ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡ್ತಿರೋ ಶ್ರೀಲಂಕಾ ಪ್ರತಿಭಟನೆಯ ಕಿಚ್ಚಲ್ಲಿ ಬೇಯುತ್ತಿದೆ. ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತೆ ಪ್ರತಿಭಟನೆಗಳು ಜೋರಾಗಿವೆ. ಸರಕಾರದ ನಿಷ್ಠಾವಂತರು ಮತ್ತು ಸರ್ಕಾರ ವಿರೋಧಿ ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಆಡಳಿತ ಪಕ್ಷದ ಸಂಸದರೊಬ್ಬರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದು ಆಸ್ಪತ್ರೆ ಸೇರಿದ್ದಾರೆ.
ಈ ಘರ್ಷಣೆಯಲ್ಲಿ 130ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕೊಲೊಂಬೊ-ಕಾಂಡಿ ಹೆದ್ದಾರಿಯಲ್ಲಿರುವ ನಿಟ್ಟಂಬುವಾ ಪಟ್ಟಣದಲ್ಲಿ ತನ್ನ ಕಾರನ್ನು ತಡೆ ಹಿಡಿದ ಪ್ರತಿಭಟನಕಾರರ ಮೇಲೆ ಅತುಕೊರಾಲಾ ಗುಂಡು ಹಾರಿಸಿದ್ದರು. ಇದರ ಪರಿಣಾಮ ಇಬ್ಬರು ಗಾಯಗೊಂಡಿದ್ದರು. ಬಳಿಕ ಅತುಕೊರಾಲಾ ಸಮೀಪದ ಕಟ್ಟಡದಲ್ಲಿ ಆಶ್ರಯ ಪಡೆದುಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಅವರು ಶವವಾಗಿ ಪತ್ತೆಯಾಗಿದ್ದಾರೆ. ಅಲ್ಲಿ ಅವರು ಸ್ವಯಂ ಆಗಿ ಗುಂಡು ಹಾರಿಸಿಕೊಂಡು ಸತ್ತರೆಂದು ಘಟನೆ ವೇಳೆ ಇದ್ದವರು ಮಾಹಿತಿ ನೀಡಿದ್ಧಾರೆ. ಸ್ಥಳದಲ್ಲಿ ಸಂಸದನ ಜೊತೆ ಅವರ ಭದ್ರತಾ ಅಧಿಕಾರಿಯೂ ಸಾವನ್ನಪ್ಪಿರುವುದು ಕಂಡುಬಂದಿದೆ.
ಶ್ರೀಲಂಕಾದ ವಿವಿಧೆಡೆ ಪ್ರತಿಭಟನಾಕಾರರು ಸಂಸದರ ಮನೆಗಳ ಮೇಲೆ ದಾಳಿ ಮಾಡಿದ ಘಟನೆ ತಲ್ಲಣಗೊಳಿಸಿದೆ. ಹಂಬನ್‌ತೋಟಾ ಜಿಲ್ಲೆಯಲ್ಲಿರುವ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಕುಟುಂಬದಕ್ಕೆ ಸೇರಿದ ಪೂರ್ವಿಕರ ಮನೆಗೆ ಜನರು ಬೆಂಕಿ ಇಟ್ಟಿದ್ಧಾರೆ. ರಾಜಪಕ್ಸೆ ಮಾತ್ರವಲ್ಲ ಅನೇಕ ಸಂಸದರ ಮನೆಗಳ ಮೇಲೂ ಜನರ ದಾಳಿಯಾಗಿದೆ. ಸನತ್ ನಿಶಾಂತ, ರಮೇಶ್ ಪದಿರಾನ, ಮಹಿಪಾಲ ಹೇರಾತ್, ತಿಸ್ಸಾ ಕುಟ್ಟಿಯಾರಾಚ್ಚಿ, ನಿಮಲ್ ಲಂಜಾ, ಬಂಡುಲ ಗುಣವರ್ದನ, ಪ್ರಸನ್ನ ರಣತುಂಗ, ಚನ್ನ ಜಯಸುಮನ, ಕೋಕಿಲ ಗುಣವರ್ದನ, ಅರುಂದಿಕಾ ಫರ್ನಾಂಡೋ, ಪವಿತ್ರ ವಣ್ಣಿಯಾರಚಿ ಮೊದಲಾದ ಸಂಸದರ ಮನೆಗಳನ್ನು ಪ್ರತಿಭಟನಾಕಾರರು ಗುರಿಯಾಗಿಸಿ ಬೆಂಕಿ ಇಟ್ಟರೆನ್ನಲಾಗಿದೆ.
ಸರ್ವಪಕ್ಷ ಸರಕಾರ ರಚನೆಗೆ ಮನವಿ : ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ದೇಶಕ್ಕೆ ಮಾರ್ಗದರ್ಶನ ಮಾಡಲು ನೀವು ಸರ್ವಪಕ್ಷ ಸರ್ಕಾರವನ್ನು ನೇಮಿಸಲು ಸಾಧ್ಯವಾಗುವಂತೆ ನಾನು ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಮಹಿಂದಾ ರಾಜಪಕ್ಸೆ ತಿಳಿಸಿದ್ದಾರೆ.
ಈಗ ಸಚಿವ ಸಂಪುಟ ವಿಸರ್ಜನೆಯಾಗಿದೆ. ರಾಜಪಕ್ಸೆ ವಂಶದ ಸದಸ್ಯರ ನೇತೃತ್ವದ ಯಾವುದೇ ಸರ್ಕಾರವನ್ನು ಸೇರಲು ಅತಿದೊಡ್ಡ ವಿರೋಧ ಪಕ್ಷ ನಿರಾಕರಿಸಿದೆ.
ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ಬಿಕ್ಕಟ್ಟಿನ ನಂತರ ದೊಡ್ಡ ಘರ್ಷಣೆಗಳು ಜರುಗಿತ್ತು ದೇಶ ಸಂಕಷ್ಟಕ್ಕೆ ಸಿಲುಕಿದೆ. ಶ್ರೀಲಂಕಾದಲ್ಲಿ ಆಡಳಿತ ಪಕ್ಷದ ಸಂಸದರೊಬ್ಬರನ್ನು ನಾಗರಿಕರು ಥಳಿಸಿ ಕೊಂದಿರುವ ಘಟನೆ ವಿಶ್ವ ವೇದಿಕೆಯಲ್ಲಿ ಭಾರೀ ಸಂಚಲನ ಮೂಡಿಸಿದೆ.