ದೇವನಹಳ್ಳಿ| ಭೂಸ್ವಾಧೀನ ವಿರೋಧಿಸಿ ‘ಸಂಯುಕ್ತ ಹೋರಾಟ’ದಿಂದ ‘ದೇವನಹಳ್ಳಿ ಚಲೋ’ಗೆ ಕರೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ ರೈತರು ಕಳೆದ 1180 ದಿನಗಳಿಂದ  ಕೆಐಎಡಿಬಿ ಭೂಸ್ವಾಧೀನ ವಿರೋಧಿ ಹೋರಾಟ ಸಂಘರ್ಷದ ಸ್ಥಿತಿಗೆ ತಲುಪಿದೆ. ಬಲವಂತದ ಹಾಗೂ ಅನ್ಯಾಯದ ಭೂಸ್ವಾಧೀನ ವಿರೋಧಿಸಿ, ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಯಿಂದ ಜೂನ್‌ 25 ರಂದು ‘ದೇವನಹಳ್ಳಿ ಚಲೋ’ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದು  ಸಂಚಾಲಕರಲ್ಲಿ ಒಬ್ಬರಾದ ಬಡಗಲಪುರ ನಾಗೇಂದ್ರ ತಿಳಿಸಿದರು. ದೇವನಹಳ್ಳಿ

ಅವರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಇದು ನಿರ್ಣಾಯಕ ಹೋರಾಟವಾಗಿದ್ದು ಸರ್ಕಾರ ಈ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈ ಬಿಡುವ ತನಕ ಹಿಂದೆ ಸರಿಯದೆ ಮುಂದುವರೆಯಲಿದೆ. ಅನಿರ್ಧಿಷ್ಟ ಹೋರಾಟಕ್ಕೆ ಸಜ್ಜಾಗಿ ರಾಜ್ಯದ ಎಲ್ಲಾ ಸಂಘಟನೆಗಳ ಮುಂದಾಳುಗಳು, ಕಾರ್ಯಕರ್ತರು ಹಾಗೂ ನಾಗರೀಕರು ಹೋರಾಟ ನಿರತ ರೈತರ ಜೊತೆಗೂಡಲು ದೇವನಹಳ್ಳಿಗೆ ಬರುತ್ತಿದ್ದಾರೆ ಎಂದರು.

ಕಳೆದ 1180 ದಿನಗಳಿಂದ ಅಂದರೆ ಸುಮಾರು ನಾಲ್ಕು ವರ್ಷಗಳಿಂದ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ನಾಡಕಚೇರಿ ಮುಂದೆ ಅನಿರ್ದಿಷ್ಟ ಪ್ರತಿಭಟನೆ ನಡೆಸುತ್ತಿದ್ದಾರೆ. ಶೇಕಡಾ 80 ರಷ್ಟು ರೈತರು ಲಿಖಿತವಾಗಿ ಭೂ ಸ್ವಾಧೀನಕ್ಕೆ ತಮ್ಮಅಸಮ್ಮತಿ ಹಾಗೂ ವಿರೋಧವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರೂ, ಬಲವಂತದ ಭೂ ಸ್ವಾಧೀನಕ್ಕೆ ಕ್ರಮವಹಿಸಿರುವುದು, ಭೂ ಸ್ವಾಧೀನ ಕಾಯ್ದೆ-2013 ರ ಸ್ಪಷ್ಠ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5,000 ಕೋಟಿ ಅನುದಾನ: ಸಿಎಂ ಸಿದ್ದರಾಮಯ್ಯ ದೇವನಹಳ್ಳಿ

