- ಕೋವಿಡೋತ್ತರ ಅನಾರೋಗ್ಯದ ಕಾರಣಕ್ಕೆ ಬಹುಅಂಗಾಗ ವೈಫಲ್ಯಕ್ಕೆ ಒಳಗಾಗಿದ್ದ ತರುಣ್ ಗೊಗೋಯಿ
ಹೊಸದಿಲ್ಲಿ: ಕಾಂಗ್ರೆಸ್ ಹಿರಿಯ ನಾಯಕ ತರುಣ್ ಗೊಗೋಯಿ ಸೋಮವಾರ ನಿಧನರಾಗಿದ್ದಾರೆ. ಆರು ಬಾರಿ ಸಂಸದರಾಗಿದ್ದ ಅವರು 15 ವರ್ಷ ಅಸ್ಸಾಂ ಮುಖ್ಯಮಂತ್ರಿಯೂ ಆಗಿದ್ದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಬಹುಅಂಗಾಗ ವೈಫಲ್ಯಕ್ಕೆ ಒಳಗಾಗಿದ್ದ ತರುಣ್ ಗೊಗೋಯಿ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ನಿಧನರಾಗಿದ್ದಾರೆ ಎಂದು ರಾಜ್ಯ ಸಚಿವ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಸರಿ ಸುಮಾರು 50 ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದ ತರುಣ್ ಗೊಗೋಯಿ, ಕಾಂಗ್ರೆಸ್ ಪಕ್ಷದೊಳಗೆ ಹಲವು ಹುದ್ದೆಗಳನ್ನು ನಿಭಾಯಿಸಿದ್ದರು. ಜೊತೆಗೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿಯೂ ವಿವಿಧ ಜವಾಬ್ದಾರಿಗಳಿಗೆ ಹೆಗಲು ನೀಡಿದ್ದರು.
1936ರಲ್ಲಿ ಅಸ್ಸಾಂನ ಶಿವಸಾಗರ್ ಜಿಲ್ಲೆಯಲ್ಲಿರುವ ರಂಗಾಜನ್ ಚಹಾ ಎಸ್ಟೇಟ್‌ನಲ್ಲಿ (ಈಗ ಜೊರ್ಹಾಟ್ ಜಿಲ್ಲೆಯಲ್ಲಿದೆ) ತಾಯ್-ಅಹೋಮ್ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಡಾ.ಕಮಲೇಶ್ವರ್ ಗೊಗೋಯಿ ಚಹಾ ಎಸ್ಟೇಟ್‌ನಲ್ಲಿ ವೈದ್ಯರಾಗಿದ್ದರೆ, ತಾಯಿ ಉಷಾ ಗೊಗೋಯಿ ಕವಿತೆಗಳ ಸಂಗ್ರಹ ಹಿಯಾರ್ ಸಮಾಹರ್‌ಗಾಗಿ ಜನಪ್ರಿಯರಾಗಿದ್ದರು.
ಗುವಾಹಟಿ ವಿವಿಯಿಂದ ಕಾನೂನು ಪದವಿ ಪಡೆದ ಗೊಗೋಯಿ ನಂತರ ರಾಜಕೀಯದತ್ತ ಆಕರ್ಷಿತರಾಗಿ 1971ರಲ್ಲಿ ಮೊದಲ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಒಟ್ಟು ಆರು ಬಾರಿ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು. 1976ರಲ್ಲಿ ಎಐಸಿಸಿ ಜಂಟಿ ಕಾರ್ಯದರ್ಶಿ ಹುದ್ದೆಗೇರಿದ ಅವರು ಮುಂದೆ 1986ರಲ್ಲಿ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷರಾದರು. ಪಿವಿ ನರಸಿಂಹರಾವ್ ಸರಕಾರದಲ್ಲಿ ಕೇಂದ್ರ ಕ್ಯಾಬಿನೆಟ್ ದರ್ಜೆ ಸಚಿವರಾದ ಅವರು, ನಂತರ ರಾಜ್ಯ ರಾಜಕಾರಣಕ್ಕೆ ಮರಳಿದರು.
2001, 2006 ಮತ್ತು 2011ರಲ್ಲಿ ರಾಜ್ಯ ಕಾಂಗ್ರೆಸ್‌ನ್ನು ಅಧಿಕಾರದೆಡೆಗೆ ಕೊಂಡೊಯ್ದು ಸತತ ಮೂರು ಬಾರಿ ಅಸ್ಸಾಂನ ಮುಖ್ಯಮಂತ್ರಿಯಾಗಿದ್ದರು. ಈ ಮೂಲಕ ಸುದೀರ್ಘ ಕಾಲ ಅಸ್ಸಾಂನ ಮುಖ್ಯಮಂತ್ರಿಯಾದ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆಸಿಕೊಂಡರು. 2016ರಲ್ಲಿ ಬಿಜೆಪಿ ಮತ್ತು ಮೈತ್ರಿಪಕ್ಷಗಳು ರಾಜ್ಯದಲ್ಲಿ ಅಧಿಕಾರಕ್ಕೇರುವುದರೊಂದಿಗೆ ಅವರ ಗೆಲುವಿನ ಸರಪಣಿ ಅಂತ್ಯವಾಯಿತು.
ಕಳೆದ ಆಗಸ್ಟ್‌ನಲ್ಲಿ ಕೊರೊನಾ ಸೋಂಕಿತರಾಗಿದ್ದ ಗೊಗೋಯಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸೋಂಕಿನಿಂದ ಅವರು ಚೇತರಿಸಿಕೊಂಡಿದ್ದರು. ಬಳಿಕ ನವೆಂಬರ್ 2 ರಂದು ಕೋವಿಡೋತ್ತರ ಅನಾರೋಗ್ಯದ ಕಾರಣಕ್ಕೆ ಅವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶನಿವಾರ ಅವರ ಆರೋಗ್ಯ ಸ್ಥೀತಿ ಗಂಭೀರವಾಗಿತ್ತು. ಭಾನುವಾರ ಸ್ವಲ್ಪ ಮಟ್ಟಿಗೆ ಅವರ ಆರೋಗ್ಯ ಚೇತರಿಸಿಕೊಂಡಿತಾದರೂ, ಸೋಮವಾರದ ವೇಳೆಗೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ಅಪರಾಹ್ನ ತರುಣ್ ಗೊಗೋಯಿ ಇಹಲೋಕ ತ್ಯಜಿಸಿದರು.