ಅಸ್ಪೃಶ್ಯರ ಮೇಲೆ ಮೇಲ್ಜಾತಿಯವರ ದಬ್ಬಾಳಿಕೆ-ಯಜಮಾನಿಕೆ

ಡಾ. ಬಿ ಆರ್ ಅಂಬೇಡ್ಕರ 131ನೇ ಜಯಂತಿಯ ಶುಭಾಶಯಗಳನ್ನು ತಿಳಿಸುತ್ತಾ, ಪ್ರಸ್ತುತ ಜಾತಿ ದೌರ್ಜನ್ಯ ಹೆಚ್ಚಾಗುತ್ತಿರುವುದು ಮತ್ತು ಅದರೊಂದಿಗೆ ಮೌನಕ್ಕೆ ಶರಣಾಗಿರುವ ಮಾಧ್ಯಮಗಳ ಬಗ್ಗೆ ವಿಶ್ಲೇಷಿಸುತ್ತ, ಅಂಬೇಡ್ಕರ ವಿಚಾರವನ್ನು ಪರಿಚಸಿದ್ದಾರೆ ಡಾ. ಸದಾಶಿವ ಮರ್ಜಿ ಅವರು…..

ಹಿಂದೂ ಧರ್ಮದ ಹೆಸರಿನಲ್ಲಿಅಸ್ಪೃಶ್ಯರ ಮೇಲೆ ಹೇರಿರುವ ಯಜಮಾನಿಕೆ ಹಾಗೂ ಅಸಮಾನತೆ ಮತ್ತು ಅನ್ಯಾಯಗಳ ವಿರುದ್ಧ ದಮನಿತ ಅಸ್ಪೃಶ್ಯ ತಳ ಸಮುದಾಯಗಳು ಭಾರತದಾದ್ಯಂತ ಪ್ರತಿನಿತ್ಯ ಹೋರಾಡುತ್ತಲೇ ಇದ್ದಾರೆ.

ಹಿಂದೂಗಳು ಮತ್ತು ಅಸ್ಪೃಶ್ಯರ ನಡುವೆ ಪ್ರತಿ ಹಳ್ಳಿಯಲ್ಲಿ ದಿನನಿತ್ಯವೂ ನಿರಂತರ ಸಂಘರ್ಷ ನಡೆಯುತ್ತಲೇ ಇರುವದು. ಅದಕ್ಕೆ ಕೊನೆ ಎಂಬುದೇ ಇಲ್ಲ. ಹಿಂದೂ ಮಾಧ್ಯಮಗಳು ಇಂತಹ ಜಾತಿ ಸಂಘರ್ಷ ಮತ್ತು ತ್ವೇಷಮಯ ಪರಿಸ್ಥಿತಿಯನ್ನು ಬೆಳಕಿಗೆ ತರುವುದೇ ಇಲ್ಲ. ದೌರ್ಜನ್ಯಗಳು ಹಾಗೂ ಅವ್ಯಾಹತ ಹಲ್ಲೆಗಳು ದಲಿತರ ಮೇಲೆ ನಡೆಯುತ್ತಿದ್ದರೂ ಅವು ಪ್ರಸಾರಯೋಗ್ಯವೆಂದು ಹಿಂದೂ ಪತ್ರಿಕೆಗಳು ಭಾವಿಸಿಯೇ ಇಲ್ಲ. ಹೀಗಾಗಿ ದೇಶದಾದ್ಯಂತ ದಲಿತರ ಮೇಲೆ ಹೀನಾಯ ಪ್ರಕರಣಗಳು ಸಂಭವಿಸುತ್ತಿದ್ದರೂ ಮೇಲ್ಜಾತಿಗಳ ನಿಯಂತ್ರಣದಲ್ಲಿರುವ ಅವು ಯಾವುದೇ ಪ್ರಕರಣಗಳನ್ನು ಬೆಳಕಿಗೆ ತರಲು ಇಚ್ಚಿಸುವುದಿಲ್ಲವೆಂಬುದೇ ಕಳವಳಕಾರಿ ಸಂಗತಿಯಾಗಿದೆ.

ಇದನ್ನು ಓದಿ: ಹೊಸ ದಿಕ್ಕುಗಳ ಶೋಧದಲ್ಲಿ ಡಾ ಅಂಬೇಡ್ಕರರ ಹೆಜ್ಜೆಗಳು

ಪ್ರಸ್ತುತ ಭಾರತದ ಗ್ರಾಮಗಳಲ್ಲಿ ಸ್ಪೃಶ್ಯರು  ಮತ್ತು ಅಸ್ಪೃಶ್ಯರ ನಡುವೆ ಕಠೋರವಾದ ಜಾತಿ ಸಂಘರ್ಷ ಮತ್ತು ಗಲಭೆಗಳು ನಿರಂತರವಾಗಿ ನಡೆಯುತ್ತಲೇ ಇರುವದು ವಾಸ್ತವ ಸಂಗತಿ. ಗ್ರಾಮ ವ್ಯವಸ್ಥೆಯಲ್ಲಿ ಮುಕ್ತ ಮತ್ತು ಗೌರವಯುತ ಜೀವನಕ್ಕಾಗಿ ಅಸ್ಪೃಶ್ಯರು ನಡೆಸುವ ಹೋರಾಟಕ್ಕೆ ಸಾಕಷ್ಟು ಹಿನ್ನಡೆಯಾಗಿರುವದು. ಸಾಮಾಜಿಕವಾಗಿ ಬಲಿಷ್ಟವಾಗಿರುವ ಮತ್ತು ಆೃಭಿಕವಾಗಿ ಬಲಾಢ್ಯರಾಗಿರುವ ಹಾಗೂ ಸಂಖ್ಯಾ ಬಲದಲ್ಲಿ ಬಹುಸಂಖ್ಯಾತರಾಗಿರುವ ಮೇಲ್ಜಾತಿಗಳ ವಿರುದ್ಧ ಸಾಮಾಜಿಕವಾಗಿ ತುಚ್ಛೀಕರಿಸಲ್ಪಟ್ಟ ಹಾಗೂ ಅಸ್ಮಿತೆ ಇಲ್ಲದ ಮತ್ತು ಆರ್ಥಿಕವಾಗಿ ಬಡತನ, ಹಸಿವು, ಸಂಪನ್ಮೂಲಗಳಿಲ್ಲದ ಹಾಗೂ ಅಲ್ಪಸಂಖ್ಯಾಕರಾಗಿರುವ ಅಸ್ಪೃಶ್ಯರು ನಡೆಸುವ ಹೋರಾಟವಾಗಿದೆ. ಪೊಲೀಸ್‌ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮ ಹಿಡಿತ ಹೊಂದಿರುವ ಮೇಲ್ಜಾತಿಗಳಿಂದ ಅಸ್ಪೃಶ್ಯರು ನ್ಯಾಯ ನಿರೀಕ್ಷಿಸುವುದಾದರೂ ಹೇಗೆ? ಅವು ಬಲಾಢ್ಯರು, ಬಹುಸಂಖ್ಯಾತರು ಹಾಗೂ ಪ್ರಬಲ ಮೇಲ್ಜಾತಿಗಳ ಅಸ್ತ್ರಗಳಾಗಿವೆ.

ಅಂಬೇಡ್ಕರ ಪ್ರಕಾರ ಹಿಂದೂ ಧರ್ಮವು ವಾಸ್ತವಿಕ ಭಯಾನಕತೆಯ ಕೂಪ/ ಕೊಠಡಿಯಾಗಿದೆ (‘Hinduism is a veritable chamber of horrors’). ದಲಿತರ ಮೇಲೆ ನಿರಂತರ  ಅತ್ಯಾಚಾರ, ದೌರ್ಜನ್ಯ, ಕೊಲೆ, ಸುಲಿಗೆ, ಮಾನಭಂಗ, ಅಪಹರಣ, ಮಾನವ ಕಳ್ಳ ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿರುವದು ವಾಸ್ತವ ಸಂಗತಿ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋ (National Crime Records Bureau Report) ವರದಿಯ ಪ್ರಕಾರ

೧) ಪ್ರತಿ 16 ನಿಮಿಷಗಳಿಗೊಂದು ಅಸ್ಪೃಶ್ಯರ ವಿರುದ್ಧ ಸವರ್ಣೀಯ ಅಪರಾಧವೆಸಲಾಗುತ್ತಿದೆ.

೨) ಪ್ರತಿ ದಿನ ನಾಲ್ಕಕ್ಕಿಂತ ಹೆಚ್ಚು ದಲಿತ ಹೆಣ್ಣು ಮಕ್ಕಳ ಮೇಲೆ ಸ್ಪೃಶ್ಯ ಮೇಲ್ಜಾತಿಗಳು ಸಾಮೂಹಿಕ         ಅತ್ಯಾಚಾರವೆಸಗುವರು.

೩) ಪ್ರತಿವಾರ ೧೩ ಜನ ದಲಿತರನ್ನು ಹತ್ಯೆಗೈಯ್ಯಲಾಗುತ್ತಿದೆ ಮತ್ತು ಆರು ಜನ ದಲಿತರನ್ನು ಅಪಹರಣ ಮಾಡಲಾಗುತ್ತಿದೆ.

೪) ೨೦೧೨ರಲ್ಲಿ ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಭವಿಸಿದ ವರ್ಷವೇ 1574 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಸಂಭವಿಸಿವೆ (ಕೇವಲ ಶೇ. 10ರಷ್ಟು ವರದಿಯಾಗಿವೆ) ಮತ್ತು 651 ಜನ ದಲಿತರು ಕೊಲೆಗೈಯ್ಯಲ್ಪಟ್ಟಿರುವರು.

ಈ ಮೇಲ್ಕಂಡ ಎಲ್ಲ ಪ್ರಕರಣಗಳು ಕೇವಲ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ್ದು ಇವುಗಳನ್ನು ಹೊರತುಪಡಿಸಿ

೧) ದಲಿತರನ್ನು ವಿವಸ್ತ್ರಗೊಳಿಸಿ / ತಲೆ ಬೊಳಿಸಿ / ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣಗಳು,

೨) ಅಮೇಧ್ಯ(ಮಲ)ವನ್ನು ಒತ್ತಾಯಪೂರ್ವಕವಾಗಿ ದಲಿತರಿಗೆ ತಿನಿಸಿದ ಪ್ರಕರಣಗಳು,

೩) ದಲಿತರ ಭೂಮಿಯನ್ನು ವಶಪಡಿಸಿಕೊಂಡು ಅವರನ್ನು ಒಕ್ಕಲೆಬ್ಬಿಸುವದು,

೪) ಸಾಮಾಜಿಕ ಬಹಿಷ್ಕಾರದ ಪ್ರಕರಣಗಳು, ಹಾಗೂ

೫) ಕುಡಿಯುವ ನೀರಿನ ಮೂಲಗಳನ್ನು ಮುಕ್ತವಾಗಿ ಬಳಸದಂತೆ ನಿರ್ಬಂಧ ಹೇರುವದು ಮತ್ತು ದಲಿತರು ನೀರನ್ನು ಮುಕ್ತವಾಗಿ ಪಡೆಯಲು ಅಡ್ಡಿಪಡಿಸುವಂತಹ ಪ್ರಕರಣಗಳು ಸಂಭವಿಸಿವೆ.

ಇದಲ್ಲದೇ ಮಜಾಬಿ ದಲಿತ ಸಿಖ್ಖ್ ಸಮುದಾಯದ ಭಂತಸಿಂಗ್ (2005) ರಲ್ಲಿ ತಮ್ಮ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ / ದೌರ್ಜನ್ಯ ನಡೆಸಿದವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿದ್ದಕ್ಕೆ ಆತನ ಕೈ ಕಾಲುಗಳನ್ನು ಕತ್ತರಿಸಿ ಹಾಕಲಾಯಿತು.

ಮೂಲಭೂತ ಹಕ್ಕುಗಳನ್ನು ದಮನಿತ  ಅಸ್ಪೃಶ್ಯ ತಳ ಸಮುದಾಯಳಿಗೆ ಕೊಡುವ ಸಂಬಂಧ ಹಿಂದೂ ಸಮುದಾಯವು  ವಿರೋಧ ವ್ಯಕ್ತಪಡಿಸುವುದನ್ನು ಯಾವ ಕಾನೂನು, ಸಂಸತ್ತು, ನ್ಯಾಯಾಂಗಗಳು ಅವುಗಳನ್ನು ದಲಿತರಿಗೆ ಖಾತ್ರಿಪಡಿಸುವ ಸ್ಥಿತಿಯಲ್ಲಿಲ್ಲ ಎಂದು ಡಾ. ಅಂಬೇಡ್ಕರ ನಾಗರಿಕ ಸಮಾಜದ ನಿಷ್ಕ್ರಿಯತೆಯನ್ನು ವಿಶ್ಲೇಷಿಸಿದ್ದಾರೆ.

ಕೊನೆಯ ಪಂಚ್ – ಡಾ. ಅಂಬೇಡ್ಕರ ಹೇಳುತ್ತಾರೆ:

ಪ್ರಜಾಪ್ರಭುತ್ವ ತಮಗೆ ನೀಡಿದ ಹಕ್ಕುಗಳನ್ನು ದೇಶದ ಜನತೆ ಯಾವ ಕಾರಣಕ್ಕೂ ಒಬ್ಬ ವ್ಯಕ್ತಿಗೆ ನೀಡಕೂಡದು. ಆ ವ್ಯಕ್ಕಿಯ ಬಗೆಗೆ ನಮಗೆಷ್ಟೇ ಗೌರವವಿಲಿ, ನಮ್ಮ ಸಂವಿಧಾನದ ಹಕ್ಕುಗಳನ್ನು ಅವರ ಪಾದದಡಿಯಲ್ಲಿ ಅರ್ಪಿಸಬಾರದು. ಗೌರವ ಮತ್ತು ನಂಬಿಕೆ ಬೇರೆ ಬೇರೆ. ಕೃತಜ್ಞತೆ , ಗುಲಾಮಗಿರಿ ಬೇರೆ ಬೇರೆ. ರಾಜಕೀಯದಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿರಕೂಡದು. ಅದು ಬಂದದ್ದೆೇ ಆದಲ್ಲಿ ಪ್ರಜಾಪ್ರಭುತ್ವ ಅಥ೯ಹೀನವಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *