೆ.

ರಾಜ್ಯ ಸರ್ಕಾರವು ಕೂಡಲೇ ತರಾತುರಿಯಲ್ಲಿ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಾಪಸ್ಸು ಪಡೆಯಬೇಕು ಹಾಗೂ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಎಸ್‌ಎಫ್‌ಐ ಸಂಘಟನೆಯು ಮನವಿ ಸಲ್ಲಿಸಿದೆ.

ಎಸ್‌ಎಫ್‌ಐ ಸಂಘಟನೆಯ ಜಿಲ್ಲಾ ಸಂಚಾಲಕ ವಿಜಯ್ ಕುಮಾರ್. ಮುಖಂಡರಾದ ಆನಂದ್ ಯಶವಂತ, ಹರೀಶ್. ಟಿ.ಎಂ, ಮನೋಜ್, ಚಂದನ, ತೇಜಸ್ವಿನಿ, ಮಹೇಂದ್ರ, ಸುದೀಪ್, ಲಿಖಿತಾ, ಅನುಷಾ ಮತ್ತಿತರರ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *