– ಮೂಲ ಬಿಜೆಪಿಗರಿಗೆ ಮಂತ್ರಿ ಸ್ಥಾನ ನೀಡಲಿ
ಮಡಕೇರಿ: ನಮ್ಮ ಬಿಜೆಪಿ ಸರ್ಕಾರ ರಚನೆಯಾದಾಗಲೆಲ್ಲಾ ಅವರೇ ಮಂತ್ರಿಗಳಾಗಿದ್ದಾರೆ. ಜೊತೆಗೆ ಕೆಲಸ ಮಾಡದ ಅಶಕ್ತ ಸಚಿವರು ಇದ್ದಾರೆ. ಅಂತಹವರನ್ನು ಕೈಬಿಟ್ಟು ನಮಗೆ ಸಚಿವ ಸ್ಥಾನ ಕೊಡಲಿ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು ನಾಲ್ಕೈದು ಬಾರಿ ಸಚಿವರಾದವರೇ ಮತ್ತೆ ಮತ್ತೆ ಸಚಿವರಾಗಿದ್ದಾರೆ. ಈಗಿರುವ ಕ್ಯಾಬಿನೆಟ್ ನಲ್ಲಿ ಸರಿಯಾದ ಕರ್ತವ್ಯ ನಿರ್ವಹಿಸದ ಸಚಿವರು ಇದ್ದಾರೆ. ಅಂತವರನ್ನು ಕೈಬಿಡಲಿ. ಉಮೇಶ್ ಕತ್ತಿ ಸೇರಿದಂತೆ ನಾನೂ ಕೂಡ ಐದು ಬಾರಿ ಶಾಸಕರಾಗಿ ಗೆದ್ದಿದ್ದೇವೆ. ನಮಗೂ ಸಚಿವ ಸ್ಥಾನ ನೀಡಲಿ ಎಂದು ಒತ್ತಾಯಿಸಿದ್ದಾರೆ.
ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ಕೊಡಬೇಕೆಂಬುದು ನಮ್ಮೆಲ್ಲರ ಆಗ್ರಹ. ಪಕ್ಷವೂ ಕೂಡ ಪಕ್ಷದ ಹಿರಿಯ ಶಾಸಕರಿಗೆ ಮತ್ತು ಮೂಲ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕೆಂಬ ಅಭಿಪ್ರಾಯ ಹೊಂದಿದೆ. ಹೈಕಮಾಂಡ್ ಕೂಡ ಇದೇ ಅಭಿಪ್ರಾಯ ಹೊಂದಿರುವುದರಿಂದ ಸಚಿವ ಸ್ಥಾನ ಸಿಗುತ್ತದೆ ಎನ್ನೋ ನಂಬಿಕೆ ಇದೆ ಎಂದು ಅಭಿಪ್ರಾಯಿಸಿದ್ದಾರೆ.
ರಾಜ್ಯ ಮುಖಂಡರು ಸಚಿವ ಸ್ಥಾನಕ್ಕೆ ಮಾಡುವ ಪಟ್ಟಿಯನ್ನು ಹೈಕಮಾಂಡ್ ಪರಿಗಣಿಸುವುದಿಲ್ಲ. ಈಗಾಗಲೇ ಹಲವು ಚುನಾವಣೆಗಳಲ್ಲಿ ಟಿಕೆಟ್ ನೀಡಿರುವುದನ್ನು ನೀವು ಗಮನಿಸಿದರೆ ಅದೆಲ್ಲವೂ ಗೊತ್ತಾಗುತ್ತದೆ. ಹೀಗಾಗಿ ಹೈಕಮಾಂಡ್ ಮೂಲ ಬಿಜೆಪಿ ಶಾಸಕರನ್ನು ಕೈಬಿಡದೆ ಪರಿಗಣಿಸುತ್ತದೆ ಎನ್ನೋ ಸಂಪೂರ್ಣ ವಿಶ್ವಾಸ ನನಗೆ ಇದೆ ಎಂದಿದ್ದಾರೆ.
ಇನ್ನು ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯೋ ಎನ್ನೋದು ಹೈಕಮಾಂಡ್ ನಿರ್ಧಾರ ಮಾಡಲಿದೆ. ಆದರೆ ವಿಸ್ತರಣೆ ಮಾಡಿದರೂ ಸರಿ, ಪುನರ್ ರಚನೆ ಮಾಡಿದರೂ ಸರಿ ಮೂಲ ಮತ್ತು ಹಿರಿಯ ಬಿಜೆಪಿ ಶಾಸಕರನ್ನು ಪಕ್ಷವು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಮರಾಠ ಅಭಿವೃದ್ಧಿ ನಿಗಮ ರಚನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಶಾಸಕ ಅಪ್ಪಚ್ಚು ರಂಜನ್, ಎಲ್ಲಾ ಸಮುದಾಯಗಳಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಹಾಗೆಂದು ಜಾತಿಗೊಂದು ನಿಗಮ ಮಾಡುವುದಕ್ಕಿಂತ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗಾಗಿ ಅಭಿವೃದ್ಧಿ ನಿಗಮ ಮಾಡುವುದು ಒಳಿತು. ಆ ಮೂಲಕ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ನಿಗಮಗಳು ಸ್ಥಾಪನೆಯಾಗುವುದು ಒಳ್ಳೆಯದು ಎಂದಿದ್ದಾರೆ.