‘ಕಲ್ಲಿದ್ದಲು ಬಿಡಿ, ಗ್ಯಾಸ್ ಇರಲಿ’ : ಗ್ಲಾಸ್ಗೋದಲ್ಲಿ ‘ಹಸಿರು ಸಾಮ್ರಾಜ್ಯಶಾಹಿ’ಯ ಹುನ್ನಾರ?

ವಸಂತರಾಜ ಎನ್.ಕೆ

ಗ್ಲಾಸ್ಗೊದ COP26 ಹವಾಮಾನ ಸಮ್ಮೇಳನದಲ್ಲಿ ಕೆಲವು ಮುನ್ನಡೆಗಳು ಆದವು. ಎಲ್ಲ ದೇಶಗಳ ಒಟ್ಟು ಸಹಮತ ರೂಪಿಸುವ ಸವಾಲುಗಳ ಸಂದರ್ಭದಲ್ಲಿ  ಇಷ್ಟಾದರೂ ಮುನ್ನಡೆ ಆಯಿತಲ್ಲ  ಎಂದು ಮೇಲುನೋಟಕ್ಕೆ ಎನಿಸಬಹುದು. ಆದರೆ ಇದು ನಿಜವಲ್ಲ. ಈಗ ಆಗಿರುವ ಮುನ್ನಡೆಗಳು ಶ್ರೀಮಂತ ದೇಶಗಳಿಗೆ ಅನುಕೂಲಕರವಾದ ಬಡ ದೇಶಗಳಿಗೆ ಮಾರಕವಾದವುಗಳು. ದೂರಗಾಮಿ ದೃ಼ಷ್ಟಿಯಲ್ಲಿ ನೋಡಿದರೆ ಹವಾಮಾನ ಬದಲಾವಣೆಯ ಅನಾಹುತ ತಡೆಯಲು ಸಹಾಯಕವಲ್ಲ. ಉದಾಹರಣೆಗೆ ಕಲ್ಲಿದ್ದಲು ಬಳಸುವುದನ್ನು ಕ್ರಮೇಣ ಕಡಿಮೆ ಮಾಡಬೇಕು ಎಂಬ ನಿರ್ಣಯವನ್ನೇ  ದೃಷ್ಟಿಯಿಂದ ವಿಶ್ಲೇಷಿಸಬಹುದು.

ಹಿಂದಿನ ಸಂಚಿಕೆಗಳಲ್ಲಿ  ಯು.ಕೆ ಯ ಗ್ಲಾಸ್ಗೊದ COP26 ಹವಾಮಾನ ಸಮ್ಮೇಳನದಲ್ಲಿ ನಡೆದ ಚರ್ಚೆಗಳ ಕುರಿತು ವಿವರಿಸಲಾಗಿತ್ತು. ಆಗ ಸಮ್ಮೇಳನ ಇನ್ನೂ ಮುಗಿದಿರಲಿಲ್ಲ. ಸಮ್ಮೇಳನ ಒಂದು ದಿನದಷ್ಟು ವಿಸ್ತರಣೆ ಸಹ ಆಗಿತ್ತು. ಕೊನೆಗೂ ಸಮ್ಮೇಳನದಲ್ಲಿ ಏನಾಯಿತು? ನಿಜವಾಗಿಯೂ ಹೇಳಬೇಕೆಂದರೆ ಗಮನಾರ್ಹವಾದದ್ದು ಏನೂ ಆಗಲಿಲ್ಲ. ಈ ಕೆಳಗೆ ಕೊಟ್ಟ ಕೆಲವು ಸಣ್ಣ ಮುನ್ನಡೆಗಳು ಆದವು ಅಷ್ಟೇ:

