ಬೆಂಗಳೂರು ಜ 5 : ಆರ್ಥಿಕ ಸಂಕಷ್ಟದ ನೆಪವನ್ನು ನೀಡಿ ವೇತನ ನೀಡದೆ ಬಿಎಂಟಿಸಿ ಇಲಾಖೆಯು ತನ್ನ ನೌಕರರು ದೀಪಾವಳಿಯನ್ನು ಕತ್ತಲೆಯಲ್ಲಿ ಆಚರಿಸುವಂತೆ ಮಾಡಿತ್ತು. ಬಿಎಂಟಿಸಿ ನಿಲುವನ್ನು ವಿರೋಧಿಸಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಅವರ ಬೇಡಿಕೆ ಈಡೇರಿಸುವ ವೇಳಿಯಲ್ಲೂ ಬಿಎಂಟಿಸಿ ಆರ್ಥಿಕ ಸಂಕಷ್ಟದ ನೆಪವನ್ನು ಮುಂದೆ ಮಾಡಿತ್ತು.
ಪ್ರತಿ ತಿಂಗಳು ಸಂಬಳದ ದುಡ್ಡಿಗಾಗಿ ಸರ್ಕಾರದ ಮುಂದೆ ಅಂಗಲಾಚ್ತಿದ್ದ ಬಿಎಂಟಿಸಿ ಇಲಾಖೆ ಆರ್ಥಿಕ ಸಂಕಷ್ಟದಲ್ಲಿ 643 ಹೊಸ ಬಸ್ ಖರೀದಿಗೆ ಮುಂದಾಗಿದೆ. “ನಾನ್ ಎಸಿ ಭಾರತ್ 6 ಬಸ್” ಖರೀದಿಗೆ BMTC ಟೆಂಡರ್ ಕರೆದಿದೆ. ಈಗಾಗಲೆ ಎಸಿ ಬಸ್ ಗಳನ್ನು ಓಡಾಡಿಸಲಾಗದೆ, ನಿರ್ವಹಣೆಗಾಗಿ ಕೋಟ್ಯಾಂತರ ರೂ ಹಣದ ಲೆಕ್ಕವನ್ನು ತೋರಿಸಿದ್ದ ಬಿಎಂಟಿಸಿ ಈಗ ಬಸ್ ಖರೀದಿಗೆ 230 ಕೋಟಿ ರೂ ಸಾಲಪಡೆಯಲು ಮುಂದಾಗಿರುವುದು ಹಲವಾರು ಅನುಮಾನಗಳು ಮೂಡಿಸುತ್ತಿದೆ.
ಬಿಎಂಟಿಸಿಯಲ್ಲಿ 6500 ಬಸ್ ಗಳಿವೆ ಪ್ರತಿನಿತ್ಯ 4000 ಬಸ್ ಗಳು ಮಾತ್ರ ರಸ್ತೆಗೆ ಇಳಿಯುತ್ತವೆ. ಇರೋ ಬಸ್ಸುಗಳನ್ನು ಓಡಿಸಲು ರೂಟುಗಳು ಇಲ್ಲದಿರುವ ಹೊತ್ತಲ್ಲಿ ಹೊಸ ಬಸ್ ಖರೀದಿಗೆ ಮುಂದಾಗಿರುವ ಇಲಾಖೆಯ ನಡೆಗೆ ನೌಕರರು ಆಕ್ರೋಶಗೊಂಡಿದ್ದಾರೆ. ಹೆಚ್ಚೆಚ್ಚು ಜನ ಓಡಾಡುತ್ತಿದ್ದರೂ ಬಿಎಂಟಿಸಿ ಬಸ್ ಗಳು ಹೆಚ್ಚಾಗಿ ಓಡಾಡುತ್ತಿಲ್ಲ. ಅನೇಕ ರೂಟ್ ಗಳನ್ನು ಕ್ಯಾನ್ಸಲ್ ಮಾಡಿ ಖಾಲಿ ಬಸ್ ಗಳನ್ನು ಡಿಪೋದಲ್ಲಿ ನಿಲ್ಲಿಸಿದ್ದನ್ನು ನಾವೆ ನೋಡಿದ್ದೇವೆ. ಆ ಸಾಲಿಗೆ ಈ ಬಸ್ ಗಳು ನಿಲ್ಲುತ್ತವೆ. ಇದರ ಹೊರೆಯನ್ನು ಕೊನೆಗೆ ಟಿಕೆಟ್ ದರ ಹೆಚ್ಚಿಸಿ ನಮ್ಮ ಮೇಲೆ ಹಾಕುತ್ತಾರೆ ಎಂದು ಇಂದಿರಾನಗರದ ಪ್ರಯಾಣಿಕ ಕುಮಾರ ಹೊಸಳ್ಳಿ ದೂರಿದ್ದಾರೆ.