ಮೈಸೂರು: 62 ವರ್ಷ ವಯಸ್ಸಿನ ದಿನಗೂಲಿ ಕಾರ್ಮಿಕರೊಬ್ಬರು ನಡೆಸುತ್ತಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಕಳೆದ 11 ವರ್ಷಗಳಿಂದ ಕನ್ನಡ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ರಾಜೀವ್ ನಗರದ ಸೈಯದ್ ಇಸಾಕ್ (67) ಎಂಬುವವರ ಗ್ರಂಥಾಲಯಕ್ಕೆ ಕಿಡಿಗೇಡಿಗಳು ನೆನ್ನೆ ನಸುಕಿನಲ್ಲಿ ಬೆಂಕಿ ಹಚ್ಚಿದ್ದು, ಸುಮಾರು 11 ಸಾವಿರ ಪುಸ್ತಕಗಳು ಬೆಂಕಿಗೆ ಆಹುತಿಯಾಗಿವೆ.
ಶಿಕ್ಷಣದಿಂದ ವಂಚಿತರಾದ ಇಸಾಕ್ ಯುಜಿಡಿ ಕ್ಲೀನರ್ ಆಗುವ ಮುನ್ನ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಜೀವನ ನಡೆಸಲು ಹಲವು ವೃತ್ತಿಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
ಬೆಳಗಿನ ಜಾವ 3.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಅಗ್ನಿಶಾಮಕ ಪಡೆ ಸ್ಥಳಕ್ಕೆ ಬರುವಷ್ಟರಲ್ಲಿ ಎಲ್ಲ ಪುಸ್ತಕಗಳು ಬೆಂಕಿಯಿಂದ ಕರಕಲಾಗಿದ್ದವು. ಸ್ಥಳಕ್ಕೆ ಆಗಮಿಸಿದ ನೂರಕ್ಕೂ ಜನರು ಬೆಂಕಿ ನಂದಿಸಲು ಯತ್ನಿಸಿದರೂ ಸಫಲವಾಗಲಿಲ್ಲ.
ಇಸಾಕ್ ಅವರಿಗೆ ಸ್ಥಳೀಯ ವ್ಯಕ್ತಿಯೊಬ್ಬ ಗ್ರಂಥಾಲಯದ ಒಳಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.
3 ಸಾವಿರ ಕನ್ನಡ ಪುಸ್ತಕಗಳು, ಭಗವದ್ಗೀತೆಯ 3 ಸಾವಿರ ಪ್ರತಿಗಳು, ಕುರ್‌ಆನ್‌ನ 3 ಸಾವಿರ ಪ್ರತಿಗಳು, 1 ಸಾವಿರ ಉರ್ದು ಪುಸ್ತಕಗಳು ಹಾಗೂ ಬೈಬಲ್‌ನ 1 ಸಾವಿರ ಕನ್ನಡ ಪ್ರತಿಗಳು ಇದರಲ್ಲಿ ಸೇರಿದ್ದವು. ಗ್ರಂಥಾಲಯ ಸಂಗ್ರಹದಲ್ಲಿರುವ ಸುಮಾರು 85% ಪುಸ್ತಕಗಳು ಕನ್ನಡದ್ದಾಗಿದೆ.
‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸೇರಿದ ಈ ಜಾಗದಲ್ಲಿ ಈ ಮೊದಲು 4 ಬಾರಿ ಕಿಡಿಗೇಡಿಗಳು ತೊಂದರೆ ಕೊಟ್ಟಿದ್ದರು. ಗ್ರಂಥಾಲಯದ ಮುಂದೆ ಏನೇನೋ ಬರೆಯುತ್ತಿದ್ದರು. ಕನ್ನಡದ ಬರಹಗಳಿಗೆ ಮಸಿ ಬಳಿಯುತ್ತಿದ್ದರು. ಗ್ರಂಥಾಲಯ ನಡೆಸಬಾರದೆಂದು ಕರೆ ಮಾಡುತ್ತಿದ್ದರು. ಅದನ್ನೆಲ್ಲಾ ಸಹಿಸಿಕೊಂಡು ಸುಮ್ಮನಿದ್ದೆ. ಈಗ ಗ್ರಂಥಾಲಯಕ್ಕೆ ಬೆಂಕಿ ಇಟ್ಟಿದ್ದಾರೆ’ ಎಂದು ಸೈಯದ್ ಇಸಾಕ್ ತಮ್ಮ ನೋವು ತೋಡಿಕೊಂಡರು.
ಆರಂಭದಲ್ಲಿ ಇಲ್ಲಿನ ಗುಡಿಸಲಿನಲ್ಲಿ ಗ್ರಂಥಾಲಯ ಪ್ರಾರಂಭ ಮಾಡಿದ ಸೈಯದ್ ಇಸಾಕ್ ಈಚೆಗೆ ಶೀಟ್ ಹಾಕಿ ಮಳಿಗೆಯಾಗಿ ಪರಿವರ್ತಿಸಿದ್ದರು. ಸುಮಾರು 11 ಸಾವಿರ ಪುಸ್ತಕ ಇಡುವುದರ ಜೊತೆಗೆ ನಿತ್ಯ 18 ದಿನಪತ್ರಿಕೆ ತರಿಸುತ್ತಿದ್ದರು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೆ ಸಾರ್ವಜನಿಕರಿಗೆ ಓದಲು ಉಚಿತವಾಗಿ ಬರುತ್ತಿದ್ದರು. ಪ್ರತಿದಿನ, 100-150 ಕ್ಕೂ ಹೆಚ್ಚು ಜನರು ಅವರ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದರು.
‘ಉರ್ದು ಭಾಷಿಕರೇ ಹೆಚ್ಚಾಗಿರುವ ಈ ಸ್ಥಳದಲ್ಲಿ ಕನ್ನಡವನ್ನು ಉಳಿಸಿ, ಬೆಳೆಸುವ ದೃಷ್ಟಿಯಿಂದ ಗ್ರಂಥಾಲಯ ಸ್ಥಾಪಿಸಿದ್ದೆ. ಮನೆಯ ಚರಂಡಿ ಪೈಪ್ ಕಟ್ಟಿದಾಗ ಸ್ವಚ್ಛಗೊಳಿಸುವುದು, ಗೋಡೆಗಳಿಗೆ ಬಣ್ಣ ಬಳಿಯುವ ಕಾಯಕ ಮಾಡಿ ಹೊಟ್ಟೆ ಹೊರೆಯುತ್ತಿದ್ದೆ. ಕೆಲಸಕ್ಕೆ ಹೋದಾಗ ಪತ್ನಿ ಶಾಹೀನ್ ತಾಜ್ ಗ್ರಂಥಾಲಯ ನೋಡಿಕೊಳ್ಳುತ್ತಿದ್ದರು. ಇಷ್ಟನ್ನು ಸಹಿಸದ ಕಿಡಿಗೇಡಿಗಳು ತೊಂದರೆ ಕೊಡುತ್ತಿದ್ದರು. ಈಗ ನನ್ನ ಪುಸ್ತಕಗಳನ್ನೆಲ್ಲ ಸುಟ್ಟು ಹಾಕಿದ್ದಾರೆ’ ಎಂದು ಮರುಕಪಟ್ಟರು.
ಈ ಘಟನೆಯ ನಂತರ, ಇಸಾಕ್ ಉದಯಗಿರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ, ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 436 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದು, ಅಪರಾಧಿಗಳನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಇದಲ್ಲದೆ ಇಸಾಕ್ “ನಾನು ಮೊದಲಿನಂತೆಯೇ ಗ್ರಂಥಾಲಯವನ್ನು ಪುನರ್ನಿರ್ಮಿಸುತ್ತೇನೆ” ಎಂದರು.
ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ ಪ್ರತಿಕ್ರಿಯಿಸಿ, ‘ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಎಂದರು.