ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರ ಸದಸ್ಯತ್ವ ಅನರ್ಹಗೊಳಿಸಿರುವ ನ್ಯಾಯಾಲಯದ ತೀರ್ಪಿನ ಪ್ರತಿ ಓದಿದ ಬಳಿಕ ಸುಪ್ರೀ ಕೋರ್ಟ್‌ಗೆ ಮನವಿ ಸಲ್ಲಿಸಲು ಆಲೋಚಿಸುತ್ತೇವೆ ಎಂದು ಜೆಡಿಎಸ್ ವರಿಷ್ಠ ಆಗಿರುವ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದರು.
ಹೊಳೆನರಸೀಪುರದ ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಶನಿವಾರ ಸೆ-2 ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಇದನ್ನೂ ಓದಿ:ನಾಮಪತ್ರದಲ್ಲಿ ಸುಳ್ಳು ಮಾಹಿತಿ : ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ
ತೀರ್ಪಿನ ಪ್ರತಿ ನನಗೆ ಇನ್ನೂ ಸಿಕ್ಕಿಲ್ಲ. ಅದರ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ. ಸದಸ್ಯತ್ವ ಅಸಿಂಧು ಎಂದು ತೀರ್ಪು ನೀಡಿದ್ದಾರೆ. ಮಾಜಿ ಪ್ರಧಾನಿಯಾಗಿ ಆದೇಶದ ಪ್ರತಿಯನ್ನು ಸಂಪೂರ್ಣವಾಗಿ ಓದದೇ ಪ್ರತಿಕ್ರಿಯಿಸುವುದು ಯೋಗ್ಯವೂ, ಸಮಂಜಸವೂ ಅಲ್ಲ ಎಂದರು. ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದು ಸ್ವಾಭಾವಿಕವಾಗಿ ನಡೆಯುತ್ತದೆ. ನಾನು ಇಲ್ಲಿ ಪೂಜೆ ಮಾಡಲೆಂದು ಬಂದಿದ್ದೇನೆ. ವಿಶೇಷ ಪೂಜೆಯಲ್ಲಿ ಪ್ರಜ್ವಲ್ ಭಾಗವಹಿಸಿ ನಂತರ ಬೆಂಗಳೂರಿಗೆ ತೆರಳಿದ್ದಾರೆ ಎಂದು ಎಚ್.ಡಿ.ದೇವೇಗೌಡ ಹೇಳಿದರು.