ಮಾಜಿ ಸಚಿವ ಆರಗ ಜ್ಞಾನೇಂದ್ರರಿಂದ ಖರ್ಗೆ & ಉತ್ತರ ಕರ್ನಾಟಕದ ಜನರ ವಿರುದ್ಧ ಜನಾಂಗೀಯ ನಿಂದನೆ

ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿ ಖರ್ಗೆಯವರ ಮೈಬಣ್ಣದ ಬಗ್ಗೆ ಅವಹೇಳನ ಮಾಡಿದ ಅವರು ಬಿಜೆಪಿಯ ಕೀಳು ಮಟ್ಟದ ಮನಸ್ಥಿತಿಯನ್ನು ಪ್ರತಿನಿಧಿಸಿದ್ದಾರೆ ಎಂದಿದೆ

ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ವಿರೋಧಿಸಿ ತೀರ್ಥಹಳ್ಳಿಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯ ವೇಳೆ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈ ಬಣ್ಣದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಲ್ಲದೆ, ಉತ್ತರ ಕರ್ನಾಟಕದ ಜನರನ್ನು ಜನಾಂಗೀಯ ನಿಂದನೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

ಪ್ರತಿಭಟನೆಯಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರ, “ಕಸ್ತೂರಿ ರಂಗನ್ ವರದಿಯ ಬಗ್ಗೆ ಸರ್ಕಾರದ ನಿಲುವನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕಾಗಿದೆ. ನಮ್ಮ ದುರಾದೃಷ್ಟ್ರ ಏನೆಂದರೆ, ನಮ್ಮ ಅರಣ್ಯ ಸಚಿವರು ಆ ಕಡೆಯ (ಉತ್ತರ ಕರ್ನಾಟಕ) ವ್ಯಕ್ತಿ. ಅರಣ್ಯ ಇಲ್ಲದೆ ಇರುವ ಕಡೆಯವರು. ಅವರಿಗೆ ಮರ, ಗಿಡ ಅಂದರೆ ಏನು ಎಂದು ಗೊತ್ತಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರು: ದಲಿತ ಬಾಲಕಿಯ ಅತ್ಯಾಚಾರ; 3 ಸಂಘಪರಿವಾರದ ದುಷ್ಕರ್ಮಿಗಳ ಸೆರೆ; ಇನ್ನಿಬ್ಬರು ನಾಪತ್ತೆ

“ಅವರಿಗೆ ನೆರಳು ಅಂದರೆ ಏನು ಎಂದು ಗೊತ್ತಿಲ್ಲ. ಅಲ್ಲಿ ಸುಟ್ಟು ಕರಕಲಾಗಿರುತ್ತಾರೆ. ನಮ್ಮ ಖರ್ಗೆ ಅವರನ್ನು ನೋಡಿದರೆ ಗೊತ್ತಾಗುತ್ತದೆ. ಪಾಪ ತಲೆ ಕೂಡಲು ಮುಚ್ಚಿಕೊಂಡಿರುವುದರಿಂದ ಅವರು ಸ್ವಲ್ಪ ಉಳಿದುಕೊಂಡಿದ್ದಾರೆ. ಅವರಿಗೆ ಅದುವೆ ನೆರಳು. ಅಂತವರಿಗೆ ಮಲೆನಾಡಿನ ಬದುಕು ಗೊತ್ತಿಲ್ಲ. ಪಶ್ಚಿಮ ಘಟ್ಟದ ಇಳಗಡೆ ಇರುವಂತಹ ಜನರ ಬದುಕು ಗೊತ್ತಿಲ್ಲ. ಹಾಗಾಗಿ ಸರ್ಕಾರ ಕಸ್ತೂರಿ ರಂಗನ್ ವರದಿಯ ಬಗ್ಗೆ ಸ್ಪಷ್ಟನೆ ನೀಡಬೇಕು” ಎಂದು ಹೇಳಿದ್ದಾರೆ.

ಆರಗ ಜ್ಞಾನೇಂದ್ರ ಅವರು ಖರ್ಗೆ ಅವರ ಬಣ್ಣದ ಬಗ್ಗೆ ಬಾಡಿ ಶೇಮಿಂಗ್ ಮಾಡಿದ್ದು, ಮಾತ್ರವಲ್ಲದೆ ಉತ್ತರ ಕರ್ನಾಟಕದ ಜನರನ್ನು ಜನಾಂಗೀಯ ನಿಂದನೆ ಕೂಡಾ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಮಲ್ಲಿಕಾರ್ಜುನ್ ಖರ್ಗೆಯವರ ಮೈಬಣ್ಣದ ಬಗ್ಗೆ ಅವಹೇಳನ ಮಾಡಿದ ಅವರು ಬಿಜೆಪಿಯ ಕೀಳು ಮಟ್ಟದ ಮನಸ್ಥಿತಿಯನ್ನು ಪ್ರತಿನಿಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

“ಬಿಜೆಪಿಯವರಲ್ಲಿ ದಲಿತರ ಬಗ್ಗೆ ಇರುವ ಅಸಹನೆ, ಅಸಡ್ಡೆಯನ್ನು ಆರಗ ಜ್ಞಾನೇಂದ್ರ ವ್ಯಕ್ತಪಡಿಸಿದ್ದಾರೆ. ಮೈಬಣ್ಣದ ಬಗೆಗಿನ ಈ ಅವಹೇಳನ ಕೇವಲ ಖರ್ಗೆಯವರನ್ನು ಅವಮಾನಿಸಿದ್ದಲ್ಲ, ಖರ್ಗೆಯವರ ಹೆಸರಲ್ಲಿ ಇಡೀ ಮೂಲನಿವಾಸಿ ದಲಿತರಿಗೆ ಮಾಡಿದ ಅವಮಾನ. ಬಣ್ಣದ ಬಗೆಗಿನ ಶೋಷಣೆ, ಅವಮಾನವನ್ನು ತೊಡೆದುಹಾಕಲು ಜಾಗತಿಕ ಮಟ್ಟದಲ್ಲಿ ಚಳವಳಿಗಳು ನಡೆದಿವೆ” ಎಂದು ಕಾಂಗ್ರೆಸ್ ಹೇಳಿದೆ.

