ಆರೋಪಿಯಾದ ಮಾತ್ರಕ್ಕೆ ಶಿಸ್ತುಕ್ರಮ ಸಾಧ್ಯವಿಲ್ಲ: ಡಿ.ಕೆ ಶಿವಕುಮಾರ್

ಬೆಂಗಳೂರು :  ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಯಾದ ಮಾತ್ರಕ್ಕೆ ಸಂಪತ್ ರಾಜ್ ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.  ಡಿ.ಕೆ. ಶಿವಕುಮಾರ  ನಿವಾಸಕ್ಕೆ  ಇಂದು  ಭೇಟಿ ನೀಡಿದ್ದ  ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಜತೆ ಮಾತುಕತೆ ನಡೆಸಿದ ನಂತರ  ಡಿ.ಕೆ ಶಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ವೇಳೆ, ಗಲಭೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತರಾಗಿರುವ ಸಂಪತ್ ರಾಜ್ ಅವರ ವಿರುದ್ಧ ಪಕ್ಷ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾವುದೇ ಒಬ್ಬ ವ್ಯಕ್ತಿ ಆರೋಪಿಯಾದ ಮಾತ್ರಕ್ಕೆ ಆತನ ಮೇಲೆ ಕ್ರಮ ಜರುಗಿಸಲು ಆಗುವುದಿಲ್ಲ. ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಗಲಭೆ ಪ್ರಕರಣದ ತನಿಖೆ ಇನ್ನು ನಡೆಯುತ್ತಿದೆ. ಸಂಪತ್ ರಾಜ್ ಅವರ ಮೇಲಿನ ಆರೋಪ ಸಾಬೀತುಪಡಿಸಲು ಸಾಕ್ಷ್ಯಾಧಾರಗಳನ್ನು ಒದಗಿಸಬೇಕಿದೆ. ಇದೆಲ್ಲವೂ ನ್ಯಾಯಾಲಯದಲ್ಲಿ ತೀರ್ಮಾನ ಆಗಬೇಕಿದೆ. ನಾಳೆ ಯಾರಾದರೂ ಏನಾದರೂ ಹೇಳಿಕೆ ಕೊಟ್ಟರೆ ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವೇ?’ ಎಂದರು.
ಎಫ್ ಐಆರ್ ನಲ್ಲಿ ಸಂಪತ್ ಕುಮಾರ್ ಅವರ ಹೆಸರು ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್, ‘ಪೊಲೀಸ್ ಅಧಿಕಾರಿಗಳು ಬಿಜೆಪಿ ನಾಯಕರು ಹಾಗೂ ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಯಾರು ಯಾವ ಹೇಳಿಕೆ ನೀಡಿದ್ದಾರೆ ಎಂಬುದೆಲ್ಲವೂ ನಮಗೆ ಗೊತ್ತಿದೆ. ನಮ್ಮ ಪಕ್ಷದಲ್ಲಿ ನಮ್ಮದೇ ಆದ ಸಮಿತಿ ಇದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿ ಪಕ್ಷದ ಸಮಿತಿ ಸೂಕ್ತ ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದರು.
Donate Janashakthi Media

Leave a Reply

Your email address will not be published. Required fields are marked *