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಟಿ.ಯಶಂವಂತ್‌ ಮಾತನಾಡಿ,  ರೈತರು ವಿವಿಧೆಡೆ ನಡೆಸಿದ ಪ್ರತಿಭಟನಾಧರಣಿ ಸ್ಥಳಗಳಿಗೆ ಈಗಿನ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾಗಿದ್ದಾಗ ಭೇಟಿಕೊಟ್ಟು ತಾನೂ ಅಧಿಕಾರಕ್ಕೆ ಬಂದರೆ ಅನ್ಯಾಯ ಹಾಗೂ ಬಲವಂತದ ಭೂ ಸ್ವಾಧೀನವನ್ನು ರದ್ದುಪಡಿಸುವುದಾಗಿ ಸಾರ್ವಜನಿಕ ಘೋಷಣೆ ಮಾಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಈಗ ಉಸ್ತುವಾರಿ ಸಚಿವರಾಗಿರುವ ಕೆ.ಹೆಚ್. ಮುನಿಯಪ್ಪ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಬಲವಂತವಾಗಿ ಭೂ ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ಈ ರೈತರ ಮತ ಕೇಳಿದ್ದರು. ಆದರೆ ಈ ಇಬ್ಬರೂ ಅಧಿಕಾರಕ್ಕೆ ಬಂದು ಎರಡುವರೆ ವರ್ಷಗಳಾದರೂ ತಮ್ಮ ವಚನಕ್ಕೆ ವಿರುದ್ದವಾಗಿ ವರ್ತಿಸಿ ವಚನಭ್ರಷ್ಟರು ಎಂದು ಸಾಬೀತು ಮಾಡಿಕೊಂಡಿದ್ದಾರೆ ಇದು ಸಾರ್ವಜನಿಕ ಹುದ್ದೆಗೆ ಮತ್ತು ನಡವಳಿಕೆಗೆ ಯೋಗ್ಯವಲ್ಲದ್ದು ಎಂದು ಟೀಕಿಸಿದರು.

ಇತ್ತೀಚಿಗಿನ ಸಭೆಯೂ ಸೇರಿದಂತೆ ಕಳೆದ ನಾಲ್ಕು ವರ್ಷಗಳಲ್ಲಿ ರೈತರ ಪ್ರತಿಭಟನಾ ಒತ್ತಡ ಹೆಚ್ಚಿದ ಸಂದರ್ಭದಲ್ಲೆಲ್ಲಾ ಮುಖ್ಯಮಂತ್ರಿ ನೇತೃತ್ವದಲ್ಲಿ ನಾಲ್ಕಾರು ಸಭೆಗಳು, ಉಸ್ತುವಾರಿ ಮಂತ್ರಿ ನೇತೃತ್ವದಲ್ಲಿ ಹತ್ತಾರು ಸಭೆಗಳು ಅಲ್ಲದೇ ಸ್ವತಃಉಸ್ತುವಾರಿ ಮಂತ್ರಿ ಹತ್ತಾರು ಬಾರಿಧರಣಿ ಸ್ಥಳಕ್ಕೆ ಭೇಟಿ ಕೊಟ್ಟು ರೈತರ ಪರವಾಗಿ ತೀರ್ಮಾನ ಮಾಡುವುದಾಗಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ರೈತರ ಒಪ್ಪಿಗೆ ಇಲ್ಲದೇ ಭೂ ಸ್ವಾಧೀನ ಮುಂದುವರೆಸುವುದಿಲ್ಲ ಎಂದು ಸಾರ್ವಜನಿಕವಾಗಿ ಹಲವಾರು ಬಾರಿ ಸ್ಪಷ್ಟ ಪಡಿಸಿದ್ದಾರೆ. ಈ ರೀತಿ ಭರವಸೆ ನೀಡಿ ಒಳಗೊಳಗೆ ಭೂಸ್ವಾಧೀನದ ಪ್ರಕ್ರಿಯೆ ಮುಂದುವರೆಸಿ ಅಂತಿಮ ಅಧಿಸೂಚನೆ ಹೊರಡಿಸಿರುವುದು ರೈತರಲ್ಲಿ ಹತಾಶೆ-ನಿರಾಶೆ ಉಂಟು ಮಾಡಿ ಒಡಕು ಉಂಟು ಮಾಡುವ ಹೀನ ಕುತಂತ್ರವಲ್ಲದೇ ಬೇರೇನೂ ಅಲ್ಲ ಎಂದರು.

