ಅನ್ಯಾಯದ ವಿರುದ್ಧ ನ್ಯಾಯದ ಪರ ರಾಜ್ಯವ್ಯಾಪಿ ಮೊಳಗಿದ ಪ್ರತಿಭಟನೆ

ಬೆಂಗಳೂರು: ದೇಶದಲ್ಲಿ ಮಹಿಳೆಯ ಘನತೆಗೆ ಎದುರಾಗುತ್ತಿರುವ ದಾಳಿಯಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಒಂದೆಡೆ ಅತ್ಯಾಚಾರಿ ಖೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಮತ್ತೊಂದೆಡೆ ಲೈಂಗಿಕ ದೌರ್ಜನ್ಯ ನಡೆಸಿದವರ ವಿರುದ್ಧ ಕೈಗೊಳ್ಳುವ ಕ್ರಮಗಳು ವಿಳಂಬತೆಯಿಂದಾಗಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯದ ಭರವಸೆ ವಿಳಂಬವಾಗಲಿದೆ.

ಮಹಿಳೆಯರ ಘನತೆಯ ಬದುಕನ್ನು ಕಾಪಾಡುವುದು ದೇಶದ ಕರ್ತವ್ಯವೆಂದು ಪ್ರಧಾನಮಂತ್ರಿ ನರೇಂದ್ರಮೋದಿ ಸ್ವಾತಂತ್ರ್ಯ ‌ದಿನದಂದು‌ ರಾಷ್ಟ್ರ ಧ್ವಜವನ್ನು ಹಾರಿಸುವಾಗ ಕರೆ ಕೊಟ್ಟರು. ವಿಪರ್ಯಾಸವೆಂದರೆ ಅದೇ ದಿನ ತನ್ನ ಘನತೆಯನ್ನು ಮಣ್ಣು ಪಾಲು ಮಾಡಿದ ಪಾತಕಿಗಳ ವಿರುದ್ದ ಸರಿಸುಮಾರು ಎರಡು ದಶಕಗಳ ಕಾಲ ಹೋರಾಟ ಮಾಡಿ ನ್ಯಾಯ‌ ಪಡೆದ ಸಮಾಧಾನದಲ್ಲಿದ್ದ ಬಿಲ್ಕಿಸ್ ಬಾನೊಗೆ ಮತ್ತು ದೇಶದ‌ ಎಲ್ಲ ಜೀವಪರ ಮನುಷ್ಯರಿಗೆ ಆಘಾತ ಕಾದಿತ್ತು. ಅತ್ಯಾಚಾರಿ ಆರೋಪಿಗಳನ್ನು ಬಿಡುಗಡೆಗೊಳಿಸಲಾಯಿತು.

ಹಾಗೆಯೇ ರಾಜ್ಯದಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಪೋಕ್ಸೋ ಕಾಯ್ದೆಯಡಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಶರಣರನ್ನು ಕಠಿಣ ಕಾನೂನಿನ ವಿಚಾರಣೆಗೆ ಒಳಪಡಿಸಿ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ರಾಜ್ಯದಲ್ಲಿ ಇಂದು(ಸೆಪ್ಟಂಬರ್‌ 02) ಅನ್ಯಾಯದ ವಿರುದ್ಧ ನ್ಯಾಯದ ಪರ ಆಗ್ರಹಿಸಿ ಪ್ರತಿಭಟನೆಗಳು ಮೊಳಗಿದವು.

2002ರಲ್ಲಿ ಗುಜರಾತ್ ನಲ್ಲಿ ಐದು ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನೊ ‌ಮತ್ತವಳ ತಂಗಿ, ತಾಯಿಯರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಬಿಲ್ಕಿಸ್‌ ಬಾನೊ ಅವಳ ಮೂರು ವರ್ಷದ ಕೂಸನ್ನು ಕಲ್ಲಿಗೆ ಬಡಿದು ಸಾಯಿಸಿದ ಅಪರಾಧ ಸಾಬೀತಾಗಿ ಜೀವಾವಧಿ ‌ಶಿಕ್ಷೆ ಅನುಭವಿಸುತ್ತಿದ್ದ 11  ಜನರನ್ನು ಗುಜರಾತ್ ‌ಬಿ.ಜೆ.ಪಿ. ರಾಜ್ಯ ಸರಕಾರ ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನದಂದು‌ ಬಿಡುಗಡೆ ಗೊಳಿಸಿತು. ಇನ್ನು ರಾಜಸ್ಥಾನದಲ್ಲಿ ದಲಿತ ಬಾಲಕ ಕುಡಿಯುವ ನೀರನ್ನು ಮುಟ್ಟಿದನೆಂದು ಶಿಕ್ಷಕನೇ‌ ಹೊಡೆದು ಕೊಂದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಅಲ್ಲದೇ ಸ್ವಾತಂತ್ರ್ಯ ದಿನದಂದು ಮಹಿಳೆಯರ ಘನತೆಯ ರಕ್ಷಣೆಯ‌ ಕುರಿತು ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಇದುವರೆಗೂ ಈ ಅವಮಾನದ ವಿರುದ್ಧ ಚಕಾರ ಶಬ್ದವೆತ್ತಿಲ್ಲ.

ಅದೇ ರೀತಿ ಕರ್ನಾಟಕದಲ್ಲಿ ಚಿತ್ರದುರ್ಗದ ಮುರುಘಾಮಠದ ಸ್ವಾಮಿಯ ಮೇಲೆ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿದೆ. ಪೋಕ್ಸೋ ಮತ್ತು ‌ಎಸ್.ಸಿ.ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆಯ ಅನ್ವಯ ದೂರು‌ ದಾಖಲಾಗಿದೆ.

ಇಂತಹ ಘಟನೆಗಳು ಘೋರ ಅನ್ಯಾಯ ಮತ್ತು ಮಹಿಳಾ ಕುಲಕ್ಕೆ ಮಾಡಿದ ಅವಮಾನ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬಿಲ್ಕಿಸ್ ಬಾನೊಗೆ ನ್ಯಾಯ ಒದಗಿಸಲು 11 ಜನ ಅಪರಾಧಿಗಳ ಬಿಡುಗಡೆಯನ್ನು ರದ್ದು ಮಾಡಿ ತಕ್ಷಣವೇ ಜೈಲಿಗಟ್ಟಬೇಕು. ಅಮರಣಾಂತ ಕಠಿಣ ಸಜೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಅದೇ ರೀತಿ ರಾಜಸ್ಥಾನದಲ್ಲಿ ದಲಿತ ಬಾಲಕನನ್ನು ಸಾಯ ಹೊಡೆದ ಶಿಕ್ಷಕನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಜನರ ಒತ್ತಡದ‌ ನಂತರವಷ್ಟೇ ಬಂಧನವಾದ ಮುರುಘರಾಜೇಂದ್ರ ಮಠದ ಸ್ವಾಮಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗಲಾರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯರಿಗೆ ಕಾನೂನು ರೀತ್ಯಾ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ಬಾಲಕಿಯರಿಗೆ ಮತ್ತು ಹಾಸ್ಟೆಲ್ ನಲ್ಲಿ ಇರುವ ಇತರ ವಿದ್ಯಾರ್ಥಿನಿಯರಿಗೆ ಮತ್ತು ಅವರ ಪೋಷಕರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಲೇಖಕಿ ಡಾ. ವಿಜಯಮ್ಮ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ಎಸ್. ವಿಮಲಾ, ಹೋರಾಟಗಾರ್ತಿ ಕೃಪಾ ಆಳ್ವ, ಲೇಖಕಿ ಕೆ.ಷರೀಫಾ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾ ಅಧ್ಯಕ್ಷ ಆರ್‌. ಮೋಹನ್ ರಾಜ್, ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ, ಹೋರಾಟಗಾರರಾದ ಪ್ರಫುಲ್ಲಾ ಮಧುಕರ್, ಪುಷ್ಪಾ ಅಮರನಾಥ್, ಕವಿಯತ್ರಿ ವಸುಂಧರ ಭೂಪತಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಮುಖಂಡೆ ಗೌರಮ್ಮ, ಎಸ್‌ಎಫ್‌ಐ ರಾಜ್ಯ ಸಹ ಕಾರ್ಯದರ್ಶಿ ಭೀಮನಗೌಡ, ಎಸ್‌ಎಫ್‌ಐ ಮುಖಂಡ ಶಿವಕುಮಾರ್ ಸೇರಿದಂತೆ ಜನಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.

ಹಾಸನ: ಜಿಲ್ಲಾಧಿಕಾರಿ ಕಛೇರಿ ಎದುರು ದಲಿತ ಮತ್ತು ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಪೋಕ್ಸೋ ಕಾಯ್ದೆಯಡಿ ಆರೋಪಿಯಾಗಿರುವ ಶಿವಮೂರ್ತಿ ಶರಣರನ್ನು ಕಠಿಣ ಕಾನೂನಿನ ವಿಚಾರಣೆಗೆ ಒಳಪಡಿಸಿ ಕಠಿಣ ಶಿಕ್ಷೆ ನೀಡಬೇಕು ಮತ್ತು ಸಂತ್ರಸ್ತ ಬಾಲಕಿಯರು ಹಾಗೂ ಅವರ ಕುಟುಂಬಗಳಿಗೆ ಸೂಕ್ತ ರಕ್ಷಣೆ ಮತ್ತು ಪರಿಹಾರ ನೀಡುವಂತೆ ಆಗ್ರಹಿಸಿದರು.

ಗುಜರಾತಿನಲ್ಲಿ ಬಿಲ್ಕಿಸ್‌ ಬಾನೊ ಪ್ರಕರಣದ ಸಾಮೂಹಿಕ ಅತ್ಯಾಚಾರ ಪ್ರಕರಣದ ಖೈದಿಗಳಿಗೆ ‘ಸನ್ನಡತೆಯ’ ಆಧಾರದಲ್ಲಿ ಬಿಡುಗಡೆ ಮಾಡಿರುವ ಗುಜರಾತಿನ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿದರು ಮತ್ತು ಕೂಡಲೇ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕೆಂದು ಆಗ್ರಹಿಸಿದರು.

ಮಂಡ್ಯ: ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಸೇರಲಾದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಬಲವಂತವಾಗಿ ಪ್ರತಿಭಟನಾಕಾರರನ್ನು ಎಳೆದಾಡಿದ್ದಾರೆ. ಪ್ರತಿಭಟನಾ ನಿರತ ಮಹಿಳೆಯನ್ನು ಮುಟ್ಟಿ ಬಲವಾಗಿ ನೂಕುತ್ತಿರುವ ಪುರುಷ ಪೋಲೀಸರ ಮೇಲೆ ತಕ್ಷಣ ಮಂಡ್ಯ ಪೋಲೀಸ್ ವರಿಷ್ಠಾಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳು ಕಛೇರಿ ಸುತ್ತ ಹಾಕಲಾಗಿರುವ ಬೇಲಿ ತೆರವುಗೊಳಿಸಬೇಕು ಎಂದು ಸಹ ಆಗ್ರಹಿಸಲಾಗಿದೆ.

ಮಂಡ್ಯ

 

ಕಲಬುರಗಿ
Donate Janashakthi Media

Leave a Reply

Your email address will not be published. Required fields are marked *