ಬೆಂಗಳೂರು: ನಟ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ. ಪುನೀತ್ ರಾಜಕುಮಾರ್ ಅವರ ಹಿರಿಯ ಸಹೋದರ ರಾಘವೇಂದ್ರ ರಾಜಕುಮಾರ್ ಅವರು ಪುನೀತ್ ಚಿಕ್ಕಮಗವಿನಂತೆ. ಇಷ್ಟು ಬೇಗ ಅವನು ಅಪ್ಪಾಜಿ, ಅಮ್ಮನನ್ನು ನೋಡಲು ಹೋಗುತ್ತಾನೆ ಎಂದುಕೊಂಡಿರಲಿಲ್ಲ. ಅಪ್ಪ ಅಮ್ಮನನ್ನು ನೋಡಲು ಅವನು ನಮಗಿಂತ ಮುಂದೆ ಹೋಗಿಬಿಟ್ಟಿದ್ದಾನೆ….. ಎಂದು ಭಾವುಕರಾಗಿ ನುಡಿದರು.
”ನಾನು ಹೋಗಬೇಕಾಗಿತ್ತು, ಮಿಸ್ ಆಯ್ತು ಅವನೇ ಹೋಗಿ ಬಿಟ್ಟ. ನನಗೆ ಆಣೆ ಮಾಡಿ.. ಸಮಾಧಾನವಾಗಿ ಅವನನ್ನು ಕಳುಹಿಸಿಕೊಡೋಣ. ಪುನೀತ್ನನ್ನು ಕಳೆದುಕೊಂಡಿದ್ದೇವೆ. ಅಭಿಮಾನಿಗಳು ಶಾಂತ ಚಿತ್ತದಿಂದ ಅಪ್ಪುವನ್ನು ಕಳುಹಿಸಿ ಕೊಡಬೇಕು. ನೀವು ಅದಕ್ಕೆ ಸಹಕಾರ ಕೊಡಿ. ಹಿಂದೆ ಅಪ್ಪಾಜಿಗೆ ಏನಾಗಿತ್ತು ನಿಮಗೆ ಗೊತ್ತು. ಹೀಗಾಗಿ ಯಾವುದೇ ತೊಂದರೆ ಅಪ್ಪುಗೆ ಮಾಡೋದು ಬೇಡ. ನನ್ನನ್ನು ಎರಡು ಬಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಕರೆದುಕೊಂಡು ಹೋದ. ಆದರೆ ಅವನನ್ನು ಕರೆದುಕೊಂಡು ಹೋಗಲು ಆಗುತ್ತಿಲ್ಲ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಹೋಗಿ ಬಿಟ್ಟಿದ್ದಾನೆ. ಅವರು ಇನ್ನೂ ಚಿಕ್ಕವನು. ಮಗುವಿನ ಥರ. ಅವನನ್ನು ಇಂಡಸ್ಟ್ರಿಗೆ ಎಲ್ಲರೂ ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡಿದ್ದೀರಿ. ಈಗ ಅದಕ್ಕಿಂತಲೂ ಹೆಚ್ಚಿನ ಪ್ರೀತಿಯಿಂದ ಎಲ್ಲರೂ ಒಟ್ಟಾಗಿ ಕಳುಹಿಸಿಕೊಡೋಣ ಎಂದು ಹೇಳಿದರು.