  1. ಗ್ಲಾಸ್ಗೋದಲ್ಲಿ ಎಲ್ಲ ದೇಶಗಳು ಕೊಟ್ಟ ಹೆಚ್ಚಿಸಿದ ಹೊಸ ರಾಷ್ಟ್ರೀಯ ನಿರ್ಧಾರಿತ (ಸೂಸುವಿಕೆ ಕಡಿತದ) ಕೊಡುಗೆ (ಎನ್,ಡಿ.ಸಿ)ಗಳನ್ನು ಪೂರ್ಣವಾಗಿ ಜಾರಿ ಮಾಡಿದರೂ 2.4 ಡಿಗ್ರಿ ಸೆ.(ಸೆಂಟಿಗ್ರೇಡ್) ನಷ್ಟು ಜಾಗತಿಕ ತಾಪಮಾನ ಏರಲಿದೆ. ಸೂಸುವಿಕೆಯಲ್ಲಿ ಶ್ರೀಮಂತ ದೇಶಗಳು ಸಾಕಷ್ಟು ತೀವ್ರ ಕಡಿತ ಮಾಡದ್ದು ಮತ್ತು ತಮ್ಮ ಮಂದ ಬೆಳವಣಿಗೆಯನ್ನು ಇನ್ನಷ್ಟು ಮಂದಗೊಳಿಸದೆ ಬಡ ದೇಶಗಳು ಹೆಚ್ಚಿನ ಸೂಸುವಿಕೆ ಕಡಿತ ಮಾಡುವ ಸ್ಥಿತಿಯಲ್ಲಿ ಇಲ್ಲದಿರುವುದೇ ಇದಕ್ಕೆ ಕಾರಣ.
  2. ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆ ಗೆ ಮಿತಿಗೊಳಿಸಬೇಕಾದರೆ 2030ರೊಳಗೆ ಈಗಿನ ಎರಡು ವರ್ಷಗಳ ಮತ್ತು 2.0 ಡಿಗ್ರಿ ಸೆ ಗೆ ಮಿತಿಗೊಳಿಸಬೇಕಾದರೆ 2030ರೊಳಗೆ ಈಗಿನ ಒಂದು ವರ್ಷದ ಒಟ್ಟು ಸೂಸುವಿಕೆಯಷ್ಟು ಕಡಿತ ಮಾಡಬೇಕಾಗಿದೆ. 2022ರಲ್ಲಿ ಈಜಿಪ್ಟ್ ನಲ್ಲಿ ನಡೆಯಲಿರುವ ಮುಂದಿನ ಸಮ್ಮೇಳನದೊಳಗೆ 1.5 ಅಥವಾ 2.0 ಡಿಗ್ರಿ ಸೆ ಗೆ ಮಿತಿಗೊಳಿಸುವ ಇನ್ನಷ್ಟು ಹೆಚ್ಚು ಕಡಿತಗಳನ್ನು ದೇಶಗಳು ಕೊಡಬೇಕು ಎಂಬ ಕೋರಿಕೆಯಷ್ಟೇ ಮಾಡಲಾಯಿತು.
  3. ಪ್ರತಿ ದೇಶಧಲ್ಲಿ ಒಟ್ಟು ಶೂನ್ಯ ಸೂಸುವಿಕೆಯನ್ನು ಎಷ್ಟು ವರ್ಷಗಳಲ್ಲಿ ಸಾಧಿಸಬಹುದು ಎಂದು ಎಲ್ಲ ದೇಶಗಳು ತಿಳಿಸಿದವು. ಜಾಗತಿಕವಾಗಿ ಒಟ್ಟು ಶೂನ್ಯ ಸೂಸುವಿಕೆಯನ್ನು 2050ರೊಳಗೆ ಸಾಧಿಸಬೇಕು ಎಂಬ ಗುರಿ ಮುಟ್ಟಬೇಕಾದರೆ ಶ್ರೀಮಂತ ದೇಶಗಳು 2030ರೊಳಗೆ ರಾ಼ಷ್ಟ್ರೀಯವಾಗಿ ಈ ಗುರಿ ಮುಟ್ಟಬೇಕು. ಆದರೆ ಅವು 2050ರ ಗುರಿಯನ್ನೇ ಕೊಟ್ಟಿವೆ. ಆದ್ದರಿಂದ ಈ ಜಾಗತಿಕ ಗುರಿ ಸಹ ಕಾರ್ಯಸಾಧ‍್ಯವಾಗುವಂತೆ ಕಾಣುತ್ತಿಲ್ಲ.
  4. ವಿದ್ಯುಚ್ಛಕ್ತಿ ಉತ್ಪಾದನೆಗೆ ಕಲ್ಲಿದ್ದಲು ಬಳಸುವುದನ್ನು ಕ್ರಮೇಣ ಕಡಿಮೆ ಮಾಡಬೇಕು ಮತ್ತು ಅದಕ್ಷ ಇಂಧನ ಸಬ್ಸಿಡಿಗಳನ್ನು ಕಡಿತ ಮಾಡಬೇಕು ಎಂದು ವಿಧಿಸಲಾಯಿತು
  5. ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮ ಎದುರಿಸುತ್ತಿರುವ ಬಡ ದೇಶಗಳಿಗೆ, ಈ ಸಮಸ್ಯೆಗೆ ಮುಖ್ಯ ಕಾರಣವಾದ ಶ್ರೀಮಂತ ದೇಶಗಳು ತಂತ್ರಜ್ಞಾನ ಮತ್ತು ಧನಸಹಾಯ ಮಾಡಬೇಕು ಎಂಬುದರ ಬಗ್ಗೆ, 2025ರ ವರೆಗೆ ವಾರ್ಷಿಕ 100 ಶತಕೋಟಿ ಡಾಲರುಗಳ ಧನಸಹಾಯ ಮಾಡಬೇಕೆಂದು ಕೋರಿಕೆಯಷ್ಟೇ ಮಾಡಲಾಯಿತು.

