ಮುಸುಕಿನ ಗುದ್ದಾಟಕ್ಕೆ ತೇಪೆ ಸವರಿದ ಸಾ.ರಾ. ಮಹೇಶ್
ಮೈಸೂರು, ಜ08: ಜೆಡಿಎಸ್ ನಲ್ಲಿ ಅಪ್ಪ ಮಕ್ಕಳ ಆಟ ನಿಂತಂತೆ ಕಾಣುತ್ತಿಲ್ಲ. ಅಪ್ಪ ಮಕ್ಕಳ ಪಕ್ಷ ಎಂಬ ಹಣೆಪಟ್ಟಿ ಹೊತ್ತಿರುವ ಜೆಡಿಎಸ್ ಗೆ ಈಗ ಮತ್ತೊಂದು “ಅಪ್ಪ- ಮಗ” ಸೇರ್ಪಡೆಯಾಗುತ್ತಿದೆ. ಹೌದು ಅದಕ್ಕೆ ಕಾರಣ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ನೀಡಿದ ಹೇಳಿಕೆ ಕಾರಣವಾಗಿದೆ.
ಜಿ.ಟಿ.ದೇವೇಗೌಡರೇ ನಮ್ಮ ನಾಯಕರು, ಮುಂದಿನ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರೇ ಮೈಸೂರು ಭಾಗದ ನಾಯಕತ್ವ ವಹಿಸಿಕೊಳ್ಳುತ್ತಾರೆ. ಅವರಷ್ಟೆ ಅಲ್ಲ ಮುಂದಿನ ಚುನಾವಣೆಯಲ್ಲಿ ಅವರ ಮಗನು ಸ್ಪರ್ಧೆ ಮಾಡುತ್ತಾರೆ ಎಂದು ಜೆಡಿಎಸ್ ಶಾಸಕ, ಮಾಜಿ ಸಚಿವ ಸಾ.ರಾ ಮಹೇಶ್ ಅವರು ಸ್ಪೋಟಕ ಹೇಳಿಕೆ ನೀಡಿರುವುದು ಈಗ ರಾಜಕೀಯ ವಲಯಲ್ಲಿ ಭಾರೀ ಚರ್ಚೆಯಾಗುತ್ತಿದೆ.
ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಿಂದಲೇ ಅಪ್ಪ-ಮಗ ಇಬ್ಬರು ಚುನಾವಣೆಗೆ ನಿಲ್ಲುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಯಾರಿಗೂ ಇರೋದು ಬೇಡ. ನಾನು ಹೇಳುತ್ತಿದ್ದೇನೆ ಅವರು ಜೆಡಿಎಸ್ನಲ್ಲೇ ಇರ್ತಾರೆ ಎಂದು ಹೇಳಿದರು. ಸದ್ಯ ಚುನಾವಣೆಗೂ ಮುನ್ನ ಭಿನ್ನಾಭಿಪ್ರಾಯ ಇರೋದು ಜೆಡಿಎಸ್ನಲ್ಲಿ ಸಹಜವಾಗಿಬಿಟ್ಟಿದೆ. ಮೊದಲಿನಿಂದಲೂ ಅದು ನಡೆದುಕೊಂಡು ಬಂದಿದೆ. ಅದರೆ, ಚುನಾವಣೆ ಬಂದ ತಕ್ಷಣ ನಾವೇಲ್ಲ ಒಂದಾಗುತ್ತೇವೆ ಎಂದು ಜೆಡಿಎಸ್ ಒಳಗೆ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ತೇಪೆ ಹಚ್ಚಲು ಪ್ರಯತ್ನ ನಡೆಸಿದರು.
ಬೇರೆಯವರ ರೀತಿ ಭಿನ್ನಾಭಿಪ್ರಾಯಗಳನ್ನ ಒಳಗಡೆ ಇಟ್ಟುಕೊಳ್ಳಲ್ಲ. ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿ ಸರಿಪಡಿಸಿಕೊಳ್ಳುತ್ತೇವೆ. ಇನ್ನು ಜಿ.ಟಿ.ದೇವೇಗೌಡರನ್ನ ಉಚ್ಚಾಟಿಸುತ್ತೇವೆ ಎಂದು ಕುಮಾರಣ್ಣ ಆಗಲಿ, ನಾನಾಗಲಿ ಎಲ್ಲಿಯೂ ಹೇಳಿಲ್ಲ. ಜಿಟಿಡಿ ಸಿಎಂರನ್ನ ಸೋಲಿಸಿದ ದೊಡ್ಡ ರಾಜಕೀಯ ಶಕ್ತಿ. ಅವರನ್ನ ನಾವ್ಯಾಕೆ ಉಚ್ಛಾಟಿಸುತ್ತೇವೆ. ಉಚ್ಛಾಟಿಸುವ ಕೆಲಸ ಜಿಟಿಡಿ ಏನು ಮಾಡಿದ್ದಾರೆ. ಆದರೆ, ಜಿಟಿಡಿ ಹೇಳಿದಂತೆ ಜೆಡಿಎಸ್ ಬಳಸಿಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಹಾಯ ಮಾಡಿದವರನ್ನ ಉಚ್ಛಾಟಿಸಲು ತೀರ್ಮಾನ ಕೈಗೊಳ್ಳುತ್ತೇವೆ. ಅದ್ಯಾರು ಆ ರೀತಿ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಎಂದು ಜಿಟಿಡಿ ಬಳಿಯೇ ಮಾಹಿತಿ ಪಡೆಯುತ್ತೇನೆ ಎಂದು ಸಾ.ರಾ.ಮಹೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಿಂದೆ ಸಾ.ರಾ. ಮಹೇಶ್ ಕುರಿಯು ಜಿ.ಟಿ. ದೇವೆಗೌಡ ರವರು ಬಹಿರಂಗವಾಗಿ ಮಾತನಾಡಿದ್ದರು. ಮೈಮುಲ್, ಡಿಸಿಸಿ ಬ್ಯಾಂಕ್ ಮುಂತಾದವು ಸ್ವಯತ್ತ ಸಂಸ್ಥೆಗಳು, ಆದರ ನಿರ್ವಹಣೆ ಮಾಡುವುದು ಸರ್ಕಾರದ ಜವಬ್ದಾರಿ. ಎಲ್ಲವನ್ನೂ ನಾನು ಯಾಕೆ ಮಾಡಲಿ. ನನಗ ಮಾಡೋದಕ್ಕೆ ಬೇರೆ ಕೆಲಸ ಇಲ್ವ. ಎಲ್ಲಾ ವಿಚಾರದಲ್ಲೂ ಮೂಗು ತೂರಿಸುವುದಕ್ಕೆ ನಾನು ಸಾರಾ ಮಹೇಶ್ ಅಲ್ಲ ಎಂದು ಬಹಿರಂಗವಾಗಿ ಸ್ವಪಕ್ಷದ ಶಾಸಕನ ವಿರುದ್ಧ ಕಿಡಿ ಕಾರಿದ್ದರು. ಈಗ ಸಾ.ರಾ. ಮಹೇಶ್ ಈ ರೀತಿ ಹೇಳುತ್ತಿರುವುದು ಜೆಡಿಎಸ್ ನಲ್ಲಿ ಏನು ನಡೆಯುತ್ತಿದೆ ಎಂದು ಕಾರ್ಯಕರ್ತರು ಗೊಂದಲಕ್ಕೀಡು ಮಾಡುತ್ತದೆ.