ಮುಂಬೈ: ಕ್ರೂಸ್ ರೇವ್ ಪಾರ್ಟಿ ಪ್ರಕರಣದಲ್ಲಿ ಬಂಧನವಾಗಿದ್ದ ಮುಂಬೈನ ಮಾಜಿ ಬಿಜೆಪಿ ಯುವ ಘಟಕದ ಅಧ್ಯಕ್ಷ ಮೋಹಿತ್ ಕುಂಭೋಜ್ ಅವರ ಸಂಬಂಧಿ ರಿಷಬ್ ಸಚ್‌ದೇವ ಮತ್ತು ಇತರ ಇಬ್ಬರನ್ನು ಎನ್‌ಸಿಬಿ ಬಿಡುಗಡೆ ಮಾಡಿರುವ ಬಗ್ಗೆ ಹಲವು ಅನುಮಾನಗಳು ದಡ್ಡವಾಗಿದ್ದು, ಈ ಬಗ್ಗೆ ಕೂಡಲೇ ತನಿಖೆ ನಡೆಸಬೇಕು ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಒತ್ತಾಯಿಸಿದ್ದಾರೆ.
ಎನ್‌ಸಿಪಿ ಮುಖ್ಯ ವಕ್ತಾರರೂ ಆಗಿರುವ ಸಚಿವ ನವಾಬ್ ಮಲಿಕ್, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಷಬ್ ಸಚ್ ದೇವ್ ಮತ್ತು ಇತರ ಇಬ್ಬರನ್ನು ನಂತರ ಬಿಡುಗಡೆ ಮಾಡಲಾಗಿದೆ. ಇವರನ್ನು ಹೇಗೆ ಬಂಧಿಸಲಾಯಿತು ಮತ್ತು ನಂತರ ಹೇಗೆ ಬಿಡುಗಡೆ ಮಾಡಲಾಯಿತು ಎಂದು ಮುಂಬೈ ಪೊಲೀಸರಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರವನ್ನು ಬರೆದಿದ್ದಾರೆ.
ಕ್ರೂಸ್ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎನ್‌ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ ಅವರು ಅಕ್ಟೋಬರ್ 3ರಂದು ತಮ್ಮ ಹೇಳಿಕೆಗಳ ಪ್ರಕಾರ 8 ರಿಂದ 10 ಜನರನ್ನು ಬಂಧಿಸಲಾಗಿದೆ ಎಂದಿದ್ದರು. ಆದರೆ ಅವರು ಎಂಟು ಜನರನ್ನು ಮಾತ್ರ ಬಂಧಿಸಿದ್ದಾರೆ. ಆದಾಗ್ಯೂ, ಅಧಿಕೃತ ದಾಖಲೆಯ ಪ್ರಕಾರ 11 ಜನರನ್ನು ಬಂಧಿಸಲಾಗಿದೆ. ಆದರೆ ಅವರಲ್ಲಿ ಮೂವರು – ರಿಷಬ್ ಸಚ್‌ದೇವ, ಪ್ರತೀಕ್ ಗಣಭನ ಮತ್ತು ಅಮೀರ್ ಫರ್ನಿಚರ್‌ವಾಲಾ ಅವರನ್ನು ಮುಂಬೈ ಮತ್ತು ದೆಹಲಿಯಿಂದ ಕರೆ ಮಾಡಿದ ನಂತರ ಬಿಡುಗಡೆ ಮಾಡಲಾಗಿದೆ. ಈ ಮೂವರನ್ನು ಬಿಡಲು ಸಮೀರ್ ವಾಂಖೆಡೆಗೆ ಯಾರು ಕರೆ ಮಾಡಿದರು ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಅವರ ಫೋನ್ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಮಲಿಕ್ ಆಗ್ರಹಿಸಿದ್ದಾರೆ.
ಪ್ರಕರಣದ ಹೆಚ್ಚಿನ ತನಿಖೆಗಾಗಿ ಕ್ರೂಸ್ ಮತ್ತು ಸಂಪರ್ಕಿತ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಬೇಕು ಮತ್ತು ಎನ್‌ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ ಅವರ ಫೋನ್ ಕರೆಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಿಷಭ್ ಸಚ್‌ದೇವ ಅವರ ಕುಟುಂಬ ಸದಸ್ಯರು ಕೂಡ ಎನ್‌ಸಿಬಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು. ಎನ್‌ಸಿಬಿ ಕಚೇರಿ ಪ್ರವೇಶಿಸಲು ಅವರಿಗೆ ಹೇಗೆ ಅನುಮತಿ ನೀಡಲಾಯಿತು? ಶಾರುಖ್ ಖಾನ್ ಅವರನ್ನು ಗುರಿಯಾಗಿಸಲು ನಡೆದ ನಕಲಿ ಡ್ರಗ್ಸ್ ಪ್ರಕರಣ ಎಂದು ತೋರುತ್ತಿದೆ” ಎಂದು ಮಲಿಕ್ ಆರೋಪಿಸಿದ್ದಾರೆ.
ಕಳೆದ ಗುರುವಾದ ಎನ್‌ಡಿಟಿವಿ ಸುದ್ದಿಸಂಸ್ಥೆಯೊಂದಿಗೆ ನವಾಬ್ ಮಲಿಕ್ ಎನ್‌ಸಿಬಿಯ ಕ್ರಮಗಳ ಬಗ್ಗೆ ಹೇಳಿಕೆಯನ್ನು ನೀಡಿದ್ದರು. ಬಿಜೆಪಿಯ ಹಿಂದಿನ ಮಿತ್ರ ಪಕ್ಷ ಶಿವಸೇನೆಯೊಂದಿಗೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಅಧಿಕಾರದಲ್ಲಿರುವ ರಾಜ್ಯವನ್ನು ಮಾನಹಾನಿ ಮಾಡುವ ಗುರಿ ಬಿಜೆಪಿ ಪಕ್ಷದ್ದಾಗಿದೆ. ರಿಯಾ ಚಕ್ರವರ್ತಿಯಿಂದ ಹಿಡಿದು ದೀಪಿಕಾ ಪಡುಕೋಣೆ, ಇತರ ಸೆಲೆಬ್ರಿಟಿಗಳು ಅಥವಾ ಆರ್ಯನ್ ಖಾನ್ ಎಲ್ಲಾ ವಿಚಾರಗಳಲ್ಲಿಯೂ ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗುತ್ತಿದೆ ಎಂದು ಹೇಳಿದ್ದರು.