ಸಾರ್ವಜನಿಕವಾಗಿ ಒಂದು ಮುಖ ತೋರಿ, ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಇನ್ನೊಂದು ರೀತಿಯಲ್ಲಿಆದೇಶ ನೀಡಿ ರೈತ ಸಮುದಾಯವನ್ನು ಹಾಗೂ ರೈತ ಹೋರಾಟವನ್ನು ಸಿದ್ದರಾಮಯ್ಯರವರ ನೇತೃತ್ವದ ರಾಜ್ಯ ಸರ್ಕಾರ ಅಪಮಾನಿಸಿದೆ. ಚನ್ನರಾಯಪಟ್ಟಣ ಹೋಬಳಿ ರೈತರ ಧರಣಿ ಸ್ಥಳಕ್ಕೆ ಈ ನಾಲ್ಕು ವರ್ಷಗಳಲ್ಲಿ ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷರು, ಸಂಯುಕ್ತ ಕಿಸಾನ್ ಮೋರ್ಚಾ ನಾಯಕರೂ ಆಗಿರುವ ಡಾ. ಅಶೋಕ್ ಧವಳೆ, ಅಖಿಲ ಭಾರತಕಿಸಾನ್ ಸಭಾದ ಅಖಿಲ ಭಾರತ ಹಣಕಾಸು ಕಾರ್ಯದರ್ಶಿ ಮಾಜಿ ಶಾಸಕ ಕೃಷ್ಣ ಪ್ರಸಾದ್, ಭಾರತೀಯ ಕಿಸಾನ್‌ ಯೂನಿಯನ್‌ನ ರಾಕೇಶ್‌ ಟಿಕಾಯತ್ ಸೇರಿದಂತೆ ರಾಷ್ಟ್ರೀಯ ರೈತ ನೇತಾರರು ಭೇಟಿಕೊಟ್ಟು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಡೀ ರಾಜ್ಯದ ಎಲ್ಲಾ ರೈತ ಚಳವಳಿಗಳ ಹಾಗೂ ಬುದ್ಧಿಜೀವಿ, ಸಾಹಿತಿಗಳ ಬೆಂಬಲ ಮತ್ತು ಅನುಕಂಪ ಈ ಭೂ ಸ್ವಾಧೀನ ವಿರೋಧಿ ರೈತರ ಮೇಲೆ ಇದೆ. ಮೇಲಾಗಿ ತಮ್ಮ ತೀವ್ರ ಅನಾರೋಗ್ಯದ ನಡುವೆಯೂ ಈ ರೈತರ ಹೋರಾಟಕ್ಕೆ ನೇತೃತ್ವ ನೀಡುತ್ತಿದ್ದ ಜಿ.ಸಿ. ಬಯ್ಯಾರೆಡ್ಡಿರವರು ಈ ಹೋರಾಟದ ಬೇಡಿಕೆಯನ್ನು ಪುನರುಚ್ಚರಿಸುತ್ತಾ ಮರಣವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಕೆಐಎಡಿಬಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡರಾದ ಕಾರಳ್ಳಿ ಶ್ರೀನಿವಾಸ್ ಮಾತನಾಡಿ,  ಬಹುರಾಷ್ಟ್ರೀಯ ಸಂಸ್ಥೆಗಳು, ರಿಯಲ್‌ಎಸ್ಟೇಟ್ ಮಾಫಿಯಾಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಬಲವಂತದ ಹಾಗೂ ಅನ್ಯಾಯದ ಭೂಸ್ವಾಧೀನ ಮಾಡೇತೀರುವ ಹಠ ಸರ್ವಾಧಿಕಾರಿ ಮನೋಭಾವದ್ದು ಮತ್ತು ಇಂತಹ ಭೂ ಸ್ವಾಧೀನ ವಿರೋಧಿ ಹೋರಾಟವನ್ನು ರಾಜ್ಯಾದ್ಯಂತ ಸಂಪೂರ್ಣ ಮಟ್ಟ ಹಾಕುವ ಫ್ಯಾಸಿಸ್ಟ್ ದುರುದ್ದೇಶದ್ದು. ಈ ದುರುದ್ದೇಶ ಈಡೇರುವುದಕ್ಕೆ ರಾಜ್ಯದ ರೈತ ಸಮುದಾಯ ಅವಕಾಶ ನೀಡುವುದಿಲ್ಲ ಮತ್ತು ಚನ್ನರಾಯಪಟ್ಟಣ ರೈತರ ಹೋರಾಟಕ್ಕೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯು ಸೇರಿದಂತೆ ರಾಜ್ಯದ ಎಲ್ಲಾ ಭೂ ಸ್ವಾಧೀನದ ಭೀತಿ ಎದುರಿಸುತ್ತಿರುವ ಎಲ್ಲಾ ರೈತರನ್ನು ಒಗ್ಗೂಡಿಸಿ ಚನ್ನರಾಯಪಟ್ಟಣ ಭೂ ಸ್ವಾಧೀನಕ್ಕೆ ಪ್ರಬಲ ವಿರೋಧವನ್ನು ಇನ್ನೂ ಹೆಚ್ಚಿನ ಹೋರಾಟದ ಶಕ್ತಿಯೊಂದಿಗೆ ಮುಂದುವರೆಸಿ, ರೈತ ಹೋರಾಟ ಜಯಗಳಿಸುವಂತೆ ಮಾಡಲು ಜೂನ್ 25,2025 ರಂದು ದೇವನಹಳ್ಳಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಪೊರೇಟ್ ಭೂ ಕಬಳಿಕೆ ವಿರುದ್ಧದ ಚನ್ನರಾಯಪಟ್ಟಣ ರೈತರ ಹೋರಾಟ ಗೆಲುವು ಸಾಧಿಸುವುದು ಇಡೀ ರಾಜ್ಯದ ಭೂ ಸ್ವಾಧೀನ ವಿರೋಧಿ ಹೋರಾಟದ ಹಿತದೃಷ್ಟಿಯಿಂದ ಬಹಳ ಮಹತ್ವ ಪಡೆದಿದ್ದು ರಾಜ್ಯದ ರೈತರ ಪ್ರಜಾಸತ್ತಾತ್ಮಕ ಹಕ್ಕು ಕಾಪಾಡಲು ಈ ಹೋರಾಟ ತೀವ್ರಗೊಳಿಸುವುದು ಅನಿವಾರ್ಯವಾಗಿದೆ ಎಂದರು.

ಈ ಮಧ್ಯೆ ದೇವನಹಳ್ಳಿ ಪೋಲೀಸ್‌ ಠಾಣೆಯಿಂದ ಅಲ್ಲಿನ ಎಲ್ಲಾ ಸಂಘಟನೆಗಳ ಮುಖಂಡರಿಗೂ ದೇವನಹಳ್ಳಿ ವ್ಯಾಪ್ತಿಯಲ್ಲಿ ನಿಶೇಧಾಜ್ಞೆ ಇದ್ದು, ಹೋರಾಟಕ್ಕೆ ಮುಂದಾಗುವುದಾದರೆ ಕ್ರಮತೆಗೆದುಕೊಳ್ಳುವುದಾಗಿ ಧಮಕಿ ಪತ್ರ ಕಳುಹಿಸಲಾಗಿದೆ. ಪೋಲೀಸರು ಅವರು ಮಾಡುವ ಕೆಲಸ ಅವರು ಮಾಡಲಿ, ನ್ಯಾಯ ಉಳಿಸಿಕೊಳ್ಳಲು ನಾವು ಮಾಡಲೇ ಬೇಕಾದ ಹೋರಾಟವನ್ನು ನಾವು ಮುಂದುವರೆಸುತ್ತೇವೆ. ಕೇಸಿಗಾಗಲೀ, ಜೈಲಿಗಾಗಲೀ, ಲಾಠಿಗಾಗಲೀ, ಗುಂಡಿಗೂ ಸಹ ಹೆದರುವ ಪ್ರಶ್ನೆಯೇ ಇಲ್ಲ, ಹೋರಾಟದಿಂದ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ ಎಂದು ಸಂಘಟನೆಯ ನಾಯಕರು ಸ್ಪಷ್ಟಪಡಿಸಿದರು. ಈ ಸಂಘರ್ಷ ನಿಲ್ಲಿಸಬೇಕೇದ್ದಲ್ಲಿ ಸರ್ಕಾರ ಹಠಬಿಟ್ಟು ಈ ಭೂ ಸ್ವಾಧೀನವನ್ನು ಸಂಪೂರ್ಣವಾಗಿ ಕೈ ಬಿಡಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್, ರೈತ ಸಂಘದ ಮುಖಂಡರಾದ ವೀರಸಂಗಯ್ಯ ಇದ್ದರು.

ಇದನ್ನೂ ನೋಡಿ: ವಚನಾನುಭವ 29| ಜೀವನದಲ್ಲಿ ಸಜ್ಜನವೇ ಮಜ್ಜನ Janashakthi Media ದೇವನಹಳ್ಳಿ

Donate Janashakthi Media

Leave a Reply

Your email address will not be published. Required fields are marked *