ಇದನ್ನು ಓದಿ: ಪವರ್ಸ್ಟಾರ್ ಪುನೀತ್ ರಾಜಕುಮಾರ್ ನಿಧನ
ಪುನೀತ್ ರಾಜ್ಕುಮಾರ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್ ಡಿ ಕುಮಾರಸ್ವಾಮಿ ಹಾಗೂ ಎಸ್.ಎಂ.ಕೃಷ್ಣ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಗಣ್ಯರು, ಸಿನಿಮಾ ರಂಗದವರು, ಕ್ರಿಕೆಟ್ ದಿಗ್ಗಜರು ಸಂತಾಪ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ʻʻಕನ್ನಡದ ಖ್ಯಾತನಟ ಶ್ರೀ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದು ನಾನು ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ. ಕನ್ನಡಿಗರ ಮೆಚ್ಚಿನ ನಟ ಅಪ್ಪು ನಿಧನದಿಂದ ಕನ್ನಡ ಹಾಗೂ ಕರ್ನಾಟಕಕ್ಕೆ ಅಪಾರ ನಷ್ಟ ವಾಗಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಿ, ಅಭಿಮಾನಿಗಳಿಗೆ ಈ ನೋವನ್ನು ಸಹಿಸುವ ಶಕ್ತಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ.ʼʼ ಎಂದು ಸಂತಾಪ ಸೂಚಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದು, ಕ್ರೂರ ವಿಧಿಯು ಪುನೀತ್ ರಾಜ್ಕುಮಾರ್ ಎಂಬ ಪ್ರತಿಭಾವಂತ ನಟನನ್ನು ನಮ್ಮಿಂದ ಕಿತ್ತುಕೊಂಡಿದೆ. ಇದು ಸಾಯುವ ವಯಸ್ಸಾಗಿರಲಿಲ್ಲ. ಮುಂಬರುವ ಪೀಳಿಗೆಗಳು ಅವರ ಚಿತ್ರಗಳು ಮತ್ತು ಅದ್ಭುತ ವ್ಯಕ್ತಿತ್ವಕ್ಕಾಗಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ʻಬೆಟ್ಟದ ಹೂವುʼ ನಂತೆಯೇ ಯಾರೂ ಎಟುಕಲಾರದ ಸ್ಥಾನಕ್ಕೇರಿದ ʻಯುವರತ್ನʼ
ಮಾಜಿ ಪ್ರಧಾನಿ ದೇವೇಗೌಡ ಅವರು ʻಕನ್ನಡದ ಅತ್ಯಂತ ಪ್ರೀತಿಯ ಕಲಾವಿದ ಶ್ರೀ ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಕನ್ನಡ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ. ಅವರ ಕುಟುಂಬ, ಅಪಾರ ಅಭಿಮಾನಿ ಬಳಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿʼ ಎಂದು ಟ್ವೀಟ್ ಮಾಡಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ‘ಕನ್ನಡದ ಪ್ರತಿಭಾವಂತ ಯುವ ನಟ ಪುನೀತ್ ರಾಜ್ಕುಮಾರ್ ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ನಟನಾ ಕೌಶಲದ ಜೊತೆ ಸರಳ-ಸಜ್ಜನಿಕೆಯ ನಡವಳಿಕೆಯಿಂದಲೂ ಕನ್ನಡಿಗರ ಮನೆ ಮಗನಂತಿದ್ದ ಪುನೀತ್ ಸಾವು ತುಂಬಿಬಾರದ ನಷ್ಟ. ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ರಾಜ್ಕುಮಾರ್ ಕಾಲದಿಂದಲೂ ಅವರ ಕುಟುಂಬದ ಜೊತೆಯಲ್ಲಿ ಆತ್ಮೀಯ ಸಂಬಂಧ ಹೊಂದಿದ್ದ ನನ್ನ ಪಾಲಿಗೆ ಪುನೀತ್ ಸಾವು ಮನೆ ಸದಸ್ಯನೊಬ್ಬನನ್ನು ಕಳೆದುಕೊಂಡ ಶೋಕ. ಪುನೀತ್ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ’ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ‘ನಾಡಿನ ಜನಪ್ರಿಯ ಕಲಾವಿದ, ಡಾ.ರಾಜ್ಕುಮಾರ್ ಅವರ ವಂಶದ ಕುಡಿ ಪುನೀತ್ ರಾಜಕುಮಾರ್ ಹಠಾತ್ ನಿಧನರಾದ ವಿಷಯ ದಿಗ್ಭ್ರಮೆ ಮೂಡಿಸಿದೆ. ಕಿರುವಯಸ್ಸಿನಲ್ಲೇ ಅವರು ನಮ್ಮನ್ನು ಅಗಲಿದ್ದು ತೀವ್ರ ಆಘಾತ ತಂದಿದೆ. ಅಣ್ಣಾವ್ರ ಜೊತೆ ಬಾಲ ಕಲಾವಿದರಾಗಿ ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ಅವರ ಅಭಿನಯ, ಬೆಟ್ಟದ ಹೂವು, ನಟಸಾರ್ವಭೌಮ ಮೊದಲಾದ ಅನೇಕ ಯಶಸ್ವಿ ಚಿತ್ರಗಳ ಮೂಲಕ ಕನ್ನಡಿಗರ ಹೃದಯದಲ್ಲಿ ಚಿರಸ್ಥಾನ ಪಡೆದ ಅಭಿಮಾನಿಗಳ ಪ್ರೀತಿಯ ಅಪ್ಪು ಅಮರರಾಗಿಯೇ ಉಳಿಯಲಿದ್ದಾರೆ. ನಿಮ್ಮ ನೆನಪು ಚಿರಾಯು ಪುನೀತ್’ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್ ಎಂ. ಕೃಷ್ಣ ಅವರು ಕನ್ನಡ ಚಿತ್ರರಂಗದ ನಾಯಕ ನಟ, ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ರಾಜ್ಯಕ್ಕೆ ಮತ್ತು ಚಿತ್ರ ರಂಗಕ್ಕೆ ಬಹಳ ದೊಡ್ಡ ನಷ್ಟ ಎಂದು ಕಂಬನಿ ಮಿಡಿದಿದ್ದಾರೆ.
