ಮಂಗಳೂರು: ಎಪಿಎಂಸಿ ಕಟ್ಟಡದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯನ್ನು ಕಳೆದ ಐದಾರು ವರ್ಷಗಳಿಂದ ಕಟ್ಟಡ ಬಾಡಿಗೆ ಕರಾರು ಪತ್ರ ನವೀಕರಿಸದೆ ಅಸಹಕಾರ ತೋರುತ್ತಿದೆ ಎಂದು ತೆರವುಗೊಳಿಸಬಾರದೆಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಸಂಘಟನೆಯು ಬ್ಯಾಂಕ್ ಶಾಖೆಯನ್ನು ಉಳಿಸಿಕೊಡುವಂತೆ ಇಂದು ಎಪಿಎಂಸಿ ಆಡಳಿತಕ್ಕೆ ಮನವಿ ಸಲ್ಲಿಸಿದೆ.
ನಗರದ ಬಹುಮುಖ್ಯ ಕೈಗಾರಿಕಾ ಪಟ್ಟಣವಾಗಿರುವ ಬೈಕಂಪಾಡಿ ಜಂಕ್ಷನ್‌ನಲ್ಲಿರುವ ಎಪಿಎಂಸಿ ಕಟ್ಟಡದಲ್ಲಿ ಎರಡು ದಶಕಗಳಿಂದ ಬ್ಯಾಂಕ್ ಶಾಖೆ ಕಾರ್ಯಾಚರಿಸುತ್ತಿದೆ. ಇದು ಎಪಿಎಂಸಿ ವ್ಯಾಪಾರಿಗಳು ಸೇರಿದಂತೆ ಬೈಕಂಪಾಡಿ ಪಟ್ಟಣದ ವರ್ತಕರು, ನಾಗರಿಕರಿಗೆ ಬ್ಯಾಂಕಿನ ವ್ಯವಹಾರಕ್ಕೆ ಬಹಳ ಅನುಕೂಲಕರ ಜಾಗದಲ್ಲಿದೆ.
ಎಪಿಎಂಸಿ ಆಡಳಿತವು ಕೆನರಾ ಬ್ಯಾಂಕ್ ಶಾಖೆಯನ್ನು ಅಲ್ಲಿಂದ ತೆರವುಗೊಳಿಸಿ ಪಕ್ಕದ ಗ್ರಾಮದಲ್ಲಿರುವ ಸಿಂಡಿಕೇಟ್ (ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯ ನಂತರ ಕೆನರಾ ಬ್ಯಾಂಕ್ ಆಗಿದೆ) ಬ್ಯಾಂಕ್ ನ ಬ್ರಾಂಚ್ ನೊಂದಿಗೆ ಮರ್ಜರ್ ಆಗಲು ಮುಂದಾಗಿದೆ ಇದರಿಂದ ಬಹಳಷ್ಟು ಮಂದಿಗೆ ಅನಾನುಕೂಲವಾಗಲಿದೆ ಎಂದು ಡಿವೈಎಫ್‌ಐ ಸಂಘಟನೆಯು ತಿಳಿಸಿದೆ.
ಎಪಿಎಂಸಿ ಕಟ್ಟಡದಲ್ಲಿರುವ ನೂರಾರು ವ್ಯಾಪಾರಿಗಳ ಸಹಿತ ಬೈಕಂಪಾಡಿಯ ವ್ಯಾಪಾರಿಗಳು ಆತಂಕಿತರಾಗಿದ್ದಾರೆ. ಬ್ಯಾಂಕ್ ವ್ಯವಹಾರಕ್ಕೆ ಪರದಾಡಬೇಕಾದ ಸ್ಥಿತಿ ಎದುರಾಗುತ್ತದೆ ಎಂದು ಅಳಲು ತೋಡಿ, ಕರಾರು ಪತ್ರ ನವೀಕರಿಸಿ ಬ್ಯಾಂಕ್ ಶಾಖೆ ಉಳಿಸಿಕೊಡುವಂತೆ ಎಪಿಎಂಸಿ ಆಡಳಿತಕ್ಕೆ ಮನವಿ ಮಾಡಿದ್ದಾರೆ. ಆದರೆ, ಈಗಾಗಲೆ ಹಲವು ಆರೋಪಗಳಿಗೆ ಗುರಿಯಾಗಿರುವ ಮಂಗಳೂರು ಎಪಿಎಂಸಿ ಆಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಐದಾರು ವರ್ಷಗಳ ಕಾಲ ಬ್ಯಾಂಕ್ ನ ಬಾಡಿಗೆ ಕರಾರು ಪತ್ರದ ನವೀಕರಣದಂತಹ ಸಣ್ಣ ವಿಚಾರವನ್ನು ಪರಿಹರಸದ ಎಪಿಎಂಸಿ ಜಿಲ್ಲೆಯ ಕೃಷಿಕರ, ವರ್ತಕರ ಹಿತಾಸಕ್ತಿ ಕಾಪಾಡುವುದು ಕನಸಿನ ಮಾತು. ಎಪಿಎಂಸಿ ಆಡಳಿತದ ಇಂತಹ ಅವಾಂತರ, ಭ್ರಷ್ಟತೆ, ಜಡ್ಡುಗಟ್ಟಿದ ಮನೋಭಾವದಿಂದಲೆ ಇಂದು ಮಂಗಳೂರಿನ ಬೈಕಂಪಾಡಿ ಎಪಿಎಂಸಿ ಅವರಣ ಭೂತ ಬಂಗಲೆಯಂತಾಗಿ ಹಾಳು ಬಿದ್ದಿದೆ.
ಡಿವೈಎಫ್ಐ ಈ ಕರಾರು ಪತ್ರ ಸಮಸ್ಯೆಯನ್ನು ತಕ್ಷಣ ಸರಿಪಡಿಸಿ ಬ್ಯಾಂಕ್ ಶಾಖೆಯನ್ನು ಉಳಿಸಿಕೊಡುವಂತೆ ಇಂದು ಎಪಿಎಂಸಿ ಆಡಳಿತಕ್ಕೆ ಮನವಿ ನೀಡಿದೆ. ಬೇಡಿಕೆ ಈಡೇರದಿದ್ದರೆ ವರ್ತಕರು, ನಾಗರಿಕರ ಜೊತೆ ಸೇರಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.