ಬೆಳಗಾವಿ: ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಇಂದು ಗುರುವಾರ ಮತಾಂತರ ನಿಷೇಧ ಕಾಯ್ದೆ ಮೇಲಿನ ಚರ್ಚೆ ಕಾವೇರಿದೆ.
ಕಾನೂನು ಸಚಿವ ಮಾಧುಸ್ವಾಮಿ ಕಾಂಗ್ರೆಸ್ ಅವಧಿಯಲ್ಲಿ ಈ ಮಸೂದೆ ಇನಿಷಿಯೇಟ್ ಆಗಿತ್ತು ಎಂದು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಸ್ಕೂಟನಿ ಕಮಿಷನ್ ಗೆ ಕಾನೂನು ಸಚಿವರು ಅಧ್ಯಕ್ಷರು ಆಗಿರುತ್ತಾರೆ. ಕಾನೂನು ಸಚಿವರು ಸ್ಕೂಟನಿ ಮಾಡಿ, ಶಾಸಕಾಂಗಕ್ಕೆ ಹೋಗಿ, ಅದು ಡ್ರಾಫ್ಟ್ ಆಗಿ, ನಂತರ ಮುಖ್ಯಮಂತ್ರಿ ಹತ್ತಿರ ಬಂದು, ಆಮೇಲೆ ಕ್ಯಾಬಿನೆಟ್ ಗೆ ಹೋಗುತ್ತದೆ. ಅಂದಿನ ಸರ್ಕಾರದಲ್ಲಿ ಜಯಚಂದ್ರ ಅವರು ಕಾನೂನು ಸಚಿವರಾಗಿದ್ದರು. ಅವರಿಗೆ ಫೋನ್ ಮಾಡ್ದೆ, ನಮ್ಮ ಕಾಲದಲ್ಲಿ ಅದು ಇನಿಷಿಯೇಟ್ ಆಗಿಲ್ಲ ಅಂತಾ ಹೇಳಿದರು. ವಿಷಯವನ್ನು ಪರಿಶೀಲನೆ ಮಾಡಿ ಅಂತಾ ಹೇಳಿದರೆ ಇನಿಷಿಯೇಷನ್ ಆಗಲ್ಲ. ಅದಕ್ಕೆ ಒಪ್ಪಿಗೆ ಕೊಟ್ಟರೆ ಮಾತ್ರ ಇನಿಷೇಷಯೇಷನ್ ಆಗುತ್ತೆ ಎಂದು ಸಿದ್ದರಾಮಯ್ಯ ಇಂದು ಸದನದಲ್ಲಿ ವಿವರಿಸಿದರು.
ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ಮತಾಂತರ ಮಸೂದೆಯ ಡ್ರಾಫ್ಟ್ ತಯಾರಿ ಮಾಡಿದ್ದು ಒಬ್ಬರೇ. ಒಂದು ರೀತಿಯಲ್ಲಿ ಇದು ಕಟ್ & ಪೇಸ್ಟ್ ಎಂದು ಆರೋಪಿಸಿದರು. ಮಸೂದೆಯ ಸೆಕ್ಷನ್ 3 ವಿವಾಹದ ನಿಬಂಧನೆಗಳನ್ನು ಹೇರಿದೆ. ಇದನ್ನು ಗುಜರಾತ್ ಹೈಕೋರ್ಟ್ ಪ್ರಶ್ನಿಸಿ ಗುಜರಾತ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಆ ಸೆಕ್ಷನ್ ತಡೆ ಹಿಡಿದಿದೆ. ಆದರೆ ಆ ಸೆಕ್ಷನ್ ನಮ್ಮ ಮಸೂದೆಯಲ್ಲಿ ಯಥಾವತ್ ಇದೆ ಎಂದರು.
ಕಾನೂನು ಆಯೋಗದ ಡ್ರಾಫ್ಟ್ನಲ್ಲೂ ಇದು ಇರಲಿಲ್ಲ. ಸೆಕ್ಷನ್ 5 ಮತ್ತು 12 ಕೂಡ ಯುಪಿ ಮಸೂದೆಯ ನಕಲುಗಳೇ ಆಗಿವೆ. ಕಾನೂನು ಆಯೋಗದ ಡ್ರಾಫ್ಟ್ಗೆ ಇವೆಲ್ಲ ವಿರುದ್ಧವಾಗಿವೆ. ಬಲವಂತದ, ಆಮಿಷದ ಮತಾಂತರ ತಪ್ಪು ಎಂದು ಸಂವಿಧಾನವೇ ಹೇಳಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ ಕೂಡ ಇದನ್ನು ಅಪರಾಧ ಎಂದು ಹೇಳುತ್ತದೆ. ಹೀಗಿರುವಾಗ ಮತಾಂತರ ತಡೆಗೆ ಪ್ರತ್ಯೇಕ ಕಾಯಿದೆ ಅಗತ್ಯವಿತ್ತೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.