46 ವರ್ಷ ವಯಸ್ಸಿನ ಪುನೀತ್ ರಾಜಕುಮಾರ್ ಇಷ್ಟು ಚಿಕ್ಕ ವಯಸ್ಸಿಗೆ ನಮ್ಮನ್ನು ಆಗಲಿರುವುದು ಬಹಳ ನೋವಿನ ಸಂಗತಿ. ಅವರ ಅಗಲಿಕೆ ಚಿತ್ರರಂಗಕ್ಕು ತುಂಬಲಾದರದ ದೊಡ್ಡ ನಷ್ಟವಾಗಿದೆ. ಅವರ ಕುಟುಂಬ ಮತ್ತು ಅವರ ಅಭಿಮಾನಿಗಳಿಗೆ ಈ ದುಖಃ, ನೋವು ತಡೆದುಕೊಳ್ಳುವ ಶಕ್ತಿಯನ್ನು ಭಗವಮತೆ ಕರುಣಿಸಲಿ ಎಸ್ಎಂ ಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ʻರಾಜಕುಮಾರʼ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ʻಪುನೀತ್ ರಾಜ್ ಕುಮಾರ್ ಅವರು ಯುವಕರಿಗೆ ರೋಲ್ ಮಾಡೆಲ್ ಆಗಿದ್ದರು. ನಮ್ಮ ನೆರೆಹೊರೆಯವರಾಗಿದ್ದ ಜೊತೆಗೆ ಸ್ವಂತ ಸಹೋದರನಂತಿದ್ದ ಪುನೀತ್ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇಷ್ಟು ಚಿಕ್ಕವಯಸ್ಸಿನಲ್ಲಿ ಅವರನ್ನು ಕೊಂಡೋಯ್ದ ವಿಧಿ ಬಹಳ ಕ್ರೂರಿʼ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ‘ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ. ಪುನೀತ್ ಅವರು ಇನ್ನಿಲ್ಲ ಎನ್ನುವ ಸ್ಥಿತಿಯನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ʻʻಪುನೀತ್ ಅಗಲಿಕೆ ಕನ್ನಡ ಚಿತ್ರರಂಗಕ್ಕೆ, ಕನ್ನಡಕ್ಕೆ, ನಾಡು ನುಡಿಗೆ ಭರಿಸಲಾಗದ ನಷ್ಟ. ಅವರ ನಿಧನ ದೊಡ್ಡ ಶೂನ್ಯವನ್ನೇ ಸೃಷ್ಟಿಸಿದೆ. ನಮೆಲ್ಲರ ಅಪ್ಪು ಇನ್ನಿಲ್ಲ ಎನ್ನುವ ಸ್ಥಿತಿಯನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ.ʼʼ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಜಲಸಂಪನ್ಮೂಲ ಸಚಿವ ಶ್ರೀ ಗೋವಿಂದ ಕಾರಜೋಳ ಅವರು ಆಡಿಸಿ ನೋಡು, ಬೀಳಿಸಿ ನೋಡು, ಎಂದೂ ಸೋಲದು, ಸೋತು ತಲೆಯಾ ಬಾಗದು ಎಂದು ಹೇಳುತ್ತಲೇ ನಮ್ಮನ್ನೆಲ್ಲಾ ಅಗಲಿದ ಪುನೀತ್ ರಾಜ್ ಕುಮಾರ್ ಅವರು ನಮ್ಮ ಗಂಧದ ಗುಡಿಯ ನಿಜವಾದ ರಾಜರತ್ನ. ಪವರ್ ಸ್ಟಾರ್ ಆಗಿದ್ದರೂ ಯಾವುದೇ ಗರ್ವವಿಲ್ಲದೆ ಎಲ್ಲರೊಂದಿಗೆ ಬೆರೆಯುತ್ತಿದ್ದ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಇದನ್ನು ಓದಿ: ಕನ್ನಡ ಚಿತ್ರರಂಗದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಬೆಳೆದು ಬಂದ ದಾರಿಯ ಮೆಲುಕು
ಸಚಿವ ಕೆ.ಗೋಪಾಲಯ್ಯ ಅವರು ‘ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದ ಪುನೀತ್ ರಾಜ್ಕುಮಾರ್ ತಂದೆ ಡಾ.ರಾಜ್ಕುಮಾರ್ ಅವರಂತೆ ಸರಳತೆಯನ್ನು ಮೈಗೂಡಿಸಿಕೊಂಡಿದ್ದರು. ಬಾಲನಟನಾಗಿ ಅವರು ಅಭಿನಯಿಸಿದ್ದ ‘ಬೆಟ್ಟದ ಹೂವು’ಚಿತ್ರ ರಾಷ್ಟ್ರಪ್ರಶಸ್ತಿ ಪಡೆದಿತ್ತು. ಎರಡು ನಕ್ಷತ್ರಗಳು, ‘ಯಾರಿವನು,’ ‘ಭಾಗ್ಯವಂತ’ ಹೀಗೆ ಅನೇಕ ಚಿತ್ರಗಳಲ್ಲಿ ಅವರು ನೀಡಿದ್ದ ಅಭಿನಯ ಜನ ಮಾನಸದಲ್ಲಿ ಅಚ್ಚ ಅಳಿಯದೇ ನಿಂತಿದೆ. ನಾಯಕ ನಟನಾಗಿ ಪುನೀತ್ ಅಭಿನಯಿಸಿದ ಅಪ್ಪು, ಅಭಿ, ಮಿಲನ, ವೀರ ಕನ್ನಡಿಗ, ರಾಜಕುಮಾರ, ನಟಸಾರ್ವಭೌಮ, ದೊಡ್ಡಮನೆ ಹುಡ್ಗ, ಯುವರತ್ನ, ಅಣ್ಣಾ ಬಾಂಡ್, ಹುಡುಗರು ಸೇರಿ ಅನೇಕ ಚಿತ್ರಗಳಲ್ಲಿ ನೀಡಿ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿದ್ದರು’ ಎಂದು ನೆನಪು ಮಾಡಿಕೊಂಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಅವರು ನನ್ನ ಆತ್ಮೀಯ ಗೆಳೆಯರಾದ ಪುನೀತ್ ರಾಜಕುಮಾರ್ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ಮನಸ್ಸಿಗೆ ಆಘಾತವಾಯ್ತು. ದುರಾದೃಷ್ಟವಶಾತ್ ಚಿಕ್ಕ ವಯಸ್ಸಿನಲ್ಲೇ ಅವರು ಇಲ್ಲವಾಗಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿʼ ಎಂದು ಸಂತಾಪ ಸೂಚಿಸಿದ್ದಾರೆ.
ಬಾಲಿವುಡ್ ನಟ ಸೋನು ಸೂದ್ ಅವರು ‘ಹೃದಯ ವಿದ್ರಾವಕ, ಯಾವಾಗಲೂ ನಿನ್ನನ್ನು ಕಳೆದುಕೊಳ್ಳುತ್ತೇನೆ ನನ್ನ ಸಹೋದರ’ ಎಂದು ಟ್ವೀಟ್ ಮಾಡಿದ್ದಾರೆ.
