ವರದಿ : ಗೋಪನಹಳ್ಳಿ ಶಿವಣ್
ಚಳ್ಳಕೆರೆ: ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿ ಇಲಾಖೆಯ ಅನುಮತಿ ಪಡೆಯದೆ ರಸ್ತೆ ನಿರ್ಮಾಣ ಮಾಡಿದ ಅಧಿಕಾರಿ ಹಾಗೂ ಗುತ್ತಿಗೆದಾರನ ವಿರುದ್ಧ ವಲಯ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ನ್ಯಾಯಾಲಯ ಮೆಟ್ಟಿಲೇರಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಚಳ್ಳಕೆರೆಯಿಂದ ಚಿತ್ರದುರ್ಗ ಮಾರ್ಗದ ಮುಖ್ಯರಸ್ತೆಯ ಅರಣ್ಯ ಇಲಾಖೆಯ ಕೂಗಳತೆ ದೂರದಲ್ಲಿರುವ ಅರಣ್ಯ ಸಂಶೋಧನದ ಪ್ರಾಯೋಗಿಕ “ಬಿ” ಬ್ಲಾಕ್ ಪಕ್ಕದಿಂದ ಸೋಮಗುದ್ದು ಬೋವಿಕಾಲೋನಿಗೆ ಸುಮಾರು 3 ಕಿ.ಮೀ ಸಂಪರ್ಕ ರಸ್ತೆಯಲ್ಲಿ ಅರಣ್ಯ ಇಲಾಖೆಗೆ ಸೇರಿದ ಸುಮಾರು 2 ಕಿ.ಮೀ ದೂರದ ಬಂಡಿದಾರಿಯನ್ನು ಡಾಂಬರು ರಸ್ತೆ ನಿರ್ಮಾಣ ಮಾಡಲಾಗಿದೆ.
ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿಯಲ್ಲಿ ಡಾಂಬರು ರಸ್ತೆ ನಿರ್ಮಾಣ ಮಾಡಿದ ಚಿತ್ರದುರ್ಗ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನೀಯರ್ ಜಿ.ಎಂ. ನಾಗರಾಜ, ಹಾಗೂ ಮನ್ನೆಕೋಟೆ ಗ್ರಾಮದ ಗುತ್ತಿಗೆದಾರ ಎಂ. ಬಿ ವಿಜಯೇಂದ್ರ ಇಬ್ಬರ ವಿರುದ್ಧ ವಲಯ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
ಕರ್ನಾಟಕ ಅರಣ್ಯ ಕಾಯಿದೆ 1963 ಪ್ರಕರಣ 24 (ಜಿ)(ಜಿ) ಅರಣ್ಯ ಸಂರಕ್ಷಣಾ ಕಾಯ್ದೆ 1980 ಪ್ರಕರಣ (2) ರನ್ವಯ ಪ್ರಕರಣ ದಾಖಲಿಸಲಾಗಿದೆ. 03.06.2022ರಂದು ಅರಣ್ಯ ಮೊಕದ್ದಮೆಗೆ ಸಂಬಂಧಪಟ್ಟಂತೆ ವಸ್ತುಗಳನ್ನು ವಶಪಡಿಸಿಕೊಂಡ ಬಗ್ಗೆ ವರದಿ ಹಾಗೂ ಈ ಮೊಕದ್ದಮೆಯ ಬಗ್ಗೆ ಪೂರ್ಣ ವಿವರವನ್ನು ಚಳ್ಳಕೆರೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳು ಚಳ್ಳಕೆರೆ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ.
ಆರ್‌ಟಿಐ ಕಾರ್ಯಕರ್ತ ವೈ.ಇ.ನವೀನ್ ಮಾತನಾಡಿ, ಅರಣ್ಯ ಪ್ರದೇಶದಲ್ಲಿ ಇರುವ ಬಂಡಿದಾರಿಯನ್ನು ಜೆಸಿಬಿ ಯಂತ್ರ ಬಳಸಿ ಅರಣ್ಯ ಇಲಾಖೆಯ ಮಧ್ಯೆ ರಸ್ತೆಯನ್ನು ನಿರ್ಮಿಸಿರುವುದರಿಂದ ಅರಣ್ಯ ಪ್ರದೇಶದಲ್ಲಿನ ಅರಣ್ಯ ಸಂಪತ್ತನ್ನು ಲೂಟಿಕೊರರಿಗೆ ದಾರಿ ಮಾಡಿಕೊಟ್ಟಂತಾಗಿದೆ.
ಮಾಹಿತಿ ಹಕ್ಕಿನಡಿಯಲ್ಲಿ ವಲಯ ಅರಣ್ಯ ಪ್ರದೇಶದಲ್ಲಿ 01-06-2021 ರಿಂದ 30-05-2022 ರವರೆಗೆ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಿರುವ ಬಗ್ಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದಾಗ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಿತ್ರದುರ್ಗ ಮುಖ್ಯರಸ್ತೆಯಿಂದ ಸೋಮಗುದ್ದುಬೋವಿ ಕಾಲೋನಿಗೆ ಹೋಗುವ ಅರಣ್ಯ ಇಲಾಖೆಯ ಬಂಡಿದಾರಿಯನ್ನು ನಿರ್ಮಿಸಿದ ಅಧಿಕಾರಿ ಹಾಗೂ ಗುತ್ತಿಗೆದಾರನ ಮೇಲೆ ಪ್ರಕರಣದ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿದರೆ ಸಾಲದು ಅರಣ್ಯ ಕಾಯ್ಕೆ ಉಲ್ಲಘಿಸಿ ರಸ್ತೆ ನಿರ್ಮಿಸಿದವರಿಗೆ ಕಾನೂನು ರೀತಿ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೆ ಚಳ್ಳಕೆರೆ ತಾಲೂಕಿನಲ್ಲಿ ಸುಮಾರು 500 ಎಕರೆ ಅರಣ್ಯ ಪ್ರದೇಶವನ್ನು ಬಲಿಷ್ಠರು, ರಾಜಕೀಯ ಶಕ್ತಿ ಬಳಕೆ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಂಡರೆ ಇನ್ನು ಕೆಲವರು ಕೊಳವೆ ಬಾವಿಯನ್ನು ಕೊರೆಸಿ ವಿದ್ಯುತ್ ಸಂಪರ್ಕ ಪಡೆದು ಭೂಮಿಯನ್ನು ಉಳುಮೆ ಮಾಡಿಕೊಂಡು ಭೂಮಿಯನ್ನು ಅಕ್ರಮ ಒತ್ತುವರಿ ಮಾಡಿಕೊಂಡು ಅರಣ್ಯ ಸಂಪತ್ತು ಹಾಗೂ ಅರಣ್ಯ ಪ್ರದೇಶದ ಜಾಗವನ್ನು ಯಥೇಚ್ಛವಾಗಿ ಬಳಸಿಕೊಳ್ಳಲುತ್ತಿದ್ದಾರೆ, ಗಿಡ ಮರಗಳನ್ನು ನಾಶಪಡಿಸಲಾಗಿದೆ.
ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದೇ ಇರುವುದರಿಂದ ಈಗ ಅರಣ್ಯ ಇಲಾಖೆಯ ಮಧ್ಯೆ ಡಾಂಬರ್ ರಸ್ತೆ ನಿರ್ಮಾಣ ಮಾಡಲಾಗಿದೆ. ಅರಣ್ಯ ಪ್ರದೇಶದೊಳಗೆ ನಿರ್ಮಿಸಿರುವ ರಸ್ತೆ ತೆರವುಗೊಳಿಸಿ, ನಿರ್ಮಾಣ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಅಕ್ರಮ ಒತ್ತುವರಿದಾರರ ವಿರುದ್ಧ ಕೂಡಲೇ ಕ್ರಮವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.