ಎಲ್ಲ ದೇಶಗಳ ಒಟ್ಟು ಸಹಮತ ರೂಪಿಸುವ ಸವಾಲುಗಳ ಸಂದರ್ಭದಲ್ಲಿ ಇಷ್ಟಾದರೂ ಮುನ್ನಡೆ ಆಯಿತಲ್ಲ  ಎಂದು ಮೇಲುನೋಟಕ್ಕೆ ಎನಿಸಬಹುದು. ಆದರೆ ಇದು ನಿಜವಲ್ಲ. ಈಗ ಆಗಿರುವ ಮುನ್ನಡೆಗಳು ಶ್ರೀಮಂತ ದೇಶಗಳಿಗೆ ಅನುಕೂಲಕರವಾದ ಬಡ ದೇಶಗಳಿಗೆ ಮಾರಕವಾದವುಗಳು. ದೂರಗಾಮಿ ದೃ಼ಷ್ಟಿಯಲ್ಲಿ ನೋಡಿದರೆ ಹವಾಮಾನ ಬದಲಾವಣೆಯ ಅನಾಹುತ ತಡೆಯಲು ಸಹಾಯಕವಲ್ಲ.

ಕಲ್ಲಿದ್ದಲು ಬಳಸುವುದನ್ನು ಕ್ರಮೇಣ ಕಡಿಮೆ ಮಾಡಬೇಕುಜಾರಿ ಬಡದೇಶಗಳಿಗೆ ಸುಲಭವಲ್ಲ

ಉದಾಹರಣೆಗೆ ಕಲ್ಲಿದ್ದಲು ಬಳಸುವುದನ್ನು ಕ್ರಮೇಣ ಕಡಿಮೆ ಮಾಡಬೇಕು ಎಂಬ ನಿರ್ಣಯವನ್ನೇ  ಈ ದೃಷ್ಟಿಯಿಂದ ವಿಶ್ಲೇಷಿಸಬಹುದು. ಈ ನಿರ್ಣಯದ ಹಿಂದೆ ಸೌರ, ಗಾಳಿ ಇತ್ಯಾದಿ ನವೀಕರಿಸಬಹುದಾದ ವಿದ್ಯುಚ್ಛಕ್ತಿ ಉತ್ಪಾದನಾ ವಿಧಾನಗಳ ವೆಚ್ಚ ಪ್ರತಿ ಯುನಿಟಿಗೆ ಕಲ್ಲಿದ್ದಲು, ಪೆಟ್ರೋಲ್, ಗ್ಯಾಸ್ ಮುಂತಾದವುಗಳಿಗಿಂತ ಕಡಿಮೆ. ಆದ್ದರಿಂದ ಇದರ ಜಾರಿ ಸುಲಭಸಾಧ್ಯ, ಅನುಕೂಲಕರವೆಂಬ ನಂಬಿಕೆಯಿದೆ. ಇದು ಬಂಡವಾಳ ಮತ್ತು ತಂತ್ರಜ್ಞಾನ ಎರಡೂ ಇರುವ ಶ್ರೀಮಂತ ದೇಶಗಳ ಮಟ್ಟಿಗೆ ನಿಜವಿರಬಹುದು. ಆದರೆ ಬಡದೇಶಗಳ ಮಟ್ಟಿಗೆ ನಿಜವಲ್ಲ. ಇದಕ್ಕೆ  ಕಾರಣಗಳು ಹೀಗಿವೆ : ನವೀಕರಿಸಬಹುದಾದ ವಿದ್ಯುಚ್ಛಕ್ತಿ ಉತ್ಪಾದನಾ ವಿಧಾನಗಳ ಮೂಲಗಳಾದ ಸೌರ, ಗಾಳಿ ಇತ್ಯಾದಿಗಳು ಅನಿಶ್ಚಿತವಾಗಿರುವುದರಿಂದ, ಅಷ್ಟೇ ಒಟ್ಟು  ವಿದ್ಯುಚ್ಛಕ್ತಿ ಉತ್ಪಾದಿಸಲು ವಿದ್ಯುತ್ ಗ್ರಿಡ್ ನಲ್ಲಿ 3-4 ಪಟ್ಟು ಹೆಚ್ಚು ಉತ್ಪಾದನಾ ಸಾಮರ್ಥ್ಯ ಸ್ಥಾಪಿಸಬೇಕಾಗುತ್ತದೆ. ಇದಕ್ಕೆ ಹೆಚ್ಚಿನ ಬಂಡವಾಳ ಬೇಕು. ಬಡ ದೇಶಗಳ ಬಳಿ ಇರುವ ಸೀಮಿತ ಬಂಡವಾಳದಿಂದಾಗಿ ಇದು ಅಸಾಧ‍್ಯವಾಗಬಹುದು. ಹೊಸ ನವೀಕರಿಸಬಹುದಾದ ಮೂಲಗಳ ಸ್ಥಾವರಗಳಿಗೆ ನಿರ್ದಿಷ್ಟವಾಗಿ ಧನಸಹಾಯದ ಖಾತರಿಯಿಲ್ಲದೆ, ಬಡದೇಶಗಳಿಗೆ ಅವುಗಳ ಬಳಿ ಈಗಾಗಲೇ ಇರುವ ಕಲ್ಲಿದ್ದಲು ಸ‍್ಥಾವರುಗಳನ್ನು ಮುಚ್ಚಿ ನವೀಕರಿಸಬಹುದಾದ ಮೂಲಗಳಿಂದ ವಿದ್ಯುಚ್ಛಕ್ತಿ ಉತ್ಪಾದಿಸುವಂತೆ ವಿಧಿಸಲಾಗುತ್ತಿದೆ. ಇದಕ್ಕೆ ಬದ್ಧವಾಗಿಲ್ಲದಿದ್ದರೆ ಶ್ರೀಮಂತ ದೇಶಗಳು ನಮ್ಮಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಕೊಂಡು ಇದನ್ನು ಮಾಡಿ ಇಲ್ಲವೆ ಆರ್ಥಿಕ ದಿಗ್ಬಂಧನ ಹಾಕುತ್ತೇವೆ ಎಂದು ಬೆದರಿಸಬಹುದು. ಈ ನಿರ್ಣಯ ‘ಹಸಿರು’ ಸಾಮ್ರಾಜ್ಯಶಾಹಿಯ ಹೊಸರೂಪವನ್ನು ಹೊರಿಸುವ ಹುನ್ನಾರವಿರಬಹುದೇ?

ನವೀಕರಿಸಬಹುದಾದ ಮೂಲಗಳಲ್ಲಿ ಅನಿಶ್ಚಿತತೆ ಮಾತ್ರವಲ್ಲ, ಭಾರೀ ಋತುಮಾನದ ವ್ಯತ್ಯಯಗಳಿರುತ್ತವೆ. ಸೌರ ಮಳೆ, ಚಳಿಗಾಲದಲ್ಲಿ ಕೆಲಸ ಮಾಡದೆ ಹೋಗಬಹುದು. ಗಾಳಿಯ ದಿಕ್ಕು ವೇಗಗಳಲ್ಲಿ ಸಹ ಋತುಮಾನದೊಂದಿಗೆ ಭಾರೀ ವ್ಯತ್ಯಯಗಳನ್ನು ಕಾಣಬಹುದು. ಇದರಿಂದಾಗಿ ದೀರ್ಘ ಕಾಲ ಉತ್ಪಾದಿತ ವಿದ್ಯುಚ್ಛಕ್ತಿಯನ್ನು ಸಂಗ್ರಹಿಸುವ ಹೊಸ ವಿಧಾನಗಳು ಅಗತ್ಯವಾಗುತ್ತವೆ. ಈ ತಂತ್ರಜ್ಞಾನಗಳು ಈಗಷ್ಟೇ ಶ್ರೀಮಂತ ದೇಶಗಳಲ್ಲಿ ಅಭಿವೃದ್ಧಿ ಪಡಿಸಲ್ಪಡುತ್ತಿವೆ. ಈಗ ಶ್ರೀಮಂತ ದೇಶಗಳಲ್ಲಿ ದಂಡಿಯಾಗಿರುವ ಕಲ್ಲಿದ್ದಲು, ಗ್ಯಾಸ್, ಅಣುಶಕ್ತಿ ಆಧಾರಿತ ಸ್ಥಾವರಗಳನ್ನು ಬಳಸಲಾಗುತ್ತಿವೆ. ಉದಾಹರಣೆಗೆ ಜರ್ಮನಿಯಲ್ಲಿ ಇತ್ತೀಚೆಗೆ ಗಾಳಿ ಯ ವೇಗದಲ್ಲಿ ತೀವ್ರ ವ್ಯತ್ಯಯಗಳಾದಾಗ ಕಲ್ಲಿದ್ದಲು ಸ್ಥಾವರಗಳನ್ನು ಬಳಸಲಾಯಿತು. ಹೀಗಾಗಿ ನವೀಕರಿಸಬಹುದಾದ ಮೂಲಗಳನ್ನು ಬರಿಯ ಅಥವಾ ಪ್ರಧಾನ ವಿದ್ಯುಚ್ಛಕ್ತಿಯ ಉತ್ಪಾದನಾ ವಿಧಾನವಾಗಿ ಬಳಸುವುದು ಬಡದೇಶಗಳಿಗೆ ಕಷ್ಟಸಾಧ್ಯ ಇದಕ್ಕೆ ಬೇಕಾದ ಬಂಡವಾಳವಾಗಲಿ, ತಂತ್ರಜ್ಞಾನವಾಗಲಿ ಅವುಗಳ ಬಳಿಯಿಲ್ಲ.

ಕಲ್ಲಿದ್ದಲು ಬಿಡಿ, ಗ್ಯಾಸ್ ಇರಲಿ

ಇಲ್ಲೇ ಶ‍್ರೀಮಂತ ದೇಶಗಳ ಗೋಮುಖವ್ಯಾಘ್ರತನ ಕಾಣಬಹುದು. ನವೀಕರಿಸಬಹುದಾದ ಮೂಲಗಳ ಹೆಚ್ಚಿನ ಸಾಮರ್ಥ್ಯದ ಸ್ಥಾವರ ಕಟ್ಟಲು ಬಂಡವಾಳ ಮತ್ತು ವ್ಯತ್ಯಯಗಳಾದಾಗ ಪೂರಕ ಸ್ಥಾವರಗಳಿವೆ. ಹೆಚ್ಚಿನ ಶ್ರೀಮಂತ ದೇಶಗಳು ಕಲ್ಲಿದ್ದಲ ಮೇಲೆ ಅವಲಂಬಿಸಿಲ್ಲ. ಈ ದೇಶಗಳಲ್ಲಿ ಗ್ಯಾಸ್ ವಿಪುಲವಾಗಿ ಲಭ್ಯವಿದೆ. ಗ್ಯಾಸ್ ಸ್ಥಾವರಗಳ ಸೂಸುವಿಕೆ ಕಲ್ಲಿದ್ದಲಿಗಿಂತ ಗಮನಾರ್ಹವಾಗಿ ಕಡಿಮೆಯಿದೆ ಎಂಬುದು ನಿಜ. ಆದರೆ ಇಲ್ಲೇ ವಿವಿಧ ದೇಶಗಳ  ತಲಾ ವಿದ್ಯುತ್ ಬಳಕೆ  ಪ್ರಮುಖವಾಗುತ್ತದೆ. ಯು.ಎಸ್ ನ ತಲಾ ವಿದ್ಯುತ್ ಬಳಕೆಯು ಭಾರತದ ಬಳಕೆಯ 9 ಪಟ್ಟು, ಉಗಾಂಡಾದ 90 ಪಟ್ಟು. ಯು.ಕೆಯ ಬಳಕೆ ಭಾರತದ ಬಳಕೆಯ 6 ಪಟ್ಟು, ಉಗಾಂಡಾ ಬಳಕೆಯ 60ಪಟ್ಟು. ಯುರೋ ಕೂಟ ಮತ್ತು ಯು,ಕೆಯ ಒಟ್ಟು ಸೂಸುವಿಕೆಯು, ಅದರ ಎರಡು ಪಟ್ಟು ಜನಸಂ‍ಖ್ಯೆ ಇರುವ ಿಡೀ ಆಫ್ರಿಕಾ ಖಂಡದ ಸೂಸುವಿಕೆಯ ಎರಡು ಪಟ್ಟು.  ಭಾರತದ ಸೂಸುವಿಕೆಗಿಂತ ಅದರ ಕಾಲುಭಾಗ ಜನಸಂಖ್ಯೆ ಇರುವ ಯುಎಸ್ ನ ಸೂಸುವಿಕೆ ಗಮನಾರ್ಹವಾಗಿ ಹೆಚ್ಚಿದೆ. ಹೀಗೆ  ಶ್ರೀಮಂತ ದೇಶಗಳ ತಲಾ ಮತ್ತು ಒಟ್ಟು ಸೂಸುವಿಕೆಯು ಬಡ ದೇಶಗಳಿಗಿಂತ ಹೆಚ್ಚು ಇರುವಾಗ ಒಟ್ಟು ಮತ್ತು ತಲಾ ಸೂಸುವಿಕೆಯ ನಿಯಂತ್ರಣ ಮಾಡಬೇಕೋ ಅಥವಾ ವಿದ್ಯುಚ್ಛಕ್ತಿಯ ಮೂಲದ ಮೇಲೆ ನಿರ್ಬಂಧ ಹೇರಬೇಕೋ? ಜಾಣತನದಿಂದ ಹವಾಮಾನ ತುರ್ತು ಪರಿಸ್ಥಿತಿಯ ದುರ್ಬಳಕೆ ಮಾಡಿ ವಿದ್ಯುಚ್ಛಕ್ತಿಯ ಮೂಲದ ಮೇಲೆ ನಿರ್ಬಂಧ ಹೇರಿರುವುದು ಹಸಿರು ಸಾಮ್ರಾಜ್ಯಶಾಹಿಯ ಇನ್ನೊಂದು ಕ್ರಮವಲ್ಲದೆ ಬೇರೆನಲ್ಲ.