ನಟಿ ಖುಷ್ಬೂ ಸುಂದರ್ ಅವರು ʻನಿಮ್ಮ ನಮ್ರತೆ, ನಿಮ್ಮ ಮಾನವೀಯತೆ, ನಿಮ್ಮ ಡೌನ್ ಟು ಅರ್ಥ್ ವರ್ತನೆ, ನಿಮ್ಮ ಜೀವನ ಪ್ರೀತಿ ಯಶಸ್ವಿಯಾಗಲು ಬಯಸುವವರಿಗೆ ಪಾಠವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ತೆಲುಗು ಚಿತ್ರನಟ ಚಿರಂಜೀವಿ ʻಆಘಾತಕಾರಿ ಮತ್ತು ಹೃದಯವಿದ್ರಾವಕ. ಪುನೀತ್ ರಾಜ್ ಕುಮಾರ್ ಬೇಗ ಹೋದರು. ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ನನ್ನ ತೀವ್ರ ಸಂತಾಪ ಒಟ್ಟಾರೆಯಾಗಿ ಕನ್ನಡ/ಭಾರತೀಯ ಚಲನಚಿತ್ರ ಬಂಧುಗಳಿಗೆ ಒಂದು ದೊಡ್ಡ ನಷ್ಟ. ಈ ದುರಂತ ನಷ್ಟವನ್ನು ನಿಭಾಯಿಸುವ ಶಕ್ತಿ ಎಲ್ಲರಿಗೂ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಟ್ವೀಟ್ ಮಾಡಿದ್ದು, ‘Ahh ನೋ .. ಬೇಗ ಹೋದೆ ನನ್ನ ಪ್ರೀತಿಯ ಅಪ್ಪು. ನಾನು ಛಿದ್ರಗೊಂಡಿದ್ದೇನೆ .. ಹೃದಯ ಒಡೆದಿದೆ .. ಇದು ಸರಿಯಲ್ಲ’ ಎಂದು ಹೇಳಿದ್ದಾರೆ.
ತೆಲುಗು ಚಿತ್ರರಂಗದ ನಟ ಮಹೇಶ್ ಬಾಬು ಅವರು ‘ಪುನೀತ್ ರಾಜ್ಕುಮಾರ್ ಅವರ ನಿಧನದ ದುರಂತ ಸುದ್ದಿಯನ್ನು ಕೇಳಿ ಆಘಾತ ಮತ್ತು ತೀವ್ರ ದುಃಖವಾಗಿದೆ. ನಾನು ಭೇಟಿಯಾದ ಮತ್ತು ಮಾತುಕತೆ ನಡೆಸಿದ ಅತ್ಯಂತ ವಿನಮ್ರ ವ್ಯಕ್ತಿಗಳಲ್ಲಿ ಅವರೊಬ್ಬರು. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು’ ಎಂದು ಟ್ವೀಟ್ ಮಾಡಿದ್ದಾರೆ.
ಮಲಯಾಳಂ ಚಿತ್ರರಂಗದ ನಟ ಪೃಥ್ವಿರಾಜ್ ಸುಕುಮಾರನ್ ‘ಈ ಸುದ್ದಿ ತುಂಬಾ ನೋವುಂಟು ಮಾಡುತ್ತಿದೆ! ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸೂಪರ್ ಸ್ಟಾರ್! ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಲಕ್ಷಾಂತರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ!’ ಎಂದು ಟ್ವೀಟ್ ಮಾಡಿದ್ದಾರೆ.
ಮಿಲನ, ಪೃಥ್ವಿ ಸಿನಿಮಾದಲ್ಲಿ ಪುನೀತ್ ಅವರೊಂದಿಗೆ ನಟಿಸಿದ್ದ ನಟಿ ಪಾರ್ವತಿ ತಿರುವೋತು ಕೊಟ್ಟುವಟ್ ಅವರು ‘ಇದು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದಷ್ಟು ನೋವುಂಟು ಮಾಡುತ್ತಿದೆ. ಪುನೀತ್’ ಎಂದು ಪುನೀತ್ ಅವರೊಂದಿಗಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ʻ ‘ತಮ್ಮ ಅದ್ಬುತವಾದ ಕೆಲಸದಿಂದಲೇ ಜನರ ಮನಗೆದ್ದ ಪವರ್ಫುಲ್ ನಟ ಪುನೀತ್ ರಾಜ್ಕುಮಾರ್ ಅವರ ಹಠಾತ್ ನಿಧನದ ಬಗ್ಗೆ ತಿಳಿದು ತೀವ್ರ ಆಘಾತವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪ’ ಎಂದಿದ್ದಾರೆ.
ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ “ಪುನೀತ್ ರಾಜ್ಕುಮಾರ್ ಅವರ ನಿಧನದಿಂದ ಚಿತ್ರರಂಗವು ರತ್ನವನ್ನು ಕಳೆದುಕೊಂಡಿದೆ ಎಂದು ಹೇಳಲು ನನಗೆ ಆಘಾತ ಮತ್ತು ತೀವ್ರ ದುಃಖವಾಗಿದೆ. ನಾ ಕಂಡ ಅತ್ಯುತ್ತಮ ವ್ಯಕ್ತಿಗಳಲ್ಲಿ ಇವರು ಕೂಡ ಒಬ್ಬರು. ವಿನಮ್ರ ವ್ಯಕ್ತಿಯಾಗಿದ್ದ ಅವರು ಬಹುಬೇಗ ಇಹಲೋಕ ತ್ಯಜಿಸಿದ್ದಾರೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಎರಡು ಕೈಗಳಿಂದ ಮುಗಿದು ಸಂತಾಪ ಸೂಚಿಸುತ್ತೇನೆ,” ಎಂದು ಟ್ವೀಟ್ ಮಾಡಿದ್ದಾರೆ.
ಭಾರತ ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಕೂಡ ನಟನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ “ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಅವರ ನಿಧನದಿಂದ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಓಂ ಶಾಂತಿ.” ಎಂದು ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ ಮಾಜಿ ಆಟಗಾರ ಹರಭಜನ್ ಸಿಂಗ್ ಅವರು “ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತವಾಯಿತು… ಜೀವನ ತುಂಬಾ ಅನಿರೀಕ್ಷಿತ. ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳು .. ವಾಹೆಗುರು,” ಎಂದು ಟ್ವೀಟ್ ಮಾಡಿದ್ದಾರೆ.
ಭಾರತ ತಂಡದ ಮಾಜಿ ವೇಗಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ʻʻಆತ್ಮೀಯ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡಿರುವುದಕ್ಕೆ ತುಂಬಾ ನೋವಾಗುತ್ತಿದೆ. ಅವರ ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ನಾನು ಸಂತಾಪ ಸೂಚಿಸುತ್ತೇನೆ. ಕುಟುಂಬದ ದುಖಃದ ಸಮಯದಲ್ಲಿ ಅವರ ಅಭಿಮಾನಿಗಳು ಶಾಂತತೆಯನ್ನು ಕಾಪಾಡಿಕೊಳ್ಳಲು ಮತ್ತು ಅವರ ಸದ್ಗತಿಗಾಗಿ ಪ್ರಾರ್ಥಿಸಲು ನಾನು ವಿನಂತಿಸುತ್ತೇನೆ. ಓಂ ಶಾಂತಿ,” ಎಂದು ಟ್ವೀಟ್ ಮಾಡಿದ್ದಾರೆ.
ಭಾರತ ಹಾಗೂ ಕರ್ನಾಟಕ ಮಾಜಿ ವೇಗಿ ವಿನಯ್ ಕುಮಾರ್ “ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ!! ಬಹುಬೇಗ ಹೋದಿರಲ್ಲಾ… ಪುನೀತ್ ರಾಜ್ಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಕುಟುಂಬಕ್ಕೆ, ಸ್ನೇಹಿತರಿಗೆ ಹಾಗೂ ಅವರ ಅಭಿಮಾನಿಗಳಿಗೆ ಕೈ ಮುಗಿದು ಸಂತಾಪ ಸೂಚಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಫುಟ್ಬಾಲ್ ಆಟಗಾರ ಸುನೀಲ್ ಛೇಟ್ರಿ ಅವರು ʻಬೆಂಗಳೂರಿನಲ್ಲಿ ಕಳೆದ ವರ್ಷ ವಾಸಿಸಿದ್ದ ನನಗೆ ಪುನೀತ್ ರಾಜಕುಮಾರ್ ನಿಧನದಿಂದ ಎಂಥ ನಷ್ಟ ಆಗಿದೆ ಎಂದು ಚೆನ್ನಾಗಿ ಬಲ್ಲೆ. ಅವರ ಕುಟುಂಬ ಹಾಗೂ ಎಲ್ಲಾ ದುಃಖಿತರಿಗೂ ಆ ದೇವರು ಬಲ ಕೊಡಲಿ ಎಂದು ತಿಳಿಸಿದ್ದಾರೆ.
ಮಯಂಕ್ ಅಗರ್ವಾಲ್, ಸುರೇಶ್ ರೈನಾ, ರಾಬಿನ್ ಉತ್ತಪ್ಪ ಮೊದಲಾದ ಇನ್ನೂ ಅನೇಕರು ಪುನೀತ್ ರಾಜಕುಮಾರ್ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ಧಾರೆ.