ಇದನ್ನೂ ಓದಿ: ಸೌಜನ್ಯ ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಲ್ಲ: ದುನಿಯಾ ವಿಜಯ್

“ಪಾಶ್ಚಿಮತ್ಯ ದೇಶಗಳಲ್ಲಿ ಮೈಬಣ್ಣದ ಬಗ್ಗೆ, ದೈಹಿಕ ರೂಪದ ಬಗ್ಗೆ ಅವಮಾನಿಸಿದರೆ ಮಹಾ ಅಪರಾಧಿಯಂತೆ ಕಾಣಲಾಗುತ್ತದೆ. ಆದರೆ ಇಲ್ಲಿನ ಬಿಜೆಪಿಗರು ದಲಿತರನ್ನು, ದಲಿತರ ಮೈಬಣ್ಣವನ್ನು, ರೂಪವನ್ನು ಅವಮಾನಿಸುವುದು ಹೆಗ್ಗಳಿಕೆಯಾಗಿ ನೋಡುತ್ತದೆ. ಬಿಜೆಪಿಗೆ ದಲಿತರ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ ಜ್ಞಾನೇಂದ್ರರನ್ನು ಉಚ್ಚಾಟನೆ ಮಾಡಬೇಕು, ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ್ ಖರ್ಗೆಯವರ ಹಾಗೂ ದಲಿತರ ಕ್ಷಮೆ ಕೇಳಬೇಕು” ಎಂದು ಕಾಂಗ್ರೆಸ್ ಆಗ್ರಹಿಸಿದೆ.

“ಬಿಸಿಲು ನಾಡಿನ ಉತ್ತರ ಕರ್ನಾಟಕದ ಜನರನ್ನು, ಕಪ್ಪು ಬಣ್ಣದವರನ್ನು, ದಲಿತರನ್ನು ಬಿಜೆಪಿ ತುಚ್ಚವಾದ ದೃಷ್ಟಿಯಲ್ಲಿ ನೋಡುತ್ತದೆ ಎನ್ನುವುದಕ್ಕೆ ಆರಗ ಜ್ಞಾನೇಂದ್ರ ಅವರ ಕೀಳು ಮಟ್ಟದ ಹೇಳಿಕೆಯೇ ಸಾಕ್ಷಿ. ಬಿಸಿಲುನಾಡಿನ ಶ್ರಮಜೀವಿಗಳು ಕಪ್ಪು ಬಣ್ಣದಲ್ಲಿರುವುದು ಭ್ರಷ್ಟಾಚಾರದ ಹಣದಿಂದ ಎಸಿ ಮನೆಯಲ್ಲಿರುವ ಬಿಜೆಪಿಗರಿಗೆ ನೋಡಲಾಗುತ್ತಿಲ್ಲವೇ? ಉತ್ತರ ಕರ್ನಾಟಕದವರನ್ನು ಪ್ರತ್ಯೇಕತಾ ಭಾವನೆಯಲ್ಲಿ ನೋಡುತ್ತಿರುವ ಬಿಜೆಪಿಗೆ ಅಲ್ಲಿನ ಜನರ ಮತಗಳು ಮಾತ್ರ ಬೇಕೇ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

“ರಾಜ್ಯ ಬಿಜೆಪಿಗೆ ಉತ್ತರ ಕರ್ನಾಟಕದ ಜನರ ಬಗ್ಗೆ, ದಲಿತರ ಬಗ್ಗೆ, ಕಪ್ಪುವರ್ಣದವರ ಬಗ್ಗೆ ನಿಜಕ್ಕೂ ಗೌರವ ಇದ್ದಿದ್ದೇ ಆದರೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು, ಅರಣ್ಯ ಸಚಿವರಾದ ಈಶ್ವರ್‌ ಖಂಡ್ರೆ ಅವರನ್ನು ಹಾಗೂ ಉತ್ತರ ಕರ್ನಾಟಕದ ಜನತೆಯನ್ನು ಅತ್ಯಂತ ಕೀಳು ಅಭಿರುಚಿಯ ಮಾತುಗಳಿಂದ ಅವಮಾನಿಸಿದ ಆರಗ ಜ್ಞಾನೇಂದ್ರ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕು. ಅವರ ಹೇಳಿಕೆಗೆ ಪಕ್ಷ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದೆ.

ವಿಡಿಯೊ ನೋಡಿ: ಮಲ್ಲಿಕಾರ್ಜುನ ಖರ್ಗೆ ಮೈಬಣ್ಣದ ಬಗ್ಗೆಅವಹೇಳನಕಾರಿ ಹೇಳಿಕೆ ನೀಡಿದಮಾಜಿ ಸಚಿವ ಆರಗ ಜ್ಞಾನೇಂದ್ರ Janashakthi Media

Donate Janashakthi Media

Leave a Reply

Your email address will not be published. Required fields are marked *