ಪೊಲೀಸ್​ ಠಾಣೆಗೆ ಬೆಂಕಿ: ಪ್ರತಿಕಾರವಾಗಿ 5 ಮನೆಗಳ ಧ್ವಂಸ ಮಾಡಿದ ಜಿಲ್ಲಾಡಳಿತ!!

ನಾಗಾಂವ್​​ (ಅಸ್ಸಾಂ): ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಬೆಂಕಿ ಹಾಕಿದ್ದ ಆರೋಪಿಗಳ ವಿರುದ್ಧ ಜಿಲ್ಲಾಡಳಿತ ಪ್ರತಿಕಾರ ತೀರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಆರೋಪಿಗಳ 5 ಮನೆಗಳನ್ನು ಧ್ವಂಸ ಮಾಡಿದೆ. ಬುಲ್ಡೋಜರ್ ಮೂಲಕ ಕ್ರಮ ಕೈಗೊಂಡ ಜಿಲ್ಲಾಡಳಿತವು ಮನೆಗಳನ್ನು ನೆಲಸಮಗೊಳಿಸಿದೆ.

ಅಸ್ಸಾಂನ ನಾಗಾಂವ್ ಜಿಲ್ಲಾಡಳಿತವು ಇಂದು(ಮೇ 22) ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಐದು ಆರೋಪಿಗಳ ನಿವಾಸಗಳನ್ನು ನೆಲಸಮಗೊಳಿಸಿದೆ. ಬತದ್ರಾವ ಪೊಲೀಸರ​ ವಶದಲ್ಲಿದ್ದ ಶಫಿವುಲ್ಲಾ ಇಸ್ಲಾಂ ನೆನ್ನೆ(ಮೇ 22)  ಮೃತಪಟ್ಟಿದ್ದ. ಇದರಿಂದ ಆಕ್ರೋಶಗೊಂಡಿದ್ದ ಕುಟಂಬಸ್ಥರು ಠಾಣೆಗೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದರು. ಅಲ್ಲದೇ, ಈ ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯವಾಗಿದ್ದವು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್​ ವರಿಷ್ಠಾಧಿಕಾರಿ ಲೀನಾ ಡೋಲಿ, ಶಫಿವುಲ್ಲಾ ಇಸ್ಲಾಂ ಸಾವಿನ ಬಗ್ಗೆ ಮತ್ತು ಪೊಲೀಸ್​ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣವು ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಠಾಣೆ ಮೇಲೆ ದಾಳಿ ಮಾಡಿದವರ ಪೈಕಿ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ್ಧಾರೆ.

ಠಾಣಾಧಿಕಾರಿ ಅಮಾನತು

ಶಫೀವುಲ್ಲಾ ಇಸ್ಲಾಂ ಸಾವಿನ ಬಗ್ಗೆ ತನಿಖೆಯ ಉದ್ದೇಶದಿಂದ ಬತದ್ರಾವ ಪೊಲೀಸ್​ ಠಾಣೆಯ ಅಧಿಕಾರಿಯನ್ನು ಇಲಾಖೆಯು ಅಮಾನತುಗೊಳಿಸಿದೆ. ಪೊಲೀಸ್‌ ಕಸ್ಟಡಿಯಲ್ಲಿ ವ್ಯಕ್ತಿಯ ಸಾವು ದುರದೃಷ್ಟಕರವಾಗಿದ್ದು, ನಿಷ್ಪಕ್ಷಪಾತ ತನಿಖೆಗಾಗಿ ಠಾಣಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಇದರಲ್ಲಿ ಯಾರೇ ತಪ್ಪಿಸ್ಥರಾಗಿದ್ದರೂ ಮರು ಕ್ಷಣವೂ ಯೋಚಿಸದೆ ಶಿಕ್ಷಿಸುವುದಾಗಿ ಡಿಜಿಪಿ ಭಾಸ್ಕರ್​ ಜ್ಯೋತಿ ಮಹಾಂತ ತಿಳಿಸಿದ್ದಾರೆ.

ಠಾಣೆ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಕಾನೂನನ್ನು ತಮ್ಮ ಕೈಗೆ ಎತ್ತಿಕೊಂಡಿದ್ದರು. ಅಲ್ಲದೇ, ಮೃತ ವ್ಯಕ್ತಿ ಮತ್ತು ಆತನ ಸಂಬಂಧಿಕರು ಕ್ರಿಮಿನಲ್​ ಹಿನ್ನೆಲೆಯುಳ್ಳವರಾಗಿದ್ದಾರೆ. ಇದರ ದಾಖಲೆಗಳು ಠಾಣೆಯೊಳಗೆ ಇದ್ದವು. ಆದರೆ, ಈಗ ಎಲ್ಲವೂ ಸುಟ್ಟು ಹೋಗಿವೆ. ಆದರೆ, ಇಲ್ಲಿಗೆ ದುಷ್ಕರ್ಮಿಗಳು ತಾವು ಪಾರಾಗಿದ್ದೇವೆ ಎಂದು ಭಾವಿಸಬಾರದು. ಯಾರೂ ಕೂಡ ಕಾನೂನಿನಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್ ಠಾಣೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 21 ಮಂದಿಯನ್ನು ಬಂಧಿಸಿದ್ದಾರೆ. ಘಟನೆಯ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಜಿಲ್ಲಾಡಳಿತ ಆದೇಶಿಸಿದೆ.

ಘಟನೆಯ ಹಿನ್ನೆಲೆ…

ಮೀನು ವ್ಯಾಪಾರಿಯೊಬ್ಬರು ಶುಕ್ರವಾರ(ಮೇ 20) ರಾತ್ರಿ ಶಿವಸಾಗರ್ ಎಂಬಲ್ಲಿಗೆ ತೆರಳುತ್ತಿದ್ದ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆ ವ್ಯಕ್ತಿಯೊಬ್ಬರು ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಉದ್ರಿಕ್ತರ ಗುಂಪೊಂದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿತು.

ಬಂಧಿತರನ್ನು ಬಿಡಿಸಿಕೊಂಡು ಬರಲೆಂದು ಪೊಲೀಸ್ ಠಾಣೆಗೆ ತೆರಳಿದ್ದಾಗ ಪೊಲೀಸರು 10,000 ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶನಿವಾರ ಬೆಳಿಗ್ಗೆ ಬಂಧಿತ ವ್ಯಕ್ತಿಯ ಪತ್ನಿ ಹಣ ತೆಗೆದುಕೊಂಡು ಠಾಣೆಗೆ ಹೋಗಿದ್ದರು. ಆದರೆ, ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ದೊರೆಯಿತು. ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದು ತಿಳಿಯಿತು. ಪೊಲೀಸರು ಹಲ್ಲೆ ಮಾಡಿ, ಚಿತ್ರಹಿಂಸೆ ನೀಡಿದ್ದರಿಂದಲೇ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *