ಬೆಂಗಳೂರು: ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪ ಆರೋಪಿಸಿ ರಾಜ್ಯಪಾಲರು, ಅರುಣ್ ಸಿಂಗ್ ಗೆ ಸಚಿವ ಈಶ್ವರಪ್ಪ ದೂರಿನ ಹಿನ್ನಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗೆ ಹಂಚಿಕೆ ಮಾಡಿದ್ದ ಅನುದಾನವನ್ನು ತಡೆಹಿಡಿಯುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿ ಮನವಿ ಮೇರೆಗೆ 65 ಕೋಟಿ ರೂಗಳನ್ನು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹಂಚಿಕೆ ಮಾಡಿದ್ದ ಅನುದಾನವನ್ನು ತಡೆಹಿಡಿಯುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ ಮೇರೆಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ ಅತೀಕ್ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ : ರಾಜ್ಯ ಬಿಜೆಪಿ ಸರ್ಕಾರ 30 ಪರ್ಸೆಂಟ್ ಸರ್ಕಾರ ಆಗಿದೆ – ಸಿದ್ಧರಾಮಯ್ಯ ಆರೋಪ
ಪ್ರಧಾನ ಕಾರ್ಯದರ್ಶಿ ಗಳ ಸೂಚನೆ ಮೇರೆಗೆ ಗ್ರಾಮೀಣಾಭಿವೃದ್ದಿ ಇಲಾಖೆ ಅಧೀನ ಕಾರ್ಯದರ್ಶಿ ಅನುದಾನ ತಡೆಹಿಡಿಯುವಂತೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.
ಆ ಮೂಲಕ ಮುಖ್ಯಮಂತ್ರಿ ಹಾಗೂ ಇಲಾಖೆ ಸಚಿವರ ನಡುವಿನ ಅನುದಾನ ಹಂಚಿಕೆ ಹಸ್ತಕ್ಷೇಪಕ್ಕೆ ತಮ್ಮದೇ ಆದ ರೀತಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಸಚಿವ ಈಶ್ವರಪ್ಪ ಪ್ರತ್ಯುತ್ತರ ನೀಡಿದ್ದಾರೆ.