ನವದೆಹಲಿ: 1984 ರ ಸಿಖ್ ವಿರೋಧಿ ದಂಗೆ ವೇಳೆ ಸರಸ್ವತಿ ವಿಹಾರ್ ಪ್ರದೇಶದಲ್ಲಿ ನಡೆದ ಇಬ್ಬರು ವ್ಯಕ್ತಿಗಳ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಬುಧವಾರ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಅವರನ್ನು ದೋಷಿ ಎಂದು ತೀರ್ಪು ನೀಡಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಇಂದು ತೀರ್ಪು ಪ್ರಕಟಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಫೆಬ್ರವರಿ 18ಕ್ಕೆ ಕಾಯ್ದಿರಿಸಿದ್ದಾರೆ.
ಇದನ್ನು ಓದಿ :-ಹಾಸನ| ಮೈಕ್ರೋ ಫೈನಾನ್ಸ್ ಹಾಕಿದ್ದ ಬೀಗ ಒಡೆದ ರೈತ ಸಂಘ
ನವೆಂಬರ್ 1, 1984 ರಂದು ಜಸ್ವಂತ್ ಸಿಂಗ್ ಮತ್ತು ಅವರ ಮಗ ತರುಣ್‌ದೀಪ್ ಸಿಂಗ್ ಅವರ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಈ ಜೋಡಿ ಕೊಲೆ ಸಂಬಂಧ ಪಂಜಾಬಿ ಬಾಗ್ ಪೊಲೀಸ್ ಠಾಣೆ ಆರಂಭದಲ್ಲಿ ಪ್ರಕರಣವನ್ನು ದಾಖಲಿಸಿದ್ದರೂ, ನಂತರ ವಿಶೇಷ ತನಿಖಾ ತಂಡ ತನಿಖೆಯ ಜವಾಬ್ದಾರಿ ವಹಿಸಿಕೊಂಡಿತ್ತು.
ದೂರುದಾರ ಜಸ್ವಂತ್ ಅವರ ಪತ್ನಿಯ ಮನೆಯ ಮೇಲೆ ದಾಳಿ ಮಾಡಿದ ಗುಂಪೊಂದು, ಆಕೆಯ ಪತಿ ಮತ್ತು ಮಗನನ್ನು ಕೊಂದು, ವಸ್ತುಗಳನ್ನು ಲೂಟಿ ಮಾಡುವುದರ ಜೊತೆಗೆ ಅವರ ಮನೆಗೆ ಬೆಂಕಿ ಹಚ್ಚಿತು ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.
ಸಜ್ಜನ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಲಯದ ಆದೇಶವು “ಅವರು ಕೇವಲ ಈ ಕೃತ್ಯದಲ್ಲಿ ಭಾಗವಹಿಸಿದ್ದು ಮಾತ್ರವಲ್ಲ, ಗುಂಪಿನ ನೇತೃತ್ವ ವಹಿಸಿದ್ದರು ಎಂಬ ಪ್ರಾಥಮಿಕ ಅಭಿಪ್ರಾಯ”ವನ್ನು ರೂಪಿಸಲು ಸಾಕಷ್ಟು ಪುರಾವೆಗಳನ್ನು ಸಾಕ್ಷೀಕರಿಸಿತು.