ಒಟ್ಟು ಸೂಸುವಿಕೆ ಕಡಿತದ ವಿಷಯ ಮರೆಮಾಚುವ ತಂತ್ರ

ಹವಾಮಾನ ಬದಲಾವಣೆಗೆ ಕಾರಣವಾದ ಶ್ರೀಮಂತ ದೇಶಗಳ ಚಾರಿತ್ರಿಕ ಒಟ್ಟು ಸೂಸುವಿಕೆಯನ್ನು ಗಮನದಲ್ಲಿಟ್ಟುಕೊಂಡು ಅವುಗಳು ಇಂದಿನ ಸೂಸುವಿಕೆಯ ಕಡಿತದಲ್ಲಿ ದೊಡ್ಡ ಪಾಲು ತೆಗೆದುಕೊಳ್ಳಬೇಕೆಂಬ ನ್ಯಾಯಯುತ ಬೇಡಿಕೆಯನ್ನು ಸಹ ಇಲ್ಲಿ ಎತ್ತುತ್ತಿಲ್ಲ. ಸೂಸುವಿಕೆಯ ಕಡಿತದ ದೇಶವಾರು ಬಜೆಟ್ ಮುಖ್ಯ ಗುರಿಯಾಗಬೇಕು, ವಿದ್ಯುಚ್ಛಕ್ತಿಯ ಮೂಲ ಯಾವುದಿರಬೇಕು ಎಂಬುದಲ್ಲ ಎಂಬ ಮೂಲಭೂತ ಪ್ರಶ್ನೆಯಿದು. ಬಡ ದೇಶಗಳು ಅವಲಂಬಿತವಾಗಿರುವ ಕಲ್ಲಿದ್ದಲನ್ನು ಕ್ರಮೇಣ ಬಿಟ್ಟು ಬಿಟಬೇಕು ಎಂದು ಹೇಳುತ್ತಾ, ಶ್ರೀಮಂತ ದೇಶಗಳು ಹೊಂದಿರುವ ಗ್ಯಾಸ್ ಪೆಟ್ರೋಲ್ ಇತ್ಯಾದಿ ಗಳ ಮೇಲೆ ಯಾವುದೇ ಇಂತಹ ನಿರ್ಬಂಧಗಳನ್ನು ಹಾಕದಿರುವುದು ಯಾವ ನ್ಯಾಯ? ತಮ್ಮ ಒಟ್ಟು ಸೂಸುವಿಕೆಯ ಮೇಲೆ ಯಾವುದೇ ಗಮನ ಹರಿಯದಂತೆ ಮಾಡುವ ಶ‍್ರೀಮಂತ ದೇಶಗಳ ಜಾಣ ನಡೆಯಿದು.

ಶ್ರೀಮಂತ ದೇಶಗಳ ಹುನ್ನಾರ ಇಷ್ಟಕ್ಕೆ ನಿಲ್ಲುವುದಿಲ್ಲ. ನಾರ್ವೇ ಆಫ್ರಿಕಾ ಮತ್ತು ಇತರ ಬಡದೇಶಗಳಲ್ಲಿ ತೈಲ ಮತ್ತು ಪ್ರಾಕೃತಿಕ ಗ್ಯಾಸ್ ಪ್ರಾಜೆಕ್ಟುಗಳಿಗೆ ವಿಶ್ವ ಬ್ಯಾಂಕ್ ಹಣಕಾಸು ಹೂಡುವುದನ್ನು ನಿಲ್ಲಿಸಬೇಕೆಂದು ಪ್ರಬಲವಾಗಿ ಲಾಬಿ ಮಾಡುತ್ತಿದೆ. ಅದೇ ಸಮಯದಲ್ಲಿ ನಾರ್ವೇ ಮತ್ತು ಇತರ ಉತ್ತರ ಯುರೋಪಿನ ಮತ್ತು ಬಾಲ್ಟಿಕ್ ತೀರದ ಏಳು ದೇಶಗಳು ತಮ್ಮ ತೈಲ ಮತ್ತು ಗ್ಯಾಸ್ ಉತ್ಪಾದನೆಯನ್ನು ರಭಸವಾಗಿ ವಿಸ್ತರಿಸುತ್ತಿವೆ. ನಾರ್ವೇ ಸೇರಿದಂತೆ 20 ದೇಶಗಳು ಗ್ಲಾಸ್ಗೊ ಸಮ್ಮೇಳನದಲ್ಲಿ ಇಂತಹುದೇ ಪ್ರಸ್ತಾವಗಳನ್ನು ಮಂಡಿಸಿದವು. ಹವಾಮಾನ ಬದಲಾವಣೆಗೆ ಕಾರಣವಾದ ತಮ್ಮ ಚಾರಿತ್ರಿಕ ಒಟ್ಟು ಸೂಸುವಿಕೆಯನ್ನು ಗಮನದಲ್ಲಿಟ್ಟುಕೊಂಡು ಶ್ರೀಮಂತ ದೇಶಗಳು ಅದರ ಪರಿಣಾಮ ಅನುಭವಿಸುವ ಬಡದೇಶಗಳಿಗೆ ಹಣಕಾಸು, ತಂತ್ರಜ್ಞಾನ ಕೊಡುವ ಮೂಲಕ ಪರಿಹಾರ ಒದಗಿಸಬೇಕೆಂಬ ವಿಷಯವನ್ನು ಎತ್ತದಂತೆ ಮಾಡಿವೆ, ಅದನ್ನು ನಿರ್ಲಕ್ಷ ಮಾಡಿವೆ. ಮಾತ್ರವಲ್ಲ ಗ್ಲಾಸ್ಗೊ ಮತ್ತಿತರ ಹವಾಮಾನ ಬದಲಾವಣೆ ಮಾತುಕತೆಗಳನ್ನು ಶಕ್ತಿಯ ಮೂಲಗಳ ಉತ್ಪಾದನೆ, ಪೂರೈಕೆ ನಿಯಂತ್ರಣದಲ್ಲಿ ತಾವು ಸಾಧಿಸಿರುವ ಏಕಸ್ವಾಮ್ಯವನ್ನು ಮುಂದುವರೆಸುವ ಗಟ್ಟಿಗೊಳಿಸುವ ವೇದಿಕೆಯಾಗಿ ಮಾಡುವ ದಾರ್ಷ್ಟ್ಯ ವನ್ನು ತೋರಿಸುತ್ತಿವೆ. ಅದಕ್ಕಾಗಿ ಬಡದೇಶಗಳು ತಮ್ಮ ಅಭಿವೃದ್ಧಿಗೆ ಅಗತ್ಯವಾದ ಶಕ್ತಿಯ ಮೂಲಗಳನ್ನು ಬೆಳೆಸಲು ಬೇಕಾದ ಹಣಕಾಸಿಗೆ ಕತ್ತರಿ ಹಾಕಲು ಹವಣಿಸುತ್ತಿರುವುದನ್ನು ‘ಹಸಿರು ಸಾಮ್ರಾಜ್ಯಶಾಹಿ’ ಅಲ್ಲದೆ ಇನ್ನು ಯಾವ ಹೆಸರಿಂದ ಕರೆಯಬೇಕು?

ಹವಾಮಾನ ಬದಲಾವಣೆಗೆ ಕಾರಣವಾಗುವ ಅನಿಲಗಳ ಸೂಸುವಿಕೆಯಲ್ಲಿ ಭಾರೀ ಕಡಿತ ಸಾಧಿಸದೆ ಮನುಕುಲಕ್ಕೆ ಭವಿಷ್ಯವಿಲ್ಲವೆಂಬುದು ನಿಜ, ಆದರೆ ಆಪ್ರಿಕಾ ಮತ್ತಿತರ ಬಡದೇಶಗಳು ಯು.ಎಸ್ ತಲಾ ಬಳಕೆಯ 1/90 ರಷ್ಟಲ್ಲಿ ಅಲ್ಲಿಯ ಮಕ್ಕಳಿಗೆ ಭವಿಷ್ಯ ಮಾತ್ರವಲ್ಲ, ವರ್ತಮಾನವೂ ಇಲ್ಲ. ಬಡದೇಶಗಳ ಕಡಿತ ಅಸಾಧ‍್ಯವೆಂಬ ಪರಿಸ್ಥಿತಿಯಲ್ಲಿ ಶ್ರೀಮಂತ ದೇಶಗಳು ಸಹ ಭಾರೀ ಕಡಿತ ಮಾಡದಿದ್ದರೂ ಮನುಕುಲಕ್ಕೆ ಭವಿಷ್ಯವಿಲ್ಲವೆಂಬುದು ಸಹ ಅಷ್ಟೇ ನಿಜ, ಇನ್ನೊಂದು ಕಡೆ ಪ್ರಧಾನಿ ಮೋದಿ ಮತ್ತು ಅವರ ಬೆಂಭಲಿಗರು ಭಾರತ ಅಭಿವೃದ್ಧ ದೇಶವಾಗುವ ಸೂಪರ್ ಪವರ್

ಆಗುವ ಹಾದಿಯಲ್ಲಿದೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ ತಲಾ ಶಕ್ತಿ ಉತ್ಪಾದನೆ, ಪೂರೈಕೆ, ಬಳಕೆಯಲ್ಲಿ ಭಾರತ ಆಫ್ರಿಕಾ ದ ಮಟ್ಟದಲ್ಲಿದೆ ಎಂಬುದು ಅವರಿಗೆ ತಿಳಿದಂತಿಲ್ಲ.

Donate Janashakthi Media

Leave a Reply

Your email address will not be published. Required fields are marked *