ವಿಜಯಪುರ: ತಮ್ಮದೇ ತಾಂಡದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಚುಡಾಯಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಜಯಪುರ ತಾಲ್ಲೂಕಿನ ಹೆಗಡಿಹಾಳ ತಾಂಡಾದ ಗ್ರಾಮಸ್ಥರು ಯುವಕರಿಬ್ಬರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಶಿಕ್ಷೆ ವಿಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಮಂದಿ ಗ್ರಾಮಸ್ಥರನ್ನು ಬಂಧಿಸಿದ್ದಾರೆ.
ದುಡಿಮೆ ಮಾಡಲು ಮಹಾರಾಷ್ಟ್ರಕ್ಕೆ ತೆರಳಿದ್ದ ವೇಳೆ ತಮ್ಮದೇ ತಾಂಡಾದ ಮಹಿಳೆಯೊಂದಿಗೆ ಯುವಕರು ಅಸಭ್ಯವಾಗಿ ನಡೆದುಕೊಂಡಿರುವ ವಿಷಯವನ್ನು ಮಹಿಳೆ ತಮ್ಮ ಹೆಗಡಿಹಾಳ ತಾಂಡಾದ ಜನರೊಂದಿಗೆ ಹೇಳಿಕೊಂಡಿದ್ದಾಳೆ. ಈ ಸಂಬಂಧ ಗ್ರಾಮದ ಹಿರಿಯರು ಆ ಇಬ್ಬರು ಯುವಕರನ್ನು ಮಹಾರಾಷ್ಟ್ರದಿಂದ ಹೆಗಡಿಹಾಳ ತಾಂಡಾಕ್ಕೆ ಕರೆಯಿಸಿಕೊಂಡು ಪಂಚಾಯಿತಿ ನಡೆಸಿದ್ದಾರೆ ಹಾಗೂ ಇಬ್ಬರಿಗೂ ತಲೆ ಬೋಳಿಸಿ, ಚಪ್ಪಲಿ ಹಾಕಿ ಮೆರವಣಿಗೆ ನಡೆಸಿದ್ದಾರೆ.
ಇದನ್ನು ಓದಿ: ಗದಗದಲ್ಲಿ ದಲಿತ ಕುಟುಂಬಗಳಿಗೆ ಬಹಿಷ್ಕಾರ; ದೇವಸ್ಥಾನ ಪ್ರವೇಶವಿಲ್ಲ, ಹೋಟೆಲು ಕಿರಾಣಿಗೂ ಹೋಗುವಂತಿಲ್ಲ
ಏಳು ಮಂದಿ ಬಂಧಿಸಿದ ಪೊಲೀಸರು;
ಯುವಕರ ವಿರುದ್ಧ ಕೈಗೊಂಡ ಕ್ರಮ ಕಾಡ್ಗಿಚ್ಚಿನಂತೆ ಹರಡಿತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಜಯಪುರ ಗ್ರಾಮೀಣ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದರು ಮತ್ತು ಏಳು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ವಿವರ: ಮಹಿಳೆಯನ್ನು ಚುಡಾಯಿಸಿ, ಅಸಭ್ಯವಾಗಿ ವರ್ತಿಸಿದರೆಂದು ಲಂಬಾಣಿ ಸಮುದಾಯದ ಮುಖಂಡರು ಅವಳಿ ಸಹೋದರರಿಬ್ಬರ ತಲೆಕೂದಲು ಬೋಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಘಟನೆ ವಿಜಯಪುರ ತಾಲೂಕಿನ ಹೆಗಡಿಹಾಳ ಲಂಬಾಣಿ ತಾಂಡಾದಲ್ಲಿ ನಿನ್ನೆ ನಡೆದಿತ್ತು. ಘಟನೆ ವಿಡಿಯೋಗಳು ವೈರಲ್ ಆಗಿದ್ದವು. ತಾಂಡಾದ ಸಹೋದರರಿಗೆ ಸಮುದಾಯವ ಮುಖಂಡರು ಈ ರೀತಿಯ ಶಿಕ್ಷೆ ನೀಡಿದ್ದಾರೆ ಎನ್ನಲಾಗಿತ್ತು.
ಯುವಕರಿಬ್ಬರು ದುಡಿಮೆಯ ಸಲುವಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದರು. ಅಲ್ಲಿಗೆ ಮಹಿಳೆಯೂ ಸಹ ಕುಟುಂಬ ಸಮೇತ ದುಡಿಮೆ ಮಾಡಲು ತೆರಳಿದ್ದ ಈ ಸಂದರ್ಭದಲ್ಲಿ ಯುವಕರು ಆಕೆಯನ್ನು ಚುಡಾಯಿಸಿ, ಅಸಭ್ಯ ವರ್ತನೆ ತೋರಿದ್ದಾರೆ.
ಲಂಬಾಣಿ ಸಮುದಾಯದಲ್ಲಿ ಕೆಲವು ಕಟ್ಟುಪಾಡುಗಳಿವೆ. ಹಿರಿಯರು ನೀಡುವ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಮಹಿಳೆಯನ್ನು ಚುಡಾಯಿಸಿ ತಮ್ಮ ಸಮುದಾಯದ ಕಟ್ಟುಪಾಡು ಮೀರಿದ್ದಾರೆ ಎಂದು ಲಂಬಾಣಿ ಸಮುದಾಯದ ಹಿರಿಯರು ಪಂಚಾಯಿತಿ ಸೇರಿಸಿದ್ದರು. ಅಲ್ಲದೇ ಯುವಕರ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ.