ಬೆಂಗಳೂರು: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ನಲ್ಲಿ ಶಾಂತಿ ನೆಲೆಸಬೇಕು ಎಂದು ಆಗ್ರಹಿಸಿ ಎಡಪಕ್ಷಗಳ ಕಾರ್ಯಕರ್ತರು ನಗರದ ಫ್ರೀಡಂ ಪಾರ್ಕ್ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ನೂರಾರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದು ಆಡುಗೋಡಿ ಪೊಲೀಸ್ ಠಾಣೆಯ ಬಯಲು ಜಾಗದಲ್ಲಿ ಇರಿಸಿದ್ದಾರೆ ಎಂದು ವರದಿಯಾಗಿದೆ.
“ಯುದ್ದ ಬೇಡ, ಶಾಂತಿ ಬೇಕು” ಎಂಬ ಘೋಷವಾಕ್ಯದೊಂದಿಗೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ನಲ್ಲಿ ಶಾಂತಿ ನೆಲೆಸಲಿ ಎಂಬ ಆಗ್ರಹದೊಂದಿಗೆ ಸಿಪಿಐಎಂ, ಸಿಪಿಐ, ಸಿಪಿಐಎಂಎಲ್ ಸೇರಿದಂತೆ ಎಡಪಕ್ಷಗಳ ಕಾರ್ಯಕರ್ತರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದವು. ಆದರೆ ಪ್ರತಿಭಟನೆ ಪ್ರಾರಂಭವಾಗುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಗಾಜಾ ಬೆಂಬಲಿಸಿ 10 ಸಾವಿರ ಯಹೂದಿಗಳ ರ್ಯಾಲಿ | ಅಮೆರಿಕ – ಇಸ್ರೇಲ್ ವಿರುದ್ಧ ಆಕ್ರೋಶ; ಬಂಧನ
ಈ ವೇಳೆ ಪ್ರತಿಭಟನಾಕಾರರು ಬಂಧನದ ಜಾಗದಲ್ಲೂ ಯುದ್ಧ ವಿರೋಧಿ ಕವಿತೆಗಳ ಮೂಲಕ ಆಕ್ರೋಶ ಹೊರಹಾಕಿದ್ದು, ಇಸ್ರೇಲ್ ಮತ್ತು ಪ್ಯಾಲಿಸ್ತೀನ್ನಲ್ಲಿ ಶಾಂತಿ ನೆಲಸಲಿ ಎಂದು ಆಗ್ರಹಿಸಿದರು. ಪ್ರತಿಭಟನಾಕಾರರನ್ನು ಆಡುಗೋಡಿ ಪೊಲೀಸ್ ಠಾಣೆಯ ಬಯಲು ಜಾಗದಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.
ಪ್ರತಿಭಟನೆಯಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್, ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐಎಂಎಲ್ ಮುಖಂಡ ಅಪ್ಪಣ್ಣ ಹಾಗೂ ಎಡಪಕ್ಷಗಳ ನಾಯಕರಾದ ಪ್ರತಾಪಸಿಂಹ, ಮಂಜುನಾಥ್, ದೇವಿ, ಕೆ. ಮಹಾಂತೇಶ್ ಹುಳ್ಳಿ ಉಮೇಶ್, ನವೀನ್ ಕುಮಾರ್, ಪ್ರಭಾ ಬೆಳವಂಗಲ, ಭೀಮನಗೌಡ ಸೇರಿದಂತೆ ನೂರಾರು ಜನರಿದ್ದರು.
ವಿಡಿಯೊ ನೋಡಿ: “ಇಸ್ರೇಲ್ ಪ್ಯಾಲಿಸ್ಟೈನ್ ಯುದ್ಧ”ದ ಹಿನ್ನೆಲೆ ಏನು? Janashakthi Media