ಹೈಟಿಯಲ್ಲಿ ಮಗುಚಿ ಬಿದ್ದ ಇಂಧನ ಟ್ಯಾಂಕರ್: ಸ್ಫೋಟಕ್ಕೆ 62 ಸಾವು

ಹೈಟಿ: ಕೆರಿಬಿಯನ್‌ ರಾಷ್ಟ್ರದ ಉತ್ತರ ಹೈಟಿಯಲ್ಲಿ ಭೀಕರ ದುರ್ಘಟನೆಯೊಂದು ನಡೆದಿದೆ. ಇಂಧನ ತುಂಬಿದ್ದ ಟ್ಯಾಂಕರ್‌ವೊಂದು ದಿಢೀರನೇ ಮಗುಚಿ ಬಿದ್ದಿತು. ಈ ಸುದ್ದಿ ತಿಳಿದ ಸುತ್ತಮುತ್ತಲಿನ ಜನರು ಕ್ಯಾನ್‌ ನಲ್ಲಿ ಕೆಳಗಡೆ ಬಿದ್ದಿದ್ದ ಇಂಧನವನ್ನು ತುಂಬಿಕೊಳ್ಳಲು ಆರಂಭಿಸಿದರು. ಈ ವೇಳೆ ಇದ್ದಕ್ಕಿದ್ದಂತೆ ಸ್ಪೋಟ ಸಂಭವಿಸಿ 62 ಮಂದಿ ಅಸುನೀಗಿದ್ದಾರೆ. ಅಲ್ಲದೆ, 20ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.

ಕೆರಿಬಿಯನ್‌ ರಾಷ್ಟ್ರದ ಕೇಪ್‌ ಹೈಟಿಯಲ್ಲಿ ಈ ಘಟನೆ ನಡೆದಿದೆ. ಈ ಅನಾಹುತದಲ್ಲಿ ಕೆಲವರಿಗೆ ತೀವ್ರ ಸುಟ್ಟಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಲ್ಲಿನ ಸರ್ಕಾರ ಹೇಳಿಕೆ ನೀಡಿದೆ.

ಮಾಧ್ಯಮ ವರದಿಗಳ ಪ್ರಕಾರ, ಹೈಟಿಯಲ್ಲಿ ವಿದ್ಯುತ್‌ ಕೊರತೆ ತೀವ್ರವಾಗಿ ಕಾಡುತ್ತಿದೆ. ಅಲ್ಲದೆ, ಇಂಧನ ಮಾಫಿಯಾ ಸಹ ಅವ್ಯವಾಹತವಾಗಿ ನಡೆಯುತ್ತಿದೆ. ಗ್ಯಾಸೋಲಿನ್‌ ಕೂಡ ಅತ್ಯಂತ ದುಬಾರಿ. ಈ ಹಿನ್ನೆಲೆಯಲ್ಲಿ ಇಲ್ಲಿ ಅಗಾಗ್ಗೆ ತೈಲ ಟ್ಯಾಂಕರ್‌ಗಳನ್ನು ದರೋಡೆ ಮಾಡುವ ಘಟನೆಗಳು ಇಲ್ಲಿ ಸಂಭವಿಸುತ್ತಿರುತ್ತವೆ. ವಿದ್ಯುತ್‌ ಕೊರತೆಯನ್ನು ನೀಗಿಸಿಕೊಳ್ಳಲು ಜನರು ಜನರೇಟರ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಇದಕ್ಕೆ ಇಂಧನ ಬೇಕಾಗುತ್ತದೆ.

ಇದನ್ನು ಓದಿ: ‘ಕಲ್ಲಿದ್ದಲು ಬಿಡಿ, ಗ್ಯಾಸ್ ಇರಲಿ’ : ಗ್ಲಾಸ್ಗೋದಲ್ಲಿ ‘ಹಸಿರು ಸಾಮ್ರಾಜ್ಯಶಾಹಿ’ಯ ಹುನ್ನಾರ?

ಹೈಟಿಯ ಎಲೆಕ್ಟ್ರಿಕಲ್ ಗ್ರಿಡ್‌ಗಳು ಈಗ ನಂಬಲಾಗದ ಸ್ಥಿತಿಯಲ್ಲಿವೆ. ಬ್ಯಾಂಕ್‌ಗಳು, ಆಸ್ಪತ್ರೆಗಳು ಮತ್ತು ಇತರೆ ಉದ್ಯಮಗಳನ್ನು ಒಳಗೊಂಡಂತೆ ದೇಶದ ಹೆಚ್ಚಿನ ವ್ಯವಹಾರಗಳು ವಿದ್ಯುತ್‌ಗಾಗಿ ಜನರೇಟರ್‌ಗಳನ್ನು ಅವಲಂಬಿಸಿದೆ. ಆದರೆ, ಕ್ರಿಮಿನಲ್ ಗ್ಯಾಂಗ್‌ಗಳು ಇಂಧನ ಟರ್ಮಿನಲ್‌ಗಳಿಗೆ ಪ್ರವೇಶವನ್ನು ನಿಯಂತ್ರಿಸಿದ್ದು, ಕಳೆದ ಕೆಲವು ತಿಂಗಳಿನಿಂದ ವಿತರಣೆಯನ್ನು ನಿರ್ಬಂಧಿಸಿವೆ. ಹೀಗಾಗಿ ಹೈಟಿಯನ್ನರು ತೀವ್ರ ಇಂಧನದ ಕೊರತೆಯನ್ನು ಎದುರಿಸುತ್ತಿದ್ದಾರೆ.

ಟ್ಯಾಂಕರ್‌ ಪಲ್ಟಿಯಾದ ಬಳಿಕ ಈ ಸುದ್ದಿ ನಗರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ಉಚಿತವಾಗಿ ತೈಲ ಸಿಗುತ್ತದೆ ಎಂದು ನಂಬಿದ ಜನ, ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ವೇಳೆ, ದುರದೃಷ್ಟವಶಾತ್‌ ಸ್ಪೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ.

ಸುಮಾರು 9 ಸಾವಿರ ಗ್ಯಾಲನ್ ಇಂಧನವನ್ನು ಸಾಗಿಸುತ್ತಿದ್ದ ಟ್ಯಾಂಕರ್‌, ಕ್ಯಾಪ್-ಹೈಟಿಯನ್ ನಗರದ ವಸತಿ ಪ್ರದೇಶದ ಬಳಿ ಮಗುಚಿ ಬಿದ್ದಿದೆ. ಮಧ್ಯರಾತ್ರಿಯ ಸುಮಾರಿಗೆ ಟ್ಯಾಂಕರ್‌ ಸ್ಫೋಟಗೊಳ್ಳುವ ಮುನ್ನ ಅದರಲ್ಲಿರುವ ಇಂಧನವನ್ನು ಹೊರತೆಗೆಯಲು ಪ್ರಯತ್ನಿಸಲಾಯಿತು. ಆದರೆ, ದಿಢೀರ್‌ ಎಂದು ಟ್ಯಾಂಕರ್‌ ಸ್ಫೋಟಗೊಂಡು ಅಲ್ಲಿಂದ 300 ಅಡಿ ವ್ಯಾಪ್ತಿಯಲ್ಲಿರುವ ಎಲ್ಲವನ್ನೂ ಸುಟ್ಟುಹಾಕಿತು ಎಂದು ಉತ್ತರ ಹೈಟಿಯ ಅಗ್ನಿಶಾಮಕ ದಳದ ಮುಖ್ಯಸ್ಥ ಫ್ರಾಂಡಿ ಜೀನ್ ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಏರಿಯಲ್‌ ಹೆನ್ರಿ ಟ್ವೀಟ್ ಮಾಡಿದ್ದು, ಘಟನೆ ನಡೆದ ಸ್ಥಳಕ್ಕೆ ವೈದ್ಯಕೀಯ ತಂಡ ತೆರಳಿದೆ. ಈ ಘಟನೆಯಿಂದಾಗಿ ಆಘಾತ ಉಂಟಾಗಿದೆ ಎಂದಿದ್ದು, ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *