“ವಿಯೆಟ್ನಾಂ ಬಗ್ಗೆ ನಮಗೆ ಸುಳ್ಳು ಹೇಳಿದರು, ಇರಾಕ್ ಬಗ್ಗೆ ನಮಗೆ ಸುಳ್ಳು ಹೇಳಿದರು, ಇರಾನ್ ಬಗ್ಗೆ ನಮಗೆ ಸುಳ್ಳು ಹೇಳುತ್ತಿದ್ದಾರೆ”
ಇರಾನ್ ವಿರುದ್ಧ ಯುಎಸ್-ಇಸ್ರೇಲಿ ಯುದ್ದದ ಒಂದು ತಿಂಗಳು ಕಳೆಯುತ್ತಿರುವಂತೆ ಸ್ವತ: ಯುಎಸ್ ನಲ್ಲೇ ಈ ಯುದ್ಧವನ್ನು ವಿರೋಧಿಸಿ ಮಾರ್ಚ್ 28ರಂದು ದೇಶಾದ್ಯಂತ ಭಾರೀ ಮತಪ್ರದರ್ಶನಗಳು ನಡೆದಿವೆ. ಯುರೋಪಿನಲ್ಲೂ ಇದು ಪ್ರತಿಧ್ವನಿಸಿದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳ ಎಲ್ಲ 50 ರಾಜ್ಯಗಳಲ್ಲಿ ವಾಶಿಂಗ್ಟನ್, ನ್ಯೂಯಾರ್ಕ್, ಶಿಕಾಗೊ ಸೇರಿದಂತೆ 3100ಕ್ಕೂ ಹೆಚ್ಚು ಸ್ಥಳಗಳಲ್ಲಿ 85 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಇದರಲ್ಲಿ ಭಾಗವಹಿಸಿದರು ಎಂದು ವರದಿಯಾಗಿದೆ. ದೊರೆ
ಡೊನಾಲ್ಡ್ ಟ್ರಂಪ್ ರ ಎರಡನೇ ಅಧ್ಯಕ್ಷಾವಧಿಯಲ್ಲಿ ಅವರ ಸರ್ವಾಧಿಕಾರಶಾಹಿ, ಫ್ಯಾಸಿಸ್ಟ್ ತೆರನ ವರ್ತನೆಗಳನ್ನು ಖಂಡಿಸಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಆರಂಭವಾದ ‘ನೋ ಕಿಂಗ್ಸ್’(ದೊರೆಗಳು ಬೇಡ) ಚಳುವಳಿಯ ಮೂರನೇ ದೇಶವ್ಯಾಪಿ ಪ್ರತಿಭಟನೆ ಇದು. ವಲಸಿಗರ ಮೇಲೆ ಟ್ರಂಪ್ ಆಡಳಿತದ ಐ.ಸಿ.ಇ. (ವಲಸೆ ಹತೋಟಿ ಜಾರಿ ಇಲಾಖೆ)ನ ಕ್ರೂರ ಕ್ರಮಗಳಲ್ಲಿ ನಾಗರಿಕರ ಸಾವುಗಳನ್ನು ಪ್ರತಿಭಟಿಸಿ ಆರಂಭವಾದ ಚಳುವಳಿ ಈಗ ಇರಾನ್‍ಯುದ್ಧವೂ ಸೇರಿದಂತೆ ಅಧ್ಯಕ್ಷ ಟ್ರಂಪ್‍ರ ಎಲ್ಲ ಸರ್ವಾಧಿಕಾರೀ ವರ್ತನೆಗಳನ್ನು ಎತ್ತಿಕೊಳ್ಳುತ್ತಿದೆ. ದೊರೆ
ಜೂನ್ 2025ರಲ್ಲಿ ನಡೆದ ಮೊದಲ ದೇಶವ್ಯಾಫಿ ಮತಪ್ರದರ್ಶನಗಳಲ್ಲಿ 50ಲಕ್ಷ ಮಂದಿ ಭಾಗವಹಿಸಿದ್ದರು, ಅಕ್ಟೋಬರ್ 2025ರಲ್ಲಿ ನಡೆದ ಎರಡನೇ ಮತಪ್ರದರ್ಶನಗಳಲ್ಲಿ 70ಲಕ್ಷ ಮಂದಿ ಭಾಗವಹಿಸಿದ್ದರು, ಈಗ ಮಾರ್ಚ್ 28ರಂದು, ಯುಎಸ್-ಇಸ್ರೇಲಿಗಳ ಇರಾನ್ ಆಕ್ರಮಣದ ಒಂದು ತಿಂಗಳ ವಿನಾಶಕಾಂಡವನ್ನು ಪ್ರತಿಭಟಿಸಿರುವ ಮತಪ್ರದರ್ಶನಗಳಲ್ಲಿ ಭಾಗವಹಿಸಿರುವ ಅಮೆರಿಕನ್ನರ ಸಂಖ್ಯೆ 85ಲಕ್ಷಕ್ಕೇರಿದೆ. ಆಳುವ ರಿಪಬ್ಲಿಕನ್ ಪಕ್ಷದ ಗಟ್ಟಿನೆಲೆಗಳಲ್ಲೂ ಹಲವೆಡೆ ಮತಪ್ರದರ್ಶನಗಳು ಈ ಬಾರಿ ನಡೆದಿರುವುದು ಅಮೆರಿಕನ್ನರಲ್ಲಿ ಟ್ರಂಪ್ ರ ಯುದ್ಧಕೋರ ನೀತಿಗಳಿಗೆ ವಿರೋಧ ವ್ಯಾಪಕಗೊಳ್ಳುತ್ತಿರುವುದರ ಸಂಕೇತ ಎನ್ನಲಾಗಿದೆ.
ಇದನ್ನೂ ಓದಿ: ಶುಲ್ಕ ಏರಿಕೆ–ವಯೋಮಿತಿ ಗೊಂದಲ: ಬೆಂಗಳೂರಿನ ಪೋಷಕರಿಗೆ ಶಾಕ್!
ಮುಖ್ಯ ಮತಪ್ರದರ್ಶನ ಐಸಿಇ ವಿರೋಧಿ ಪ್ರತಿಭಟನೆಗಳ ಕೇಂದ್ರವಾದ ಮಿನ್ನೆಸೊಟದಲ್ಲಿ ನಡೆಯಿತು. ಇದರಲ್ಲಿ ಹಾಲಿವುಡ್‍ನ ಪ್ರಸಿದ್ಧ ಕಲಾವಿದರು ಭಾಗವಹಿಸಿದರು. “ನಮ್ಮಬಳಿ ಸೀಟಿಗಳಿವೆ, ಅವರ ಬಳಿ ಬಂದೂಕಗಳಿವೆ. ಮಿನಿಯಪೊಲಿಸ್ ನಲ್ಲಿ ಕ್ರಾಂತಿ ಆರಂಭವಾಗುತ್ತದೆ” ಎಂದು ಮತಪ್ರದರ್ಶನದ ಸ್ಥಳದಲ್ಲಿ ದೊಡ್ಡದಾಗಿ ಬರೆಯಲಾಗಿತ್ತು.


ರಾಜಧಾನಿ ವಾಶಿಂಗ್ಟನ್ ನಲ್ಲಿ “ಪುಟ್ ಡೌನ್ ಕ್ರೌನ್, ಕ್ಲೌನ್”(ಕಿರೀಟವನ್ನು ಕೆಳಗಿಳಿಸು, ಕೋಡಂಗಿಯೇ), “ರಿಜೈಮ್ ಚೇಂಜ್ ಬಿಗಿನ್ಸ್ ಅಟ್ ಹೋಂ”(ಆಳ್ವಿಕ ಬದಲಾವಣೆ ಇಲ್ಲಿಂದಲೇ ಆರಂಭ) ಮೊದಲಾದ ಘೋಷಣೆಗಳನ್ನು ಕೂಗುತ್ತ ನೂರಾರು ಪ್ರತಿಭಟನಾಕಾರರು ರಾಜಧಾನಿಯ ಪ್ರಖ್ಯಾತ ಲಿಂಕನ್ ಸ್ಮಾರಕವನ್ನು ದಾಟಿ ನ್ಯಾಷನಲ್ ಮಾಲ್ ನಲ್ಲಿ ಪ್ರತಿಭಟನೆ ನಡೆಸಿದರು. “ನಾವು ದೊರೆಗೆ ಲೇವಡಿಯನ್ನು ಒದಗಿಸುತ್ತೇವೆ, ಸರ್ವಾಧಿಕಾರಶಾಹಿಯನ್ನು ನಗೆಪಾಟಲು ಮಾಡುತ್ತೇವೆ” ಎಂದು ಒಬ್ಬ ಭಾಷಣಕಾರರು ಹೇಳಿದರು. ಬಹಳೆಡೆಗಳಲ್ಲಿ ಟ್ರಂಪ್ ಮ ತ್ತು ಆತನ ಯುದ್ಧ ಸಂಗಡಿಗರನ್ನು ಲೇವಡಿ ಮಾಡುವ ಫಲಕಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸುತ್ತಿದ್ದರು.
ನ್ಯೂಯಾರ್ಕಿನಲ್ಲಿ ಪ್ರತಿಭಟನೆಯಲ್ಲಿ ಮಾತನಾಡಿದ ಇನ್ನೊಬ್ಬ ಭಾಷಣಕಾರರು ಟ್ರಂಪ್ ಮತ್ತು ಸಂಗಡಿಗರು ಜನರು ಪ್ರತಿಭಟಿಸಲು ಭಯಪಡಬೇಕು ಎಂದು ಬಯಸುತ್ತಾರೆ, ಆದರೆ ಅವರು ಬಹಳ ದೊಡ್ಡ ತಪ್ಪು ಮಾಡುತ್ತಿದ್ದಾರೆ ಎಂದು ಸಾರಿದರು.
ಯುಎಸ್ ನ ಹೊರಗೆಯೂ ಹತ್ತಾರು ನಗರಗಳಲ್ಲಿ ಅಮೆರಿಕನ್ನರು ಆ ದೇಶವಾಸಿಗಳೋಂದಿಗೆ ಮತಪ್ರದರ್ಶನ ನಡೆಸಿರುವ ವರದಿಗಳೂ ಬಂದಿವೆ. ರೋಮ್ ನಲ್ಲಿ ಇಟೆಲಿಯ ಬಲಪಂಥೀಯ ಸರಕಾರದ ನಡೆಗಳನ್ನು ಹೀಗಳೆಯುತ್ತ ಯುದ್ಧ-ವಿರೋಧಿ ಘೋಷಣೆಗಳು ಕೇಳಬಂದವು. ಲಂಡನಿನಲ್ಲಿ “ಅತಿ ಬಲಪಂಥೀಯರನ್ನು ತಡೆಯಿರಿ”, “ ಜನಾಂಗವಾದವನ್ನು ಎದುರಿಸಿ ನಿಲ್ಲಿ” ಎಂಬ ಫಲಕಗಳೊಂದಿಗೆ ಪ್ರತಿಭಟನೆಗಳು ನಡೆದವು.
ಇದನ್ನೂ ನೋಡಿ: ಕುವೆಂಪು: ಮನುಷ್ಯತ್ವದ ಹೊಸ ಭಾಷೆ ಕಟ್ಟಿದ ಯುಗಪ್ರಜ್ಞೆ — ಎಸ್.ಜಿ. ಸಿದ್ದರಾಮಯ್ಯ Janashakthi Media
ಪ್ಯಾರಿಸಿನಲ್ಲಿ ಐತಿಹಾಸಿಕ ಬೆಸ್ತಿಲ್ ಕೋಟೆಯ ಬಳಿ ಮಾನವಹಕ್ಕು ಸಂಘಟನೆಗಳು, ಕಾರ್ಮಿಕ ಸಂಘಟನೆಗಳ ಜೊತೆಗೂಡಿ ಅಮೆರಿಕನ್ನರು ಮತಪ್ರದರ್ಶನ ನಡೆಸಿದರು. “ಟ್ರಂಪ್ ರ ಎಲ್ಲ ಕಾನೂನುಬಾಹಿರ, ಅನೈತಿಕ, ಬೇಕಾಬಿಟ್ಟಿ, ನಿರರ್ಥಕ ಯುದ್ಧಗಳನ್ನು ವಿರೋಧಿಸುತ್ತೇವೆ” ಎಂದು ಭಾಷಣಕಾರರು ಹೇಳಿದರು.
ಪೊರ್ತುಗಲ್, ಜರ್ಮನಿ, ಗ್ರೀಸ್ ನಲ್ಲೂ ಮತಪ್ರದರ್ಶನಗಳು ನಡೆದ ವರದಿಗಳು ಬಂದಿವೆ.
“ಡೊನಾಲ್ಡ್ ಟ್ರಂಪ್ ತಾನು ಕಿವಿಗೊಡುತ್ತಿಲ್ಲ ಎಂದು ನಟಿಸಬಹುದು,ಆದರೆ ಆತ ಇಂದು ಬೀದಿಗಿಳಿದ ಲಕ್ಷಾಂತರ ಮಂದಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ” ಎಂದು ಅಮೆರಿಕನ್ ಅಧ್ಯಾಪಕರ ಒಕ್ಕೂಟದ ಒಬ್ಬ ಮುಖಂಡರು ಹೇಳಿದರು.
“ವಿಯೆಟ್ನಾಂ ಬಗ್ಗೆ ನಮಗೆ ಸುಳ್ಳು ಹೇಳಿದರು, ಇರಾಕ್ ಬಗ್ಗೆ ನಮಗೆ ಸುಳ್ಳು ಹೇಳಿದರು, ಇರಾನ್ ಬಗ್ಗೆ ನಮಗೆ ಸುಳ್ಳು ಹೇಳುತ್ತಿದ್ದಾರೆ” ಎಂಬ ಹಿರಿಯ ರಾಜಕಾರಣಿ ಬರ್ನಿ ಸ್ಯಾಂಡರ್ಸ್ ರವರ ಮಾತುಗಳನ್ನು ಲಕ್ಷಾಂತರ ಅಮೆರಿಕನ್ನರು ಅನುಮೋದಿಸುತ್ತಿರುವಂತೆ ಕಾಣುತ್ತಿದೆ.

