ಬೆಳಗಾವಿ: ತೀವ್ರ ಕುತೂಹಲ ಮತ್ತು ಭಾರಿ ಗದ್ದಲಕ್ಕೆ ಕಾರಣವಾಗಿದ್ದ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಂಗೀಕಾರ ದೊರೆತಿದೆ.
ವಿಧಾನಸಭೆಯಲ್ಲಿ ಮಂಗಳವಾರ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ-2021’ ಮಂಡನೆಯಾಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ನ ತೀವ್ರ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಅಂಗೀಕಾರ ಸಿಕ್ಕಿದೆ. ಇಂದು ಸದನದಲ್ಲಿ ಸ್ಪೀಕರ್ ಕಾಗೇರಿ ಮಂತಾತರ ನಿಷೇಧ ಮಸೂದೆಯನ್ನು ದ್ವನಿ ಮತಕ್ಕೆ ಹಾಕಿದರು. ಈ ವೇಳೆ ವಿಧಾನಸಭಾ ಹೆಚ್ಚಿನ ಸದಸ್ಯರು ಮಸೂದೆ ಪರ ಮತ ಹಾಕಿದ್ದು, ಈಗ ಅಂಗೀಕಾರಗೊಂಡಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ವಿರೋಧದ ನಡುವೆ ಡಿ.21ರಂದು ಮತಾಂತರ ನಿಷೇಧ ಕಾಯ್ದೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಡಿಸಿದ್ದರು. ಅಂದು ಕೂಡ ಸದನದ ಬಾವಿಗಿಳಿದು ಕಾಂಗ್ರೆಸ್ ತೀವ್ರ ವಿರೋಧಿಸಿತ್ತು.
ಇಷ್ಟಲ್ಲಾ ಬೆಳವಣಿಗೆ ಬಳಿಕ, ವಿಪಕ್ಷಗಳ ಗದ್ದಲ, ಗಲಾಟೆ, ಪ್ರತಿಭಟನೆ ನಡುವೆಯೂ ಮತಾಂತರ ನಿಷೇಧ ಬಿಲ್ ಅನ್ನು ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಯಿತು. ಡಿ.ಕೆ. ಶಿವಕುಮಾರ್ ಅವರು ಮತಾಂತರ ನಿಷೇಧ ಕಾಯ್ದೆಯ ಕಾಗದದ ಪ್ರತಿಯನ್ನ ಹರಿದು ಬಿಸಾಕಿದ್ರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, 2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಆಗ ಮತಾಂತರ ನಿಷೇಧ ಕಾಯ್ದೆಯನ್ನ ತೆಗೆದು ಹಾಕ್ತೀವಿ ಎಂದರು.