ಬೆಂಗಳೂರು : ಪ್ರಜ್ವಲ್ ರೇವಣ್ಣ ಮತ್ತು ಎಚ್ ಡಿ ರೇವಣ್ಣ ಅವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ʼನಾವೆದ್ದು ನಿಲ್ಲದಿದ್ದರೆ, ಕರ್ನಾಟಕʼ ನೇತೃತ್ವದಲ್ಲಿ ಹಲವು ಪ್ರಗತಿಪರ ಚಿಂತಕರು, ಹೋರಾಟಗಾರರು, ಮಹಿಳಾ ಸಂಘಟನೆಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ
ಲೈಂಗಿಕವಾಗಿ ನೂರಾರು ಮಹಿಳೆಯರನ್ನು ಬಳಸಿಕೊಂಡು ವಿಡಿಯೊ ಮಾಡಿದ್ದು ಅಕ್ಷಮ್ಯ ಅಪರಾಧ, ಅಷ್ಟೇ ಅಲ್ಲ ಅಂತಹ ಅಶ್ಲೀಲ ವಿಡಿಯೊ, ಚಿತ್ರಗಳು ಬಹಿರಂಗಗೊಂಡು ಮಹಿಳೆಯರ ಘನತೆಗೆ ಧಕ್ಕೆಯಾಗಿದೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.
“ಹೊಳೆನರಸೀಪುರದ ದೂರಿಗೆ ಸಂಬಂಧಿಸಿದಂತೆ ಎ 1 ಆರೋಪಿ ಎಚ್ ಡಿ ರೇವಣ್ಣ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿನ ಅರ್ಜಿ ವಾಪಸ್ ತೆಗೆದುಕೊಳ್ಳಲು ಕಾರಣವಾಗಿದ್ದು ಆತನನ್ನು ಬಂಧಿಸುವುದಿಲ್ಲ ಎಂದು ಕೋರ್ಟ್‌ಗೆ ಸರ್ಕಾರ ತಿಳಿಸಿದೆ. ಇದು ಅಕ್ಷಮ್ಯ, ಗಂಭೀರವಲ್ಲದ ಕಲಂನಡಿ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಸರ್ಕಾರ ರಕ್ಷಿಸುತ್ತಿದೆ” ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ. ಎಸ್. ವಿಮಲಾ ಆರೋಪಿಸಿದರು.
ಇದನ್ನು ಓದಿ : ಚಿಕ್ಕೋಡಿ ಲೋಕಸಭಾ ಕ್ಷೇತ್ರ-2024; ಜೊಲ್ಲೆ ಮತ್ತು ಜಾರಕಿಹೊಳಿ ಕುಟುಂಬದ ನಡುವೆ ಫೈಟ್
ಪ್ರತಿಭಟನೆ ಉದ್ದೇಶಿಸಿ ಹಿರಿಯ ಪತ್ರಕರ್ತೆ ಎಸ್ ಸತ್ಯಾ ಮಾತನಾಡಿ, ಎಚ್ ಡಿ ದೇವೇಗೌಡ ಕುಟುಂಬದ ಪಾಳೆಗಾರಿ ಮನಸ್ಥಿತಿಯೇ, ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಈ ರೀತಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲು ಕಾರಣ. ಪ್ರಜ್ವಲ್ ಸಂಸದ, ತಂದೆ ಶಾಸಕ, ಸಹೋದರ ಎಂಎಲ್‌ಸಿ, ತಾತ ಮಾಜಿ ಪ್ರಧಾನಿ, ಚಿಕ್ಕಪ್ಪ ಮಾಜಿ ಮುಖ್ಯಮಂತ್ರಿ. ಇಷ್ಟೆಲ್ಲ ಅಧಿಕಾರ ತಮ್ಮ ಬಳಿ ಇರುವ ಕಾರಣ ಏನೇ ಮಾಡಿದರು ನಡೆಯುತ್ತದೆ ಎಂಬ ದರ್ಪದಿಂದ ಇಂತಹ ದುಶ್ಕೃತ್ಯಗಳನ್ನು ನಡೆಸಿದ್ದಾರೆ. ಈ ಪ್ರಕರಣದಲ್ಲಿ ಹಲವು ಮಹಿಳೆಯರ ವೀಡಿಯೋಗಳು ಸಾರ್ವಜನಿಕರಿಗೆ ಸಿಕ್ಕಿರುವುದು ಗಂಭೀರ ಲೋಪವನ್ನು ತೋರಿಸುತ್ತದೆ. ವಿಡಿಯೋಗಳನ್ನು ಲೀಕ್ ಮಾಡಿದಆರೋಪಿಗಳನ್ನು ಹಾಗೂ ರೇವಣ್ಣ ಮತ್ತು ಪ್ರಜ್ವಲ್‌ರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ
ಸಾಮಾಜಿಕ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಮಾತನಾಡಿ, ಮಹಿಳೆಯ ದೇಹ ನಿಮ್ಮ ರಾಜಕೀಯದ ರಣರಂಗವಲ್ಲ. ಮಹಿಳೆಯ ಒಪ್ಪಿಗೆ ಇಲ್ಲದೇ ನಡೆಸುವ ಲೈಂಗಿಕಕ್ರಿಯೆ ಆತ್ಯಾಚಾರಕ್ಕೆ ಸಮ. ಈ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.
ಹೋರಾಟಗಾರರಾದ ಅಖಿಲಾ ವಿದ್ಯಾಸಂದ್ರ, ಜ್ಯೋತಿ ಅನಂತ ಸುಬ್ಬರಾವ್, ವಿನಯ್ ಶ್ರೀನಿವಾಸ, ಸುರೇಂದ್ರ ರಾವ್, ನ್ಯಾಯವಾದಿ ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನು ನೋಡಿ : ಬಿಜೆಪಿಗೆ 400 ಪ್ಲಸ್ ಅಂದರೆ ಸಂವಿಧಾನ ಬದಲಾವಣೆ ಮತ್ತು ಮೀಸಲಾತಿ ಅಂತ್ಯ, ‘ಇಲ್ಲಿದೆ ವಿವರಗಳು’ Janashakthi Media