ಕಾನ್ಪುರ: ಐದನೇ ತರಗತಿಯ ವಿದ್ಯಾರ್ಥಿಯೊಬ್ಬ ಎರಡರ ಮಗ್ಗಿ ತಪ್ಪಾಗಿ ಹೇಳಿದ್ದಾನೆ ಎಂದು, ಕೈಯನ್ನು ಪವರ್ ಡ್ರಿಲ್ ಮೆಶಿನ್‌ನಿಂದ ಕೊರೆದು ಗಾಯಗೊಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದಿದೆ.
ಕಾನ್ಪುರ ಜಿಲ್ಲೆಯ ಪ್ರೇಮನಗರದ ಖಾಸಗಿ ಶಾಲೆಯೊಂದಲ್ಲಿ 10 ವರ್ಷದ ಬಾಲಕ ಸಿಸಮೌ ಎಂಬಾತ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಕಳೆದ ಗುರುವಾರ ಶಿಕ್ಷಕ ಅನುಜ್ ಪಾಂಡೆ ಎಂಬಾತ ಶಾಲೆಯ ಗ್ರಂಥಾಲಯದಲ್ಲಿ ದುರಸ್ತಿ ಕೆಲಸ ನೋಡಿಕೊಳ್ಳುತ್ತಿದ್ದಾಗ, ಸಮೀಪದಲ್ಲೇ ಹೋಗುತ್ತಿದ್ದ ಬಾಲಕ ಸಿಸಮೌನನ್ನು ಕರೆದು ಎರಡರ ಮಗ್ಗಿ ಹೇಳುವಂತೆ ಕೇಳಿದ್ದಾನೆ.
ಈ ವೇಳೆ ಬಾಲಕ ಸರಿಯಾಗಿ ಮಗ್ಗಿ ಹೇಳಲು ವಿಫಲವಾಗಿದ್ದಕ್ಕೆ ಆಕ್ರೋಶಗೊಂಡ ಶಿಕ್ಷಕ, ದುರಸ್ತಿ ಕಾಮಗಾರಿಗೆ ತಂದಿದ್ದ ಡ್ರಿಲ್ಲಿಂಗ್ ಮಷಿನ್ ಅನ್ನೇ ಬಾಲಕನ ಕೈಗೆ ಇಟ್ಟು ಮಷಿನ್ ಆನ್ ಮಾಡಿದ್ದಾನೆ. ಈ ವೇಳೆ ಬಾಲಕ ಕೈ ಎಳೆದುಕೊಳ್ಳುವಷ್ಟರಲ್ಲಿ ಆತನ ಕೈಯಲ್ಲಿ ಸಣ್ಣ ರಂಧ್ರವಾಗಿದೆ. ಈ ವೇಳೆ ಸಿಸಮೌನ ಜೊತೆಗೇ ಇದ್ದ ಮತ್ತೊಬ್ಬ ಬಾಲಕ, ಡ್ರಿಲ್ ಮಷಿನ್‌ಗೆ ನೀಡಿದ್ದ ವಿದ್ಯುತ್ ಸಂಪರ್ಕದ ಸ್ವಿಚ್ ಆಫ್ ಮಾಡಿದ ಕಾರಣ ದೊಡ್ಡ ದುರ್ಘಟನೆ ತಪ್ಪಿದೆ.
ಇಷ್ಟೆಲ್ಲಾ ಅನಾಹುತವಾದರೂ ಬಾಲಕನಿಗೆ ಯಾವುದೇ ಚಿಕಿತ್ಸೆ ನೀಡದೆ ಮನೆಗೆ ಕಳುಹಿಸಿಕೊಡಲಾಗಿದೆ. ಶಾಲೆಯ ಉಸ್ತುವಾರಿ ಹೊತ್ತಿದ್ದ ಹಿರಿಯ ಶಿಕ್ಷಕರು ಕೂಡಾ ಈ ವಿಷಯವನ್ನು ಯಾರ ಗಮನಕ್ಕೂ ತರುವ ಕೆಲಸ ಮಾಡಿಲ್ಲ.
ಈ ನಡುವೆ ಬಾಲಕ ಮನೆಗೆ ತೆರಳಿ ವಿಷಯ ತಿಳಿಸಿದ ಬಳಿಕ, ಪೋಷಕರು ಮತ್ತು ಸಂಬಂಧಿಕರು ಶಾಲೆಗೆ ಆಗಮಿಸಿದ ಬಳಿಕ ವಿಷಯ ಎಲ್ಲರ ಕಿವಿಗೆ ಬಿದ್ದಿದೆ. ಬಳಿಕ ಹಿರಿಯ ಶಿಕ್ಷಣ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆಗೆ ಆದೇಶಿಸಿದ್ದಾರೆ. ಶಿಕ್ಷಕನ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.